Friday, 16th November 2018  

Vijayavani

Breaking News

ಸಾಲಮನ್ನಾ ಮಾಡುವ ಮುನ್ನ ಒಂದಷ್ಟು ವಿಚಾರ…

Saturday, 02.06.2018, 3:03 AM       1 Comment

| ನಾಗರಾಜ ಇಳೆಗುಂಡಿ

ಕೃಷಿ ಬೆಳವಣಿಗೆಯೆಂಬುದು ಕೇವಲ ಒಂದು ಕೈನಿಂದ ಆಗುವ ಚಪ್ಪಾಳೆಯಲ್ಲ. ಇಲ್ಲಿ ಸರ್ಕಾರದ ಜತೆ ಸಮಾಜದ ಪಾತ್ರವೂ ಇದೆ. ‘ನಾನು ಅನ್ನದಾತ’ ಎಂದು ರೈತ ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯುವ ಮತ್ತು ಇತರರು ಆತನನ್ನು ಅದೇರೀತಿ ಪರಿಭಾವಿಸುವ ವಾತಾವರಣ ಬಂದಾಗ ನಿಜಕ್ಕೂ ರೈತ ದೇಶದ ಬೆನ್ನೆಲುಬಾಗುತ್ತಾನೆ.

‘ಎಷ್ಟು ವರ್ಷದಿಂದ ಕೃಷಿ ಮಾಡುತ್ತಿದ್ದೀರಿ?

‘ಸುಮಾರು ಮೂವತ್ತು ವರ್ಷದಿಂದ’

‘ಹೌದಾ? ವರ್ಷಕ್ಕೆ ಸುಮಾರು ಎಷ್ಟು ಆದಾಯ ಬರುತ್ತದೆ?’

‘ಅದೆಲ್ಲ ನಾವು ಸರಿಯಾಗಿ ಲೆಕ್ಕ ಇಡಲ್ಲ ಸ್ವಾಮಿ. ಏನೋ ಹೊಟ್ಟೆಬಟ್ಟೆಗೆ ಕೊರತೆಯಿಲ್ಲ ನೋಡಿ…’

‘ಹೊಸ ಮನೆಗಿನೆ ಕಟ್ಟಿಸಿಲ್ವಾ? ಮಣ್ಣಿನ ಗೋಡೆ, ಹಂಚು ಇದ್ದ ಹಾಗೇ ಇರುವಂತಿದೆ’

‘ಈ ಮನೇನೆ ಸಾಕು ಸ್ವಾಮಿ. ನೆಮ್ಮದಿಯಾಗೇ ಇದ್ದೀವಿ’

‘ಆದರೂ ನಿನ್ನ ನೋಡಿದರೆ ವೃದ್ಧಾಪ್ಯಕ್ಕೆಂದು ಏನೂ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಈಗಿನ ಕಾಲದಲ್ಲಿ ಖರ್ಚು ಬಹಳ’

‘ನಮಗೆ ಅಷ್ಟೆಲ್ಲ ದೂರದ ವಿಷಯ ಯಾಕೆ ಸ್ವಾಮಿ? ಭೂತಾಯಿ ಇದಾಳಲ್ಲ, ನಾವು ಆಕೆಯನ್ನೇ ನಂಬಿದೋರು. ನಂಬಿದೋರನ್ನ ಆಕೆ ಕೈಬಿಡಲ್ಲ…’

ಈ ಮೇಲಿನದು ಅರ್ಧ ಕಾಲ್ಪನಿಕ, ಅರ್ಧ ವಾಸ್ತವದ ಮಿಶ್ರಣದ ಚಿತ್ರಣ. ಇಲ್ಲಿ ಬರುವ ರೈತ ಭೌತಿಕ ಜೀವನದ ಬಗ್ಗೆ ನಿರಾಸಕ್ತಿಯಿಂದ ಉತ್ತರಿಸಿದಂತೆ ಕಂಡರೂ, ಆತನ ಮಾತಲ್ಲಿ ನಿರಾಶಾವಾದದ ನೆರಳು ಹಾದಂತೆ ಗೋಚರಿಸಿದರೂ, ವಾಸ್ತವದಲ್ಲಿ ಇದ್ದುದರಲ್ಲಿ ತೃಪ್ತಿಪಡಬೇಕೆಂಬ ಸಿದ್ಧಾಂತ ಅವನದು. ನಮ್ಮ ಭಾರತೀಯ ಪರಂಪರೆಯಲ್ಲಿ ಕೃಷಿ ಎಂಬುದು ಬರೀ ಜೀವನೋಪಾಯವಲ್ಲ, ಕೇವಲ ಆದಾಯ ಗಳಿಸುವ ಹಾದಿಯಲ್ಲ. ಅದಕ್ಕೂ ಮಿಗಿಲಾದುದು, ಅದೊಂದು ಸಂಸ್ಕೃತಿ. ಅದೊಂದು ತಪಸ್ಸು. ಅಂತಿಮವಾಗಿ ಅದೊಂದು ಆಧ್ಯಾತ್ಮಿಕ ಅನುಭಾವ.

ಹಾಗಂತ ವ್ಯಾವಹಾರಿಕ ಆಯಾಮ ಇಲ್ಲದೆ ಕೃಷಿಮಾಡಲಿಕ್ಕಾಗದು ಎಂಬುದೂ ನಿಜವೇ. ಇತರರು ಲಕ್ಷ ಲಕ್ಷದ ಹಣದ ಮಾತಾಡುವಾಗ ರೈತ ಮಾತ್ರ ಖಾಲಿ ಕೈಲಿರಬೇಕೆ? ರೈತನೂ ಬದುಕಬೇಕಲ್ಲ… ಅವನಿಗೂ ಖರ್ಚುವೆಚ್ಚಗಳಿರುತ್ತವಲ್ಲ. ಇವೆರಡರ ನಡುವಣ ಒಂದು ಸುವರ್ಣಮಧ್ಯಮ ಮಾರ್ಗದಲ್ಲಿ ಪಯಣಿಸುವ ಹಾದಿ ಕಂಡುಕೊಂಡವರು ನಿಜಕ್ಕೂ ಭಾಗ್ಯವಂತರೇ ಸರಿ.

ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಹೆಚ್ಚು ಚರ್ಚೆಯಲ್ಲಿರುವ ವಿಚಾರ ರೈತರ ಸಾಲಮನ್ನಾ. ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಈಗ ಜೆಡಿಎಸ್ ಏಕಪಕ್ಷವಾಗಿ ಸರ್ಕಾರ ಮಾಡಲಾಗದಿದ್ದರೂ ಕಾಂಗ್ರೆಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದೆ. ಜೆಡಿಎಸ್​ನ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಸಾಲಮನ್ನಾ ವಿಚಾರ ಸಹಜವಾಗಿಯೇ ಮುನ್ನೆಲೆಗೆ ಬಂದಿದೆ. ಬಿಜೆಪಿಯಂತೂ ನಿಂತನಿಲುವಿನಲ್ಲೇ ಸಾಲಮನ್ನಾ ಘೋಷಿಸಿ ಎಂದು ವರಾತ ತೆಗೆದಿದೆ. ಈ ವಿಷಯದಲ್ಲಿ ತಮ್ಮ ಬದ್ಧತೆ ಬಗ್ಗೆ ಸಂಶಯ ಬೇಡ ಎಂದು ಎಚ್​ಡಿಕೆ ಪದೇಪದೆ ಹೇಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಮೊನ್ನೆಯಷ್ಟೆ ರೈತರು ಹಾಗೂ ರೈತ ಸಂಘಟನೆಗಳ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆದುಕೊಂಡಿದ್ದಾರೆ; ಸಾಲಮನ್ನಾ ಕುರಿತು ಕೆಲ ಮಾರ್ಗದರ್ಶಿ ಅಂಶಗಳನ್ನು ಪ್ರಕಟಿಸಿದ್ದಾರೆ. ಇಷ್ಟಿದ್ದರೂ ಪೂರ್ತಿ ಚಿತ್ರಣ ಹೊರಬಂದಿಲ್ಲ. ಜನರ ಮನಸ್ಸಿನಲ್ಲಿ ಇನ್ನೂ ಅನೇಕ ಸಂದೇಹಗಳು ಸುಳಿದಾಡುತ್ತಿವೆ. ಅವನ್ನು ಹೀಗೆ ಸ್ಥೂಲವಾಗಿ ಹೇಳಬಹುದು:

# ಸಹಕಾರಿ, ರಾಷ್ಟ್ರೀಯ ಬ್ಯಾಂಕ್​ಗಳಲ್ಲಿನ ಸಾಲ ಸರಿ, ಆದರೆ ಖಾಸಗಿ ಬ್ಯಾಂಕ್​ಗಳಿಂದ ಪಡೆದ ಸಾಲದ ಕಥೆ ಏನು?

# ಸಾಲಮನ್ನಾಕ್ಕೆ ಬೇಕಾಗುವ ಅಪಾರ ಪ್ರಮಾಣದ ಹಣವನ್ನು ಸರ್ಕಾರ ಹೇಗೆ ಕ್ರೋಡೀಕರಿಸುತ್ತದೆ? ಕೆಂದ್ರ ಸರ್ಕಾರ ಈಗಾಗಲೇ ಕೃಷಿ ಸಾಲಮನ್ನಾ ವಿಷಯದಲ್ಲಿ ತನಗೆ ಆಸಕ್ತಿಯಿಲ್ಲ ಎಂಬುದನ್ನು ಅನೇಕ ಬಾರಿ ಸ್ಪಷ್ಟಪಡಿಸಿದೆ. ಕೇಂದ್ರದ ನೆರವಿಲ್ಲದಿದ್ದರೂ ಸಾಲಮನ್ನಾ ಕೈಗೂಡುವ ಕಸರತ್ತೇ?

# ಸಾಲಮನ್ನಾದ ಅವಧಿ ಯಾವಾಗಿಂದ ಯಾವಾಗ ಇರುತ್ತದೆ? ಸದ್ಯ ಹೇಳಲಾಗಿರುವ 2009ರ ಏ.1ರಿಂದ 2017ರ ಡಿ.31ರ ಅವಧಿಯಲ್ಲಿನ ಬೆಳೆಸಾಲ ಮನ್ನಾ ಎಂಬ ನಿಯಮದಲ್ಲಿ ಸಡಿಲಿಕೆ ಏನಾದರೂ ಆಗುವುದೇ?

# ಅನೇಕ ರೈತರು ಕೊಳವೆಬಾವಿ, ಪೈಪ್​ಲೈನ್ ಇತ್ಯಾದಿ ಬಾಬತ್ತಿಗೆಂದು ಸಾಲ ಪಡೆದು ಆ ಹಣವನ್ನು ಬೆಳೆ ಉದ್ದೇಶಕ್ಕೆ ಬಳಸಿದ್ದಾರೆ. ಒಂದೊಮ್ಮೆ ಇಂಥ ಪ್ರಕರಣ ಗಳನ್ನು ಕೃಷಿಯೇತರ ಉದ್ದೇಶದ ಸಾಲ ಎಂದು ಪರಿಗಣಿಸಿದರೆ ಆಗ ಏನಾಗುತ್ತದೆ?

ಅಂತೂ ಸಿಎಂ ಕುಮಾರಸ್ವಾಮಿಯವರ ಎದುರು ಸಂಕೀರ್ಣ ಸವಾಲೇ ಇದೆ. ಮಾತು ಕೊಡುವ ಮುನ್ನ ನೂರು ಬಾರಿ ಯೋಚಿಸಬೇಕು ಎಂದು ಅವರಿಗೀಗ ಬಲವಾಗಿ ಅನಿಸುತ್ತಿದೆಯೇನೋ! ಬಿಹಾರದಲ್ಲಿಯೂ ಹೀಗೇ ಆಗಿತ್ತು. ವಿಷಯ ಬೇರೆ ಅಷ್ಟೆ. ಜೆಡಿಯುನ ನಿತೀಶ್​ಕುಮಾರ್ ಅವರು ಚುನಾವಣಾ ಪ್ರಚಾರದ ವೇಳೆ, ರಾಜ್ಯದಲ್ಲಿ ಪಾನನಿಷೇಧ ಜಾರಿಗೆ ತರುವ ಭರವಸೆ ನೀಡಿದ್ದರು. ಅವರು ಮುಖ್ಯಮಂತ್ರಿಯಾದಾಗ, ಮಾತಿನಂತೆಯೇ ಪಾನನಿಷೇಧ ನಿರ್ಣಯ ಕೈಗೊಂಡರು. ಆ ನೀತಿಯ ಪರಿಣಾಮದ ಕುರಿತು ನಾನಾ ವಿಶ್ಲೇಷಣೆಗಳು ನಡೆಯುತ್ತಿರುವುದು ಬೇರೆಯದೇ ಚರ್ಚಾವಿಷಯ ಬಿಡಿ.

ರೈತರ ಸಾಲಮನ್ನಾ ವಿಷಯದಲ್ಲಿ ಎಲ್ಲೋ ಕೆಲವು ಭಿನ್ನದನಿಗಳನ್ನು ಹೊರತುಪಡಿಸಿದರೆ ಉಳಿದಂತೆ ತೀರಾ ವಿರೋಧವೇನೂ ಇಲ್ಲ. ಈ ಬಾಬತ್ತಿಗೆ ಹಣವನ್ನು ಹೇಗೆ ಹೊಂದಿಸಬೇಕೆಂಬುದು ಆಳುವವರ ತಲೆನೋವು.

ಒಟ್ಟಾರೆಯಾಗಿ ಕೃಷಿರಂಗವನ್ನು ಪರಿಗಣಿಸಿದಾಗ, ಸಾಲಮನ್ನಾ ಅದರಲ್ಲಿ ಒಂದು ಪ್ರಮುಖ ವಿಚಾರ ಅಷ್ಟೆ. ಉಳಿದಂತೆ ಗಮನಿಸಬೇಕಾದ ಇನ್ನೂ ಅನೇಕ ಸಂಗತಿಗಳಿವೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ, ನೀರಾವರಿ ವ್ಯವಸ್ಥೆ, ವಿವಿಧ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು…. ಹೀಗೆ ಈ ವಿಷಯ ವಿಸ್ತಾರವಾದುದು. ಇಲ್ಲಿ ಗಮನಿಸಬೇಕಾದ್ದೆಂದರೆ ಇವುಗಳಲ್ಲಿ ಬಹುತೇಕವು ಸರ್ಕಾರಗಳು ಪರಿಹರಿಸಬೇಕಾದ ಅಥವಾ ಪರಿಗಣಿಸಬೇಕಾದ ವಿಷಯಗಳು. ಇನ್ನು ಸರ್ಕಾರದ ಜತೆ ಸಮಾಜ ಹಾಗೂ ಸಾರ್ವಜನಿಕರು ಗಮನಿಸಬೇಕಾದ ಸಂಗತಿಗಳು ಕೂಡ ಕೆಲವಿವೆ. ಆ ಬಗ್ಗೆ ಸಲ್ಪ ನೋಡೋಣ.

ಕೃಷಿ ರಂಗದ ಇಮೇಜ್: ಕೃಷಿ ನಷ್ಟದ ಬಾಬತ್ತು, ಅಲ್ಲಿ ಬರೀ ದುಡಿಯುವದೊಂದೇ, ದುಡಿಮೆಗೆ ತಕ್ಕ ಆದಾಯವಿಲ್ಲ. ಬೇರೆ ಕೆಲಸ ಮಾಡಲಾಗದವರು ರೈತಾಪಿ ಮಾಡಿಕೊಂಡಿರುತ್ತಾರೆ ಎಂಬ ಗ್ರಹಿಕೆ ವ್ಯಾಪಕವಾಗಿದೆ. ಅದರಲ್ಲೂ ವಿಶೇಷವಾಗಿ ರಾಜಕಾರಣಿಗಳು, ಜನಪ್ರತಿನಿಧಿಗಳು ಕೃಷಿ ಕುರಿತು ಪ್ರಸ್ತಾಪವಾದಾಗಲೆಲ್ಲ, ಅಲ್ಲಿ ಸಮಸ್ಯೆಗಳೇ ಜಾಸ್ತಿ, ತಾವು ರೈತರ ಉದ್ಧಾರ ಮಾಡುತ್ತೇವೆ, ಅದಕ್ಕಾಗಿ ತಮ್ಮಲ್ಲಿ ಏನೆಲ್ಲ ಯೋಜನೆಗಳಿವೆ ಎಂದೇ ಮಾತು ಶುರುಮಾಡುತ್ತಾರೆ. ಹಾಗಂತ ಅವರ ಕಳಕಳಿಯನ್ನು ನಾವು ನೂರಕ್ಕೆ ನೂರು ಸಂಶಯಿಸಬೇಕಿಲ್ಲ. ನಿಜ, ಕೃಷಿರಂಗದಲ್ಲಿ ಸಮಸ್ಯೆಗಳು ಹಾಸಿಹೊದೆಯುವಷ್ಟಿವೆ. ಆದರೆ ಈ ಸಮಸ್ಯೆಗಳ ಸವಾಲನ್ನೇ ಅವಕಾಶವನ್ನಾಗಿ ಮಾಡಿಕೊಂಡು ಗೆದ್ದವರ ಕಥೆಗಳು ಸಹ ನಮಗೆ ಧಾರಾಳವಾಗಿ ಕಾಣಸಿಗುತ್ತವೆ. ಗುಂಟೆ ಎರಡು ಗುಂಟೆಯಷ್ಟು ಕಡಿಮೆ ಜಾಗದಲ್ಲೇ ವೈವಿಧ್ಯಮಯ ಬೆಳೆಗಳನ್ನು ಬೆಳೆದು ಗಣನೀಯ ಆದಾಯ ಕಂಡವರ ನಿದರ್ಶನಗಳು ಬೇಕಾದಷ್ಟಿವೆ. ಕೇವಲ ತಮ್ಮ ರಟ್ಟೆಶಕ್ತಿಯನ್ನು ನಂಬಿಕೊಂಡು ಕುಟುಂಬವನ್ನು ಆರ್ಥಿಕವಾಗಿ ಮೇಲೆತ್ತಿದ ಹೆಣ್ಮಕ್ಕಳ ಸಾಹಸಗಾಥೆ ಇದೆ. ಎಲ್ಲೋ ಹಳ್ಳಿಮೂಲೆಯಲ್ಲಿ ಕುಳಿತು, ತಂತ್ರಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡು ಕೃಷಿಯಂತ್ರಗಳನ್ನು ರೂಪಿಸಿದವರಿದ್ದಾರೆ. ಸಾಫ್ಟ್​ವೇರ್ ಇಂಜಿನಿಯರ್ ಆಗಿ ವಿದೇಶದಲ್ಲಿ ಕೈತುಂಬ ಗಳಿಕೆಯ ಹುದ್ದೆಯಲ್ಲಿದ್ದೂ ಹಸಿರಿನ ಕಡುವ್ಯಾಮೋಹಕ್ಕೆ ಒಳಗಾಗಿ ಭೂಮಿಗೆ ಮರಳಿದವರಿದ್ದಾರೆ. ಇವೆಲ್ಲ ಯಶಸ್ಸಿನ ಕಥೆಗಳಲ್ಲವೇ? ಪ್ರೇರಣೆ ನೀಡುವ ಉದಾಹರಣೆಗಳಲ್ಲವೆ? ನಾನಿಲ್ಲಿ ಪ್ರತಿಪಾದಿಸಲು ಹೊರಟಿರುವ ಅಂಶವೆಂದರೆ, ಕೃಷಿರಂಗದ ಕುರಿತಾಗಿ ಸಕಾರಾತ್ಮಕ ಇಮೇಜ್ ವರ್ಧಿಸಬೇಕು ಎಂಬುದನ್ನು. ಆಗ ಇತರರು ರೈತಾಪಿ ವಲಯವನ್ನು ನೋಡುವ, ಗ್ರಹಿಸುವ ದೃಷ್ಟಿಕೋನ ಬದಲಾಗುತ್ತದೆ. ಇದು ಇನ್ನಷ್ಟು ಜನರು ವ್ಯವಸಾಯದಲ್ಲಿ ತೊಡಗಲು ಸ್ಪೂರ್ತಿ ನೀಡಿದರೂ ನೀಡೀತು. ವಿಶೇಷವಾಗಿ, ಯುವಜನರು ಕೃಷಿ ಕುರಿತು ಅನಾಸಕ್ತಿ ಬೆಳೆಸಿಕೊಂಡು ನಗರಮುಖಿಯಾಗುತ್ತಿರುವ ಹೊತ್ತಿನಲ್ಲಿ ಇಂಥದೊಂದು ಸಕಾರಾತ್ಮಕ ಇಮೇಜಿನಿಂದ ಪ್ರಯೋಜನವಾದೀತು. ಅಲ್ಲವೆ?

ಮಾದರಿ ಅನಾವರಣ: ಇವತ್ತಿನ ಜಾಗತೀಕರಣ ಯುಗದಲ್ಲಿ ಉತ್ತಮವಾದುದು ಎಲ್ಲಿದ್ದರೂ ಅಳವಡಿಸಿಕೊಳ್ಳಲು ಮುಂದಾಗಬೇಕು. ಕೃಷಿಗೂ ಇದು ಅನ್ವಯ. ಸರ್ಕಾರಗಳೂ ಈ ನಿಟ್ಟಿನಲ್ಲಿ ಕೆಲಸ ಮಾಡಬಹುದು. ಉದಾಹರಣೆಗೆ- ಇಸ್ರೇಲ್ ಮಾದರಿ. ಕಡಿಮೆ ನೀರಿರುವ, ಮರಳುಗಾಡಿನ ಭೂಮಿಯಾದ ಇಸ್ರೇಲ್ ದೇಶ ಕೃಷಿಯಲ್ಲಿ ಅಭೂತಪೂರ್ವ ಸಾಧನೆಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂತಾದವರು ಅಲ್ಲಿನ ಉತ್ತಮ ಮಾದರಿಗಳನ್ನು ಇಲ್ಲಿ ಅಳವಡಿಸುವ ಕುರಿತು ಭರವಸೆದಾಯಕ ಮಾತನಾಡಿದ್ದಾರೆ. ಕೇಂದ್ರದ ಎನ್​ಡಿಎ ಸರ್ಕಾರ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ವಾಗ್ದಾನ ಮಾಡಿ, ಆ ನಿಟ್ಟಿನಲ್ಲಿ ಕೆಲ ಯೋಜನೆಗಳನ್ನು ಪ್ರಕಟಿಸಿದೆ. ಫಲಿತಾಂಶಕ್ಕೆ ಕಾದುನೋಡೋಣ.

ಕೃಷಿಕನಿಗೆ ಹೆಣ್ಣು ಕೊಡಬಾರದೆ?: ಕೆಲವು ಸಮುದಾಯಗಳಲ್ಲಿ ಹೆಣ್ಣಿನ ಕೊರತೆ ಕಂಡುಬಂದಿದೆ. ವಿವಾಹವಯಸ್ಕ ಹುಡುಗರು ಸಂಗಾತಿಗಾಗಿ ಪರಿತಪಿಸುವ ಪರಿಸ್ಥಿತಿಯಿದೆ. ಇಂದು ಹೆಚ್ಚೆಚ್ಚು ವಿದ್ಯಾವಂತರಾಗುತ್ತಿರುವ, ವೈವಿಧ್ಯಮಯ ಉದ್ಯೋಗಾವಕಾಶಗಳ ಕುರಿತು ಮಾಹಿತಿವಂತರಾಗುತ್ತಿರುವ ಹೆಣ್ಮಕ್ಕಳು ವಿವಾಹ ವಿಷಯದಲ್ಲಿ ತಮ್ಮದೇ ಆದ ನಿಲುವನ್ನು ಹೊಂದುವುದರಲ್ಲಿ ತಪ್ಪೇನೂ ಇಲ್ಲ, ಇದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ, ಕೇವಲ ಕೃಷಿಕ ಎಂಬ ಕಾರಣಕ್ಕೆ, ಹಳ್ಳಿಯಲ್ಲಿ ಬೇಸಾಯ ಮಾಡಿಕೊಂಡಿರುವ ಕಾರಣಕ್ಕೆ ಹೆಣ್ಣು ನೀಡುವುದಿಲ್ಲ ಎಂದಾದರೆ, ಮುಂದೆ ಅದು ಯಾವ ಪರಿಣಾಮಗಳನ್ನು ಉಂಟುಮಾಡೀತು ಎಂಬುದನ್ನೂ ಆಲೋಚಿಸಬೇಕಲ್ಲವೆ? ಇದು ಸಾಮಾಜಿಕವಾಗಿ ನಾನಾ ರೀತಿಯ ದುಷ್ಪರಿಣಾಮಗಳನ್ನು ಬೀರುವುದಿಲ್ಲವೆ? ಗಂಡು-ಹೆಣ್ಣು ಅನುಪಾತ ತೀವ್ರವಾಗಿ ಕುಸಿದಾಗ ಇಂಥ ಪರಿಸ್ಥಿತಿ ಕಂಡುಬರುವುದು ಸಹಜ. ಆದರೆ ಅಂಥ ಸನ್ನಿವೇಶ ಇಲ್ಲದಿದ್ದರೂ ಹೀಗಾದರೆ? ಇಂಥ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರಗಳು ಏನು ಮಾಡಲು ಸಾಧ್ಯ?

ಒಟ್ಟಿನಲ್ಲಿ, ಕೃಷಿ ಬೆಳವಣಿಗೆಯೆಂಬುದು ಕೇವಲ ಒಂದು ಕೈನಿಂದ ಆಗುವ ಚಪ್ಪಾಳೆಯಲ್ಲ. ಇಲ್ಲಿ ಸರ್ಕಾರದ ಜತೆ ಸಮಾಜದ ಪಾತ್ರವೂ ಇದೆ. ‘ನಾನು ಅನ್ನದಾತ’ ಎಂದು ರೈತ ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯುವ ಮತ್ತು ಇತರರು ಆತನನ್ನು ಅದೇರೀತಿ ಪರಿಭಾವಿಸುವ ವಾತಾವರಣ ಬಂದಾಗ ನಿಜಕ್ಕೂ ರೈತ ದೇಶದ ಬೆನ್ನೆಲುಬಾಗುತ್ತಾನೆ.

ಇಲ್ಲಿ ಇಷ್ಟೆಲ್ಲ ನಡೆಯುತ್ತಿರುವಾಗ ಅತ್ತ ದೇಶದ ಹಲವು ರಾಜ್ಯಗಳಲ್ಲಿ ರೈತರ ಪ್ರತಿಭಟನೆ ಶುರುವಾಗಿದೆ. ಸ್ವಾಮಿನಾಥನ್ ವರದಿ ಜಾರಿ, ಸಾಲಮನ್ನಾ, ಹಾಲಿನ ದರ ಏರಿಕೆ ಮುಂತಾದ ಬೇಡಿಕೆಗಳನ್ನು ರೈತರು ಮುಂದಿಟ್ಟಿದ್ದಾರೆ. ಇದು ಎಲ್ಲಿಗೆ ಹೋಗಿ ತಲುಪುತ್ತದೋ?

ಕೊನೇ ಹನಿ: ದೇಶದ ಜಿಡಿಪಿಯಲ್ಲಿ ಕೃಷಿವಲಯದ ಕೊಡುಗೆ ಕುಸಿಯುತ್ತಿದೆ ಎಂದು ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಜಿಡಿಪಿ ಇರಲಿ, ಕೃಷಿ ರಂಗವೇ ಕುಸಿಯದಿದ್ದರೆ ಸಾಕು!

One thought on “ಸಾಲಮನ್ನಾ ಮಾಡುವ ಮುನ್ನ ಒಂದಷ್ಟು ವಿಚಾರ…

Leave a Reply

Your email address will not be published. Required fields are marked *

Back To Top