Friday, 16th November 2018  

Vijayavani

Breaking News

ವನಪ್ರೇಮಿ ಬಿಷ್ಣೋಯಿಗಳಿಗೆ ನಮೋನಮಃ

Saturday, 14.04.2018, 3:04 AM       No Comments

| ನಾಗರಾಜ ಇಳೆಗುಂಡಿ

ಅದು ಸುಮಾರು 1730ರ ಸಮಯ. ರಾಜಸ್ಥಾನದ ಜೋಧಪುರದ ಆಗಿನ ಅರಸ ಅಭಯ ಸಿಂಗ್. ಆತನಿಗೆ ಒಮ್ಮೆ ಭವ್ಯ ಅರಮನೆಯನ್ನು ಕಟ್ಟಿಸಬೇಕೆಂಬ ಮನಸ್ಸಾಯಿತು. ಅದರಲ್ಲಿ ಅಸಹಜವಾದುದೇನೂ ಇಲ್ಲವೆನ್ನಿ. ರಾಜರಿಗೆ ಇರುವ ಸಹಜ ಬಯಕೆಯದು. ಸರಿ, ರಾಜಾಜ್ಞೆಯಾದ ಮೇಲೆ ಕೇಳಬೇಕೆ? ನೂರಾರು ಕೆಲಸಗಾರರು ಅರಮನೆ ನಿರ್ವಣಕ್ಕೆ ಬೇಕಾಗುವ ಮರಗಳನ್ನು ತರಲೆಂದು ಸೂಕ್ತ ಜಾಗಗಳ ಹುಡುಕಾಟಕ್ಕೆ ತೊಡಗಿದರು. ಜೋಧಪುರದ ಹಳ್ಳಿಗಳ ಪೈಕಿ ಕೇಜಾರ್ಲಿ (ಆಗ ಜೆನಾದ್ ಎಂದೂ ಕರೆಯಲಾಗುತ್ತಿತ್ತು) ಎಂಬುದೂ ಒಂದು. ಆ ಪರಿಸರದಲ್ಲಿ ಕೇಜ್ರಿ ಎಂಬ ವಿಶಿಷ್ಟ ಜಾತಿಯ ಮರಗಳು ಬೆಳೆಯುತ್ತವೆ. ಆ ಮರಗಳ ನಾಟಾ ಕಟ್ಟಡಕ್ಕೆ ಉತ್ತಮವೆಂದು ಸೈನಿಕರು ಕಡಿಯಲು ಬಂದರು. ಈ ವಿಷಯ ಗೊತ್ತಾಗಿ, ಆ ಗ್ರಾಮದ ಅಮೃತಾ ದೇವಿ ಎಂಬಾಕೆ ಧಾವಿಸಿದಳು. ಮರಗಳನ್ನು ಕಡಿಯಲು ಅವಕಾಶ ನೀಡುವುದಿಲ್ಲ, ಇದು ತಮ್ಮ ಪರಂಪರೆಗೆ, ಆದರ್ಶಕ್ಕೆ ವಿರುದ್ಧವಾದುದು ಎಂದು ಆ ಹೆಣ್ಣುಮಗಳು ಗಟ್ಟಿಗಂಟಲಿನಲ್ಲಿ ಘೋಷಿಸಿದಳು. ಆದರೆ ಸೈನಿಕರು ಕೇಳುತ್ತಾರೆಯೇ? ಮರ ಕಡಿಯಲು ಮುಂದಾದಾಗ ಅಮೃತಾ ದೇವಿ ತಡಮಾಡಲಿಲ್ಲ, ಮರವನ್ನೇ ಅಪ್ಪಿಕೊಂಡು, ‘ಕಡಿಯುವುದಾದರೆ ನನ್ನನ್ನು ಕಡಿಯಿರಿ, ಮರ ಉರುಳಿಸಲು ಬಿಡಲಾರೆ’ ಎಂದು ದಿಟ್ಟವಾಗಿ ಹೇಳಿದಳು. ಸೈನಿಕರ ಆಯುಧ ಮಾತಾಡಿತು. ಅಮೃತಾ ದೇವಿ ಎಂಬ ಆ ದಿಟ್ಟ ಹೆಣ್ಣುಮಗಳು ಮರ ಉಳಿಸಲು ಹೋಗಿ ಅಮರಳಾದಳು. ಅಮೃತಾ ದೇವಿ ಹೀಗೆ ಮರ ರಕ್ಷಣೆಗೆ ಮುಂದಾದ ವಿಷಯ ತಿಳಿದು ಆಕೆಯ ಕುಟುಂಬದವರೂ ಬಂದರು. ಅವರೂ ಮರಗಳನ್ನು ಅಪ್ಪಿಕೊಂಡು ಹುತಾತ್ಮರಾದರು. ಆ ಊರಿನ ಹಲವರೂ ಓಡೋಡಿ ಬಂದು ವನ ಸಂರಕ್ಷಣೆಯ ಕಾರ್ಯದಲ್ಲಿ ಭಾಗಿಯಾದರು. ಅವರಿಗೂ ಇದೇ ಗತಿಯಾಯಿತು. ಹೀಗೆ ಸುಮಾರು 363 ಮಂದಿ ಈ ಕಾರ್ಯದಲ್ಲಿ ಪ್ರಾಣಾರ್ಪಣೆ ಮಾಡಿದರು. ಆಗ ಘೋಷಣೆಯೊಂದು ಈ ಸಮುದಾಯದಿಂದ ಮೊಳಗಿತು- ‘ಸರ ಸಾಂಠೆ ರುಂಖ್ ರಹೇ ತೋ ಭೀ ಸಸ್ತೋ ಜಾನ್’ (ನಮ್ಮ ತಲೆ ಕತ್ತರಿಸಿಯಾದರೂ ಮರಗಳ ರಕ್ಷಣೆಯಾದರೆ ಆ ತ್ಯಾಗ ಏನೂ ಅಲ್ಲ). ಇಂಥ ಆಂದೋಲನದ ಪರಿಣಾಮ ಸಾವಿರಾರು ಮರಗಳು ಕೊಡಲಿಪೆಟ್ಟಿನಿಂದ ಬಚಾವಾದವು. ಇಲ್ಲಿ ಇಷ್ಟೆಲ್ಲ ಮಾರಣಹೋಮ ನಡೆಯುತ್ತಿರುವ ವಿಷಯ ರಾಜನ ಕಿವಿಗೆ ಬಿದ್ದಾಗಲೇ ಇದಕ್ಕೆ ತಡೆಬಿತ್ತು. ಮುಂದೆ ಈ ದೇಶದಲ್ಲಿ ನಡೆದ ಹಲವು ವನಸಂರಕ್ಷಣೆಯ ಅಪ್ಪಿಕೋ ಚಳವಳಿಗಳಿಗೆ ಈ ಆಂದೋಲನ ಮಾದರಿಯಾಯಿತು.

ಪರಿಸರ ಸಂರಕ್ಷಣೆಗೆ ಪ್ರಾಣತ್ಯಾಗ: ಹೀಗೆ ಮರರಕ್ಷಣೆ ಕಾರ್ಯದಲ್ಲಿ ಹುತಾತ್ಮರಾದವರ ನೆನಪಿಗಾಗಿ ಕೇಜಾರ್ಲಿ ಗ್ರಾಮದಲ್ಲಿ ಒಂದು ಸ್ಮಾರಕ ನಿರ್ವಿುಸಲಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಆ ಆಸುಪಾಸಿನ ಜನರು ಅಲ್ಲಿ ಸೇರಿ, ವನ ಮತ್ತು ತಮ್ಮ ಧರ್ಮದ ರಕ್ಷಣೆ ಕಾರ್ಯದಲ್ಲಿ ಸಾವನ್ನಪ್ಪಿದವರಿಗೆ ಗೌರವ ಸಲ್ಲಿಸುತ್ತಾರೆ.

ಆ ಕಾಲದಲ್ಲಿ ಅರಣ್ಯ ಪರಿಸ್ಥಿತಿ ಈಗಿನಷ್ಟು ಭೀಕರವಾಗಿರಲಿಲ್ಲ. ಇದಲ್ಲದೆ, ರಾಜಾಜ್ಞೆಯಾಯಿತು ಎಂದರೆ ಅದನ್ನು ಯಾರೂ ಮೀರುವ ಹಾಗೂ ಇರಲಿಲ್ಲ. ಹೀಗಿದ್ದರೂ ಆ ಜನರು ಕಾಡಿಗಾಗಿ ಸಿಡಿದೆದ್ದರು. ಯಾರೂ ಬಂದು ಅವರಲ್ಲಿ ವನಜಾಗೃತಿಯನ್ನೇನೂ ಮೂಡಿಸಿರಲಿಲ್ಲ. ಆದರೂ ಆ ಜನರು ಕಾಡಿನ ರಕ್ಷಣೆಗಾಗಿ ಪ್ರಾಣ ನೀಡಲೂ ಹಿಂದೆಮುಂದೆ ನೋಡಲಿಲ್ಲ ಎಂದರೆ, ಅವರ ಬದ್ಧತೆ ಹಾಗೂ ವನಪ್ರೇಮಕ್ಕೆ ಸಲಾಂ ಎನ್ನದಿರಲಾದೀತೆ!

ಅವರು ಬಿಷ್ಣೋಯಿ ಸಮುದಾಯಕ್ಕೆ ಸೇರಿದವರು. ವಿಷ್ಣೋಯಿ ಮತ್ತು ಪ್ರಹ್ಲಾದಪಂಥಿಗಳೆಂದೂ ಅವರನ್ನು ಕರೆಯಲಾಗುತ್ತದೆ. ಕಾಡು ಮತ್ತು ಕಾಡುಪ್ರಾಣಿಗಳ ಮೇಲಿನ ಪ್ರೀತಿ ಈ ಜನಾಂಗಕ್ಕೆ ರಕ್ತಗತವಾಗಿಯೇ ಬಂದಿದೆಯೆನ್ನಬೇಕು. ಎಷ್ಟರಮಟ್ಟಿಗೆ ಎಂದರೆ, ಇವರ ಮನೆಗಳ ಆಸುಪಾಸೇ ಕೃಷ್ಣಮೃಗ ಹಾಗೂ ಜಿಂಕೆಯಂಥ ಪ್ರಾಣಿಗಳು ಹಾಯಾಗಿ ಓಡಾಡಿಕೊಂಡಿರುತ್ತವೆ; ಮಹಿಳೆಯರಂತೂ ಮಕ್ಕಳ ರೀತಿ ಈ ಪ್ರಾಣಿಗಳನ್ನು ಮಡಿಲಲ್ಲಿ ಕೂರಿಸಿಕೊಂಡು ಮುದ್ದಿಸುತ್ತಾರೆ. ಇಷ್ಟೇ ಅಲ್ಲ, ತನ್ನ ಮಗುವಿನ ಜತೆಗೆ ಜಿಂಕೆಮರಿಗೂ ಹಾಲೂಡಿಸುವುದು ಇವರಿಗೆ ರೂಢಿಯೇ ಆಗಿದೆ. ಅನಾಥ ಕೃಷ್ಣಮೃಗ ಕಂಡರೆ ಅವುಗಳಿಗೆ ಮಮತೆ-ಅಕ್ಕರೆ ಧಾರೆ ಎರೆದು ಮಗುವಿನಂತೆ ಸಾಕುತ್ತಾರೆ ಬಿಷ್ಣೋಯಿ ಸಮಾಜದ ತಾಯಂದಿರು. ಇಂಥ ಹಲವು ದೃಶ್ಯಗಳು ರಾಜಸ್ಥಾನದ ಗ್ರಾಮೀಣ ಭಾಗಗಳಲ್ಲಿ ಕಂಡುಬರುತ್ತವೆ. ಇದು ಮಾನವೀಯತೆಯ ಒರತೆ ಮಾತ್ರವಲ್ಲ, ವನ್ಯಜೀವಿ ಮತ್ತು ಮರಗಳೊಂದಿಗಿನ ಇವರ ಅವಿನಾಭಾವ ಸಂಬಂಧಕ್ಕೂ ಸಾಕ್ಷಿಯಾಗಿದೆ.

ಇಲ್ಲಿ ಒಂದು ಸಂಗತಿ ನೆನಪಾಗುತ್ತದೆ. ಸಂತ, ಆಧ್ಯಾತ್ಮಿಕ ಗುರು ರಮಣ ಮಹರ್ಷಿಗಳ ಆಶ್ರಮದ ಸುತ್ತಮುತ್ತ ಕೂಡ ಹೀಗೆ ಪ್ರಾಣಿಗಳು ನಿರ್ಭಯವಾಗಿ ಓಡಾಡಿಕೊಂಡಿರುತ್ತಿದ್ದವಂತೆ. ತಮಗೆ ಭಯವಿಲ್ಲ ಎಂದಾದಲ್ಲಿ, ಯಾರೂ ಬೇಟೆಯಾಡಲಾರರು ಎಂಬ ಭರವಸೆಯಿದ್ದಲ್ಲಿ ಪ್ರಾಣಿಗಳು ಮಾನವನ ಬಳಿಸಾರುತ್ತವೆ. ಜಿಂಕೆ ಬೇಟೆಗಾರನನ್ನು ತಡೆದ ಬಿಷ್ಣೋಯಿ ಸಮುದಾಯದ ವ್ಯಕ್ತಿಯೊಬ್ಬ ಆತನ ಗುಂಡೇಟಿಗೆ ಬಲಿಯಾದ ನಿದರ್ಶನವೂ ಇದೆ. ಆ ವ್ಯಕ್ತಿಯ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ.

ಬಿಷ್ಣೋಯಿ ಜನರ ವನ ಮತ್ತು ಪ್ರಾಣಿಪ್ರೇಮಕ್ಕೆ ಅವರ ಪರಂಪರೆಯೇ ಮುಖ್ಯ ಕಾರಣ ಎನ್ನಬಹುದು. ಬಿಷ್ಣೋಯಿ ಸಮುದಾಯದ ಸ್ಥಾಪಕ ಗುರು ಜಂಬೇಶ್ವರರು (1456-1531). ಈ ಸಮುದಾಯದವರು ವಿಷ್ಣುವಿನ ಆರಾಧಕರಾದ್ದರಿಂದ ಇವರನ್ನು ವಿಷ್ಣೋಯಿಗಳು ಎಂದೂ ಕರೆಯಲಾಗುತ್ತದೆ ಎಂದು ಕೆಲ ತಜ್ಞರು ಹೇಳುತ್ತಾರೆ. ಆದರೆ ಸಾಮಾನ್ಯವಾಗಿ ಇವರು ತಮ್ಮನ್ನು ಬಿಷ್ಣೋಯಿಗಳು ಎಂದು ಕರೆದುಕೊಳ್ಳುತ್ತಾರೆ. ರಾಜಸ್ಥಾನಿ ಭಾಷೆಯಲ್ಲಿ ಬಿಷ್ ಎಂದರೆ 20. ನೋಯ್ ಎಂದರೆ 9. ಗುರು ಜಂಬೇಶ್ವರರು ಒಟ್ಟು 29 ನಿಯಮಗಳನ್ನು ಮಾಡಿರುವುದರಿಂದ ಈ ಹೆಸರು ಬಂದಿದೆ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ಬಿಷ್ಣೋಯಿಗಳ ವಿಶಾಲ ಸಿದ್ಧಾಂತ.

ಅಪ್ಪಟ ಸಾತ್ವಿಕ ಬದುಕು: ನಿಸರ್ಗದೊಂದಿಗೆ ಸಾಮರಸ್ಯದ ಬದುಕು ರೂಪಿಸಿಕೊಂಡಿರುವ ಬಿಷ್ಣೋಯಿ ಸಮಾಜದ ಜೀವನಶೈಲಿಯೇ ಸಾತ್ವಿಕ. ಇವರು ಅಪ್ಪಟ ಸಸ್ಯಾಹಾರಿಗಳು. ಪ್ರಕೃತಿ, ಪ್ರಾಣಿಪಕ್ಷಿಗಳನ್ನು ಹಿಂಸಿಸದೆ, ಅವುಗಳ ಜತೆ ಮನುಷ್ಯ ಸಾಮರಸ್ಯದಿಂದ ಬಾಳಬೇಕು ಎಂಬ ತಾತ್ತಿ್ವಕ ಚಿಂತನೆ ಈ ಸಮಾಜದ್ದು. ಅದರಲ್ಲೂ, ಕೃಷ್ಣಮೃಗಗಳ ಬಗ್ಗೆ ಪೂಜ್ಯಭಾವ ಹೊಂದಿರುವ ಬಿಷ್ಣೋಯಿ ಸಮಾಜ ಇವುಗಳೊಡನೆ ಭಾವನಾತ್ಮಕ, ಧಾರ್ವಿುಕ ನಂಟನ್ನು ಹೊಂದಿದೆ ಎಂಬುದು ವಿಶೇಷ. ಈ ಸಮಾಜದವರು ಜಂಬೇಶ್ವರರ 29 ತತ್ತ್ವ-ಆದರ್ಶಗಳನ್ನು ಪಾಲಿಸುವವರು. ಕೃಷ್ಣಮೃಗಗಳು ಗುರು ಜಂಬೇಶ್ವರರ ಪುನರ್ಜನ್ಮದ ರೂಪ ಎಂಬುದು ಇವರ ಗಾಢನಂಬಿಕೆ. ಈ ಹಿನ್ನೆಲೆಯಲ್ಲಿ ಕೃಷ್ಣಮೃಗಗಳ ರಕ್ಷಣೆಗೆ ಟೊಂಕಕಟ್ಟುತ್ತಾರೆ. ಜಂಬೇಶ್ವರ ಗುರುಗಳ ಬೋಧನೆಯೂ ಈ ನಿಟ್ಟಿನಲ್ಲೇ ಇದೆ. ‘ಜೀವ ದಯಾ ಪಾಲನಿ. ರೂಖ್ ಲೀಲೂ ನಹೀ ಧಾವೆ’ ಅಂದರೆ ಎಲ್ಲ ಜೀವಿಗಳಿಗೆ ದಯೆ ತೋರಬೇಕು ಮತ್ತು ಮರಗಳ ರಕ್ಷಣೆ ಮಾಡಬೇಕು ಎಂದರ್ಥ. ಈ ಕಾರ್ಯದಿಂದ ಮನುಷ್ಯನಿಗೆ ವೈಕುಂಠದಲ್ಲಿ ಸ್ಥಳ ಪ್ರಾಪ್ತವಾಗುತ್ತದೆ’ ಎಂಬ ಜಂಬೇಶ್ವರರ ಸಂದೇಶವನ್ನು ಚಾಚೂತಪ್ಪದೆ ಪಾಲಿಸುವ ಈ ಸಮಾಜದವರು ಕಾಡು, ವನ್ಯಜೀವಿಗಳ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಬಿಷ್ಣೋಯಿಗಳು ಹರಿಯಾಣ, ಪಂಜಾಬ್, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲೂ ಇದ್ದಾರೆ.

ಬಿಷ್ಣೋಯಿ ಸಮಾಜದ ಕೆಲ ಪ್ರಮುಖ ನಿಯಮಗಳು ಹೀಗಿವೆ: ಜ ಸಂಬಂಧಿಕರು ಮೃತರಾದರೆ 30 ದಿನದ ಸೂತಕ ಜ ಬೆಳಗ್ಗೆ, ಸಂಜೆ ಸಂಧ್ಯಾವಂದನೆ ಮಾಡುವುದು ಜ ಪ್ರಾತಃಕಾಲ ಹವನ ಮಾಡುವುದು, ಸಂಜೆ ವಿಷ್ಣುವಿನ ಗುಣಗಾನದೊಂದಿಗೆ ಆರತಿ ಮಾಡುವುದು ಜ ಕಳ್ಳತನ ಮಾಡದಿರುವುದು, ನಿಂದೆ ಮಾಡದಿರುವುದು, ಸುಳ್ಳು ಹೇಳದಿರುವುದು, ವಾದ-ವಿವಾದ ಮಾಡದಿರುವುದು. ಜ ಗೋವು, ಎತ್ತುಗಳನ್ನು ಬಂಧನದಲ್ಲಿ ಇರಿಸದೆ, ಕಟ್ಟಿಹಾಕದೆ ಮುಕ್ತವಾಗಿ ಬಿಡುವುದು. ಜ ಎಲ್ಲ ಪ್ರಾಣಿಗಳ ಮೇಲೆ ದಯೆ ಇರಿಸುವುದು. ಜ ಪ್ರತಿ ವೃಕ್ಷವನ್ನು ರಕ್ಷಿಸುವುದು, ಪರಿಸರಕ್ಕೆ ಹಾನಿಯಾಗದಂತೆ ಬದುಕುವುದು. ಮರಗಿಡಗಳನ್ನು ಬೆಳೆಸುವುದು. ಜ ತಂಬಾಕು, ಭಾಂಗ್, ಮದ್ಯ, ಮಾಂಸದ ಸೇವನೆ ಇಲ್ಲ. ಈ ನಿಯಮಗಳನ್ನು ಗಮನಿಸಿದರೆ ಪ್ರಕೃತಿಯೊಂದಿಗೆ ಇವರ ಜೀವನ ಎಷ್ಟು ಮಿಳಿತವಾಗಿದೆ ಎಂಬುದು ಮನವರಿಕೆಯಾಗುತ್ತದೆ.

ಸದ್ದು ಮಾಡಿದ ಸಲ್ಮಾನ್ ಪ್ರಕರಣ: ಬಿಷ್ಣೋಯಿಗಳ ಕುರಿತು ಇಷ್ಟೆಲ್ಲ ಹೇಳುವುದಕ್ಕೆ ಕಾರಣವಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೋಧಪುರ ನ್ಯಾಯಾಲಯ ಈಚೆಗೆ ಐದು ವರ್ಷಗಳ ಶಿಕ್ಷೆ ವಿಧಿಸಿದೆಯಷ್ಟೆ. ಸದ್ಯಕ್ಕೆ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಸಲ್ಮಾನ್ ಬೇಟೆ ನಡೆಸಿದ್ದಾರೆ ಎನ್ನಲಾದ ಸ್ಥಳ ಇದೇ ಜೋಧಪುರದ ವ್ಯಾಪ್ತಿಗೆ ಬರುತ್ತದೆ. ‘ಹಮ್ ಸಾಥ್ ಸಾಥ್ ಹೈ’ ಹಿಂದಿ ಸಿನಿಮಾ ಚಿತ್ರೀಕರಣಕ್ಕೆ ತೆರಳಿದ್ದಾಗ 1992ರ ಅ.2 ರ ರಾತ್ರಿ ಜೋಧಪುರದ ಕಣ್​ಕಣಿ ಗ್ರಾಮದ ಭಗೋಡಾ ಕಿ ದನಿ ಎಂಬ ಪ್ರದೇಶದಲ್ಲಿ ಸಲ್ಮಾನ್ ಏರ್​ಗನ್​ನಿಂದ ಎರಡು ಕೃಷ್ಣಮೃಗಗಳನ್ನು ಸಾಯಿಸಿದ್ದಾರೆ ಎಂಬುದು ಆರೋಪ. ಆಗ ಸಲ್ಮಾನ್ ಜತೆ ವಾಹನದಲ್ಲಿ ಇದ್ದ ನಟ ಸೈಫ್ ಅಲಿ ಖಾನ್, ನಟಿಯರಾದ ಟಬು, ಸೋನಾಲಿ ಬೇಂದ್ರೆ ಮತ್ತು ನೀಲಂ ಅವರನ್ನು ಕೋರ್ಟ್ ಖುಲಾಸೆಗೊಳಿಸಿದೆ. ಕೃಷ್ಣಮೃಗ ಬೇಟೆ ಸೇರಿ ಸಲ್ಲೂ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು. ಚಿಂಕಾರಾ ಜಿಂಕೆ ಹತ್ಯೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಾರೆಂದು ಆರೋಪಿಸಲಾಗಿತ್ತು. ಈ ಪೈಕಿ ಚಿಂಕಾರಾ ಹಾಗೂ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಅಧೀನ ನ್ಯಾಯಾಲಯಗಳು ಸಲ್ಮಾನ್ ದೋಷಿ ಎಂದು ತೀರ್ಪಿತ್ತಿದ್ದರೂ, ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಈ ಎರಡೂ ಪ್ರಕರಣಗಳಲ್ಲಿ ರಾಜಸ್ಥಾನ ಸರ್ಕಾರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಹೋಗಿದ್ದು, ಅವು ವಿಚಾರಣಾ ಹಂತದಲ್ಲಿವೆ. ಮುಂದೆ ಈ ಪ್ರಕರಣಗಳ ಅಂತ್ಯ ಯಾವರೀತಿಯಲ್ಲಿ ಆಗುತ್ತದೆ ಎಂಬುದು ಗೊತ್ತಿಲ್ಲ. ಅಂದಹಾಗೆ, ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಮತ್ತಿತರರು ಇದ್ದ ವಾಹನವನ್ನು ಬೈಕ್​ನಲ್ಲಿ ಬೆಂಬತ್ತಿದವರು ಇದೇ ಬಿಷ್ಣೋಯಿ ಯುವಕರು. ಅಷ್ಟೇ ಅಲ್ಲ, ಈ ಸಮಾಜದ ವಕೀಲರು ಪ್ರಕರಣಕ್ಕೆ ರ್ತಾಕ ಅಂತ್ಯ ಕಾಣಿಸುವಲ್ಲೂ ಶ್ರಮವಹಿಸಿದ್ದರಂತೆ. ಅಲ್ಲಿಗೆ ಬಿಷ್ಣೋಯಿಗಳ ಕಾಡುಪ್ರೇಮ ಮತ್ತೊಮ್ಮೆ ಸಾಬೀತಾಯಿತು. ಜಿಂಕೆ ಹಾಗೂ ಕೃಷ್ಣಮೃಗಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ 1ರಲ್ಲಿ ಬರುತ್ತವೆ. ಅಂದರೆ, ಕಾನೂನಿನ ಪ್ರಕಾರ ಅತ್ಯಂತ ಗರಿಷ್ಠ ರಕ್ಷಣೆ ಒದಗಿಸಲಾಗಿದೆ. ಹುಲಿ ಕೂಡ ಇದೇ ಅನುಸೂಚಿಯಲ್ಲಿ ಬರುತ್ತದೆ ಎಂಬುದು ಗಮನಾರ್ಹ.

ನಾವೀಗ ಕಾಡು, ಕಾಡುಪ್ರಾಣಿಗಳ ರಕ್ಷಣೆಗಾಗಿ ಜಾಗೃತಿ ಎಂದೆಲ್ಲ ಕೋಟಿಗಟ್ಟಲೆ ಹಣ ಖರ್ಚುಮಾಡಿ ಪ್ರಯತ್ನ ನಡೆಸುತ್ತಿದ್ದೇವೆ; ಐಷಾರಾಮಿ ಹೋಟೆಲುಗಳಲ್ಲಿ ಕಾಡಿನ ಹಾಗೂ ವನ್ಯಪ್ರಾಣಿಗಳ ರಕ್ಷಣೆ ಬಗ್ಗೆ ಅಂತಾರಾಷ್ಟ್ರೀಯ ಸೆಮಿನಾರುಗಳು ನಡೆಯುತ್ತವೆ. ಈ ಯಾವ ಕಸರತ್ತಿನ ಅಗತ್ಯವೂ ಇಲ್ಲದೆ ನೂರಾರು ವರ್ಷಗಳ ಹಿಂದೆಯೇ ಬಿಷ್ಣೋಯಿ ಸಮುದಾಯದಂಥವರು ವನಸಂರಕ್ಷಣೆಯ ಕಾರ್ಯವನ್ನು ಸ್ವತಃ ಮಾಡಿ ತೋರಿಸಿದ್ದಾರೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top