More

    ಪರಂಪರೆಯ ಪಿಸುಮಾತು, ಕಿವಿಮಾತು…

    ಪರಂಪರೆಯ ಪಿಸುಮಾತು, ಕಿವಿಮಾತು...ನಾವು ಎಷ್ಟು ಮುಂದುವರಿದಿದ್ದೇವೆ ಎಂದುಕೊಂಡರೂ, ಹಿಂದಿನಿಂದ ಬಂದುದನ್ನು, ಹಿರಿಯರು ಹಾಕಿಕೊಟ್ಟ ದಾರಿಯನ್ನು ಸುಲಭದಲ್ಲಿ ಪಕ್ಕಕ್ಕೆ ಸರಿಸಲಾಗದು. ಕಾಲಕ್ಕೆ ತಕ್ಕ ಹಾಗೆ ಅದರಲ್ಲಿ ಪರಿಷ್ಕರಣೆ ಅಥವಾ ಮಾರ್ಪಾಡು ಅಗತ್ಯವಿದ್ದಲ್ಲಿ ಮಾಡಬಹುದೆ ಹೊರತು ಸಾರಾಸಗಟಾಗಿ ಇದು ಮೌಢ್ಯ, ಮೂಢನಂಬಿಕೆ, ಪ್ರಗತಿವಿರೋಧಿ ಎಂದೆಲ್ಲ ಷರಾ ಬರೆಯಲಾಗದು.

    ರಿಷಿ ಸುನಕ್ ಅವರು ಬ್ರಿಟನ್ನಿನ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಅನೇಕ ದಿನಗಳಾದವು. ಈ ನಡುವೆ, ಅವರ ವೈಯಕ್ತಿಕ ಬದುಕು ಮತ್ತು ಸಾಧನೆ, ಬ್ರಿಟನ್ ರಾಜಕಾರಣದಲ್ಲಿ ಅಲ್ಪಾವಧಿಯಲ್ಲಿ ಎತ್ತರಕ್ಕೇರಿದ ಬಗೆ- ಇತ್ಯಾದಿ ಬಗ್ಗೆ ಸಾಕಷ್ಟು ಲೇಖನಗಳು ಬಂದಿವೆ. ಕೆಲವರಂತೂ, ಇನ್ನೂರು ವರ್ಷಕ್ಕಿಂತ ಹೆಚ್ಚು ಕಾಲ ಭಾರತವನ್ನಾಳಿದ ಬ್ರಿಟನ್ನನ್ನು ಈಗ ಭಾರತ ಮೂಲದವರೊಬ್ಬರು ಆಳುತ್ತಾರೆಂದು ಸಂತೋಷಿಸಿದರು. ಅದು ನಿಜ ಕೂಡ. ಏಕೆಂದರೆ, ಒಂದು ದೇಶವಾಗಿ ಅನ್ಯರ ಕೈಲಿ ಆಳಿಸಿಕೊಳ್ಳುವುದಿದೆಯಲ್ಲ, ಅದು ಕಡುಕಷ್ಟ. ಅದರಲ್ಲೂ ಬ್ರಿಟಿಷರು ಇಲ್ಲಿ ನಡೆಸಿದ ಅವಾಂತರಗಳು ಒಂದೆರಡಾ? ನಮ್ಮ ಸಂಪತ್ತು ದೋಚಿದರು, ನಮ್ಮವರ ಪ್ರಾಣಹರಣ ಮಾಡಿದರು. ಆ ದುಃಸ್ವಪ್ನವನ್ನು ಭಾರತ ಎಂದೂ ಮರೆಯಲಾಗದು. ಹಾಗಂತ, ರಿಷಿ ಸುನಕ್ ಬೆಂಗಳೂರಿನ ಅಳಿಯ, ಭಾರತ ಮೂಲದವರು ಎಂದಾಕ್ಷಣ ಅವರು ಭಾರತಪರ ನೀತಿನಿರ್ಣಯ ಮಾಡುತ್ತಾರೆಂದು ನಿರೀಕ್ಷಿಸುವುದು ಸಾಧ್ಯವಿಲ್ಲ, ಅದು ಸಾಧುವೂ ಅಲ್ಲ. ಏಕೆಂದರೆ ಯಾವುದೇ ದೇಶ ಮೊದಲಿಗೆ ತನ್ನ ಹಿತಾಸಕ್ತಿಯನ್ನು ಗಮನಿಸುತ್ತದೆ.

    ಹಾಗಂತ ಸುನಕ್ ಹಾದಿಯೇನು ಸಲೀಸಾಗಿಲ್ಲ. ಆಡಳಿತಾರೂಢ ಕನ್ಸರ್ವೆಟಿವ್ (ಟೋರಿ)ಪಕ್ಷದಲ್ಲಿ ಒಳಜಗಳ ತಾರಕಕ್ಕೇರಿದೆ. ಮುಂದಿನ ವರ್ಷ ಅಲ್ಲಿ ಚುನಾವಣೆ ಎದುರಾಗಲಿದ್ದು, ಈ ತಂಟೆತಕರಾರು ಬಗೆಹರಿಸಿಕೊಳ್ಳದಿದ್ದರೆ ಗೆಲುವು ಕಷ್ಟವಿದೆ. ಇದರ ಜತೆಗೆ, ದೇಶದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಅದರಲ್ಲೂ ಯುರೋಪ್ ಒಕ್ಕೂಟದಿಂದ ಹೊರಬರುವ (ಬ್ರೆಕ್ಸಿಟ್) ನಿರ್ಧಾರದ ತರುವಾಯದಲ್ಲಿ ಯಾಕೋ ಬ್ರಿಟನ್ ಜಾತಕದಲ್ಲಿ ಬರೀ ಕಷ್ಟನಷ್ಟಗಳೇ ಬರೆದಂತಿವೆ. ಹಣದುಬ್ಬರ ನಾಲ್ಕು ದಶಕಗಳಲ್ಲಿ ಅತಿ ಹೆಚ್ಚಿನ ಮಟ್ಟಕ್ಕೇರಿದೆ. ಅಲ್ಲಿನ ವಿತ್ತ ಸನ್ನಿವೇಶ ಎಷ್ಟು ಹದಗೆಟ್ಟಿದೆೆಯೆಂದರೆ, ಹಿಂದಿನ ಪ್ರಧಾನಿ ಲಿಜ್ ಟ್ರಸ್ ಅವರು ಕೇವಲ 44 ದಿನಗಳಲ್ಲಿ ‘ಇದು ನನ್ನ ಕೈಲಾಗುವ ಕಾರ್ಯವಲ್ಲ’ಎಂದು ರಾಜೀನಾಮೆ ಕೊಟ್ಟು ಹೊರನಡೆದುಬಿಟ್ಟರು. ಆದರೂ ಇಲ್ಲಿ ಸುನಕ್​ಗೆ ಒಂದು ಪ್ಲಸ್ ಪಾಯಿಂಟ್ ಇದೆ. ಏನೆಂದರೆ ಅವರಿಗೆ ಹಣಕಾಸು ವಿಚಾರದಲ್ಲಿ ಹಿಡಿತ ಇದೆ. ಹಿಂದೆ ಅವರು ಇನ್ವೆಸ್ಟ್ ನೆಂಟ್ ಬ್ಯಾಂಕರ್ ಆಗಿ ಕೆಲಸ ಮಾಡಿದವರು. ಜತೆಗೆ ಕೋವಿಡ್ ಹಾವಳಿ ಕಾಲದಲ್ಲಿ ಅವರು ಮಂಡಿಸಿದ ಹಣಕಾಸು ಪ್ಯಾಕೇಜ್ ಗಮನಸೆಳೆದಿತ್ತು.

    ಇನ್ನು, ಸಂಪ್ರದಾಯ-ಪರಂಪರೆ ಕುರಿತಂತೆ ಅವರಿಗಿರುವ ಕಾಳಜಿ ಮತ್ತು ಅದನ್ನು ಆಚರಿಸುವ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿದೆ. ನೂತನ ಪ್ರಧಾನಿಯಾಗಿ ಆಯ್ಕೆಯಾದ ಸುನಕ್ ಲಂಡನ್​ನ 10, ಡೌನಿಂಗ್ ಸ್ಟ್ರೀಟ್​ನಲ್ಲಿರುವ ಕಚೇರಿಯನ್ನು (ಪ್ರಧಾನಿ ಕಾರ್ಯಾಲಯ) ಮೊದಲ ಬಾರಿಗೆ ಪ್ರವೇಶಿಸುವಾಗ ಬಾಗಿಲಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ದೀಪ ಬೆಳಗಿದರು ಎಂಬ ವಿಡಿಯೋವೊಂದು ಭರ್ಜರಿ ಓಡಾಡಿತ್ತು. ಆದರೆ ಆ ವಿಡಿಯೋ 2020ರ ನವೆಂಬರ್​ನದಾಗಿದ್ದು, ಅವರು ಆಗ ಚಾನ್ಸಲರ್ ಆಗಿದ್ದರು. ಇದೇನೇ ಇದ್ದರೂ, ಸುನಕ್ ಸಂಪ್ರದಾಯನಿಷ್ಠ ಎಂಬುದಂತೂ ಖರೆ. ಅವರು ಗೋಪೂಜೆ ಮಾಡುವುದು ಮುಂತಾದ ವಿಡಿಯೋಗಳು ಸಹ ಇವೆ. ಯಾರಿಗೇ ಆದರೂ, ಯಾವ ಸ್ಥಾನಕ್ಕೇರಿದರೂ ರಕ್ತದಲ್ಲಿ ಬಂದ ಪರಂಪರೆಯ ಪ್ರೀತಿ ಅಷ್ಟು ಸುಲಭದಲ್ಲಿ ಹೋಗದು.

    ನಾವು ಎಷ್ಟು ಮುಂದುವರಿದಿದ್ದೇವೆ ಎಂದುಕೊಂಡರೂ, ಆಧುನಿಕರು ಎಂದು ಹೇಳಿಕೊಂಡರೂ ಹಿಂದಿನಿಂದ ಬಂದುದನ್ನು, ಹಿರಿಯರು ಹಾಕಿಕೊಟ್ಟ ದಾರಿಯನ್ನು ಸುಲಭದಲ್ಲಿ ಪಕ್ಕಕ್ಕೆ ಸರಿಸಲಾಗದು. ಕಾಲಕ್ಕೆ ತಕ್ಕ ಹಾಗೆ ಅದರಲ್ಲಿ ಪರಿಷ್ಕರಣೆ ಅಥವಾ ಮಾರ್ಪಾಡು ಅಗತ್ಯವಿದ್ದಲ್ಲಿ ಮಾಡಬಹುದೆ ಹೊರತು ಇಡಿಯಾಗಿ ಸಾರಾಸಗಟಾಗಿ ಇದು ಮೌಢ್ಯ, ಇದು ಮೂಢನಂಬಿಕೆ, ಇದು ಪ್ರಗತಿವಿರೋಧಿ ಎಂದೆಲ್ಲ ಷರಾ ಬರೆಯಲಾಗದು. ಅಜ್ಜ ನೆಟ್ಟ ಆಲದಮರಕ್ಕೆ ನೇಣುಹಾಕಿಕೊಳ್ಳಬಾರದೆಂಬುದು ಸರಿ. ಆದರೆ ಅದೇ ಆಲದಮರದ ಬೇರನ್ನು ಮರೆಯಬಾರದೆಂಬುದು ಸಹ ಅಷ್ಟೇ ಅಗತ್ಯವಲ್ಲವೆ?

    ಈಚೆಗೆ ತೆರೆಕಂಡು ಭರ್ಜರಿ ಯಶಸ್ಸು ದಾಖಲಿಸಿರುವ ‘ಕಾಂತಾರ’ ಚಲನಚಿತ್ರವು ಪ್ರಾದೇಶಿಕ ಸಂಪ್ರದಾಯ, ಪರಂಪರೆಯ ಸೊಗಡನ್ನು ಸಶಕ್ತವಾಗಿ ಸೆರೆಹಿಡಿದಿದೆ. ಆ ಚಿತ್ರದ ನಾಯಕ ತನಗೆ ಕುಟುಂಬಿಕವಾಗಿ ಬಂದ ದೈವನರ್ತಕ ಜವಾಬ್ದಾರಿ ನಿರ್ವಹಿಸಲು ಆಸಕ್ತಿ ಹೊಂದಿರುವುದಿಲ್ಲ. ಊರಿನ ಬೇರೆಲ್ಲ ಸಂಗತಿಗಳಲ್ಲಿ ತಲೆಹಾಕುವ ಆತ ಈ ವಿಚಾರಗಳಲ್ಲಿ ಮಾತ್ರ ಅನ್ಯಮನಸ್ಕ. ಆದರೆ ದೈವ ಆಗೀಗ ಆತನನ್ನು ಎಚ್ಚರಿಸುತ್ತಲೇ ಇರುತ್ತದೆ; ಈ ಹಾದಿ ಬಿಡಬೇಡ ಎಂದು ಕಿವಿಮಾತು ಹೇಳುತ್ತಲೇ ಇರುತ್ತದೆ. ಕೊನೆಗೂ ದೈವದ ಶಕ್ತಿ ಸಾಕ್ಷಾತ್ಕಾರವಾಗುತ್ತದೆ. ಒಂದು ಹಂತದಲ್ಲಿ ದುಷ್ಟಶಕ್ತಿಗಳ ವಿರುದ್ಧ ಸೋಲೊಪು್ಪವ ಸ್ಥಿತಿಯಲ್ಲಿದ್ದ ಶಿವನಿಗೆ ದೈವವೇ ಹೋರಾಡುವ ಪ್ರೇರಣೆ ನೀಡುತ್ತದೆ, ಶಕ್ತಿ ತುಂಬುತ್ತದೆ. ಅಥವಾ ತಾನೇ ಆತನನ್ನು ಮಾಧ್ಯಮವಾಗಿಸಿಕೊಂಡು ದುಷ್ಟಸಂಹಾರ ಕಾರ್ಯ ನೆರವೇರಿಸುತ್ತದೆ. ಅದರೊಂದಿಗೆ ಶಿವನ ಕುಟುಂಬದಲ್ಲಿ ದೈವನರ್ತಕ ಪರಂಪರೆಯೂ ಮುಂದುವರಿಯುವಂತಾಗುತ್ತದೆ. ಪರಂಪರೆಯೇ ವ್ಯಕ್ತಿಯನ್ನು ಆರಿಸಿಕೊಂಡು ತಾನು ಅನೂಚಾನವಾಗಿ ಮುಂದುವರಿಯುವ ಅಥವಾ ವ್ಯಕ್ತಿಯು ಪರಂಪರೆಯನ್ನು ಮುಂದುವರಿಸಲು ಸಜ್ಜಾಗುವ ಅದ್ಭುತ ಸಂಕೇತ ಇದು. ಜನರಿಗೆ ಬದುಕಿನಲ್ಲಿ ಒಂದು ಶ್ರದ್ಧೆ, ನಂಬಿಕೆಯ ಊರುಗೋಲು ಬೇಕು. ಅದರ ಸಹಾಯದಿಂದ ಜೀವನದ ಏರುಪೇರುಗಳನ್ನು ಎದುರಿಸಬಹುದು. ‘ಕಾಂತಾರ’ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಈ ಶ್ರದ್ಧೆ ನಂಬಿಕೆಯೂ ಪ್ರಮುಖ ಪಾತ್ರವಹಿಸಿದೆ. ಪಂಜುರ್ಲಿಯ ಕೃಪಾಕಟಾಕ್ಷ ಚಿತ್ರದ ಮೇಲಿದೆ ಎಂದರೂ ಅತಿಶಯೋಕ್ತಿಯಾಗದು. ಚಿತ್ರದಲ್ಲಿ ಬರುವ ಪಂಜುರ್ಲಿ ದೈವದ ಚಿತ್ರ ಭಾಷೆ, ಪ್ರದೇಶಗಳ ಭೇದವಿಲ್ಲದೆ ನೋಡುಗರ ಮನಸ್ಸಿನಲ್ಲಿ ಅಚ್ಚೊತ್ತಿದೆ. ದೈವವು ಇಡೀ ಪರದೆಯನ್ನು ಆವರಿಸಿದಾಗ ಕೈಮುಗಿದವರೆಷ್ಟೋ! ಇದು ನಮ್ಮ ನೆಲಮೂಲ ಪರಂಪರೆಯ ಶಕ್ತಿ. ದೇಶದ ಉದ್ದಗಲಕ್ಕೂ ಇಂಥ ವಿಶಿಷ್ಟ ಹೆಜ್ಜೆಗಳನ್ನು ಗುರುತಿಸಬಹುದು. ‘ಒಂದು ದೇಶ ಪರಂಪರೆ, ಸಂಪ್ರದಾಯವನ್ನು ಅನುಸರಿಸುವುದರಿಂದ ದುರ್ಬಲವಾಗುವುದಿಲ್ಲ. ಬದಲಿಗೆ ಸಂಕಷ್ಟದ ಸಮಯದಲ್ಲಿ ಅದು ದೇಶವನ್ನು ಬಲಗೊಳಿಸುತ್ತದೆ’ ಎಂಬ ಬ್ರಿಟನ್ ನೇತಾರ ವಿನ್​ಸ್ಟನ್ ರ್ಚಚಿಲ್ ಮಾತು ನಿಜವೆನಿಸುತ್ತದೆ.

    ‘ಕಾಂತಾರ’ ಚಿತ್ರವು ಕಾಡು ಮತ್ತು ಮಾನವನ ಅವಿನಾಭಾವ ಸಂಬಂಧ, ಅಲ್ಲಿ ಸರ್ಕಾರ ಅಥವಾ ಅರಣ್ಯ ಇಲಾಖೆಯ ಮಧ್ಯಪ್ರವೇಶದಿಂದ ಆಗುವ ಅವಾಂತರ-ಸಮಸ್ಯೆಗಳು ಇವನ್ನೆಲ್ಲ ಕೂಡ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ನಿಸರ್ಗ ನೀಡಿದುದನ್ನು, ಜೀವನಕ್ಕೆ ಅಗತ್ಯವಾದುದಷ್ಟನ್ನು ಮಾತ್ರ ಬಳಸಿಕೊಂಡು ಉಳಿದಂತೆ ಜತನದಿಂದ ಕಾಪಾಡಿಕೊಂಡು ಬಂದ ಕಾಡಿನ ವಿಷಯದಲ್ಲಿ ತಮ್ಮನ್ನು ಪರಕೀಯರಂತೆ ಕಂಡರೆ ಮೂಲನಿವಾಸಿ ಜನರಿಗೆ ಹೇಗಾಗಬೇಡ? ‘ಕಾಡು ಪ್ರವೇಶಿಸಲು, ಅಲ್ಲಿಂದ ಏನನ್ನಾದರೂ ತರಲು ಸರ್ಕಾರದ ಅನುಮತಿ ಬೇಕು’ ಎಂಬ ಮಾತು ಅವರಿಗೆ ಪಥ್ಯವಾಗುವುದು ಹೇಗೆ? ನಾಗಬನ, ದೇವರಕಾಡು ಇವೆಲ್ಲ ನಮ್ಮ ಗ್ರಾಮೀಣರ ಕಾಡುಪ್ರೀತಿಯ ಪ್ರತೀಕಗಳಾಗಿವೆ. ಸರ್ಕಾರಗಳು ಕಾಯ್ದಿಟ್ಟ ಅರಣ್ಯ ಎಂಬ ಪರಿಕಲ್ಪನೆ ತರುವ ಎಷ್ಟೋ ಮುಂಚೆಯೇ ಜನರು ಇದನ್ನು ಪಾಲಿಸುತ್ತಿದ್ದರು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣಕ್ಕೆ ಅರಣ್ಯ ಸಂರಕ್ಷಣೆ ವಿಷಯದಲ್ಲಿ ಸರ್ಕಾರ ಅಂದುಕೊಂಡಷ್ಟು ಗುರಿ ಸಾಧಿಸಲು ಆಗಿಲ್ಲ ಎಂದು ತಜ್ಞರು ಹೇಳುತ್ತಾರೆ. ಸ್ವಂತ ಜಮೀನು ಇಲ್ಲದ ಲಕ್ಷಾಂತರ ಕುಟುಂಬಗಳವರು ಸರ್ಕಾರಿ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಾಗಂತ ಇವರನ್ನೆಲ್ಲ ಒಕ್ಕಲೆಬ್ಬಿಸಿದರೆ ಹೋಗುವುದಾದರೂ ಎಲ್ಲಿಗೆ? ಇದು ಸರ್ಕಾರಗಳಿಗೂ ಇಕ್ಕಟ್ಟಿನ ಸಂಗತಿ. ಕರ್ನಾಟಕದಲ್ಲಿ ಇಂಥ ಬಗರ್​ಹುಕುಂ ಜಮೀನನ್ನು ಸಕ್ರಮ ಮಾಡುವ ಸಲುವಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಒಂದು ವರ್ಷ ಕಾಲ ವಿಸ್ತರಿಸಿರುವುದು ಈ ಜನರಿಗೆ ಸ್ವಲ್ಪ ಸಮಾಧಾನ ತಂದಿದೆ. ಆದರೆ, ಜೀವನೋಪಾಯಕ್ಕಾಗಿ ತುಂಡುಭೂಮಿಯಲ್ಲಿ ವ್ಯವಸಾಯ ಮಾಡುವುದು ಬೇರೆ; ಊರೆಲ್ಲ ತನ್ನದೇ ಎಂದು ಕಂಡಲ್ಲೆಲ್ಲ ಅತಿಕ್ರಮಿಸಿ ಬೇಲಿ ಹಾಕುವುದು ಬೇರೆ. ಈ ವ್ಯತ್ಯಾಸವನ್ನು ಸರ್ಕಾರ ಗುರುತಿಸಬೇಕಾಗುತ್ತದೆ. ನಗರ ಪ್ರದೇಶಗಳಲ್ಲಿ ಸಹ ಇಂಥ ಸಮಸ್ಯೆ ಇದೆ, ಸ್ವರೂಪ ಬೇರೆ ಅಷ್ಟೇ.

    ಪಶ್ಚಿಮ ಘಟ್ಟದ ಪ್ರದೇಶಗಳ ಜನರಿಗೆ ಈಗ ಮತ್ತೊಂದು ಇಕ್ಕಟ್ಟು ಬಿಕ್ಕಟ್ಟು ಎದುರಾಗಿದೆ. ಈ ಪಶ್ಚಿಮ ಘಟ್ಟದ ಬಗ್ಗೆ ಹೇಳಬೇಕು ಎಂದರೆ, ಜಗತ್ತಿನಲ್ಲೇ ಅತಿ ವೈವಿಧ್ಯಮಯ ಜೀವರಾಶಿ ಮತ್ತು ಸಸ್ಯರಾಶಿಗಳನ್ನು ಹೊಂದಿದ ವಿಶಾಲ ಪ್ರದೇಶಗಳಲ್ಲಿ ಒಂದು. ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ, ಗುಜರಾತ್ ಈ ಆರು ರಾಜ್ಯಗಳಲ್ಲಿ ಹಬ್ಬಿರುವ ಘಟ್ಟದ ಒಟ್ಟು ವ್ಯಾಪ್ತಿ 1, 600 ಕಿಮೀ. ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪ್ರದೇಶ ಕರ್ನಾಟಕದಲ್ಲೇ ಇರುವುದು ನಮಗೆ ಕೋಡು ಮೂಡಿಸುವ ಸಂಗತಿ. ಅತಿಕ್ರಮಣ, ವಿವಿಧ ಬಗೆಯ ಚಟುವಟಿಕೆಗಳು, ಕೈಗಾರಿಕೆಗಳು ಇತ್ಯಾದಿ ಕಾರಣದಿಂದ ಈ ಭೂಭಾಗ ಇನ್ನಷ್ಟು ಕಿರಿದಾಗುವುದನ್ನು ತಪ್ಪಿಸಲೋಸುಗ, ಕಸ್ತೂರಿರಂಗನ್ ವರದಿ ಆಧಾರದಲ್ಲಿ (ಈ ಸಮಿತಿಗೆ ಮುನ್ನ ಮಾಧವ ಗಾಡ್ಗೀಳ್ ಸಮಿತಿ ರಚನೆಯಾಗಿ ವರದಿ ನೀಡಿತ್ತು. ಆದರೆ ಆ ವರದಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರಿಂದ ಬೇರೆ ಸಮಿತಿ ರಚಿಸಲಾಯಿತು) ಪಶ್ಚಿಮ ಘಟ್ಟದ ಕೆಲ ಭಾಗ ಸೂಕ್ಷ್ಮ ಪರಿಸರ ಪ್ರದೇಶ ಎಂದು ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಈ ವ್ಯಾಪ್ತಿಗೆ ಬರುವ ರಾಜ್ಯಗಳು ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಹೀಗಾಗಿ ಮೂರ್ನಾಲ್ಕು ಪ್ರಯತ್ನಗಳ ನಂತರವೂ ಅಧಿಸೂಚನೆ ಹೊರಡಿಸಲು ಆಗಿಲ್ಲ. ಒಂದೊಮ್ಮೆ ಹೀಗೆ ಸೂಕ್ಷ್ಮ ಪ್ರದೇಶ ಎಂದು ಅಧಿಕೃತವಾಗಿ ಘೋಷಣೆಯಾದರೆ ಆಲ್ಲಿನ ಜನರ ಬದುಕು ದಿಕ್ಕಾದಿವಾಳಿಯಾಗುತ್ತದೆ, ಅವರು ಅಲ್ಲಿಂದ ಹೊರತೆರಳಬೇಕಾಗುತ್ತದೆ ಮತ್ತು ಆ ವ್ಯಾಪ್ತಿಯಲ್ಲಿ ರಸ್ತೆ ಮುಂತಾದ ಯಾವ ಕಾಮಗಾರಿಯನ್ನೂ ಕೈಗೊಳ್ಳಲು ಆಗುವುದಿಲ್ಲ ಎಂಬುದು ತಕರಾರಿಗೆ ಮುಖ್ಯ ಕಾರಣ. ಕೆಲವು ಪರಿಸರವಾದಿಗಳ ಪ್ರಕಾರ, ಹೀಗೇನೂ ಆಗದು. ಸರ್ಕಾರಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಕಾಡನ್ನು, ಜೀವವೈವಿಧ್ಯವನ್ನು ಕಾಪಾಡಿಕೊಳ್ಳಲು ಆಗದು ಎಂಬುದು ಇವರ ವಾದ. ಆದರೆ, ಜನರು ಮಾತ್ರವಲ್ಲ, ಆಯಾ ಭಾಗದ ಜನಪ್ರತಿನಿಧಿಗಳು ಸಹ ಅಧಿಸೂಚನೆಯನ್ನು ವಿರೋಧಿಸುತ್ತಿದ್ದಾರೆ. ಸ್ಥಳೀಯ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೇಂದ್ರದ ಅಧಿಸೂಚನೆಯನ್ನು ಬೆಂಬಲಿಸಿದರೆ ನಾಳೆ ಜನಬೆಂಬಲ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಜನಪ್ರತಿನಿಧಿಗಳ ಆತಂಕ. ಕಸ್ತೂರಿ ರಂಗನ್ ವರದಿಯಲ್ಲಿ ಆರು ರಾಜ್ಯಗಳ 60 ಸಾವಿರ ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಲು ಶಿಫಾರಸು ಮಾಡಲಾಗಿದೆ. ಇದರಲ್ಲಿ ಕರ್ನಾಟಕದ 19.05 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸೇರಿಸಲು ಹೇಳಿದ್ದು, ಇದನ್ನು 13.09 ಲಕ್ಷ ಹೆಕ್ಟೇರ್​ಗೆ ಇಳಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಕರ್ನಾಟಕದ 10 ಜಿಲ್ಲೆಗಳ 1,576 ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ. ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಹಲವು ಗ್ರಾಮಗಳು ಇದರಲ್ಲಿ ಸೇರುತ್ತವೆ.

    ಕೊನೇ ಮಾತು: ಅಭಿವೃದ್ಧಿ ಮತ್ತು ಪರಿಸರ ತಿಕ್ಕಾಟ ನಮ್ಮಲ್ಲಿ ಹೊಸದೇನಲ್ಲ. ಈ ಆಧುನಿಕ ಭರಾಟೆಯಲ್ಲಿ ಇದು ಮತ್ತಷ್ಟು ಮುನ್ನೆಲೆಗೆ ಬಂದಿದೆ. ‘ಕಾಂತಾರ’ ಚಿತ್ರದ ಕೊನೆಯಲ್ಲಿ ದೈವವು, ಸರ್ಕಾರ ಅರ್ಥಾತ್ ಅರಣ್ಯ ಇಲಾಖೆ ಹಾಗೂ ಜನರು ಸಮನ್ವಯ ಮತ್ತು ಹೊಂದಾಣಿಕೆಯಿಂದ ಹೋಗುವಂತೆ ಸೂಚಿಸುತ್ತದೆ. ಇದರಿಂದ ಸಂಘರ್ಷ ಮಾಯವಾಗಿ ನೆಮ್ಮದಿ ಸಾಧ್ಯವಾಗುತ್ತದೆ. ಇಂತಹ ಸಮನ್ವಯ ಮಾರ್ಗ ಎಲ್ಲೆಡೆಯೂ ಬೇಕಾಗಿದೆ. ಏಕೆಂದರೆ ಅಭಿವೃದ್ಧಿಯೂ ಬೇಕು, ಪರಿಸರವೂ ಉಳಿಯಬೇಕು. ಮಾನವ ಇಂಥದೊಂದು ಸುವರ್ಣ ಮಧ್ಯಮಮಾರ್ಗ ಅನ್ವೇಷಿಸಲು ದೈವವೇ ಸಹಾಯಹಸ್ತ ಚಾಚಬೇಕೇನೋ!

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts