More

    ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ…

    ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ…ಕೃಷ್ಣಾವತಾರದ ಒಂದು ಪ್ರಸಂಗ. ಗರುಡ ಸಂಕುಲದ ನಾಯಕನ ಮಗ ವೈನತೇಯ ಮೊದಲು ಚೆನ್ನಾಗಿದ್ದವನು ನಂತರದಲ್ಲಿ ಅಂಗವಿಕಲನಾಗುತ್ತಾನೆ. ಆಗಸವೇ ಎಲ್ಲೆ ಎಂಬಂತೆ ಓಡಾಡುತ್ತ, ಹಾರಾಡುತ್ತ ಇದ್ದವನು ಮನೆಯ ಮೂಲೆಯಲ್ಲಿ ರೆಕ್ಕೆ ಇರದ ಹಕ್ಕಿಯಂತಿರಬೇಕಾದ ಅನಿವಾರ್ಯತೆ. ಮುಂದೆ ತಂದೆಯ ಉತ್ತರಾಧಿಕಾರಿಯಾಗಬೇಕಾದವನಿಗೆ ಈ ದಯನೀಯ ಸ್ಥಿತಿ. ಜತೆಗೆ ತಂದೆಯ ಅವಹೇಳನ. ಇದ್ದುದರಲ್ಲಿ ತಾಯಿಯ ನೋಟವೇ ಆಸರೆಯಾಗಿತ್ತು. ಅವನಿಗೆ ಜೀವನವೇ ಸಾಕಾಗಿಹೋಗಿತ್ತು. ಆದರೆ ಒಂದು ಆಶಾಕಿರಣ ಮನದ ಮೂಲೆಯಲ್ಲಿ ಇತ್ತು. ಅದೆಂದರೆ-ಕೃಷ್ಣನ ಪವಾಡಗಳನ್ನು, ಸಾಹಸಗಳನ್ನು ಕೇಳಿ ಬಲ್ಲವನಾಗಿದ್ದ ಆತ, ತನಗೂ ಕೃಷ್ಣಕೃಪೆ ಲಭಿಸಿದರೆ ನಡೆದಾಡುವಂತಾಗಬಹುದೇನೋ ಎಂಬ ದೂರದ ಆಸೆ. ಒಮ್ಮೆ ಕೃಷ್ಣ ಇವರ ಊರಿಗೆ ಬರುವುದು ನಿಶ್ಚಯವಾಗುತ್ತದೆ. ಆ ಸುದ್ದಿ ಕೇಳಿದಾಗಿಂದ ವೈನತೇಯನ ಮನದಲ್ಲಿ ಕನಸು ಚಿಗುರುತ್ತದೆ. ಆದರೆ ಮರುಕ್ಷಣವೇ ನಿರಾಸೆ. ಈ ಅವಸ್ಥೆಯಲ್ಲಿರುವ ತಾನು ಆ ಮಹಾಮಹಿಮನನ್ನು ಭೇಟಿಯಾಗುವುದು ಹೇಗೆ? ಅಷ್ಟಕ್ಕೂ ಕೃಷ್ಣ ತನ್ನ ಕಷ್ಟಕ್ಕೆ ಕಿವಿಯಾಗುವನೇ ಎಂಬ ಅನುಮಾನ. ಆದರೂ ಒಂದುಯತ್ನ ಮಾಡೋಣ ಎಂದುಕೊಂಡು ಆ ರಾತ್ರಿ ತೆವಳುತ್ತಲೇ ಕೃಷ್ಣ ಉಳಿದುಕೊಂಡ ಜಾಗಕ್ಕೆ ಹೋಗುತ್ತಾನೆ. ಅಷ್ಟರಲ್ಲಿ ಬೆಳಗಾಗಿರುತ್ತದೆ. ಹಾಗೂಹೀಗೂ ಕೃಷ್ಣನ ದರ್ಶನ ಮಾಡಬೇಕು ಎಂದು ಅವನ ಹತ್ತಿರ ಹೋದರೆ, ಅಲ್ಲೇ ಇದ್ದ ತಂದೆ, ಇಲ್ಲೇಕೆ ಬಂದೆ ಎಂದು ಮಗನತ್ತ ಬಿರುಗಣ್ಣು ಬಿಡುತ್ತಾನೆ. ಆದರೆ ಕೃಷ್ಣ ಕರುಣಾಮೂರ್ತಿಯಲ್ಲವೆ? ಆತ ನಿರ್ಧರಿಸಿಯಾಗಿತ್ತು, ವೈನತೇಯನನ್ನು ಉದ್ಧರಿಸಬೇಕು ಎಂದು. ಅಳುತ್ತಲೇ ಕಾಲುಹಿಡಿದುಕೊಂಡ ವೈನತೇಯನನ್ನು ಕೃಷ್ಣ ಸಂತೈಸಿದ, ಮರುಕ್ಷಣವೇ ಅಲ್ಲಿಂದ ಎದ್ದು ಹೊರಟ. ‘ಅಯ್ಯೋ, ಕೃಷ್ಣ ನನ್ನ ಮೇಲೆ ಕರುಣೆ ತೋರದೆ ಹೊರಟೇಬಿಟ್ಟನಲ್ಲ’ ಎಂದು ವೈನತೇಯ ಮರುಗಿದ. ಆಗ ಕೃಷ್ಣಧ್ವನಿ ಕೇಳಿಬಂತು- ‘ವೈನತೇಯ ನನ್ನ ಜತೆ ಬಾ.’ ನಂಬಲೇ ಆಗಲಿಲ್ಲ. ಕೃಷ್ಣ ಆದೇಶ ನೀಡುತ್ತಿದ್ದಾನೆ. ಆದರೆ ತನ್ನ ನಿಶ್ಶಕ್ತ ಕಾಲುಗಳನ್ನು ನೋಡಿ ರೋಷ ಉಕ್ಕೇರಿತು. ಮತ್ತೆ ಕೃಷ್ಣನ ಆಜ್ಞೆ: ‘ವೈನತೇಯ ಎದ್ದುನಿಲ್ಲು.’ ತೆವಳುತ್ತಲೇ ಎದ್ದುನಿಲ್ಲಲು ಯತ್ನಿಸಿದ. ಕಾಲುಗಳಲ್ಲಿ ಶಕ್ತಿ ಇಲ್ಲದಂತಿದ್ದರೂ ಕೃಷ್ಣನ ಮೋಡಿ ಸೆಳೆಯುತ್ತಿದೆ. ಅಲ್ಲಿದ್ದವರು ನೋಡನೋಡುತ್ತಲೇ ಎದ್ದುನಿಂತ ವೈನತೇಯ. ಹಾಗೇ ನಿಧಾನಕ್ಕೆ ಕೃಷ್ಣನ ಹಿಂದೆ ಹೆಜ್ಜೆಹಾಕಿದ…

    ಹಾಗೆನೋಡಿದರೆ ಈ ಜಗತ್ತಿನಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ವೈನತೇಯರೇ. ಕಷ್ಟ-ನೋವುಗಳ ವಿಧ ಬೇರೆ ಬೇರೆ ಇರಬಹುದಷ್ಟೇ. ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತ ಇರುತ್ತಾರಲ್ಲ, ಬಹುಶಃ ಹೆಚ್ಚಿನವರ ಒಳಮಾತು ಹೀಗೇ ಇರಬಹುದು: ‘ದೇವರೇ’! ನನಗೇ ಏಕೆ ಎಲ್ಲ ಕಷ್ಟಗಳನ್ನೂ ಕೊಡುವೆ. ಜಗತ್ತಿನಲ್ಲಿ ನಿನಗೆ ಬೇರೆ ಯಾರೂ ಕಾಣುವುದಿಲ್ಲವಾ?’. ಕಷ್ಟವಿಲ್ಲದವರು ಯಾರಿದ್ದಾರೆ ಈ ಜಗದಲ್ಲಿ? ಅನುಭಾವಿಯೊಬ್ಬ ಹೇಳಿದ- ‘ಕಷ್ಟವಿರದ ಜೀವನವೇ ಕಷ್ಟ.’ ಕುಂತಿ ಭಗವಾನ್ ಕೃಷ್ಣನಲ್ಲಿ ಕೇಳಿಕೊಂಡಳಂತೆ- ‘ಹೇ ದೇವ! ನನಗೆ ನಿರಂತರವಾಗಿ ಕಷ್ಟಗಳನ್ನು ಕೊಡು. ಆದರೆ ಕಷ್ಟ ಸೈರಿಸುವ, ಎದುರಿಸುವ ಶಕ್ತಿಯನ್ನು ಕೊಡು.’ ಹೌದು, ಧೈರ್ಯಶಾಲಿಗಳು ಮಾತ್ರ ಕಷ್ಟಗಳಿಗೇ ಕಷ್ಟ ಕೊಡಬಲ್ಲರು, ಅಂದರೆ ದಿಟ್ಟವಾಗಿ ಎದುರಿಸಿ ನಿಲ್ಲಬಲ್ಲರು. ಪುಕ್ಕಲರು ಪಲಾಯನ ಮಾಡುತ್ತಾರೆ. ಏಕೆಂದರೆ, ಷೇಕ್ಸ್ ಪಿಯರ್ ಹೇಳಿದಂತೆ ‘ಕಷ್ಟಗಳು ಬಂದರೆ ಸಾಲಾಗಿ ಬರುತ್ತವೆ.’ ಆದರೆ ಕಷ್ಟಗಳನ್ನು ಎದುರಿಸುವುದು ಹೇಳಿದಷ್ಟು ಸುಲಭವಲ್ಲ, ಅದರ ಕಷ್ಟ ಗೊತ್ತಿದ್ದವರಿಗೇ ಗೊತ್ತು. ಮನೆಯ ಯಜಮಾನ ಇದ್ದಕ್ಕಿದ್ದಂತೆ ತೀರಿಹೋದಾಗ ಆ ಕುಟುಂಬ ಕೆಲ ಕಾಲ ದಿಕ್ಕಿಲ್ಲದಂತಾಗುತ್ತದೆ. ಎದೆಯೆತ್ತರ ಬೆಳೆದ ಮಗ ಒಂದು ನೌಕರಿ ಅಂಥ ಹಿಡಿಯದೆ ಅಲ್ಲಿಇಲ್ಲಿ ಪುಗಸಟ್ಟೆ ಓಡಾಡುತ್ತ, ಅಡ್ಡಚಟಕ್ಕೆ ಬಿದ್ದರೆ ಹೆತ್ತವರ ಒಡಲು ನಿತ್ಯಕುಲುಮೆ. ಬೆಳದಿಂಗಳಂಥ ಮಗಳು ಗಂಡನ ಮನೆಯಲ್ಲಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರೆ ಯಾವ ತಂದೆತಾಯಿ ತಾನೆ ನೆಮ್ಮದಿಯಾಗಿರಬಲ್ಲರು? ಆಕಾಶವೇ ಮಿತಿ ಎಂಬ ಗುರಿಯಲ್ಲಿ ಸಾಧನೆಗೆ ತುಡಿಯುವ ಯುವಕನಿಗೆ ಅನಾರೋಗ್ಯ ಬೆಂಬಿಡದೆ ಕಾಡಿದರೆ ಅವನ ಕನಸುಗಳ ಗತಿಯೇನು?

    ಸಂತಸಕ್ಕೆ ಬಂಧುಗಳು ಅನೇಕ. ಕಷ್ಟಕ್ಕೆ ನೆಂಟರಿಲ್ಲ. ಜೀವನವನ್ನು ಅರ್ಥಮಾಡಿಕೊಳ್ಳಲು, ಕಷ್ಟದ ಹಾದಿಯಲ್ಲಿ ಹೆಜ್ಜೆಹಾಕಲು, ಪರಿಸ್ಥಿತಿಯನ್ನು ಎದುರಿಸಲು ಹಿರಿಯರು, ಜ್ಞಾನಿಗಳ ಮಾರ್ಗದರ್ಶನ-ಸಲಹೆ-ಕಿವಿಮಾತು ಬೇಕಾಗುತ್ತದೆ. ವೈನತೇಯನಿಗೆ ಕೃಷ್ಣ ಆತ್ಮಬಂಧುವಾದಂತೆ ನಮಗೂ ಆತ್ಮವಿಶ್ವಾಸ ತುಂಬುವವರು ಬೇಕಾಗುತ್ತದೆ. ನಾವು ಭಾರತೀಯರು ಈ ವಿಷಯದಲ್ಲಿ ಭಾಗ್ಯಶಾಲಿಗಳು. ಹಿಂದೆ ನಮ್ಮ ಋಷಿಮುನಿಗಳು ಬದುಕಿನ ದಿಕ್ಸೂಚಿಯನ್ನು, ಬಾಳಿನ ರಹಸ್ಯವನ್ನು ತಿಳಿಸಿಕೊಟ್ಟರೆ, ಈ ಆಧುನಿಕ ಕಾಲದಲ್ಲಿ ಆಧ್ಯಾತ್ಮಿಕ ಸಾಧಕರು, ಧಾರ್ವಿುಕ ಮುಂದಾಳುಗಳು ದಾರಿಗೆ ಬೆಳಕು ಹಿಡಿಯುತ್ತಿದ್ದಾರೆ.

    ಈಚೆಗೆ ನಮ್ಮನ್ನು ಅಗಲಿದ, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಸರಳ ಜೀವನದ ಪ್ರತಿರೂಪ. ಅವರ ಮಾತು, ಪ್ರವಚನ ಸರಳವಾಗಿ ವಿಷಯವನ್ನು ಹಿಡಿದಿಡುವಂಥವು. ‘ಇದ್ದಂಗ ಇರಬೇಕ, ಇಲ್ಲದಾಂಗ ಇರಬೇಕ! ಅವಾ ಕರೀತಾನ ಸುಮ್ ಹೋಗಬೇಕ! ಸುಮ್ ಹೋಗುದ್ರಾಗೇನೈತಿ, ಏನಾದ್ರು ಸಾಧಿಸಿ ಹೋಗಬೇಕ’. ಮಾನವನು ಬದುಕಿನಲ್ಲಿ ಹೇಗೆ ತಾವರೆ ಎಲೆ ಮೇಲಣ ನೀರಿನಂತಿರಬೇಕು; ಹೇಗೆ ಮೌನವಾಗಿ ಜೀವನದಾರಿಯಲ್ಲಿ ಹೆಜ್ಜೆಹಾಕಬೇಕು ಎಂದು ಎಷ್ಟು ಸರಳಸುಂದರ ಮಾತಿನಲ್ಲಿ ಕಟ್ಟಿಕೊಡುತ್ತಾರೆ ನೋಡಿ. ಆದರೆ ಏನನ್ನೂ ಸಾಧಿಸದೆ ಹೋಗಬಾರದು ಎಂಬ ಕಿವಿಮಾತನ್ನೂ ಹೇಳುತ್ತಾರೆ.

    ‘ಯಾರ ನೋವಿಗೆ ಯಾರು ಹೊಣೆಗಾರರು, ನಿನ್ನ ಕಣ್ಣೀರಿಗೆ ಯಾರು ಮರುಗುವರು, ನಿನಗೆ ನೀನೇ ಮಿತ್ರ, ನಿನಗೆ ನೀನೇ ಶತ್ರು, ನಿನ್ನಿಂದಲೇ ಶಾಂತಿ, ನಿನ್ನಿಂದಲೇ ಕ್ರಾಂತಿ’-ಇದು ಸಿದ್ದೇಶ್ವರ ಶ್ರೀಗಳ ಮತ್ತೊಂದು ಮಾತು. ‘ನಿನಗೆ ನೀನೇ ಶಿಲ್ಪಿ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದೂ ಇದೇ ಅರ್ಥದಲ್ಲಿ. ಅವರವರ ಜೀವನಕ್ಕೆ ಅವರವರೇ ಹೊಣೆಗಾರರು. ಬೇರೆಯವರು ತಾತ್ಕಾಲಿಕವಾಗಿ ನೆರವಿಗೆ ಬಂದಾರು. ಅವರಿಗೂ ಅವರ ಜೀವನ ಇರುತ್ತದಲ್ಲವೆ?

    ‘ನೀವು ಶೂನ್ಯದಾಂಗ ಮೌನವಾಗಿದ್ದರ ನಿಮಗ ಬೆಲೆ ಬರತೈತಿ. ಬೆಲೆ ಹೆಚ್ಚಾಗ್ತದ. 1 ಸಂಖ್ಯೆ ಮುಂದ ಎಷ್ಟು ಶೂನ್ಯ ಇರತಾವ ಅಷ್ಟ ಆ ಸಂಖ್ಯೆಯ ಬೆಲೆ ಹೆಚ್ಚಾಗ್ತದ. ಅಕಸ್ಮಾತ್ ಶೂನ್ಯ ತೆಗೆದಬಿಟ್ಟರ ಸಂಖ್ಯೆಗೆ ಬೆಲೆ ಎಲ್ಲ ಬರತದ ಹೇಳಿ. ಆದರ ಆ ಶೂನ್ಯ ಯಾವಾಗಲೂ ಗರ್ವಪಡೋದಿಲ್ಲ. ಮೌನವಾಗಿ ಕುಳಿತಿರ್ತದ. ಹಂಗ ಎಲ್ಲರೂ ಕುಳತಾರ ಅಂತ ನಮಗ ಬೆಲೆ ಬಂದಾದ. ನಮ್ಮಷ್ಟಕ್ಕೆ ನಾವು ಸ್ವತಂತ್ರರಲ್ಲ. ಜಗತ್ತಿನ ಮೇಲೆ ಅವಲಂಬಿತರಾಗಿದ್ದೇವೆ. ಸಣ್ಣವರು ಅದಾರ ಅಂತ ದೊಡ್ಡವರು ಕುಂತಾರ. ಇಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ. ಎಲ್ಲರೂ ಕೂಡಿ ಬದುಕಬೇಕು. ಸಣ್ಣೋರ, ದೊಡ್ಡವರು ಅಂತ ತಿರಸ್ಕರಿಸಬಾರದು. ಎಲ್ಲರೂ ಬೇಕಾಗ್ತಾರ’ ಎನ್ನುವ ಸಿದ್ದೇಶ್ವರ ಶ್ರೀಗಳ ಆಶಯ, ಡಿವಿಜಿಯವರು ವನಸುಮದ ಆದರ್ಶದಲ್ಲಿ ಪರಿಭಾವಿಸುವಂತಹದೇ ರೀತಿಯದು.

    ‘ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲ ಹೇಳಿ ಆಗಿದೆ. ಉಳಿದಿರುವುದು ಆಚರಣೆ ಮಾತ್ರ’; ‘ಮನೆ ಕಟ್ಟುವಾಗ ಯಾರೂ ಬಂದು ಸಹಾಯ ಮಾಡುವುದಿಲ್ಲ. ನಂತರ ಗೃಹಪ್ರವೇಶಕ್ಕೆ ಎಲ್ಲರೂ ಬಂದು ಹಾರೈಸಿ ಉಡುಗೊರೆ ಕೊಡುತ್ತಾರೆ. ಹಾಗೆ ನಾವು ಜೀವನದಲ್ಲಿ ಸಾಧನೆ ಮಾಡಲು ಹೊರಟಾಗ ಯಾರೂ ಸಹಾಯ ಮಾಡುವುದಿಲ್ಲ. ನಂತರ ಗುರಿ ತಲುಪಿದ ಮೇಲೆ ಎಲ್ಲರೂ ಬಂದು ಹಾರೈಸುತ್ತಾರೆ. ಇದೇ ನಿಜವಾದ ಪ್ರಪಂಚ’; ‘ಇರೋದು ಇರ್ತದೆ, ಹೋಗೋದು ಹೋಗ್ತದೆ. ಯಾವುದನ್ನೂ ಹೆಚ್ಚಿಗೆ ಹಚ್ಚಿಕೊಳ್ಳದೆ ಸಮಾಧಾನಿಯಾಗಿರಬೇಕು. ಇದೇ ಸುಖಜೀವನದ ಮಂತ್ರ’- ಇವು ಸಿದ್ದೇಶ್ವರ ಸ್ವಾಮಿಗಳ ಮತ್ತಷ್ಟು ಕಿವಿಮಾತು, ಹಿತವಚನಗಳು. ಇವತ್ತು ಇದ್ದುದು ನಾಳೆ ಇರುತ್ತದೆಂದು ಹೇಳಲಾಗದು. ದಿನಗಳೆದಂತೆ ಚರ್ಮ ಸುಕ್ಕುಗಟ್ಟಲೇಬೇಕು; ಕಪು್ಪ ಕೂದಲು ಬಿಳಿಯಾಗಲೇಬೇಕು. ಹಾಗಂತ ಇದಕ್ಕೆಲ್ಲ ಚಿಂತೆ ಮಾಡಿ ಪ್ರಯೋಜನವಿಲ್ಲ.

    ‘ಇಂದಿನ ಮಾನವನಿಗೆ ಅರ್ಥವೂ ಬೇಕು; ಕಾಮವೂ ಬೇಕು, ಆದರೆ ಅರ್ಥಕಾಮಾದಿಗಳಿಗೆ ಧರ್ಮವು ಮೂಲಾಧಾರವಾಗಿರಬೇಕು. ಧರ್ಮಕ್ಕೆ ವಿರುದ್ಧವಾಗಿ ನಡೆದು ಅರ್ಥಸಂಪಾದನೆ ಮಾಡಿದರೆ, ಕಾಮಪ್ರವೃತ್ತರಾದರೆ, ಇಹವು ಕೆಡುವುದು, ಪರವು ನಾಶವಾಗುವುದು, ಅರ್ಥವು ಅನರ್ಥಕ್ಕೆ ಕಾರಣವಾಗುವುದು. ಇದನ್ನರಿತು ಧರ್ಮದ ದಾರಿಯಲ್ಲಿ ನಡೆಯಿರಿ’ಎನ್ನುವ ಮೂಲಕ, ನೈತಿಕ ಜೀವನದ ಮಹತ್ವವನ್ನು ಸರಳವಾಗಿ ತಿಳಿಸುತ್ತಾರೆ ಶ್ರೀ ಶ್ರೀಧರ ಸ್ವಾಮಿಗಳು. ಲೋಕಸಂಚಾರಿಯಾಗಿ ಧರ್ಮಜೀವನದ ಪ್ರಚಾರ ಮಾಡಿದವರು ಅವರು. ‘ಧರ್ಮ’ ಎಂಬುದನ್ನು ಜೀವನದ ಆದರ್ಶ ನಡವಳಿಕೆಗಳು ಎಂದು ಅರ್ಥೈಸಿಕೊಳ್ಳುವ ಬದಲಾಗಿ ಪಾಶ್ಚಿಮಾತ್ಯದ ‘ರಿಲಿಜನ್’ಗೆ ಸಂವಾದಿಯಾಗಿ ಪರಿಭಾವಿಸಿದ್ದರಿಂದ ಏನೆಲ್ಲ ಅನಾಹುತಗಳಾಗಿವೆ ಎಂಬುದು ಭಾರತೀಯ ಸಂದರ್ಭದಲ್ಲಿ ನಮಗೆ ಚೆನ್ನಾಗಿ ಗೊತ್ತಿದೆ. ಜೀವನಕ್ಕೆ ನೈತಿಕತೆಯ ಬೇಲಿ ಇರದಿದ್ದರೆ ಸಮಾಜದ ಅಧಃಪತನ ಪಕ್ಕಾ.

    ಶ್ರೀಧರ ಸ್ವಾಮಿಗಳು ವಾಲ್ಮೀಕಿ ರಾಮಾಯಣದ ಬಾಲಕಾಂಡದ ಶ್ಲೋಕಗಳನ್ನು ಉದ್ಧರಿಸಿ, ಧಾರ್ವಿುಕ ಮತ್ತು ನೈತಿಕ ಜೀವನದ ಪ್ರಯೋಜನಗಳೇನೆಂಬುದನ್ನು ಮನೋಜ್ಞವಾಗಿ ವಿವರಿಸುತ್ತಾರೆ: ‘ರಾಮರಾಜ್ಯದಲ್ಲಿ ಜನರೆಲ್ಲ ಸುಧಾರ್ವಿುಕರು. ಆದ್ದರಿಂದಲೇ ಎಲ್ಲರೂ ಆನಂದವಾಗಿ ಇದ್ದರು. ಆಧಿವ್ಯಾಧಿ ಇರಲಿಲ್ಲ. ದುರ್ಭಿಕ್ಷ ಇರಲಿಲ್ಲ. ಅಪಘಾತ ಆಗುತ್ತಿರಲಿಲ್ಲ. ಜನರು ನೀರಲ್ಲಿ ಮುಳುಗಿ ಸಾಯುತ್ತಿರಲಿಲ್ಲ. ಬಿರುಗಾಳಿ ಉಂಟಾಗುತ್ತಿರಲಿಲ್ಲ. ರಾಮನು ತನ್ನ ಚರಿತದಿಂದ ಧರ್ವಚರಣೆಯನ್ನು ಕಲಿಸುತ್ತಿದ್ದನು. ರಾಜ ಹೇಗೆ ಇರುವನೋ, ಆಡಳಿತ ಮಾಡತಕ್ಕವರು, ರಾಜ್ಯ ಧುರಂಧರರು, ರಾಜ್ಯಪಾಲರು, ಮಂತ್ರಿಗಳು, ಹೇಗೆ ಇರುತ್ತಾರೋ ಹಾಗೆ ಪ್ರಜೆಗಳು ಇರುತ್ತಾರೆ.’ ರಾಮರಾಜ್ಯ ಎಂಬುದು ಪರಮೋಚ್ಚ ಆಡಳಿತ ಮಾದರಿಯ ನಿದರ್ಶನ. ಆಳುವವರು ಮತ್ತು ಪ್ರಜೆಗಳು ಇಬ್ಬರಿಗೂ ಇಲ್ಲಿ ಹೊಣೆಗಾರಿಕೆ ಇದೆ. ರಾಮನು ಆದರ್ಶಪುರುಷನಾಗಿ ಮಾದರಿಯನ್ನು ಹಾಕಿಕೊಟ್ಟಂತೆ, ಪ್ರಜೆಗಳು ಸಹ ಕೆಲಮಟ್ಟಿಗಾದರೂ ಅನುಸರಿಸದಿದ್ದರೆ ಅದು ರಾಮರಾಜ್ಯವಾಗಿ ಪರಿವರ್ತನೆಯಾಗದು.

    ‘ತನ್ನ ಸಂಗಡ ಇತರರು ನೀತಿ ನ್ಯಾಯವಾಗಿ ನಡೆದುಕೊಳ್ಳಬೇಕೆಂದು, ತನ್ನ ಸುಖ ದುಃಖಗಳನ್ನು ಕೇಳಿಕೊಳ್ಳಬೇಕೆಂದು, ಸುಖ-ದುಃಖಗಳಲ್ಲಿ ಅನುಗುಣವಾಗಿ ಬೇರೆ ಜನರು ತನ್ನೊಂದಿಗೆ ನಡೆದುಕೊಳ್ಳಬೇಕೆಂದು ತನಗೆ ಹೇಗೆ ಕಾಣುತ್ತದೆಯೋ, ಅದೇ ರೀತಿ ಬೇರೆಯವರು ಕೂಡ ಇದನ್ನೇ ತನ್ನಿಂದ ಅಪೇಕ್ಷಿಸುವವರು ಎಂದು ತಿಳಿದುಕೊಳ್ಳಬೇಕು ಮತ್ತು ಹಾಗೇ ನಡೆದುಕೊಳ್ಳಬೇಕು’- ಇದು ಶ್ರೀಧರ ಸ್ವಾಮಿಗಳ ಮತ್ತೊಂದು ಹಿತವಚನ. ಎಷ್ಟು ನಿಜ ಅಲ್ಲವೆ? ‘ಅನ್ನವನು ಇಕ್ಕುವುದು, ನನ್ನಿಯನು ನುಡಿವುದು, ತನ್ನಂತೆ ಪರರ ಬಗೆದೊಡೆ, ಕೈಲಾಸ ಬಿನ್ನಾಣವಕ್ಕು ಸರ್ವಜ್ಞ’ ಎಂಬ ವಚನವೂ ಇದೇ ಅರ್ಥವನ್ನು ಧ್ವನಿಸುತ್ತದೆ.

    ಕೊನೇ ಮಾತು: ‘ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನಮ್ಮ…’ ಎಂಬುದು ಪುರಂದರದಾಸರ ಅದ್ಭುತ ರಚನೆಗಳಲ್ಲೊಂದು. ಅಪಾರ ಗೂಢಾರ್ಥವನ್ನು ಹೊಂದಿರುವ ಈ ಪದ್ಯ, ದೇವರ ಹುಡುಕಾಟವನ್ನು ಧ್ವನಿಸುತ್ತದೆ. ದೇವರನ್ನು ನಾನಾ ಬಗೆಯಲ್ಲಿ ವರ್ಣಿಸುವ ಜ್ಞಾನಿಗಳು, ಅಂತಿಮವಾಗಿ, ‘ಹೃದಯಮಂದಿರದಲ್ಲಿ ನೆಲೆಸಿರುತ್ತಾನೆ’ಎಂದು ಷರಾ ಬರೆಯುತ್ತಾರೆ. ನಮ್ಮದೇ ಹೃದಯಮಂದಿರದಲ್ಲಿ ಪ್ರತಿಷ್ಠಾಪಿತನಾದ ದೇವರನ್ನು ಕಾಣುವುದಾದರೂ ಹೇಗೆ? ಆ ಬಗೆಯನ್ನು, ಬದುಕಿನ ಸಾರ್ಥಕ್ಯದ ಹಾದಿಯನ್ನು ನಮ್ಮ ಸಾಧುಸಂತರು ಸರಳ ಮಾತುಗಳಲ್ಲಿ ತಿಳಿಸಿರುವುದು ಜನಸಾಮಾನ್ಯರ ಜೀವನಕ್ಕೆ ಸಂಜೀವಿನಿಯಾಗಿದೆ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ರಾಜ್ಯಕ್ಕೆ ಎದುರಾಗಿದೆ ಒಂದು ಹೊಸ ಆತಂಕ; ಸರ್ಕಾರದ ಮೊರೆ ಹೋದ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಸಂಘ

    ಗೆಳೆಯನ ಕೊಂದು ಶವ ಎಸೆಯುವಾಗ ತಾನೂ ಪ್ರಪಾತಕ್ಕೆ ಬಿದ್ದು ಹೆಣವಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts