More

    ಉತ್ತರ ಕನ್ನಡದ ಕಾಡು, ಹೈವೇ ಮತ್ತು ಆಸ್ಪತ್ರೆ ಬೇಡಿಕೆ…

    ಉತ್ತರ ಕನ್ನಡದ ಕಾಡು, ಹೈವೇ ಮತ್ತು ಆಸ್ಪತ್ರೆ ಬೇಡಿಕೆ...ಆ ಭೀಕರ ಅಪಘಾತದ ವಿಡಿಯೋ ದೃಶ್ಯಾವಳಿಗಳನ್ನು ನೋಡಿದವರು ಇನ್ನೂ ಆ ಸನ್ನಿವೇಶ ನೆನಪಾದರೆ ಬೆಚ್ಚುವಂತಾಗುತ್ತದೆ. ಜುಲೈ 20ರಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್​ಗೇಟಿನಲ್ಲಿ ಆಂಬುಲೆನ್ಸ್ ಅಪಘಾತವಾಗಿ ನಾಲ್ವರು ಮೃತಪಟ್ಟರು. ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿ ನವರು. ರೋಗಿಯನ್ನು ಕರೆದುಕೊಂಡು ಹೊರಟ ಆಂಬುಲೆನ್ಸ್ ಅದಾಗಿತ್ತು. ಒಂದೊಮ್ಮೆ ಇಲ್ಲಿಯೇ ಸುಸಜ್ಜಿತ ಆಸ್ಪತ್ರೆ ಇದ್ದಿದ್ದರೆ ಇವರು ಚಿಕಿತ್ಸೆಗಾಗಿ ಬೇರೆ ಕಡೆ ಆಸ್ಪತ್ರೆ ಹುಡುಕಿಕೊಂಡು ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ. ಸ್ಥಳೀಯವಾಗಿ ಅಥವಾ ಜಿಲ್ಲೆಯಲ್ಲಿಯೇ ಹತ್ತಿರದಲ್ಲಿ ಎಲ್ಲಾದರೂ ಉತ್ತಮ ಸಾಧನಸಲಕರಣೆಗಳ ಆಸ್ಪತ್ರೆ ಇದ್ದಿದ್ದರೆ ಅಲ್ಲಿಗಾದರೂ ಹೋಗಬಹುದಿತ್ತು… ಇಂಥದೊಂದು ಭಾವನೆ ಜಿಲ್ಲೆಯ ಜನರಲ್ಲಿ ಮೂಡುವ ಜತೆಗೆ, ಉತ್ತರ ಕನ್ನಡದಲ್ಲಿ ಸರ್ವಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವೆಂಬ ಅಭಿಪ್ರಾಯ ಮತ್ತೊಮ್ಮೆ ಮುನ್ನೆಲೆಗೆ ಬರುವಂತಾಯಿತು.

    ಉತ್ತರ ಕನ್ನಡದ ಭೌಗೋಳಿಕ ಸನ್ನಿವೇಶವೇ ಬಹು ವಿಶಿಷ್ಟ. ಮಲೆನಾಡು, ಅರೆಬಯಲುಸೀಮೆ, ಕರಾವಳಿ- ಹೀಗೆ ವೈವಿಧ್ಯಮಯವಾದ ಭೂಪ್ರದೇಶಗಳು ಈ ಒಂದೇ ಜಿಲ್ಲೆಯಲ್ಲಿ ಕಾಣಸಿಗುತ್ತವೆ. ಪ್ರಕೃತಿಮಾತೆ ತನ್ನೆಲ್ಲ ವೈಭವದೊಂದಿಗೆ ಮೈದಳೆದ ತಾಣವಿದು. ಮಲೆನಾಡಿನ ಕಾಡೊಳಗೆ ಹೊಕ್ಕರೆ ದಾರಿತಪು್ಪವುದು ಸಹಜ. ಆ ಪ್ರದೇಶ ಬಲ್ಲವರಿಗೂ ಒಮ್ಮೊಮ್ಮೆ ಕಾಡು ಕಾಡಿ, ಆಟವಾಡಿಸುವುದುಂಟು. ಇನ್ನು ಇಲ್ಲಿನ ಜಲಪಾತಗಳ ಅಬ್ಬರ, ವೈಯಾರವನ್ನು ಬಣ್ಣಿಸುವುದು ಹೇಗೆ? ಅದರಲ್ಲೂ ಮಳೆಗಾಲದಲ್ಲಿ ಬೇರೆಯದೇ ಲೋಕ ಅನಾವರಣವಾಗುತ್ತದೆ. ಕರಾವಳಿಯತ್ತ ಬಂದರೆ ಅರಬ್ಬಿ ಸಮುದ್ರದ ವೈಶಾಲ್ಯ, ಅಬ್ಬರಾರ್ಭಟದ ಅಲೆಯ ದರ್ಶನ. ಮನುಷ್ಯ ನಿಂತಲ್ಲೇ ಕಡಲೊಳಗೆ ಲೀನವಾಗುವ ಭಾವ ಆವರಿಸುವ ಸನ್ನಿವೇಶ. ಬೀಚುಗಳ ನೋಟ. ಕಾರವಾರ, ಗೋಕರ್ಣ, ಹೊನ್ನಾವರ, ಕುಮಟಾ, ಮುರ್ಡೆಶ್ವರ… ಹೀಗೆ ಸಮುದ್ರದ ನೆಂಟಸ್ತನ ಹೊಂದಿದ ಊರುಪಟ್ಟಣಗಳು ಅನೇಕ. ಆದರೆ ಈ ವೈವಿಧ್ಯ ಹಾಗೂ ನಿಸರ್ಗ ಸಂಪತ್ತೇ ಜಿಲ್ಲೆಗೆ ಶಾಪವಾಗಿದೆಯೇನೋ ಎಂಬ ಭಾವನೆಯೂ ಜನರನ್ನು ಕಾಡುವುದುಂಟು. ಏಕೆಂದರೆ, ಇಲ್ಲಿ ಜಲವಿದ್ಯುತ್ ಯೋಜನೆಗಳು ಕಿಕ್ಕಿರಿದಿವೆ; ಅಣುವಿದ್ಯುತ್ ಸ್ಥಾವರ ಕಾರವಾರ ಸನಿಹದ ಕೈಗಾದಲ್ಲಿ ನೆಲೆಗೊಂಡಿದೆ; ಇನ್ನೊಂದೆಡೆ, ಕಾರವಾರಕ್ಕೆ ತಾಗಿಕೊಂಡೇ ಕದಂಬ ನೌಕಾನೆಲೆ ತಲೆಯೆತ್ತಿದೆ. ಇವೆಲ್ಲ ನಾಡಿಗೆ ಬೇರೆ ಬೇರೆ ರೀತಿಯಲ್ಲಿ ಕೊಡುಗೆ ನೀಡುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ವಿದ್ಯುಚ್ಛಕ್ತಿ, ರಕ್ಷಣೆ ಹೀಗೆ ಬೇರೆ ಬೇರೆ ವಿಚಾರಗಳಲ್ಲಿ ದೇಶಕ್ಕೆ ಉತ್ತರ ಕನ್ನಡದ ಕೊಡುಗೆ ದೊಡ್ಡದು. ಆದರೆ ಇದಕ್ಕಾಗಿ ಜಿಲ್ಲೆಯ ಜನರು ಮಾಡಿದ ತ್ಯಾಗವೇನು ಕಡಿಮೆಯಲ್ಲ. ವಿವಿಧ ಯೋಜನೆಗಳಿಗಾಗಿ ಸಾವಿರಾರು ಜನರು ನಿರ್ವಸಿತರಾಗಿ, ಬೇರೆಡೆ ಹೋಗಿ ಮತ್ತೆ ಹೊಸದಾಗಿ ಬದುಕನ್ನು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಬಂತು; ಎಷ್ಟೋ ಜನರಿಗೆ ಸರಿಯಾಗಿ ಪರಿಹಾರ ಸಹ ದೊರೆತಿಲ್ಲ. ‘ಚುಟುಕು ಬ್ರಹ್ಮ’ಎಂದೇ ಖ್ಯಾತರಾದ, ಅಂಕೋಲಾದ ದಿನಕರ ದೇಸಾಯಿ ಅವರು ದಶಕಗಳ ಹಿಂದೆ ಹಾಲಕ್ಕಿಗಳ ಕುರಿತು ಬರೆದ ಚುಟುಕ, ಅಲ್ಲಿನ ಜನರ ಕಷ್ಟನಷ್ಟಗಳ ರೂಪಕದಂತೆ ಕಾಣಿಸುತ್ತದೆ. ‘ಇವನ ಮನೆಯೊಳಗಿಲ್ಲ ಸಾಕಷ್ಟು ಅಕ್ಕಿ/ ಆದರೂ ಈತನಿಗೆ ಹೆಸರು ‘ಹಾಲಕ್ಕಿ’/ ಹಾಲುಅಕ್ಕಿಗಳೆರಡೂ ಹೆಸರೊಳಗೆ ಮಾತ್ರ/ ಹಸಿವೆಯೆಂಬುದು ಇವನ ‘ಹಣೆಯ ಕುಲಗೋತ್ರ’.

    ಪ್ರಾದೇಶಿಕ ವೈವಿಧ್ಯತೆಯು ಜಿಲ್ಲೆಗೆ ಪ್ರಾಕೃತಿಕ-ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತಂದುಕೊಟ್ಟಿದೆ. ಅದೇ ವೇಳೆ, ಈ ಪ್ರದೇಶ ಭಿನ್ನತೆಯು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರವನ್ನು ಕಷ್ಟಗೊಳಿಸಿದೆ. ಹೀಗಾಗಿಯೇ ವೈದ್ಯಕೀಯ ತುರ್ತು ಸಂದರ್ಭದಲ್ಲಿ ಜಿಲ್ಲೆಯ ಜನರು ಪರಿತಪಿಸುವಂತಾಗುತ್ತದೆ. ಕಂಬಳಿ ಮೇಲೆ ರೋಗಿಗಳನ್ನು ಒಯ್ಯುವ ದೃಶ್ಯ ಇಲ್ಲಿನ ಗ್ರಾಮೀಣ ಪ್ರದೇಶದ ಅನೇಕ ಕಡೆಗಳಲ್ಲಿ ಸಾಮಾನ್ಯ. ಮಳೆಗಾಲದಲ್ಲಂತೂ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಇನ್ನು, ಗಂಭೀರ ಕಾಯಿಲೆಗಳಿಗೆ ಅಥವಾ ಆಧುನಿಕ ಚಿಕಿತ್ಸೆ ಅಗತ್ಯವಿದ್ದಲ್ಲಿ ಬೇರೆ ಜಿಲ್ಲೆಗಳಿಗೆ ಹೋಗಬೇಕಾಗುತ್ತದೆ. ಮಂಗಳೂರು, ಉಡುಪಿ, ಗೋವಾ, ಹುಬ್ಬಳ್ಳಿ ಮುಂತಾದೆಡೆ ತೆರಳುವುದು ಸಾಮಾನ್ಯ. ಮಂಗಳೂರು ಸನಿಹದ ನಿಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಹೋಗುವವರಿಗೆಂದೇ ಈ ಭಾಗದಿಂದ ನಿತ್ಯ ಆರು ಬಸ್ಸುಗಳು ತೆರಳುತ್ತವೆ ಎಂದರೆ ಊಹಿಸಬಹುದು. ಇನ್ನು ಆ ಭಾಗದ ಉಳಿದ ಆಸ್ಪತ್ರೆಗಳಿಗೆ ಹೋಗುವವರು ಬೇರೆ.

    ಜಿಲ್ಲೆಯಲ್ಲಿಯೇ ಸರ್ವಸಜ್ಜಿತವಾದ ಆಸ್ಪತ್ರೆ ಇದ್ದರೆ ಒಳಿತೆಂಬ ಅಭಿಪ್ರಾಯ- ಬೇಡಿಕೆ ಬಹು ದಿನಗಳಿಂದ ಇದೆಯಾದರೂ, ಈಚಿನ ಅಪಘಾತ ಈ ದನಿ ಮತ್ತಷ್ಟು ಗಟ್ಟಿಯಾಗಲು ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಅಭಿಯಾನವೇ ನಡೆದು ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು. ವಿವಿಧ ಮಠಾಧೀಶರು ಸಹ ಈ ಬೇಡಿಕೆಗೆ ಬೆಂಬಲಿಸಿದ್ದು ಜನರಿಗೆ ಆನೆಬಲ ತಂದಿದೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಆಸ್ಪತ್ರೆಗೆ ಆಗ್ರಹಿಸಿ ಮೆರವಣಿಗೆಗಳು ಸಹ ನಡೆದಿವೆ. (ಸುಸಜ್ಜಿತ ಆಸ್ಪತ್ರೆಗೆ ಬೆಂಬಲ ವ್ಯಕ್ತಪಡಿಸುವ ನಿಟ್ಟಿನಲ್ಲಿ, ಬೆಂಗಳೂರಿನಲ್ಲಿ ನೆಲೆಸಿರುವ ಜಿಲ್ಲೆಯ ಸಮಾನಮನಸ್ಕರು ಸೇರಿ ಇಂದು, ಜುಲೈ 30ರಂದು ಫ್ರೀಡಂ ರ್ಪಾನಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.) ಹೀಗಾಗಿ ಜಿಲ್ಲೆಯ ಸಚಿವರು, ಶಾಸಕರು ಸೇರಿದಂತೆ ಎಲ್ಲ ಹಂತದ ಜನಪ್ರತಿನಿಧಿಗಳು ಸಹ ಈ ನಿಟ್ಟಿನಲ್ಲಿ ಸಕಾರಾತ್ಮಕ ಅನಿಸಿಕೆ ವ್ಯಕ್ತಪಡಿಸುವುದು ಅನಿವಾರ್ಯವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹ ಈ ಬಗ್ಗೆ ಶೀಘ್ರ ನಿರ್ಣಯದ ಭರವಸೆ ನೀಡಿದ್ದಾರೆ. ಹಾಗೇ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೂ ಆಶ್ವಾಸನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಜೆಡಿಎಸ್​ನ ಎಚ್.ಡಿ.ಕುಮಾರಸ್ವಾಮಿ ಅವರೂ ಬೆಂಬಲಿಸಿದ್ದಾರೆ. ಅಂದಹಾಗೆ, 2019ರಲ್ಲಿ ಎಚ್​ಡಿಕೆ ಮುಖ್ಯಮಂತ್ರಿಯಾಗಿದ್ದಾಗ ಈ ವಿಷಯ ಚರ್ಚೆಗೆ ಬಂದು ಅವರು ಭರವಸೆಯನ್ನೂ ನೀಡಿದ್ದರು. ಆದರೆ ಕಾರ್ಯಗತವಾಗಲಿಲ್ಲ.

    ಕಾರವಾರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಇದ್ದು, ಅಲ್ಲಿನ ವ್ಯವಸ್ಥೆಯ ಉನ್ನತೀಕರಣಕ್ಕೆ ಸರ್ಕಾರದಿಂದ ಹಣವೂ ಮಂಜೂರಾಗಿದೆ; ಹಂತಹಂತವಾಗಿ ಈ ಕೆಲಸ ನಡೆಯಬೇಕಿದೆ. ಆದರೆ, ಮಾನದಂಡದ ಪ್ರಕಾರ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಬರುವುದಿಲ್ಲ. ಇದಲ್ಲದೆ, ಸಿದ್ದಾಪುರ, ಭಟ್ಕಳ ಕಡೆಯ ಜನರಿಗೆ ತುರ್ತು ಸಂದರ್ಭದಲ್ಲಿ ಇಲ್ಲಿಗೆ ಬರುವುದು ಸುಲಭವಲ್ಲ. ಕರೊನಾ ಎರಡನೆಯ ಅಲೆ ಸಂದರ್ಭದಲ್ಲಿ ಬೇರೆ ಜಿಲ್ಲೆಗಳ ಆಸ್ಪತ್ರೆಗಳು ರೋಗಿಗಳ ದಾಖಲಾತಿಗೆ ನಿರಾಕರಿಸಿದ್ದರಿಂದ ಜಿಲ್ಲೆಯ ಇತರ ಕಡೆಯಿಂದ ಕಾರವಾರಕ್ಕೆ ರೋಗಿಗಳನ್ನು ಕರೆತರುವ ವೇಳೆಗೇ ಅವರು ಹೈರಾಣಾಗಿರುತ್ತಿದ್ದರು ಎಂದು ಪತ್ರಕರ್ತರೊಬ್ಬರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗ್ರಹ ಜೋರಾದ ಬೆನ್ನಿಗೆ, ಕುಮಟಾ ರೇಲ್ವೆ ಸ್ಟೇಷನ್ ಬಳಿ 20 ಎಕರೆ ಜಾಗವನ್ನು ಪರಿಶೀಲಿಸಲಾಗಿದೆ ಎಂಬ ಮಾಹಿತಿ ಇದೆ. ಮುಂದೆ ಏನಾಗುತ್ತದೋ ನೋಡಬೇಕು.

    ಜಿಲ್ಲೆಯಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳಿವೆ. ಇಲ್ಲಿ ವಾಹನ ಸಂಚಾರ ವಿಪರೀತವಾಗಿದ್ದು, ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಒಂದು ಅಂಕಿಅಂಶ ನೀಡುವುದಾದರೆ- 2017ರಿಂದ 2022ರ ಜುಲೈವರೆಗೆ ಜಿಲ್ಲೆಯ ವ್ಯಾಪ್ತಿಯಲ್ಲಿ ಸುಮಾರು 6 ಸಾವಿರ ಅಪಘಾತಗಳು ಸಂಭವಿಸಿವೆ. ಈ ಎಲ್ಲ ಅಪಘಾತಗಳಿಂದ ಒಟ್ಟು ಸುಮಾರು 1500 ಜನರು ಸಾವನ್ನಪ್ಪಿದ್ದಾರೆ. ಹೈವೇಯಲ್ಲಿ ಅಪಘಾತಗಳಾದಾಗ ಗಾಯಾಳುಗಳಿಗೆ ತ್ವರಿತವಾಗಿ (ಗೋಲ್ಡನ್ ಅವರ್) ಚಿಕಿತ್ಸೆ ನೀಡಬೇಕಾಗುತ್ತದೆ; ತಡವಾದಲ್ಲಿ ಪ್ರಾಣಾಪಾಯದ ಸಾಧ್ಯತೆ ಹೆಚ್ಚು. ಅಲ್ಲದೆ ಇಂಥ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಮುಖ್ಯವಾಗಿ ನ್ಯೂರೋ ಸರ್ಜನ್ ಬೇಕಾಗುತ್ತಾರೆ. ಜಿಲ್ಲೆಯಲ್ಲಿ ಹೈವೇಗಳು ಹೆಚ್ಚಿರುವುದರಿಂದ ಈ ನಿಟ್ಟಿನಲ್ಲಿ ತುರ್ತು ಕ್ರಮವಾಗಬೇಕು ಎಂಬುದು ಜನರ ಆಗ್ರಹ. ಇದರ ಜತೆಗೆ, ಅನೇಕ ರಾಜ್ಯ ಹೆದ್ದಾರಿಗಳೂ ಇಲ್ಲಿವೆ.

    ವಾನಳ್ಳಿ ಡಾಕ್ಟ್ರು: ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಯ ಕೊರತೆಯನ್ನು ಬದಿಗಿಟ್ಟು ನೋಡುವುದಾದಲ್ಲಿ, ಜಿಲ್ಲೆಯ ಕೆಲವೆಡೆ ಇರುವ ರೂಢಿ ಆಸಕ್ತಿಕರ. ನಾಟಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ಇದು ಸಹ ಒಂದು. ಕಾಡುಪ್ರದೇಶವಾದ್ದರಿಂದ ಗಿಡಮೂಲಿಕೆಗಳ ಲಭ್ಯತೆಯೂ ಇದಕ್ಕೆ ಒಂದು ಕಾರಣ. ಗಿಡಮೂಲಿಕೆ ಔಷಧ ನೀಡುವ ಅನೇಕ ಕುಟುಂಬಗಳು ತಲೆತಲಾಂತರದಿಂದ ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿವೆ. ನರ, ಎಲುಬು, ಪಾರ್ಶ್ವವಾಯು ಇತ್ಯಾದಿ ತೊಂದರೆಗಳಿಗೆ ನಾಟಿ ಔಷಧ ನೀಡುವವರು ಇಲ್ಲಿದ್ದಾರೆ. ಇನ್ನೂ ಒಂದು ವಿಶಿಷ್ಟ ಸೇವೆ ಇಲ್ಲಿನ ಕೆಲ ಪ್ರದೇಶಗಳಲ್ಲಿದೆ. ಅಂದರೆ, ವೈದ್ಯರು ಮನೆಗೇ ಬಂದು ಚಿಕಿತ್ಸೆ ನೀಡುವುದು. ಇದಕ್ಕೆ ಒಂದು ನಿದರ್ಶನ ನೀಡುವುದಾದರೆ- ಶಿರಸಿಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿ ವಾನಳ್ಳಿ ಎಂಬ ಊರಿದೆ. ಅಲ್ಲಿ ಡಾ.ಎಸ್.ಜಿ.ಹೆಗಡೆ ಎಂಬ ವೈದ್ಯರಿದ್ದಾರೆ (ವಾನಳ್ಳಿ ಡಾಕ್ಟ್ರು ಎಂದೇ ಪರಿಚಿತರು) ಆ ಭಾಗದಲ್ಲಿ ಕೆಲವೆಡೆ ಹತ್ತಿರತ್ತಿರ ಮನೆಗಳಿದ್ದರೆ, ಕೆಲವೆಡೆ ಒಂದೆರಡು ಮನೆಗಳು ಅಥವಾ ಒಂಟಿ ಮನೆಗಳು. ಈಗೇನೋ ಸಂಚಾರ ಸಾಧನಗಳು ಪರವಾಗಿಲ್ಲ. ಬೈಕು, ಕಾರುಗಳು ಬಂದಿವೆ. ಬಸ್ಸುಗಳೂ ಇವೆ. ಆದರೆ ಈಗ ಮೂವತ್ತು ನಲವತ್ತು ವರ್ಷಗಳ ಹಿಂದೆ ಬಲು ಕಷ್ಟವಿತ್ತು. ಅಂಥ ಸನ್ನಿವೇಶದಲ್ಲಿ, ಯಾರೇ ಬಂದರೂ ಡಾ. ಎಸ್.ಜಿ.ಹೆಗಡೆಯವರು ತಮ್ಮ ಬೈಕನ್ನೇರಿ ಅವರ ಮನೆಗೆ ಹೋಗಿ ಉಪಚರಿಸುತ್ತಿದ್ದರು. ಅದಲ್ಲದೆ, ಆತ್ಮೀಯವಾಗಿ ಮಾತನಾಡಿ ಧೈರ್ಯ ತುಂಬುತ್ತಿದ್ದರು. ಅವರ ಈ ಸರಳ ನಡವಳಿಕೆ ಹಾಗೂ ಮಾತಿಗೇ ರೋಗಿಗೆ ಕಾಯಿಲೆ ಅರ್ಧ ಕಮ್ಮಿಯಾಗುತ್ತಿತ್ತು. ರಾತ್ರಿ ವೇಳೆ ಕರೆದರೂ, ಮಳೆಚಳಿ ಇದ್ದರೂ ಗೊಣಗದೆ ಹೋಗಿ ಉಪಚರಿಸುವುದು ಅವರ ವೈಶಿಷ್ಟ್ಯ. ವಯಸ್ಸಿನ ಕಾರಣದಿಂದಾಗಿ ಅವರು ಈಗ ಮನೆಮನೆಗೆ ಹೋಗಿ ಔಷಧ ನೀಡುವ ಪದ್ಧತಿಯನ್ನು ನಿಲ್ಲಿಸಿದ್ದಾರೆ. ಇಂಥ ವೈದ್ಯರು ಕರೆದಾಗ ಬಂದು ಚಿಕಿತ್ಸೆ ನೀಡುತ್ತಾರೆ ಎಂಬ ಸಂಗತಿಯೇ ಜನರಿಗೆ ಅನಾರೋಗ್ಯದ ಕಳವಳದ ನಡುವೆಯೂ ನಿರಾಳತೆ ನೀಡುತ್ತಿತ್ತು. ಮಂಚಿಕೇರಿಯಲ್ಲಿ ನಾಗರಾಜ ಡಾಕ್ಟರ್ ಎಂಬುವವರಿದ್ದಾರೆ. ಅವರದೂ ಹೀಗೆ ಮನೆಮನೆ ಸೇವೆ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಂಥವರಿಂದ ಆರಂಭಿಕ ಚಿಕಿತ್ಸೆ ನಂತರ ಮುಂದಿನ ಹಂತ ಬೇಕಾದಲ್ಲಿ ಮಾತ್ರ ಶಿರಸಿಗೋ, ಯಲ್ಲಾಪುರಕ್ಕೋ ಅಥವಾ ಅವರು ತಿಳಿಸಿದಲ್ಲಿಗೆ ಹೋದರಾಯಿತು. ಇಂತಹ ವೈದ್ಯರು ಅಲ್ಲಲ್ಲಿ ಇರದಿದ್ದಲ್ಲಿ, ವಿಶೇಷವಾಗಿ ಒಳಹಳ್ಳಿಗಳ ಜನರ ಸ್ಥಿತಿ ಇನ್ನೂ ದುಸ್ತರವಾಗುತ್ತಿತ್ತು.

    ಕೊನೇ ಮಾತು: ದಿನಕರ ದೇಸಾಯಿಯವರ ಈ ಚೌಪದಿ ಹಲವರ ಮನದಾಳದ ಬಯಕೆಯೂ ಹೌದು: ಒಂದು ಬದಿ ಸಹ್ಯಾದ್ರಿ ಒಂದು ಬದಿ ಕಡಲು/ ನಡುಮಧ್ಯದಲಿ ಅಡಿಕೆ ತೆಂಗುಗಳ ಮಡಿಲು/ ಸಿರಿಗನ್ನಡದ ಚಪ್ಪರವೇ ನನ್ನ ಜಿಲ್ಲೆ/ ಇನ್ನೊಮ್ಮೆ ಇಲ್ಲಿಯೇ ಹುಟ್ಟುವೆನು ನಲ್ಲೆ..

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts