Thursday, 13th December 2018  

Vijayavani

Breaking News

ದೇವೇಗೌಡರನ್ನು ನಾನು ನಂಬಿದ್ದೇನೆ: ವಿಶ್ವನಾಥ್​

Friday, 13.07.2018, 6:24 PM       No Comments

<< ದಿಗ್ವಿಜಯ 24×7 ನ್ಯೂಸ್​ನಲ್ಲಿ ಹಳ್ಳಿ ಹಕ್ಕಿಯ ಹಾಡು ಪಾಡು >>

ಬೆಂಗಳೂರು: ರಾಜಕೀಯದ ಜೀವನದ ಸಂಧ್ಯಾಕಾಲ ಅತ್ಯಂತ ಗೌರವಯುತ ನಿರ್ಗಮನ ಹೊಂದಬೇಕೆಂಬುದು ನನ್ನ ಅಭಿಲಾಷೆಯಾಗಿತ್ತು. ಅದಕ್ಕೆ ಆಶೀರ್ವಾದ ಮಾಡಿದವರು ದೇವೇಗೌಡರು. ಪಕ್ಷಕ್ಕಿಂತಲೂ ದೇವೇಗೌಡರ ಮೇಲೆ ನನಗೆ ನಂಬಿಕೆ ಇದೆ. ವಿಶ್ವಾಸವಿದೆ. ಅವರ ವಿಶ್ವಾಸದಿಂದಲೇ ನಾನು ಶಾಸಕನಾಗಿದ್ದೇನೆ ಎಂದು ಮಾಜಿ ಸಚಿವ, ಹುಣಸೂರು ಕ್ಷೇತ್ರದ ಶಾಸಕ ಎಚ್​. ವಿಶ್ವಾನಾಥ್​ ಅವರು ಹೇಳಿದ್ದಾರೆ.

ವಿಜಯವಾಣಿಯ ಸೋದರ ಸಂಸ್ಥೆ ದಿಗ್ವಿಜಯ 24×7 ನ್ಯೂಸ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಮನದ ಮಾತನನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಪ್ರಮುಖಾಂಶಗಳನ್ನು ಇಲ್ಲಿ ನೀಡಲಾಗಿದೆ. ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ಅವರು ಇನ್ನೂ ಏನೇನು ಹೇಳಿದ್ದಾರೆ? ಇಲ್ಲಿದೆ ಓದಿ.

ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಮರುಗಲಾರೆ, ಕೊರಗಲಾರೆ

ನಾನು ಮಂತ್ರಿ ಆಗಲೇಬೇಕೆಂದೇನೂ ಇಲ್ಲ. ಅದೆಲ್ಲವೂ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ. ಮಂತ್ರಿ ಯಾಕಾಗಲಿಲ್ಲ ಎಂಬುದನ್ನು ನಾನು ವಿವರಿಸಲಾರೆ. ಜೆಡಿಎಸ್​ ಬಳಿ ಒಂದು ಸ್ಥಾನ ಇನ್ನೂ ಖಾಲಿ ಇದೆ. ಅದರಲ್ಲಿ ಮಾಡಬಹುದು ಎಂಬ ನಂಬಿಕೆ ಇದೆ. ಆದರೆ, ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಮರುಗಲಾರೆ, ಕೊರಗಲಾರೆ. ಸಚಿವ ಸ್ಥಾನಕ್ಕಾಗಿ ನಾಯಕರ ಮನೆ ಬಾಗಿಲು ತಟ್ಟುವ ವಯಸ್ಸು ನನ್ನದಲ್ಲ. ನನ್ನ ಅನುಭವಕ್ಕೆ ಅದು ಕ್ಷೋಭೆಯೂ ಅಲ್ಲ.

ರಾಜಕಾರಣದಲ್ಲಿ ಹಿರಿಯನಾದರೂ ಜೆಡಿಎಸ್​ನಲ್ಲಿ ನಾನು ಕಿರಿಯ

ರಾಜಕಾರಣದಲ್ಲಿ ನಾನು ಬಹಳ ಹಿರಿಯನಾಗಿರಬಹುದು. ಅನುಭವಿಯಿರಬಹುದು. ಆದರೆ, ಜೆಡಿಎಸ್​ನಲ್ಲಿ ನಾನು ಕಿರಿಯ. ಹಾಗಾಗಿ ಹಿರಿಯ ಸದಸ್ಯರಿಗೆ ಅವಕಾಶ ಸಿಕ್ಕಿದೆ. ಜಿ.ಟಿ ದೇವೇಗೌಡರು, ಸಾರಾ ಮಹೇಶ್​ ನಮ್ಮ ಜಿಲ್ಲೆಯವರು. ಅವರಿಗೆ ಅವಕಾಶ ಸಿಕ್ಕಿರುವುದಕ್ಕೆ ನಾನು ಸಂತೋಷಪಡಬೇಕು. ನಾನು ಈ ವಿಚಾರದಲ್ಲಿ ಸಂಪೂರ್ಣ ಸಂತೋಷವಾಗಿದ್ದೇನೆ.

ಪಕ್ಷಕ್ಕಿಂತಲೂ ದೇವೇಗೌಡರ ಮೇಲೆ ನನಗೆ ನಂಬಿಕೆ ಇದೆ

ಪಕ್ಷಕ್ಕಿಂತಲೂ ಹೆಚ್ಚಾಗಿ ನಾನು ದೇವೇಗೌಡರನ್ನು ನಂಬಿದ್ದೇನೆ. ಅವರ ಮೇಲೆ ವಿಶ್ವಾಸವಿತ್ತು. ಅವರೂ ವಿಶ್ವಾಸವಿಟ್ಟುಕೊಂಡಿದ್ದಾರೆ. ಅವರ ವಿಶ್ವಾಸದಿಂದಲೇ ನಾನು ಶಾಸಕನಾಗಿದ್ದೇನೆ. ನಾನು ಈ ಹಿಂದೆಯೇ ಅಧಿಕಾರ ಅನುಭವಿಸಿದ್ದೇನೆ. ಎಲ್ಲ ಪಕ್ಷಗಳಲ್ಲೂ ನನ್ನನ್ನು ಪ್ರೀತಿ ಮಾಡುವವರಿದ್ದಾರೆ. ರಾಜ್ಯಾದ್ಯಂತ ಗುರುತಿಸುವವರಿದ್ದಾರೆ. ಆದ್ದರಿಂದ ನನಗೆ ಇಷ್ಟೇ ಸಾಕು. ಹಾಗೆಂದು ಇದು ವೈರಾಗ್ಯವಲ್ಲ, ರಾಜಕೀಯ ಸನ್ಯಾಸತ್ವವಲ್ಲ.

ಬಜೆಟ್​ ವಿಚಾರದಲ್ಲಿ ನನಗೆ ಅಸಮಾಧಾನವಿಲ್ಲ

ರಾಜ್ಯದ ಅಭಿವೃದ್ಧಿಯ ಬಗ್ಗೆ ನನ್ನದೇ ಆದ ಕಲ್ಪನೆಗಳಿವೆ. ಅದನ್ನು ಪಕ್ಷವೂ ಬಳಸಿಕೊಳ್ಳುತ್ತಿದೆ. ಬಜೆಟ್​ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ನಾನು ವ್ಯಕ್ತಪಡಿಸಿದ ಅಭಿಪ್ರಾಯ ಯಾವುದೇ ಕಾರಣಕ್ಕೂ ಅದು ಸರ್ಕಾರದ ಮೇಲಿನ ಅಸಮಾಧಾನವಲ್ಲ. ವಸ್ತುಸ್ಥಿತಿಯನ್ನು ಹೇಳುವ ಪ್ರಯತ್ನವಷ್ಟೇ.
ಚಾಮುಂಡೇಶ್ವರಿಯಲ್ಲಿನ ಆ ದೊಡ್ಡ ಸೋಲು ಸಿದ್ದರಾಮಯ್ಯರಿಗೆ ಪಾಠ ಕಲಿಸಿದೆ.

ಸಿದ್ದರಾಮಯ್ಯ ಮತ್ತು ನನ್ನ ನಡುವೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಬಂತು. ಅದು, ನನ್ನನ್ನು ಕಾಂಗ್ರೆಸ್​ನಿಂದ ಅಮಾನತು ಮಾಡಬೇಕು ಎಂಬ ಹಂತಕ್ಕೂ ಹೋಯಿತು. ಆಗ ನಾನು ಅವರ ವಿರುದ್ಧ ಧ್ವನಿ ಎತ್ತಲೇಬೇಕಾಯಿತು. ಇಂಥದ್ದರ ವಿರುದ್ಧ ಹೋರಾಡುವುದು ನನ್ನ ಜಾಯಮಾನ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಿಂದ ಸೋತರಲ್ಲ ಅದು ಅವರಿಗೆ ಸಿಕ್ಕ ಪಾಠ. ಆದರೆ, ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವ ಸಮರವೂ ಇಲ್ಲ. ಅವರೂ ದುಡಿದಿದ್ದಾರೆ, ನಾನು ದುಡಿದಿದ್ದೇನೆ ಅಷ್ಟೇ.

ಈ ಸರ್ಕಾರ ಕುರುಬರ ವಿರೋಧಿಯಲ್ಲ, ತುಳಿಯುವ ಕೆಲಸ ಮಾಡಿದ್ದೇ ಸಿದ್ದರಾಮಯ್ಯ

ಈ ಸರ್ಕಾರ ಕುರುಬ ಸಮುದಾಯವನ್ನು ಹೇಗೆ ತುಳಿಯುತ್ತಿದೆ? ಅವೆಲ್ಲವೂ ಕಪೋಲ ಕಲ್ಪಿತ. ಈ ಸಮುದಾಯವನ್ನು ಹೆಚ್ಚು ತುಳಿದವರೇ ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರೇ ತಮ್ಮ ಸಂಪುಟದಲ್ಲೇ ತುಳಿದಿದ್ದರು. ಕೊನೇ ಹಂತದಲ್ಲಿ ರೇವಣ್ಣರನ್ನು ಮಂತ್ರಿ ಮಾಡಿದರು. ಕುರುಬ ಮಠಕ್ಕೆ ಸಿದ್ದರಾಮಯ್ಯ ಅವರ ಕಾಣಿಕೆ ಏನು? ಹಾಗೆ ನೋಡಿದರೆ ಮಠಕ್ಕೆ ಹೆಚ್ಚಿನ ಅನುದಾನ ಕೊಟ್ಟವರು ಯಡಿಯೂರಪ್ಪ.

ಕುರುಬನಾದರೂ ನಾನು ಜಾತ್ಯತೀತ, ಹಿಂದುಳಿದವರ ಪ್ರತಿನಿಧಿ

ನಾನು ಹುಟ್ಟಿನಲ್ಲಿ ಕುರುಬ. ಆದರೆ, ನಾನು ಜಾತ್ಯತೀತ ವ್ಯಕ್ತಿ. ದೇವರಾಜ ಅರಸು ಗರಡಿಯಲ್ಲಿ ಪಳಗಿದ ನಾನು ಎಲ್ಲ ಹಿಂದುಳಿದ ವರ್ಗಗಳ ನಾಯಕ.

ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ

ರಾಜ್ಯದ ಮುಖ್ಯಮಂತ್ರಿಗಳ ಬಗೆಗಿನ ತಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿಶ್ವಾನಾಥ್​, ದೇವರಾಜ ಅರಸು ಪರಿಪೂರ್ಣ ನಾಯಕ, ದೇವೇಗೌಡರು ಹಳ್ಳಿಗಾಡಿನ ಪ್ರಧಾನಿ, ಸಿದ್ದರಾಮಯ್ಯ ಹಳ್ಳಿಯಿಂದ ಬಂದು ದೊಡ್ಡ ಹಂತಕ್ಕೆ ಏರಿದ ಹಿಂದುಳಿದ ವರ್ಗಗಳ ದೊಡ್ಡ ನಾಯಕ ಎಂದೂ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top