ಚನ್ನರಾಯಪಟ್ಟಣ : ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ನಿಟ್ಟಿನಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸೋಮವಾರ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ಕಾರದಿಂದ ನೀಡುವ ಲ್ಯಾಪ್ ಟಾಪ್ ವಿತರಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆಯು, ಆಸ್ತಿ ಮತ್ತು ಭೂ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕ ಸೇವೆಗಳನ್ನು ದಕ್ಷ ಮತ್ತು ಪಾರದರ್ಶಕವಾಗಿ ಒದಗಿಸಲು ಎಲ್ಲ ಕಡತ ವಿಲೇವಾರಿ ಆನ್‌ಲೈನ್ ಮೂಲಕವೇ ಪಾರದರ್ಶಕವಾಗಿ ಕೆಲಸ ನಡೆಯಬೇಕು. ಕೆಲಸದ ವಿಳಂಬ ಸೇರಿದಂತೆ ದಾಖಲೆಗಳು ಕಳೆದು ಹೋಗದಂತೆ ನೋಡಿಕೊಳ್ಳುವುದು ಈ ಡಿಜಿಟಲೀಕರಣದ ಉದ್ದೇಶವಾಗಿದ್ದು ಗ್ರಾಮ ಲೆಕ್ಕಾಧಿಕಾರಿಗಳು ರೈತರಿಗೆ, ಬಡವರಿಗೆ ಹಾಗೂ ಫಲಾನುಭವಿಗಳಿಗೆ ಉತ್ತಮ ಸೇವೆಯನ್ನು ನೀಡಬೇಕೆಂದರು.
ಟಪಾಲು ವ್ಯವಸ್ಥೆಯಿಂದ ಕೆಲಸ ವಿಳಂಬವಾಗುತ್ತೆ. ಇದರಿಂದ ಅರ್ಜಿ ನೀಡಿದ ಜನ ಪರದಾಡಬೇಕಾಗಿದೆ. ಅಧಿಕಾರಿಗಳು ಕೆಲಸ ಮಾಡಲಿಲ್ಲ ಎಂದರೆ ಕಚೇರಿಗೆ ಅಲೆಯುವ ಜನರಿಗೂ ಭಾರಿ ಸಂಕಷ್ಟ ತಪ್ಪಲ್ಲ. ಈ ಎಲ್ಲ ಸಮಸ್ಯೆಗಳಿಗೂ ಬ್ರೇಕ್ ಹಾಕುವ ಉದ್ದೇಶದಿಂದ ಎಲ್ಲ ಕೆಲಸಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅನಗತ್ಯ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿದೆ.
ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಹಾಗೂ ಸುಳ್ಳು ದಾಖಲೆ ಸೃಷ್ಟಿಸುವುದನ್ನು ತಡೆಯಲು ಭೂಸುರಕ್ಷಾ ಯೋಜನೆಯಿಂದ ರೈತರ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಸುರಕ್ಷಿತವಾಗಿಡಬಹುದು. ಬೇಕಾದಾಗ ಸುಲಭವಾಗಿ ಪಡೆದುಕೊಳ್ಳಬಹುದು. ರೈತರು ವಿನಾಕಾರಣ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಈ ಯೋಜನೆಗಾಗಿ ಕಂಪ್ಯೂಟರ್, ಸ್ಕ್ಯಾನರ್ ಹಾಗೂ ನುರಿತ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇದುವರೆಗೂ 60 ಲಕ್ಷ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಬಾಕಿ ಉಳಿದಿರುವ 15 ಲಕ್ಷ ಭೂ ದಾಖಲೆಗಳನ್ನು ಮೂರು ತಿಂಗಳಲ್ಲಿ ಡಿಜಿಟಲೀಕರಣ ಗೊಳಿಸಲಾಗುವುದು. ರೆಕಾರ್ಡ್ ರೂಂನಲ್ಲಿರುವ ಹಳೇ ದಾಖಲೆಗಳು ಪೇಪರ್‌ನಲ್ಲಿದ್ದು, ಇದು ನಶಿಸಿ ಹೋಗುವ ಅಪಾಯವಿತ್ತು. ನೂರಾರು ವರ್ಷಗಳ ದಾಖಲೆಗಳನ್ನು ಸುರಕ್ಷಿತವಾಗಿಡಲು ಸಹಕಾರಿಯಾಗಿದೆ ಎಂದು ತಿಳಿಸಿದರು
ಕಂದಾಯ ಯೋಜನೆ ಅನುಷ್ಠಾನಗೊಳಿಸುವ ಉದ್ದೇಶದಿಂದ ಕಂದಾಯ ಇಲಾಖೆಯಲ್ಲಿ ಪ್ರಸ್ತುತ ನಿರ್ವಹಿಸುತ್ತಿರುವ ವಿವಿಧ ಐಟಿ ವ್ಯವಸ್ಥೆಗಳನ್ನು ಬಗರ್ ಹುಕುಂ ತಂತ್ರಾಂಶ, ಫೋಡಿ ಪ್ರಕರಣ (1-5 ಮತ್ತು 6-10) ತಂತ್ರಾಂಶ, ಪಹಣಿ ದಾಖಲೆಗಳೊಂದಿಗೆ ಆಧಾರ ಜೋಡಣೆ, ಸರ್ಕಾರಿ ಜಮೀನುಗಳ ಸಂರಕ್ಷಣೆ, ಲ್ಯಾಂಡ್ ಬಿಟ್ ಯೋಜನೆಯಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸುವ ಸಲುವಾಗಿ ತಾಲೂಕಿಗೆ ಹಂಚಿಕೆ ಮಾಡಲಾದ ಒಟ್ಟು 26 ಕ್ರೋಮಬುಕ್ ಲ್ಯಾಪ್‌ಟಾಪ್ ಗಳನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಲಾಯಿತು.
ಗ್ರೇಡ್-2 ತಹಸೀಲ್ದಾರ್ ನಾಗರಾಜು, ಉಪ ತಹಸೀಲ್ದಾರ್ ಎಸ್.ಎಸ್.ಪೂರ್ಣಿಮಾ, ದಂಡಿಗನಹಳ್ಳಿ ಉಪ ತಹಸೀಲ್ದಾರ್ ಪ್ರಭಾಕರ್, ಎಡಿಆರ್‌ಎಲ್ ಲಲ್ಲೂ ಪ್ರಸಾದ್, ಶಿರಸ್ತೆದಾರ ಬಿ.ಎಸ್. ಪವನ್, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ನವೀನ್ ಕುಮಾರ್, ಸರ್ಕಾರಿ ನೌಕರರ ತಾಲೂಕು ಸಂಘದ ಅಧ್ಯಕ್ಷ ಎಂ.ಆರ್ ಮಂಜುನಾಥ್, ಎಲ್ಲ ಹೋಬಳಿಗಳ ರಾಜಸ್ಥ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಭಾಗವಹಿಸಿದ್ದರು.
ತಾಲೂಕಿನಲ್ಲಿ 61 ವೃತ್ತಗಳಿದ್ದು ಒಬ್ಬ ಗ್ರಾಮ ಲೆಕ್ಕಾಧಿಕಾರಿ ಎರಡು-ಮೂರು ವೃತ್ತಗಳ ಜವಾಬ್ದಾರಿ ನಿರ್ವಹಿಸುತ್ತಿದ್ದು, ಇಲಾಖೆಯಲ್ಲಿ ಗುಣಾತ್ಮಕ ಸೇವೆ ಪೂರ್ಣ ಪ್ರಮಾಣದಲ್ಲಿ ದೊರಕಲು ಸರ್ಕಾರ ಕೂಡಲೇ ಗ್ರಾಮ ಲೆಕ್ಕಿಗರನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಸಿ.ಎನ್. ಬಾಲಕೃಷ್ಣ.
ಶಾಸಕರು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ