ಎಲ್ಲ ಸಂಸದರಿಗೂ ಟಿಕೆಟ್ ಖಾತ್ರಿಯಿಲ್ಲ

| ವಿಜಯ್ ಜೊನ್ನಹಳ್ಳಿ

ಬೆಂಗಳೂರು: ‘ಮೈತ್ರಿ ಸರ್ಕಾರ ತನ್ನ ಭಾರಕ್ಕೆ ತಾನೇ ಬೀಳಲಿದೆ. ಅಲ್ಲಿಯವರೆಗೂ ಕಾದು ಅವಕಾಶವನ್ನು ಬಳಸಿಕೊಳ್ಳುತ್ತೇವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. ಅದೇ ವೇಳೆ, ಪಕ್ಷದ ಎಲ್ಲ ಹಾಲಿ ಸಂಸದರಿಗೂ ಲೋಕಸಭಾ ಚುನಾವಣೆ ಟಿಕೆಟ್ ಸಿಗುವ ಸಾಧ್ಯತೆಯನ್ನು ಅವರು ಸಂಪೂರ್ಣ ಒಪ್ಪಿಲ್ಲ. ರೆಸಾರ್ಟ್ ರಾಜಕಾರಣ, ಲೋಕಸಭೆ ಚುನಾವಣೆ ಸಿದ್ಧತೆ ಭರಾಟೆ ನಡುವೆಯೇ ದಿಗ್ವಿಜಯ ನ್ಯೂಸ್ 24×7ಗೆ ವಿಶೇಷ ಸಂದರ್ಶನ ನೀಡಿರುವ ಅವರು ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

 • ಗುರುಗ್ರಾಮ ರೆಸಾರ್ಟ್​ನಲ್ಲಿ ಬಿಜೆಪಿ ಶಾಸಕರು ಏನು ಮಾಡಿದರು?

ಲೋಕಸಭೆ ಚುನಾವಣೆ ಬಗ್ಗೆ ರ್ಚಚಿಸಲು ದೆಹಲಿಯಲ್ಲಿದ್ದೆವು. ಕೆಲ ಕಾರಣಗಳಿಂದ ರೆಸಾರ್ಟ್​ಗೆ ತೆರಳಿದ್ದು ನಿಜ. ಇದೀಗ ವಾಪಸಾಗಿದ್ದು, ಬರ ಅಧ್ಯಯನಕ್ಕೆ ಹೋಗುತ್ತಿದ್ದೇವೆ. ಆಡಳಿತ ನಡೆಸಬೇಕಾದ ಕಾಂಗ್ರೆಸ್​ನವರು ಯಾಕೆ ರೆಸಾರ್ಟ್​ನಲ್ಲಿದ್ದಾರೆ?

 • ಬಿಜೆಪಿಯವರು ರೆಸಾರ್ಟ್​ವಾಸ ಮಾಡಿದ್ದರಿಂದ ಕಾಂಗ್ರೆಸ್ ನಡೆ ಪ್ರಶ್ನಿಸುವ ಅಸ್ತ್ರ ಕಳೆದುಕೊಂಡರಾ?

ನಾವು ರೆಸಾರ್ಟ್​ನಿಂದ ಬಂದಾಗಿದೆ. ಬರಗಾಲದ ಪ್ರವಾಸ ಶುರುಮಾಡಲು ಬಿಜೆಪಿ ಹೇಳಿದ ನಂತರ ಸಿಎಂ ಕುಮಾರಸ್ವಾಮಿ ಎಚ್ಚೆತ್ತುಕೊಳ್ಳುತ್ತಾರೆ. ಕಾಂಗ್ರೆಸ್​ನವರು ಹೊರಬಂದು ಬರಪರಿಸ್ಥಿತಿ ನೋಡಲಿ.

 • ಸಚಿವರು ಬರ ಪ್ರವಾಸ ಮಾಡುತ್ತಿದ್ದಾರೆ ಎಂದು ಮೈತ್ರಿ ಪಕ್ಷ ಹೇಳುತ್ತಿದೆ…

ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಮೇವಿನ ಬ್ಯಾಂಕುಗಳು ಸ್ಥಾಪನೆಯಾಗಿಲ್ಲ. 4,500 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಅನುದಾನ ಖರ್ಚುಮಾಡಿಲ್ಲ.

 • ಏನೂ ಕಾರಣವಿಲ್ಲದೆ ಬಿಜೆಪಿ ಶಾಸಕರು ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದೇಕೆ?

ಕಾಂಗ್ರೆಸ್, ಜೆಡಿಎಸ್ ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿವೆ ಎಂಬ ಮಾಹಿತಿ ನಾವು ದೆಹಲಿಯಲ್ಲಿದ್ದ ವೇಳೆ ಬಂತು. ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಶಾಸಕರುಗಳಿಗೆ ಆಫರ್ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಒಟ್ಟಾಗಿರಲು ಹಾಗೂ ರ್ಚಚಿಸಲು ಕೆಲಕಾಲ ರೆಸಾರ್ಟ್​ನಲ್ಲಿರಬೇಕಾಯಿತು.

 • ಎಲ್ಲ ಹಾಲಿ ಸಂಸದರಿಗೂ ಟಿಕೆಟ್ ಖಚಿತವಾಗಿದೆಯೇ?

ಕೆಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ. ರಾಜ್ಯದಲ್ಲಿ ಗೆಲ್ಲುವ ಅಭ್ಯರ್ಥಿಗಳ ಕುರಿತು ಅಮಿತ್ ಷಾ ಈಗಾಗಲೆ ಸಮೀಕ್ಷೆ ನಡೆಸಿದ್ದಾರೆ. ಎಲ್ಲ ಸಂಸದರಿಗೂ ಟಿಕೆಟ್ ಸಿಗಲಿದೆ ಎಂಬ ನಂಬಿಕೆಯಿದೆಯಾದರೂ ಸಮೀಕ್ಷೆ ವರದಿ ಆಧರಿಸಿ ಅಮಿತ್ ಷಾ ಹಾಗೂ ನರೇಂದ್ರ ಮೋದಿ ಅವರು ಬದಲಾವಣೆ ಮಾಡಬಹುದು.

 • ಆಪರೇಷನ್ ಕಮಲಕ್ಕೆ ಕೋಟಿಗಟ್ಟಲೆ ಆಫರ್ ನೀಡುತ್ತಿದ್ದೀರಿ ಎಂದು ಸಿಎಂ, ದೇವೇಗೌಡ, ಸಿದ್ದರಾಮಯ್ಯ ಆರೋಪಿಸುತ್ತಿದ್ದಾರಲ್ಲ?

ಅವರಿಗೆ ಮಾನಮರ್ಯಾದೆ ಇದ್ದರೆ ಈ ರೀತಿ ಮಾತನಾಡಬಾರದು. ಅವರ ಪಕ್ಷದ ಶಾಸಕರು ಅವರ ಜತೆಯಿಲ್ಲದಿದ್ದರೆ ಬಿಜೆಪಿ ಮೇಲೆ ಏಕೆ ಗೂಬೆ ಕೂರಿಸಬೇಕು?

 • ಕಾಂಗ್ರೆಸ್​ನ ಅತೃಪ್ತ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಯೇ?

ನಮ್ಮ ಜತೆ ಯಾವ ಕಾಂಗ್ರೆಸ್ ಶಾಸಕರೂ ಸಂಪರ್ಕದಲ್ಲಿಲ್ಲ. ಮಂತ್ರಿಮಂಡಳದಲ್ಲಿ, ಕಾಂಗ್ರೆಸ್ ಶಾಸಕರಲ್ಲಿ ಸಮನ್ವಯ ಇಲ್ಲ. ಇದಕ್ಕೆ ಯಾರು ಜವಾಬ್ದಾರರು?

 • ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನವಾಗುತ್ತಿದೆ ಎಂದಿದ್ದೀರಿ. ನಿಮ್ಮ ಶಾಸಕರ ಮೇಲೆ ನಂಬಿಕೆಯಿಲ್ಲವೇ?

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಈಗಲೂ ನಮ್ಮ ಪಕ್ಷದ ಶಾಸಕರಿಗೆ ಆಮಿಷವೊಡ್ಡುತ್ತಿದ್ದಾರೆ. ಇದರಲ್ಲಿ ಯಶ ಕಾಣಲಿ, ಆಟ ಶುರುಮಾಡಲಿ ಎಂದು ನಾನೂ ಅವರಿಗೆ ಸವಾಲು ಹಾಕುತ್ತೇನೆ. ನಮ್ಮ ಶಾಸಕರು ಅಲುಗಾಡುವುದಿಲ್ಲ.

 • ಬಿಜೆಪಿ ಜತೆ ಪಕ್ಷೇತರರು ಸೇರಿ 13 ಶಾಸಕರು ಸರ್ಕಾರ ಬೀಳಿಸುತ್ತಾರೆ ಎಂಬುದು ಸತ್ಯವೇ?

ಖಂಡಿತ ಸುಳ್ಳು. ನಾವು ಪ್ರತಿಪಕ್ಷದಲ್ಲಿರುತ್ತೇವೆ. ನಮಗೆ ಸರ್ಕಾರ ರಚಿಸುವ ಉದ್ದೇಶವಿಲ್ಲ. ನಾನು ಮುಖ್ಯಮಂತ್ರಿ ಹುದ್ದೆ ನೋಡಿದ್ದೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿಯವರನ್ನು ಮತ್ತೆ ಪ್ರಧಾನ ಮಂತ್ರಿಯನ್ನಾಗಿ ಮಾಡುವುದೇ ನನ್ನ ಗುರಿ. ದೋಸ್ತಿಗಳಲ್ಲೇ ಕಚ್ಚಾಡಿಕೊಂಡು ಸರ್ಕಾರ ಬಿದ್ದರೆ ನಮ್ಮ ತಪ್ಪೇನಿದೆ? ನಾವೇನೂ ಸನ್ಯಾಸಿಗಳಲ್ಲ.

 • ಅಧಿವೇಶನದಲ್ಲಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಮಾಡುವತ್ತ ಬಿಜೆಪಿ ಯೋಚಿಸುತ್ತಿದೆಯಾ?

ಈಗಲೇ ಇದರ ಬಗ್ಗೆ ಪ್ರತಿಕ್ರಿಯಿಸುವುದು ಸಮಂಜಸವಲ್ಲ. ಆಗಿನ ರಾಜಕೀಯ ಪರಿಸ್ಥಿತಿ ನೋಡಿಕೊಂಡು, ಶಾಸಕರ ಜತೆ ಚರ್ಚೆ ಮಾಡಿ ತೀರ್ವನಿಸುತ್ತೇವೆ.

 • ಶೀಘ್ರದಲ್ಲೇ ನೀವು ಸಿಎಂ ಆಗುತ್ತೀರಿ ಎಂದು ನಿಮ್ಮ ಪಕ್ಷದವರೇ ಹೇಳುತ್ತಿದ್ದಾರಲ್ಲ?

ಸರ್ಕಾರ ಬೀಳುತ್ತದೆ, ನಾನು ಸಿಎಂ ಆಗುತ್ತೇನೆ ಎನ್ನುವಂಥ ಹೇಳಿಕೆಗಳನ್ನು ನೀಡದಂತೆ ನಮ್ಮ ಶಾಸಕರಿಗೆ ಸೂಚನೆ ನೀಡುತ್ತೇನೆ.

 • ಲೋಕಸಭೆ ಚುನಾವಣೆಯ ತಯಾರಿ ಹೇಗಿದೆ? ಅಭ್ಯರ್ಥಿ ಆಯ್ಕೆ ಆಗುತ್ತಿದೆಯೇ?

*ಫೆಬ್ರವರಿ 2ನೇ ವಾರದಲ್ಲಿ ಅಭ್ಯರ್ಥಿ ಘೊಷಣೆ ಸಾಧ್ಯತೆಯಿದೆ. ಗೆಲ್ಲುವ ಹಾಗೂ ಯೋಗ್ಯ ಅಭ್ಯರ್ಥಿಗಳನ್ನು ಹುಡುಕುವ ಕೆಲಸ ನಡೆಯುತ್ತಿದೆ.