ಹೆಬ್ಬಾಳ ಜನತೆಗೆ ಸಮಸ್ಯೆ ಪರಿಹಾರದ ಆನಂದ

>

ಬೆಂಗಳೂರು: ಹಲವಾರು ವರ್ಷಗಳಿಂದ ಸಾರ್ವಜನಿಕರ ಕಾಡುತ್ತಿದ್ದ ಹತ್ತಾರು ಸಮಸ್ಯೆಗಳಿಗೆ ಪರಿಹಾರದ ಭರವಸೆ ಸ್ಥಳದಲ್ಲೇ ಸಿಕ್ಕಿತು. ಯಾವ ಕಚೇರಿಗೂ ಹೋಗದೆ, ಯಾರ ಮನೆ ಬಾಗಿಲಿಗೂ ಎಡತಾಕದೆ ಕ್ಷೇತ್ರದ ಶಾಸಕರು, ವಾರ್ಡ್ ಕಾಪೋರೇಟರ್, ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ನೇರವಾಗಿ ತಮ್ಮ ದೂರು-ದುಮ್ಮಾನ ವಿವರಿಸಿ ಗಡುವಿನೊಳಗೆ ಸಮಸ್ಯೆ ಬಗೆಹರಿಯುವ ಆಶ್ವಾಸನೆಯನ್ನು ಜನ ಪಡೆದರು. ಸಮಸ್ಯೆ ಬಗೆಹರಿಸಲು ಮೀನಮೇಷ ಎಣಿಸುತ್ತಿದ್ದ ಅಧಿಕಾರಿಗಳನ್ನು ಜನರೇ ತರಾಟೆ ತೆಗದುಕೊಂಡರು. ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಹೆಬ್ಬಾಳ ಕ್ಷೇತ್ರದ ವಾರ್ಡ್-21ರಲ್ಲಿ ಶನಿವಾರ ಆಯೋಜಿಸಿದ್ದ ‘ಜನತಾದರ್ಶನ’ಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಕುಂತಿ ಗ್ರಾಮ, ಅಮರಜ್ಯೋತಿ ಬಡಾವಣೆ, ಚೌಡಯ್ಯ ಬ್ಲಾಕ್, ಆನಂದ ನಗರ ಬಡಾವಣೆ, ಎಜಿಎಸ್ ಕಾಲನಿ, ಎಸ್​ಬಿಐ ಕಾಲನಿಗಳ ನೂರಾರು ಜನರು ತಮ್ಮ ಸಮಸ್ಯೆಗಳನ್ನು ತಿಳಿಸಲು ಆನಂದನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಭಾಂಗಣದಲ್ಲಿ ನೆರೆದಿದ್ದರು. ಶಾಸಕ ಬಿ.ಎಸ್. ಸುರೇಶ್ ಹಾಗೂ ಪಾಲಿಕೆ ಸದಸ್ಯ ಎಂ.ಆನಂದ್ ಕುಮಾರ್ ಜನರ ಅಹವಾಲುಗಳನ್ನು ಶಾಂತಚಿತ್ತದಿಂದ ಆಲಿಸಿ, ಸ್ಥಳದಲ್ಲೇ ಪರಿಹಾರ ಸೂಚಿಸಿದರು.

ಜನರ ಸಮಸ್ಯೆ ಅರಿತಿದ್ದೇನೆ

ವಿಧಾನಪರಿಷತ್ ಸದಸ್ಯನಿರುವಾಗಲೇ ಕ್ಷೇತ್ರ ಸುತ್ತಾಡಿ ಜನರ ಸಮಸ್ಯೆ ಅರಿತಿದ್ದೇನೆ. ಶಾಸಕನಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಸಮಸ್ಯೆ ಪರಿಹಾರಕ್ಕೆ ಕಾರ್ಯಪ್ರವೃತ್ತನಾಗಿದ್ದೇನೆ. ಕ್ಷೇತ್ರದಲ್ಲಿ ಹಕ್ಕು ಪತ್ರ ದೊರೆಯದ ಬಡವರಿಗೆ ಹಕ್ಕು ಪತ್ರ ದೊರಕಿಸಿಕೊಡುವ ನಿಟ್ಟಿನಲ್ಲಿ 10ಕ್ಕೂ ಹೆಚ್ಚು ಬಾರಿ ಸ್ಲಂ ಬೋರ್ಡ್ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಚುರುಕುಮುಟ್ಟಿಸಿದ್ದೇನೆ. ನಿಗದಿತ ಅವಧಿಯೊಳಗೆ ಜನರ ಸಮಸ್ಯೆಗಳಿಗೆಲ್ಲ ಪರಿಹಾರ ನೀಡುವ ಭರವಸೆಯನ್ನು ಭೈರತಿ ಸುರೇಶ್ ನೀಡಿದರು.

ಶೀಘ್ರ ಬೆಂಗಳೂರು ಒನ್

ವಿವಿಧ ಬಿಲ್​ಗಳ ಪಾವತಿ, ಸೌಲಭ್ಯಗಳಿಗೆ ದೂರ ಅಲೆಯಬೇಕಿದೆ ಎಂದು ಕುಂತಿಗ್ರಾಮದ ನಂಜಪ್ಪ ಹೇಳಿದರು. ಆನಂದನಗರ ವಾರ್ಡ್ ಕಚೇರಿ ಕೆಳಗೆ ಬೆಂಗಳೂರು ಒನ್ ಸ್ಥಾಪನೆಗೆ ಅನುಮೋದನೆ ದೊರೆತಿದೆ. ಮುಂದಿನ 15 ರಿಂದ 20ದಿನದಲ್ಲಿ ನಿರ್ಮಾಣ ಕೆಲಸ ಆರಂಭಿಸಲಾಗುತ್ತದೆ ಎಂದು ಶಾಸಕ ಬೈರತಿ ಸುರೇಶ್ ಭರವಸೆ ನೀಡಿದರು. ಪ್ರಶ್ನೆ ಕೇಳಿದ ನಂಜಪ್ಪ ಅವರನ್ನು ಉದ್ಘಾಟನೆಯಲ್ಲೂ ಪಾಲ್ಗೊಳ್ಳಿ ಎಂದು ಆಹ್ವಾನಿಸಿದರು.

4 ತಿಂಗಳಲ್ಲಿ ಸಭಾಂಗಣ

ಸ್ಥಳೀಯ ಮಹಿಳಾ ಸಮಾಜದ ಆಗ್ರಹದಂತೆ ಆನಂದ ನಗರ ಮೈದಾನದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರ ನಿರ್ವಿುಸಲು ನಿರ್ಧರಿಸಿ ಟೆಂಡರ್ ಕರೆಯಲಾಗಿದೆ. ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದ್ದು, 4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ ಎಂದು ಶಾಸಕರು ತಿಳಿಸಿದರು.

ವಾರ್ಡ್ ಅಭಿವೃದ್ಧಿಗೆ ಪಣ

ಪಾಲಿಕೆ ಸದಸ್ಯ ಎಂ.ಆನಂದ್ ಕುಮಾರ್ ಮೇಲೆ ವಾರ್ಡ್ ಜನರು ಇಟ್ಟ ಭರವಸೆ ಹುಸಿಯಾಗಿಲ್ಲ. ಮೊದಲ ಚುನಾವಣೆಯನ್ನೇ ಜಯಭೇರಿಗಳಿಸಿದ್ದ ಆನಂದ್​ಕುಮಾರ್, ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ವಾರ್ಡ್​ನಲ್ಲಿನ ಪಾದಚಾರಿ ಮಾರ್ಗ, ಪಾರ್ಕ್ ಸ್ವಚ್ಛತೆ ಹಾಗೂ ನವೀಕರಣ, ರಸ್ತೆ ಅಭಿವೃದ್ಧಿ ಸೇರಿ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ಸಾರ್ವಜನಿಕರೂ ಆನಂದ್​ಕುಮಾರ್ ಕಾರ್ಯವನ್ನು ಜನತಾದರ್ಶನದಲ್ಲೇ ಶ್ಲಾಘಿಸಿದರು. ಆದರೆ ಕ್ಷೇತ್ರದ ಅಭಿವೃದ್ಧಿಗೆ ಕಾಪೋರೇಟರ್ ಮೇಲೆ ಮತ್ತಷ್ಟು ನಿರೀಕ್ಷೆಯನ್ನು ಜನ ಹೊತ್ತಿದ್ದು, ಇದನ್ನು ಹುಸಿಗೊಳಿಸಲಾರೆ ಎಂದು ಜನರಿಗೆ ಭರವಸೆ ನೀಡಿದರು.

ರಸ್ತೆ ಬದಿ ಬಿಎಂಟಿಸಿ ಬಸ್ ನಿಲ್ಲಿಸಿದರೆ ದಂಡ!

ಬಿಎಂಟಿಸಿ ಚಾಲಕರು ಬಸ್​ಗಳನ್ನು ಡಿಪೋ ಹೊರತಾಗಿ ರಸ್ತೆ ಬದಿ ನಿಲ್ಲಿಸಿದರೆ ದಂಡ ಹಾಕುವಂತೆ ಸಂಚಾರ ಪೊಲೀಸರಿಗೆ ಶಾಸಕ ಬೈರತಿ ಸುರೇಶ್ ಸೂಚಿಸಿದರು. ಕಿರಿದಾದ ರಸ್ತೆಗಳಲ್ಲೂ ಬಸ್ ನಿಲ್ಲಿಸಿ ಹೋಗುತ್ತಾರೆ. ದ್ವಿಚಕ್ರ ವಾಹನಗಳೂ ಹೋಗಲಾಗದ ಸ್ಥಿತಿ ಇದೆ. ವಿಶೇಷ ಕಾರ್ಯಾಚರಣೆ ನಡೆಸಿ. ಚಾಲಕರಿಗೆ ದಂಡ ಹಾಕಿದರೆ ಎಲ್ಲ ಸರಿ ಹೋಗಲಿದೆ ಎಂದು ಖಡಕ್ ಸೂಚನೆ ನೀಡಿದರು. ರಸ್ತೆಯಲ್ಲಿ ಭಾರಿ ವಾಹನ ನಿಲುಗಡೆ ಮಾಡದಂತೆ ಬೋರ್ಡ್ ಅಳವಡಿಸಲು ತಿಳಿಸಿದರು.

ನೀರು ಕೊಡಿ ಸ್ವಾಮಿ!

ಕುಂತಿಗ್ರಾಮದ ಸ್ಲಂ ಬೋರ್ಡ್ ವಸತಿಗೃಹದ ನೀರಿನ ಬವಣೆ ಬಗೆಹರಿಸುವುದು ಯಾವಾಗ ಎಂದು ಪಾರ್ವತಮ್ಮ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಾಲಿಕೆ ಸದಸ್ಯ ಆನಂದ್​ಕುಮಾರ್, ಕೆಲವರು ನಕಲಿ ದಾಖಲೆ ಸೃಷ್ಟಿಸಿ, ಮನೆಗಳನ್ನು ಪಡೆದು ಬಾಡಿಗೆಗೆ ನೀಡಿದ್ದಾರೆ. ಇಂಥವರ ಬಳಿ 2 ಕಾರುಗಳಿವೆ. ಇವರ ವಿರುದ್ಧ ಕ್ರಮ ಕೈಗೊಂಡ ಬಳಿಕ ನೀರಿನ ಸಂಪರ್ಕ ನೀಡುವ ಸ್ಪಷ್ಟನೆ ನೀಡಿದರು. ಈ ಸಂದರ್ಭದಲ್ಲಿ ಸಕ್ರಮವಾಗಿ ವಾಸಿಸುತ್ತಿರುವ ನಿವಾಸಿಗಳಿಗಾದರೂ ನೀರು ಕೊಡಿ ಎಂದು ಪಾರ್ವತಮ್ಮ ಆಗ್ರಹಿಸಿದರು.

6 ತಿಂಗಳಲ್ಲಿ ಹಕ್ಕು ಪತ್ರ

1990ರಲ್ಲೇ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ನಿರಂತರವಾಗಿ ಹೋರಾಟ ಮಾಡುತ್ತಿರುವೆ. ಈವರೆಗೂ ಸ್ಲಂ ಬೋರ್ಡ್ ಹಕ್ಕುಪತ್ರ ನೀಡಿಲ್ಲ ಎಂದು ಕುಂತಿಗ್ರಾಮದ ನಾರಾಯಣಸ್ವಾಮಿ ದೂರಿತ್ತರು. ಕಳೆದ 8 ತಿಂಗಳಲ್ಲಿ ಈ ವಿಚಾರವಾಗಿ 10 ಬಾರಿ ಸ್ಲಂ ಬೋರ್ಡ್​ಗೆ ಭೇಟಿ ನೀಡಿದ್ದೇವೆ. ಈಗಾಗಲೆ ಪರಿಚಯ ಪತ್ರ ಕೊಡಿಸಿದ್ದೇವೆ. 6 ತಿಂಗಳೊಳಗೆ ಹಕ್ಕುಪತ್ರ ವಿತರಿಸಲಾಗುತ್ತದೆಂಬ ಅಭಯ ಶಾಸಕ ಬೈರತಿ ಸುರೇಶ್ ಹಾಗೂ ಪಾಲಿಕೆ ಸದಸ್ಯ ಆನಂದ್​ಕುಮಾರ್​ರಿಂದ ದೊರೆಯಿತು.

ಶಾಸಕರ ಅಭಯ

ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾದ ಜನತಾದರ್ಶನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಬೈರತಿ ಸುರೇಶ್, ವಿಧಾನಸಭಾ ಕ್ಷೇತ್ರದಲ್ಲಿನ ಸ್ಥಳೀಯ ಬಿಬಿಎಂಪಿ ವಾರ್ಡ್​ಗಳಲ್ಲಿ ಶಾಸಕರ ಗಮನಕ್ಕೆ ಬಾರದ ಹಲವು ಸಮಸ್ಯೆಗಳಿರುತ್ತವೆ. ಕುಂದು-ಕೊರತೆ ತಿಳಿದುಕೊಳ್ಳಲು ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಜನತಾ ದರ್ಶನ ಜನ ಮತ್ತು ಜನಪ್ರತಿನಿಧಿಗಳ ನಡುವೆ ಸೇತುವೆ ರೀತಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಶೇರಿಂಗ್ ಆಟೋಗೆ ಆಗ್ರಹ

ಬಸ್ಸಿನ ವ್ಯವಸ್ಥೆಯಿಲ್ಲದಿದೆ ಮುಖ್ಯ ರಸ್ತೆಗೆ ಹೋಗ ಬೇಕು. ಖಾಸಗಿ ವಾಹನ ಮುಖ್ಯ ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಬೇಕು. ಇದರಿಂದ ಟ್ರಾಫಿಕ್ ಸಮಸ್ಯೆ ಕೂಡ ಉದ್ಭವ ವಾಗಿದೆ. ಹೀಗಾಗಿ ಬಸ್ ವ್ಯವಸ್ಥೆ ಆಗದಿದ್ದರೆ ಶೇರಿಂಗ್ ಆಟೋವನ್ನಾದರೂ ಪರಿಚಯಿಸಲು ಆನಂದನಗರ ನಿವಾಸಿಗಳು ಆಗ್ರಹಿಸಿದರು.

ಸಮಸ್ಯೆ ಪರಿಹರಿಸಲು ಕಾಲಮಿತಿ

ಪ್ರದೇಶದಲ್ಲಿನ ಮೂಲಸೌಕರ್ಯ ಕುರಿತು ವೈಜ್ಞಾನಿಕವಾಗಿ ಯೋಜನೆ ರೂಪಿಸದ ಅಧಿಕಾರಿಗಳನ್ನು ಶಾಸಕರ ಸಮ್ಮುಖದಲ್ಲೇ ತರಾಟೆ ತೆಗೆದುಕೊಂಡ ಜನರು, ತಮ್ಮ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರದ ಬೇಡಿಕೆಯಿಟ್ಟರು. ಪ್ರದೇಶದ ಅಭಿವೃದ್ಧಿಗೆ ಬೇಕಾದ ಸಲಹೆಯನ್ನೂ ನೀಡಿದರು. ಈ ಮೂಲಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ಯಶಸ್ವಿಯಾಯಿತು.

ತ್ಯಾಜ್ಯ ಘಟಕ ತೆರವು

ವಸತಿ ಪ್ರದೇಶದ ನಡುವೆ ಇರುವ ಘನ ತ್ಯಾಜ್ಯ ಘಟಕದಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದ್ದು, ಹಸಿ ತ್ಯಾಜ್ಯ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುತ್ತಿರುವ ಬಗ್ಗೆ ಜನರು ದೂರು ನೀಡಿದರು. ಘಟಕ ಸ್ಥಳಾಂತರಿಸುವ ಬಗ್ಗೆ ಪರಿಶೀಲಿಸುವುದಾಗಿ ಬಿಬಿಎಂಪಿ ಸದಸ್ಯ ಆನಂದ್ ಕುಮಾರ್ ಭರವಸೆ ನೀಡಿದರು.

ಸಂಚಾರ ಪೊಲೀಸರಿಂದ ಜಾಗೃತಿ

ಆರ್.ಟಿ ನಗರ ಸಂಚಾರ ಪೊಲೀಸರು ನೆರೆದಿದ್ದವರಿಗೆ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಸಂಚಾರ ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಎಂದು ಅರಿವು ಮೂಡಿಸಲು ಕರಪತ್ರ ವಿತರಿಸಿದರು. ಜತೆಗೆ, ವಿಜಯವಾಣಿ ಹಾಗೂ ದಿಗ್ವಿಜಯ ಕಾರ್ಯಕ್ರಮದ ಬಗ್ಗೆ ಟ್ವಿಟರ್ ಖಾತೆಯಲ್ಲೂ ಪೊಲೀಸರಿಂದ ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿರುವುದಾಗಿ ಪೋಸ್ಟ್ ಮಾಡಿದ್ದರು.

ಸ್ಥಳದಲ್ಲೇ ಬಹುಮಾನ

ಜನತಾದರ್ಶನದಲ್ಲಿ ಭಾಗವಹಿಸಿದ ನಾಗರಿಕರಿಗೆ ಸ್ಥಳದಲ್ಲೆ ಬಹುಮಾನ ಗೆಲ್ಲುವ ಅವಕಾಶವನ್ನು ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಕಲ್ಪಿಸಿತ್ತು. ಶಾಸಕ ಬಿ.ಎಸ್. ಸುರೇಶ್ ಚೀಟಿ ಎತ್ತುವ ಮೂಲಕ ಐವರು ಅದೃಷ್ಟಶಾಲಿಗಳನ್ನು ಘೋಷಿಸಿದರು. ಯು.ಸಿ. ಅಶೋಕ್, ವಿ. ಚಕ್ರವರ್ತಿ, ವಿಘ್ನೇಶ್, ಪ್ರವೀಣ್ ಹಾಗೂ ಇಮ್ರಾನ್ ಬಾಷಾ ಬಹುಮಾನ ಪಡೆದವರು. ಪ್ರತಿ ಜನತಾ ದರ್ಶನದಲ್ಲೂ ಇದೊಂದು ವಿಶೇಷ ಆಕರ್ಷಣೆಯಾಗಿರಲಿದೆ.