More

    ಬಿ.ಇಡಿ ಪದವಿ ಪಡೆಯದ ಜೆಒಸಿ ಉಪನ್ಯಾಸಕರಿಗೆ ಸಂಕಷ್ಟ; ಡಿಗ್ರಿ ಇಲ್ಲದಿದ್ದರೆ ಕೆಲಸದಿಂದ ವಿಮುಕ್ತಿ

    ಎನ್.ಎಲ್.ಶಿವಮಾದು ಬೆಂಗಳೂರು
    ವೃತ್ತಿ ಶಿಕ್ಷಣ ಇಲಾಖೆ (ಜೆಒಸಿ)ಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ವಿಲೀನವಾಗಿ ಕಾರ್ಯನಿರ್ವಹಿಸುತ್ತಿರುವ 161 ಉಪನ್ಯಾಸಕರು 2 ವರ್ಷಗಳ ಬಿ.ಇಡಿ ಪದವಿಯನ್ನು ವ್ಯಾಸಂಗ ಮಾಡುವಂತೆ ಆದೇಶ ಹೊರಡಿಸಲಾಗಿದ್ದು, ಇದಕ್ಕೆ ಉಪನ್ಯಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    2006ರಕ್ಕಿಂತ ಹಿಂದೆ ನೇಮಕವಾದ ಉಪನ್ಯಾಸಕರಿಗೆ ಅಂದಿನ ಕನಿಷ್ಠ ಮಾನದಂಡ ಸ್ನಾತಕೋತ್ತರ ಪದವಿಯಾಗಿತ್ತು. ಅದರಂತೆ ಶಿಕ್ಷಣ ಪಡೆದಿದ್ದೇವೆ. ಅಲ್ಲದೆ, 2008ಕ್ಕಿಂತ ಮೊದಲು ವಿಲೀನಗೊಳಿಸಿರುವ ಅನುದಾನಿತ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೂ ಬಿ.ಇಡಿ ಪದವಿಯಿಂದ ವಿನಾಯಿತಿ ನೀಡಲಾಗಿದೆ.

    ಜೆಒಸಿ ಉಪನ್ಯಾಸಕರನ್ನು 2011ರಲ್ಲಿ ವಿಲೀನಗೊಳಿಸಿದ್ದು, 12 ವರ್ಷಗಳ ಬಳಿಕ ಶಿಕ್ಷಣ ಇಲಾಖೆಯು ಈಗ ಬಿ.ಇಡಿ ಪದವಿ ಮಾಡಬೇಕೆಂಬ ನಿಯಮ ಜಾರಿಗೊಳಿಸಿರುವುದು ಅವೈಜ್ಞಾನಿಕವಾಗಿದೆ. 161 ಜನರ ಪೈಕಿ ಹೆಚ್ಚಿನ ಮಂದಿ ನಿವೃತ್ತಿ ಅಂಚಿನಲ್ಲಿದ್ದಾರೆ. ಇಂತಹ ಉಪನ್ಯಾಸಕರು ಹೇಗೆ ಪದವಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದು ಪ್ರಶ್ನಿಸಿದ್ದಾರೆ.

    ಸರ್ಕಾರದ ಆದೇಶವೇನಿದೆ?: ಕರ್ನಾಟಕ ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸಗಳ ನೌಕರರರನ್ನು ವಿಲೀನಗೊಳಿಸುವ ಅಧಿನಿಯಮ-2011 ಅನ್ನು ಜಾರಿಗೊಳಿಸಲಾಗಿದೆ. ಅದರಂತೆ ಜೆಒಸಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದವರನ್ನು ಖಾಲಿ ಹುದ್ದೆಗೆ ಲಭ್ಯತೆಗೆ ಅನುಗುಣವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ವಿಲೀನಗೊಳಿಸಲಾಗಿದೆ.

    ವಿಲೀನಗೊಂಡಿರುವ ಉಪನ್ಯಾಸಕರಿಗೂ ಕರ್ನಾಟಕ ನಾಗರಿಕ ಸೇವಾ (ಪರಿವೀಕ್ಷಣಾ) ನಿಯಮಗಳು-1977 ಅನ್ವಯವಾಗಲಿವೆ. ಈ ಆದೇಶದ ಪ್ರಕಾರ 4 ವರ್ಷದೊಳಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಬಿ.ಇಡಿ ಪದವಿ ಹೊಂದಿರಬೇಕಾಗುತ್ತದೆ. ಷರತ್ತು ಪೂರೈಸದಿದ್ದಲ್ಲಿ ಸೇವೆಯಿಂದ ವಿಮುಕ್ತಿಗೊಳಿಸಲಾಗುತ್ತದೆ ಎಂಬ ನಿಯಮವಿದೆ.

    ವಿಲೀನಗೊಂಡ ಉಪನ್ಯಾಸಕರಲ್ಲಿ ಸರ್ಕಾರಿ ಪಿಯು ಕಾಲೇಜಿನ 79 ಮತ್ತು ಅನುದಾನಿತ ಕಾಲೇಜುಗಳ 82 ಉಪನ್ಯಾಸಕರು ಬಿ.ಇಡಿ ಪದವಿ ಪೂರ್ಣಗೊಳಿಸಿಲ್ಲ. ಈ ಉಪನ್ಯಾಸಕರನ್ನು 2 ವರ್ಷಗಳ ಅವಧಿಯ ಬಿ.ಇಡಿ ಪದವಿ ವ್ಯಾಸಂಗಕ್ಕಾಗಿ ವೇತನ ಸಹಿತವಾಗಿ ನಿಯೋಜಿಸಲು ಹಾಗೂ ನಿಯೋಜನೆಯಿಂದ ತೆರವಾಗುವ ಹುದ್ದೆಗಳಿಗೆ ನೇಮಿಸುವ ಅತಿಥಿ ಉಪನ್ಯಾಸಕರಿಗೆ ವೇತನವನ್ನು ನಿಯೋಜನೆಗೊಳ್ಳುವ ಉಪನ್ಯಾಸಕರ ವೇತನದಲ್ಲಿಯೇ ಭರಿಸಬೇಕೆಂಬ ಷರತ್ತು ವಿಧಿಸಿದೆ. ಉಪನ್ಯಾಸಕರ ವೇತನದಲ್ಲಿಯೇ ಅತಿಥಿ ಉಪನ್ಯಾಸಕರಿಗೆ ವೇತನ ಭರಿಸಬೇಕು. ಇದಕ್ಕೆ ನಿಯೋಜನೆ ಮೇಲೆ ತೆರಳುವ ಉಪನ್ಯಾಸಕರಿಂದ ಒಪ್ಪಿಗೆ/ಮುಚ್ಚಳಿಕೆ ಪತ್ರವನ್ನು ಪಡೆಯಬೇಕು. ಉಪನ್ಯಾಸಕರು ತಮ್ಮ ಸ್ವಂತ ಖರ್ಚಿನಲ್ಲಿಯೇ ಬಿ.ಇಡಿ ವ್ಯಾಸಂಗ ಪೂರ್ಣಗೊಳಿಸಬೇಕು. ಇದಕ್ಕೆ ಇಲಾಖೆಯಿಂದ ಯಾವುದೇ ರೀತಿಯ ಶುಲ್ಕವನ್ನು ಭರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

    ಪಾಠ ಕೇಳುವ ಪೀಕಲಾಟ: ಪ್ರಸ್ತುತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರು ಕನಿಷ್ಠ 15ರಿಂದ 20 ವರ್ಷಗಳ ಕಾಲ ತರಗತಿಗಳಲ್ಲಿ ಬೋಧನೆ ಮಾಡಿದ್ದಾರೆ. ಅಂತಹ ಉಪನ್ಯಾಸಕರು ನಿವೃತ್ತಿಯಾಗಲು ಬಯಸುತ್ತಿರುವ ಕಾಲಘಟ್ಟದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಕಾಲೇಜಿನಲ್ಲಿ ಕುಳಿತು ಪಾಠ ಕೇಳುವ ಪೀಕಲಾಟ ಎದುರಾಗಿದೆ.

    ಉಪನ್ಯಾಸಕರಾಲು ಬಯಸುವವರು ಕಡ್ಡಾಯವಾಗಿ ಬಿ.ಇಡಿ ಮಾಡಿರಬೇಕು ಎಂಬ ನಿಯಮವಿದೆ. ವಿಲೀನಗೊಂಡ ಉಪನ್ಯಾಸಕರಿಗೂ ಈ ನಿಯಮ ಅನ್ವಯವಾಗಲಿದೆ. ಸರ್ಕಾರದ ಹಂತದಲ್ಲಿ ರ್ಚಚಿಸಿಯೇ ಆದೇಶ ಹೊರಡಿಸಿರುವುದರಿಂದ ಬಿ.ಇಡಿ ಪೂರ್ಣಗೊಳಿಸಲೇಬೇಕಿದೆ.

    | ಸಿಂಧು ಬಿ. ರೂಪೇಶ್ ಪಿಯು ಇಲಾಖೆ ನಿರ್ದೇಶಕಿ

    ಹಿಂದಿನ ಸರ್ಕಾರವು ಒಂದು ಬಾರಿಗೆ ಅನ್ವಯವಾಗುವಂತೆ ’ವಿಶೇಷ ಪ್ರಕರಣ’ವೆಂದು ಪರಿಗಣಿಸಿ ಬಿ.ಇಡಿ ಪದವಿಯಿಂದ ವಿನಾಯಿತಿ ನೀಡಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳುವ ಭರವಸೆ ನೀಡಿತ್ತು. ಆದ್ದರಿಂದ ಹಾಲಿ ಸರ್ಕಾರ ಕೂಡ ಬಿ.ಇಡಿ ಪದವಿಯಿಂದ ವಿನಾಯಿತಿ ನೀಡಬೇಕು.

    | ಹೆಸರೇಳಲಿಚ್ಚಿಸದ ಉಪನ್ಯಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts