ಕಷ್ಟ ಸುಖ ಕ್ಷಣಿಕ, ಪರಮ ಸತ್ಯವೇ ಶಾಶ್ವತ

ಶಿವಮೊಗ್ಗ: ಸತ್ಸಂಗದಲ್ಲಿ ಬಡವ-ಶ್ರೀಮಂತ, ಜ್ಞಾನಿ-ಅಜ್ಞಾನಿ ಎಂಬ ತಾರತಮ್ಯವಿಲ್ಲ. ಹೀಗಾಗಿ ಅಲ್ಲಿ ಪ್ರಶಾಂತ ಮನೋಭಾವ ಸೃಷ್ಟಿಯಾಗುತ್ತದೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1059ನೇ ಜಯಂತ್ಯುತ್ಸವ ಪ್ರಯುಕ್ತ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಎದ್ದ ತೆರೆಗಳು ಎಂದಿಗೂ ಶಾಶ್ವತವಲ್ಲ. ಕಷ್ಟ, ಸುಖ ಹಾಗೂ ಶ್ರೀಮಂತಿಕೆ ಎಂಬುದು ಕ್ಷಣಿಕ. ಪರಮ ಸತ್ಯವೊಂದೇ ಶಾಶ್ವತ. ಇದರ ಅನುಭೂತಿ ನೀಡುವುದೇ ಸತ್ಸಂಗ ಎಂದರು.

ಶುದ್ಧ ಮನಸ್ಸಿನ ಸತ್ಯದ ಸಂಗವೇ ಸತ್ಸಂಗ. ಸತ್ಸಂಗದಿಂದ ಮಾತ್ರ ಪರಮಸುಖ ಪಡೆಯಲು ಸಾಧ್ಯ. ಅದನ್ನೇ ಅಕ್ಕಮಹಾದೇವಿ ಹೇಳಿದ್ದು. ಯಾವುದೇ ಸುಖ ಸಂಪತ್ತಿಲ್ಲದೆಯೇ ಅಕ್ಕಮಹಾದೇವಿ ತನ್ನನ್ನು ಪರಮಸುಖಿ ಎಂದು ಹೇಳಿಕೊಂಡಳು. ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದ, ಯಾವುದಕ್ಕೂ ಮನಸ್ಸನ್ನು ಅಂಟಿಸಿಕೊಳ್ಳದ ಅತ್ಯಂತ ನಿರ್ಮಲ, ಪವಿತ್ರವಾದ ಅದ್ಭುತ ಜೀವನ ಆಕೆಯದ್ದಾಗಿತ್ತು ಎಂದು ತಿಳಿಸಿದರು.

ಸಂಪತ್ತು, ಅಧಿಕಾರ ಬರುವಾಗ ಅದನ್ನು ತ್ಯಜಿಸಿ ದೇವರ ಹತ್ತಿರ ಹೋಗುವ ಹಾದಿ ಹುಡುಕಿಕೊಂಡವಳು ಆಕೆ. ಸುಂದರ ಮನೆಯಿರಲಿಲ್ಲ. ಅಂತಸ್ತಿಲ್ಲ. ಸೇವೆ ಮಾಡುವವರಿಲ್ಲ. ದೇಗುಲದಲ್ಲೇ ಮಲಗಿ ಸಮಯ ಕಳೆದರೂ ಪರಮಸುಖಿ ಎಂದು ಹೇಳಿಕೊಂಡಳು. ಇದಕ್ಕೆ ಕಾರಣ ಅನುಭಾವಿಗಳ ಸಂಗ ಎಂದು ತನ್ನ ವಚನದ ಮೂಲಕ ಆಕೆ ತಿಳಿಸಿದ್ದಾರೆ ಎಂದು ಹೇಳಿದರು.

ಎರಡು ಶಿಲೆಗಳ ಸಂಗದಿಂದ ಅಗ್ನಿ ಸೃಷ್ಟಿಯಾಗುತ್ತದೆ. ಒಂದು ಬೀಜ ಮೊಳಕೆಯೊಡೆಯಲು ಮಣ್ಣು, ಸೂರ್ಯನ ಕಿರಣದ ಸಂಗ ಬೇಕು. ದೇಹ ಸೃಷ್ಟಿಗೆ ಪಂಚೇಂದ್ರಿಯಗಳ ಸಂಗ ಅವಶ್ಯ. ಸುಖ ದೀರ್ಘ ಕಾಲ ಇರುವುದಿಲ್ಲ. ಪರಮಸುಖ ಮಾತ್ರ ಶಾಶ್ವತ ಎಂದರು.

ಅಸತ್ಯ, ಅಶಾಂತಿ, ಕುರೂಪದ ಸಂಗದಿಂದ ಮನಸ್ಸು ಬಾಡುತ್ತದೆ. ಹೀಗಾಗಿ ಅವುಗಳ ಸಂಗ ಮಾಡಬಾರದು. ವಚನಗಳಲ್ಲಿನ ಶಬ್ಧಗಳ ಸಂಗ ಅದ್ಭುತ ಅನುಭೂತಿ ನೀಡುತ್ತದೆ. ಎಲ್ಲ ಶರಣರು, ತತ್ವಜ್ಞಾನಿಗಳು, ಮೇದಾವಿಗಳು ಎಲ್ಲ ಕಾಲದಲ್ಲೂ ಸತ್ಸಂಗಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದು ತಿಳಿಸಿದರು.

ಹಸಿದಾಗ ಊಟ, ಬಾಯಾರಿಕೆ ಆದಾಗ ನೀರು ಸಾಮಾನ್ಯ ಸೌಖ್ಯ ಅದೇನು ಶಾಶ್ವತವಾದುದ್ದಲ್ಲ. ಅದು ಬಂದು ಹೋಗುತ್ತವೆ. ಸಂಬಂಧ ತಪ್ಪಿದಾಗ ಸುಖ ಮರೆಯಾಗುತ್ತದೆ. ಪರಮ ಸೌಖ್ಯ ಭಾವನಾತ್ಮಕ ಅಲ್ಲ. ಅನುಭಾವದ ಸೌಖ್ಯವದು. ಹಾಗೆ ಬಂದ ಸೌಖ್ಯಕ್ಕೆ ಸತ್ಸಂಗವೇ ಕಾರಣ.

| ಶ್ರೀ ಸಿದ್ದೇಶ್ವರ ಸ್ವಾಮೀಜಿ