Friday, 16th November 2018  

Vijayavani

Breaking News

ಬಜೆಟ್​ಗೆ ದೋಸ್ತಿ ಶಾಸಕರಿಂದಲೇ ಅಪಸ್ವರ

Wednesday, 11.07.2018, 3:04 AM       No Comments

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್​ನ ಪ್ರಮುಖ ಅಂಶಗಳ ಬಗ್ಗೆ ಮೈತ್ರಿ ಪಕ್ಷದಲ್ಲೇ ಅಪಸ್ವರ ಕೇಳಿ ಬಂದಿದೆ. ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಮೈತ್ರಿ ಪಕ್ಷದ ಶಾಸಕರೇ ಸರ್ಕಾರವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.

ತೈಲದ ಮೇಲಿನ ಕರ ಭಾರ, ಅನ್ನಭಾಗ್ಯದ ಅಕ್ಕಿ ಕಡಿತದ ಬಗ್ಗೆ ಸಮ್ಮಿಶ್ರ ಸರ್ಕಾರದ ಶಾಸಕರಿಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಶ್ರೀಸಾಮಾನ್ಯನ ದೈನಂದಿನ ಬದುಕಿನ ಮೇಲೆ ಗುರುತರ ಪರಿಣಾಮ ಬೀರುವ ಈ ಅಂಶಗಳನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಅಕ್ಕಿ ಕಡಿತಕ್ಕೆ ವಿರೋಧ: ಕಾಂಗ್ರೆಸ್​ನ ಡಾ.ಸುಧಾಕರ್ ಮಾತನಾಡಿ, ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯದ ಅಕ್ಕಿಯನ್ನು 2 ಕೆಜಿ ಇಳಿಕೆ ಮಾಡಿರುವುದು ಸರಿಯಲ್ಲ. 2 ಕೆಜಿ ಕೊಡುವುದರಿಂದ ಸರ್ಕಾರಕ್ಕೇನೂ ದೊಡ್ಡ ಹೊರೆಯಾಗುವುದಿಲ್ಲ. ಬೇಕಿದ್ದರೆ ಹಿಂದಿನ ಸರ್ಕಾರದ 7 ಕೆಜಿ ಅಕ್ಕಿ ಜತೆಗೆ ಇನ್ನೂ 1 ಕೆಜಿ ಹೆಚ್ಚು ಕೊಡಿ. ಆದರೆ ಬಡವರ ಹೊಟ್ಟೆ ಮೇಲೆ ಹೊಡೆಯುವುದು ಬೇಡ ಎಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರ, ಕೋಲಾರ ಸೇರಿ ಸುಮಾರು 1 ಕೋಟಿ ಜನರ ಜೀವನದ ಪ್ರಶ್ನೆಯಾಗಿರುವ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಳ್ಳುವಲ್ಲಿ ವಿಳಂಬವಾಗುತ್ತಿದೆ. 2009ರಲ್ಲೇ ಸಂಸದ ವೀರಪ್ಪ ಮೊಯ್ಲಿ ಐದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಇನ್ನೂ ಆಗಿಲ್ಲ, ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಇಂಧನ ಬೆಲೆ ಹೆಚ್ಚಳಕ್ಕೆ ಬೇಸರ

ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಮಾತನಾಡಿ, ಇಂಧನದ ಮೇಲಿನ ಕರಭಾರ ಜನಸಾಮಾನ್ಯರಿಗೆ ನೋವು ಕೊಡುವಂತಹದ್ದು. ಸರ್ಕಾರ ಇದನ್ನು ವಾಪಸ್ ಪಡೆಯಬೇಕು ಎಂದು ಸಲಹೆ ಮಾಡಿದರು. 95 ಕಿಮೀ ಮೆಟ್ರೋ ರೈಲು, ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟೇಷನ್ ಸೆಂಟರ್, ಶೋಷಿತ ಸಮುದಾಯಗಳ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ, ಧರ್ಮಪೀಠಗಳಿಗೆ 25 ಕೋಟಿ ರೂ. ನೆರವು, ಮಾತೃಶ್ರೀ ಯೋಜನೆ ಫಲಾನುಭವಿಗೆ ಆರು ತಿಂಗಳೂ ತಲಾ 6 ಸಾವಿರ ರೂ. ಇವೆಲ್ಲ ಮೆಚ್ಚುಗೆ ಅಂಶಗಳು. ಆದರೆ, ತೈಲದ ಮೇಲಿನ ತೆರಿಗೆ ಭಾರ ಆರ್ಥಿಕ ವ್ಯವಸ್ಥೆ ಮೇಲೆ ಅದರಲ್ಲೂ ಬಡವರ ನಿತ್ಯ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿದರು.

ಬದುಕಿನ ಪ್ರಶ್ನೆ

ಇಂದಿನ ದಿನಗಳಲ್ಲಿ ಇಂಗ್ಲಿಷ್ ಅನಿವಾರ್ಯ. ಇದು ಬದುಕಿನ ಪ್ರಶ್ನೆ. ಸಾಹಿತಿಗಳು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ಸಾಹಿತಿಗಳ ಮಕ್ಕಳು ಕನ್ನಡ ಶಾಲೆಗೆ ಹೋಗುತ್ತಾರಾ ಎಂದು ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಪ್ರಶ್ನಿಸಿದರು. ಶಾಲೆ ಏಕೆ ಮುಚ್ಚುತ್ತಿವೆ? ಯಾರು ಜವಾಬ್ದಾರಿ ಎಂಬ ಬಗ್ಗೆ ಯೋಚಿಸಬೇಕಿದೆ. ಶಾಲಾ ಶಿಕ್ಷಣ ಸರಿಯಾಗಿ ಚರ್ಚೆಯಾಗಬೇಕು. ಸರ್ಕಾರಿ ಶಾಲೆ ಮುಚ್ಚುವುದರಿಂದ ಕನ್ನಡ ಅವನತಿಯತ್ತ ಹೋಗುತ್ತದೆ ಎಂದು ಎಚ್ಚರಿಸಿದರು.

ದಲ್ಲಾಳಿಗಳೇ ತುಂಬಿದ್ದಾರೆ…

ಎಂಎಸ್ ಬಿಲ್ಡಿಂಗ್ ಶಾಪಿಂಗ್ ಕಾಂಪ್ಲೆಕ್ಸ್ ಆಗಿದೆ. ಚಡ್ಡಿ, ಬಟ್ಟೆ, ತರಕಾರಿ, ಹಣ್ಣು ಮಾರಾಟ ಮಾಡುತ್ತಾರೆ. ಯಾವಾಗ ಕೇಳಿದರೂ ಕಚೇರಿಯಲ್ಲಿ್ಲ ಅಧಿಕಾರಿಗಳೇ ಇರುವುದಿಲ್ಲ ಎಂದು ಜೆಡಿಎಸ್​ನ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಸೌಧ, ವಿಕಾಸಸೌಧ ಯಾವ ಸೌಧವನ್ನೇ ತೆಗೆದುಕೊಳ್ಳಿ ದಲ್ಲಾಳಿಗಳು ತುಂಬಿರುತ್ತಾರೆ. ಎಲ್ಲವೂ ಮಂತ್ರಿಗಳಿಂದಲೇ ಆಗಬೇಕೆ? ಅಧಿಕಾರ ವಿಕೇಂದ್ರೀಕರಣ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಒಂದು ದಿನ ಮುಖ್ಯಮಂತ್ರಿಗಳು ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್ ಗೇಟ್ ಹಾಕಿ ಒಳಗಿರುವ ಜನರ ಸಮಸ್ಯೆಗಳನ್ನು ಆಲಿಸಬೇಕು. ಆಗ ಏನಾಗುತ್ತಿದೆ ಎಂಬುದು ತಿಳಿಯುತ್ತದೆ. ಸರ್ಕಾರದಿಂದ ಜನಸಾಮಾನ್ಯರಿಗೆ ಸರಾಗವಾಗಿ ಕೆಲಸವಾಗಲು ಇರುವ ಅಡೆತಡೆ ಕುರಿತು ರ್ಚಚಿಸಲು 15 ದಿನ ಅಧಿವೇಶನ ಕರೆಯಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿಗೆ -ಠಿ;6,420 ಕೋಟಿ

ಬೆಂಗಳೂರು: ಬೆಂಗಳೂರು-ಮೈಸೂರು ರಸ್ತೆಯನ್ನು 6,420 ಕೋಟಿ ರೂ. ವೆಚ್ಚದಲ್ಲಿ 10 ಪಥದ ರಸ್ತೆಯನ್ನಾಗಿ 2 ಹಂತದಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಸಚಿವ ಎಚ್.ಡಿ.ರೇವಣ್ಣ ಮೇಲ್ಮನೆಯಲ್ಲಿ ತಿಳಿಸಿದ್ದಾರೆ. ಜೆಡಿಎಸ್​ನ ಸಂದೇಶ್ ನಾಗರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ಪ್ಯಾಕೇಜ್ 1ರಲ್ಲಿ 3,501 ಕೋಟಿ ರೂ. ವೆಚ್ಚದಲ್ಲಿ 74 ಕಿಮೀ, ಪ್ಯಾಕೇಜ್ 2ರಲ್ಲಿ 2,919 ಕೋಟಿ ರೂ. ವೆಚ್ಚದಲ್ಲಿ ಇನ್ನುಳಿದ 74 ಕಿಮೀ ಅಭಿವೃದ್ಧಿಪಡಿಸಲಾಗುವುದು ಎಂದರು. ಪ್ಯಾಕೇಜ್ 1ರಲ್ಲಿ 348 ಹೆಕ್ಟೇರ್ ಪೈಕಿ ಶೇ.76, ಪ್ಯಾಕೇಜ್ 2ರಲ್ಲಿ 376 ಹೆಕ್ಟೇರ್ ಪೈಕಿ ಶೇ.67 ಭೂ ಸ್ವಾಧೀನವಾಗಿದೆ. ರಸ್ತೆ ಕಾಮಗಾರಿ ಚುರುಕುಗೊಳಿಸಲು ಈಗಾಗಲೆ ಸಿಎಂ ಅಧ್ಯಕ್ಷತೆಯಲ್ಲಿ ಕಂದಾಯ, ಇಂಧನ ಇಲಾಖೆ ಸೇರಿ ಎಲ್ಲ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ಹೇಳಿದರು.

ಹಂಪ್ಸ್ ತೆಗೆಸಲು ಕ್ರಮ: ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಉಬ್ಬು (ಹಂಪ್ಸ್) ನಿರ್ವಿುಸುವಂತಿಲ್ಲ. ಅವೈಜ್ಞಾನಿಕವಾಗಿ ಹಾಕಲಾಗಿರುವ ಹಂಪ್ಸ್ ತೆರವಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ರೇವಣ್ಣ ತಿಳಿಸಿದ್ದಾರೆ. ತಾರಾ ಅನೂರಾಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಥಳೀಯರು ಅಲ್ಲಲ್ಲಿ ಉಬ್ಬುಗಳನ್ನು ನಿರ್ವಿುಸಿಕೊಳ್ಳುತ್ತಿರುವುದು ಸಮಸ್ಯೆಯಾಗಿದೆ. ದಕ್ಷಿಣ ವಲಯದಲ್ಲಿ 782 ಲಕ್ಷ ರೂ. ವೆಚ್ಚದಲ್ಲಿ 15 ಸೇತುವೆ, 272 ಲಕ್ಷ ರೂ. ವೆಚ್ಚದಲ್ಲಿ 96 ಸೇತುವೆ ಮತ್ತು ಪುನರ್ ನಿರ್ವಣಕ್ಕಾಗಿ 1,427 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು.

ನೈಸ್ ಆಗಿ ಜಾರಿದ ರೇವಣ್ಣ!

ಬೆಂಗಳೂರು: ನೈಸ್ ಯೋಜನೆ ಬಗ್ಗೆ ಮೇಲ್ಮನೆಯಲ್ಲಿ ಉತ್ತರಕ್ಕಾಗಿ ಪಟ್ಟು ಹಿಡಿದರೂ ಸೊಪು್ಪ ಹಾಕದ ಲೋಕೋಪಯೋಗಿ ಸಚಿವ ರೇವಣ್ಣ ನೈಸಾಗಿಯೇ ತಪ್ಪಿಸಿಕೊಂಡರು. ರಸ್ತೆ ಬಗ್ಗೆ ಚರ್ಚೆ ನಡೆಯುವ ಹೊತ್ತಿನಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್​ನ ಉಗ್ರಪ್ಪ, ನೈಸ್ ಯೋಜನೆ ಒಪ್ಪಂದವನ್ನು ಮೊದಲು ರದ್ದು ಮಾಡಬೇಕು. ಆ ತಾಕತ್ತು ರೇವಣ್ಣ ಅವರಿಗಿದೆ ಎಂದರು. ಇದಕ್ಕೆ ವಿರೋಧ ಪಕ್ಷದ ನಾಯಕರು ಧ್ವನಿಗೂಡಿಸಿದರು. ನೈಸ್ ಯೋಜನೆ ಸಂಬಂಧದ ಪ್ರಶ್ನೆ ಇಲ್ಲಿ ಕೇಳಿಲ್ಲ. ಸದಸ್ಯರು ಕೇಳಿದ ಪ್ರಶ್ನೆಗೆ ಮಾತ್ರ ನಾನು ಉತ್ತರಿಸುತ್ತಿದ್ದೇನೆ. ಉಗ್ರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ, ಅದು ನೀಡುವ ವರದಿ ಬಗ್ಗೆ ಚರ್ಚೆ ನಡೆಸೋಣ ಎಂದು ಜಾಣ್ಮೆಯ ಉತ್ತರ ನೀಡಿ ನುಣಚಿಕೊಂಡರು. ರೇವಣ್ಣರಿಂದ ನೈಸ್ ಬಗ್ಗೆ ಹೇಳಿಕೆ ಕೊಡಿಸಬೇಕು ಎಂದು ಆಡಳಿತ, ವಿರೋಧ ಪಕ್ಷದ ಸದಸ್ಯರು ಶತ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ.

ಇನ್ನು ಸುಮ್ನಿರಲ್ಲ!

ನೋಡಿ ನನ್ನ ಸೌಜನ್ಯ ದುರುಪಯೋಗ ಪಡಿಸಿಕೊಂಡರೆ, ಇನ್ನು ಸುಮ್ಮನಿರುವುದಿಲ್ಲ ಎಂದು ವಿರೋಧ ಪಕ್ಷದ ಸದಸ್ಯರ ಮೇಲೆ ಸಭಾಪತಿ ಗದರಿದರು. ಸಭಾಪತಿ ಚುನಾವಣೆ ಸಂಬಂಧ ಚರ್ಚೆ ಹೊತ್ತಿನಲ್ಲಿ ವಿರೋಧ ಪಕ್ಷದ ಮೇಲೆ ಗರಂ ಆಗಿದ್ದಲ್ಲದೆ, ನೀವು ಏನೇ ಚರ್ಚೆ ಮಾಡಬೇಕಿದ್ದರೂ ನಿಯಮಾವಳಿ ಪ್ರಕಾರ ಮಾಡಿ ಎಂದರು.

ಕೃಷಿ ಪಂಪ್​ಸೆಟ್ ಆರ್​ಆರ್ ಸಂಖ್ಯೆ ಸೇವಾ ಶುಲ್ಕ ಕೈ ಬಿಡಲು ಪರಿಶೀಲನೆ

ಬೆಂಗಳೂರು: ಕೃಷಿ ಪಂಪ್​ಸೆಟ್​ಗಳಿಗೆ ಆರ್​ಆರ್ ಸಂಖ್ಯೆ ಪಡೆಯಲು ಪಾವತಿಸಬೇಕಾಗಿರುವ 10 ಸಾವಿರ ರೂ.ಗಳ ಸೇವಾ ಶುಲ್ಕ ಕೈಬಿಡುವ ಸಂಬಂಧ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಸುರಪುರ ಕ್ಷೇತ್ರದ ಶಾಸಕ ನರಸಿಂಹ ನಾಯಕ್ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಹಿಂದೆ ನೀರಾವರಿ ಪಂಪ್​ಸೆಟ್ ಸಕ್ರಮಗೊಳಿಸುವ ವೇಳೆ ರೈತರಿಂದ ಒಂದು ಲಕ್ಷ ರೂ. ದಂಡದ ರೂಪದಲ್ಲಿ ಶುಲ್ಕ ಭರಿಸಿಕೊಳ್ಳಲಾಗುತ್ತಿತ್ತು. ಆದರೆ ರೈತರಿಗೆ ಇದು ಭಾರವಾಗುತ್ತದೆ ಎಂಬ ಕಾರಣಕ್ಕೆ ಸೇವಾ ಶುಲ್ಕವೆಂದು ಪರಿಗಣಿಸಿ 10 ಸಾವಿರ ರೂ. ಮಾತ್ರ ಭರಿಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಮರುಪ್ರಶ್ನೆ ಕೇಳಿದ ಶಾಸಕ ನಾಯಕ್, ರೈತರ ಪಂಪ್​ಸೆಂಟ್​ಗಳಿಗೆ ವಿದ್ಯುತ್ ನೋಂದಣಿ ಸಂಖ್ಯೆಗೆ (ಆರ್​ಆರ್ ನಂಬರ್) ವಿಧಿಸಲಾಗುತ್ತಿರುವ 10 ಸಾವಿರ ರೂ. ಕೂಡ ರೈತರಿಗೆ ಹೊರೆಯಾಗುತ್ತಿದೆ. ಇದನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

12,139 ಪೊಲೀಸ್ ಹುದ್ದೆ ಭರ್ತಿಗೆ ಕ್ರಮ

ಬೆಂಗಳೂರು: ರಾಜ್ಯದಲ್ಲಿ 12,139 ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮೇಲ್ಮನೆಯಲ್ಲಿ ತಿಳಿಸಿದ್ದಾರೆ. ಬಿಜೆಪಿಯ ಕೆ.ಪಿ.ನಂಜುಂಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಂಜೂರಾದ 1,12,975 ಹುದ್ದೆಗಳಲ್ಲಿ 31,694 ಹುದ್ದೆಗಳು ಖಾಲಿ ಇವೆ. ಕಳೆದ 5 ವರ್ಷದಲ್ಲಿ 23 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಹಂತ ಹಂತವಾಗಿ ಭರ್ತಿಗೆ ಕ್ರಮ ಜರುಗಿಸಲಾಗಿದೆ ಎಂದರು. ಆರ್ಡರ್ಲಿ ಪದ್ದತಿ ನಿಲ್ಲಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಉನ್ನತ ಅಧಿಕಾರಿಗಳ ನೆರವಿಗೆ ಪೊಲೀಸ್ ಪೇದೆಗಳನ್ನು ಬಳಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಗತ್ಯವಿರುವ ಕಡೆ ಸೇವೆಗಾಗಿ ಪ್ರತ್ಯೇಕ ನೇಮಕ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಸಿದರು.

ಮಾದಕ ವಸ್ತುಗಳ ಬಗ್ಗೆ ಕ್ರಮ: ರಾಜ್ಯದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ನಿರ್ಬಂಧ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಜರಿಗಿಸಲಾಗಿದೆ. ಇದಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹಣಕ್ಕಾಗಿ ಈ ಕುಕೃತ್ಯಗಳನ್ನು ಮಾಡಲಾಗುತ್ತಿದೆಯೇ ಹೊರತು, ಬೇರೆ ಯಾವುದೇ ಉದ್ದೇಶಗಳು ಜಾಲದ ಹಿಂದೆ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಕೆ.ಪ್ರತಾಪ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 3 ವರ್ಷದಲ್ಲಿ 2,484 ಪ್ರಕರಣಗಳು ದಾಖಲಾಗಿದ್ದು, 182 ಪ್ರಕರಣ ವಿಲೇ ಮಾಡಲಾಗಿದೆ. 142 ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, 40 ಪ್ರಕರಣ ಖುಲಾಸೆಗೊಂಡಿವೆ ಎಂದು ವಿವರಿಸಿದರು.

ನೇಮಕ ಬೆನ್ನಲ್ಲೇ ನಿಯೋಜನೆ

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಿಗೆ ನೇಮಕಗೊಂಡ 136ರಲ್ಲಿ 36 ಉಪನ್ಯಾಸಕರು ಉತ್ತರ ಕರ್ನಾಟಕದಿಂದ ಹಳೇ ಮೈಸೂರಿಗೆ ನಿಯೋಜನೆಗೊಂಡ ಪ್ರಕರಣ ವಿಧಾನಸಭೆಯಲ್ಲಿ ಮಂಗಳವಾರ ಚರ್ಚೆಗೆ ವಸ್ತುವಾಯಿತು. ಪ್ರಶ್ನೋತ್ತರ ವೇಳೆ ಜೆಡಿಎಸ್​ನ ಎಂ.ಶ್ರೀನಿವಾಸ್, ಬಸರಾಳು ಪದವಿ ಕಾಲೇಜು ಸ್ಥಾಪನೆ ಕುರಿತಂತೆ ಕೇಳಿದ ಪ್ರಶ್ನೆ ವೇಳೆ ಕಾಂಗ್ರೆಸ್​ನ ಬಿ.ಸಿ.ಪಾಟೀಲ್ ಈ ವಿಷಯ ಪ್ರಸ್ತಾಪಿಸಿದರು. ಇದಕ್ಕುತ್ತರಿಸಿದ ಸಚಿವ ಜಿ.ಟಿ.ದೇವೇಗೌಡ, ನಮ್ಮ ಸರ್ಕಾರ ಬಂದ ಮೇಲೆ ಯಾರನ್ನೂ ನಿಯೋಜನೆ ಮಾಡಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು. ಕಾಂಗ್ರೆಸ್​ನ ಉಮೇಶ್ ಯಾದವ್​ರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ, ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರು ಸೇರಿ 4,800 ವಿವಿಧ ಹುದ್ದೆಗಳು ಖಾಲಿ ಇದ್ದು ಆದ್ಯತೆ ಮೇಲೆ ಭರ್ತಿ ಮಾಡಲಾಗುವುದು ಎಂದರು. ಪದವಿ ಕಾಲೇಜುಗಳಲ್ಲಿ ಮೇ 30ರೊಳಗೆ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ ಜೂ.30ರೊಳಗೆ ಫಲಿತಾಂಶ ಪ್ರಕಟಿಸಲು ನಿರ್ದೇಶಿಸಲಾಗಿದೆಂದು ಜಿಟಿಡಿ ತಿಳಿಸಿದರು.

Leave a Reply

Your email address will not be published. Required fields are marked *

Back To Top