More

  ಮಾಡೋದೆಲ್ಲ ಮಾಡಿ ಹೆಣ್ಮಗು ಅಂದ್ರಾಯ್ತಾ? ಪರಿಚಿತನಿಗೆ ನಗ್ನ ಚಿತ್ರ ಕಳಿಸಿದ್ದ ಪ್ರಕರಣಕ್ಕೆ ಹೈಕೋರ್ಟ್ ಕಳವಳ

  ಪವಿತ್ರಾ ಕುಂದಾಪುರ ಬೆಂಗಳೂರು
  ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪರಿಚಿತನಾದ ವ್ಯಕ್ತಿಗೆ ನಗ್ನ ಚಿತ್ರ ಕಳುಹಿಸಿದ ಯುವತಿ, ಕೊನೆಗೆ ಆತನಿಂದಲೇ ಬ್ಲ್ಯಾಕ್‌ಮೇಲ್‌ಗೆ ಒಳಗಾದ ಪ್ರಕರಣದ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಪರಿಚಯವಾದ ನಾಲ್ಕೇ ದಿನದಲ್ಲಿ ನಗ್ನ ಚಿತ್ರ ರವಾನಿಸುವ ಅವಶ್ಯಕತೆಯಾದರೂ ಇತ್ತೇ? ಮಾಡೋದೆಲ್ಲ ಮಾಡಿ ಕೊನೆಗೆ ನಾನು ಹೆಣ್ಣು ಮಗು ಎಂದರಾದೀತೆ? ಎಂದು ಬುದ್ಧಿಮಾತು ಹೇಳಿದೆ.

  ಬೆಂಗಳೂರಿನ ಯುವತಿ ಕಳುಹಿಸಿದ್ದಳೆನ್ನಲಾದ ನಗ್ನ ಫೋಟೋ ಇರಿಸಿಕೊಂಡು ದುಡ್ಡಿಗಾಗಿ ಬೇಡಿಕೆಯಿಟ್ಟ ಆರೋಪವನ್ನು ದಾವಣಗೆರೆ ಜಿಲ್ಲೆ ಜಗಳೂರಿನ ಯುವಕ ಎದುರಿಸುತ್ತಿದ್ದಾನೆ. ಈತನಿಗೆ ಷರತ್ತುಬದ್ಧ ಜಾಮೀನು ನೀಡಿರುವ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಏಕಸದಸ್ಯ ಪೀಠ ಪ್ರಕರಣದ ಕುರಿತು ಬೇಸರ ಹೊರಹಾಕಿತು.

  ಯುವತಿ ಏಕೆ ತನ್ನ ನಗ್ನ ಚಿತ್ರ ಕಳುಹಿಸಬೇಕಿತ್ತು? ಪರಿಚಯವಾದ ನಾಲ್ಕು ದಿನದಲ್ಲೇ ನಗ್ನ ಚಿತ್ರ ರವಾನಿಸುವ ಅವಶ್ಯಕತೆಯಾದರೂ ಇತ್ತೇ? ಪ್ರಕರಣದಲ್ಲಿ ಸಂತ್ರಸ್ತೆ ಹೆಣ್ಣು ಎನ್ನುವುದು ಸರಿ. ಆದರೆ, ಕೇವಲ ನಾಲ್ಕು ದಿನದ ಪರಿಚಯದಲ್ಲಿ ಇಷ್ಟೊಂದು ಸಲುಗೆ ಬೇಕಿತ್ತೇ? ಇದರಲ್ಲಿ ಬೇರೆನೋ ಇರಬಹುದು, ಮಾಡೋದೆಲ್ಲ ಮಾಡಿಕೊಂಡು ಕೊನೆಗೆ ನಾನು ಹೆಣ್ಣು ಮಗು ಎಂದರಾದೀತೆ ಎಂದು ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಸರ್ಕಾರಿ ವಕೀಲರನ್ನು ಖಾರವಾಗಿ ಪ್ರಶ್ನಿಸಿದರು.

  ಅರ್ಜಿದಾರರ ವಾದವೇನು?
  – ಪರಿಚಿತನಾದ ನಾಲ್ಕೇ ದಿನದಲ್ಲಿ ಆಕೆ ನಗ್ನ ಚಿತ್ರ ಕಳುಹಿಸಿದ್ದಾಗಿ ಹೇಳಿದ್ದಾಳೆ
  – ಕೆಲವೇ ದಿನದಲ್ಲಿ ಈ ಪರಿ ಸಲುಗೆ ಬೆಳೆದಿದೆ ಎನ್ನುವುದು ನಂಬಲಾಗಲ್ಲ
  – ಚಾಟಿಂಗ್‌ನ ಯಾವ ಹಂತದಲ್ಲೂ ಆತ ನಗ್ನ ಚಿತ್ರ ಕಳುಹಿಸುವಂತೆ ಕೇಳಿಲ್ಲ
  – ಹಣದ ಬೇಡಿಕೆ ಇಟ್ಟಿಲ್ಲ. ಬದಲಿಗೆ ಆಕೆಯೇ ಅರ್ಜಿದಾರನಿಂದ ಹಣ ಕೇಳಿದ್ದಾಳೆ
  – ಅರ್ಜಿದಾರ ಕೊಡಲು ನಿರಾಕರಿಸಿದಾಗ ಪೊಲೀಸರಿಗೆ ಸುಳ್ಳು ದೂರು ದಾಖಲಿಸಿದ್ದಾಳೆ
  – ಯುವತಿಯ ಆರೋಪಕ್ಕೆ ಸಾಕ್ಷಾೃಧಾರ ಇಲ್ಲ, ಇದೆಲ್ಲವೂ ಸಂಪೂರ್ಣ ಕಟ್ಟು ಕಥೆ
  – ಅರ್ಜಿದಾರ ಯಾವುದೇ ಅಪರಾಧ ಎಸಗಿಲ್ಲ. ತನಿಖೆಗೆ ಸಿದ್ಧ, ಜಾಮೀನು ಕೊಡಬೇಕು

  ಸರ್ಕಾರಿ ವಕೀಲರ ವಾದವೇನು?
  – ಸಂತ್ರಸ್ತೆ ಅಮಾಯಕಿ, ಅರ್ಜಿದಾರ ಮಾನಸಿಕಯಾತನೆ, ಕಿರುಕುಳ ಕೊಟ್ಟಿದ್ದಾನೆ
  – ಪ್ರಕರಣ ತನಿಖಾ ಹಂತದಲ್ಲಿದೆ. ಆರೋಪಿಗೆ ಜಾಮೀನು ಕೊಡಬಾರದು

  ಹೈಕೋರ್ಟ್ ಹೇಳಿದ್ದೇನು?
  – 4 ದಿನದ ಪರಿಚಿತನಿಗೆ ಯುವತಿ ಏಕೆ ನಗ್ನ ಚಿತ್ರ ಕಳುಹಿಸಬೇಕಿತ್ತು?
  – ಹೆಣ್ಮಗು ಮನನೊಂದಿದೆ ಎನ್ನುತ್ತೀರ, ಸಂತ್ರಸ್ತೆ ಹೆಣ್ಣೆಂಬುದು ಸರಿಯೇ?
  – ಆಕೆಗೆ ಈ ಪರಿ ಸಲುಗೆ ಬೇಕಿತ್ತೆ? ಇದರಲ್ಲಿ ಬೇರೆನೋ ಇರಬಹುದು?
  – ಯುವತಿ ದೂರಿನ ಪ್ರತಿಯಲ್ಲಿ 3 ಸಾಲಿನಲ್ಲಿ ಪ್ರಕರಣ ವಿವರಿಸಿದ್ದಾಳೆ
  – ಆರೋಪಿ ನಗ್ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಲ್ಲ

  ಏನಿದು ಪ್ರಕರಣ?
  ದಾವಣಗೆರೆಯ ಆರೋಪಿ ಯುವತಿಗೆ ಇನ್‌ಸ್ಟಾಗ್ರಾಂ ಮೂಲಕ ರಿಕ್ವೆಸ್ಟ್ ಕಳುಹಿಸಿದ್ದ. ನಂತರ ಪರಿಚಯ ಪ್ರೇಮಕ್ಕೆ ತಿರುಗಿದೆ. 4 ದಿನದಲ್ಲೇ ನಗ್ನ ಚಿತ್ರ ಕಳುಹಿಸುವಂತೆ ಒತ್ತಾಯಿಸಿದ್ದಕ್ಕೆ ಯುವತಿ ಫೋಟೋ  ಕಳುಹಿಸಿದ್ದಳು ಎನ್ನಲಾಗಿದೆ. ಬಳಿಕ ಯುವಕ ಫೋಟೋ ಇರಿಸಿಕೊಂಡು 1 ಲಕ್ಷ ರೂ.ಗಾಗಿ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ಫೋಟೋ  ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಕಳುಹಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಯುವತಿ ಬೆಂಗಳೂರಿನ ದಕ್ಷಿಣ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಬಳಿಕ ಬಂಧನಕ್ಕೊಳಪಟ್ಟ ಆರೋಪಿ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts