ಬದಲಾಗಿಲ್ಲ ಕೊರಗರ ಬದುಕು

2016, ಡಿ.6ರಲ್ಲಿ ಸಚಿವರಾಗಿದ್ದ ಆಂಜನೇಯ ಕುಂದಾಪುರ ತಾಲೂಕಿನ ಮುರೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಅವರು ಸ್ಥಳೀಯರಿಗೆ ನೀಡಿದ್ದ ಭರವಸೆಗಳ ಸದ್ಯದ ಸ್ಥಿತಿ ಬಗ್ಗೆ ವಿಜಯವಾಣಿ ನಡೆಸಿದ ಇಲ್ಲಿ ರಿಯಾಲಿಟಿ ಚೆಕ್ ಇಲ್ಲಿದೆ.

>> 

ಶ್ರೀಪತಿ ಹೆಗಡೆ ಹಕ್ಲಾಡಿ ಮುರೂರು
ಸರ್ವಋತು ರಸ್ತೆ, ಸಮುದಾಯ ಭವನ, ಹೊಳೆಗೆ ಸೇತುವೆ.
-ಇವಿಷ್ಟು 2016ರಲ್ಲಿ ಅಂದಿನ ಸಚಿವ ಆಂಜನೇಯ ಅವರ ಗ್ರಾಮ ವಾಸ್ತವ್ಯದಿಂದ ಮುರೂರು ಗ್ರಾಮಕ್ಕೆ ಆದ ಲಾಭ. ಆದರೆ, ಕೊರಗ ಸಮುದಾಯದವರ ಬದುಕನ್ನು ಹಸನಾಗಿಸುವ ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಮುರೂರು ಬದಲಾದರೂ ಕೊರಗರ ಬದುಕು ಬದಲಾಗಲೇ ಇಲ್ಲ!

ಅನುಕೂಲತೆಗಳು: ಆಂಜನೇಯ ಅವರು ಮುರೂರು ಮರ್ಲಿ ಎಂಬುವವರ ಮನೆಯಲ್ಲಿ ವಾಸ್ತವ್ಯ ಹೂಡುವ ಮುನ್ನ ಮುರೂರಿಗೆ ಸಮರ್ಪಕ ರಸ್ತೆಯೂ ಇರಲಿಲ್ಲ. ಅನುದಾನ ಕೊರತೆಯಿಂದ ಕಪ್ಪಾಡಿ ಹೊಳೆ ಸೇತುವೆ ಕಾಮಗಾರಿ ಕೂಡ ಸ್ಥಗಿತಗೊಂಡಿತ್ತು. ಎರಡು ಮನೆಗಳನ್ನು ಅರ್ಧಕ್ಕೇ ನಿರ್ಮಿಸಿ, ಮುಂದುವರಿಸಲಾಗದೆ ಕೈಚೆಲ್ಲಲಾಗಿತ್ತು. ಪ್ರಸ್ತುತ ಮನೆ ಕಾಮಗಾರಿ ಪೂರ್ಣಗೊಂಡಿದೆ. ತಲೆ ಮೇಲೆ ಬೀಳುವ ಸ್ಥಿತಿಯ ಮನೆಯನ್ನು ಐಟಿಡಿಪಿ ಅಧಿಕಾರಿಗಳು ಮುತುವರ್ಜಿ ವಹಿಸಿ ನಿರ್ಮಿಸಿಕೊಟ್ಟಿದ್ದಾರೆ. ಸಭೆ- ಸಮಾರಂಭಗಳಿಗೆ ಸುಸಜ್ಜಿತ ಸಮುದಾಯ ಭವನ ತಲೆ ಎತ್ತಿದೆ. ಇವೆಲ್ಲವೂ ಮುರೂರು ಕಂಡ ಬದಲಾವಣೆ.

ಈಡೇದರ ಭರವಸೆಗಳು: ಕುಲಕಸುಬಿಗೆ ಉತ್ತೇಜನ ನೀಡಲು ಕೊರಗ ಸಮುದಾಯದವರಿಗೆ ಆರ್ಥಿಕ ಸಹಕಾರ, ಮಾರುಕಟ್ಟೆ ವ್ಯವಸ್ಥೆ ಮಾಡುವುದಾಗಿ ಆಂಜನೇಯ ಭರವಸೆ ನೀಡಿದ್ದರು. ಇವು ಸಾಕಾರಗೊಳ್ಳದೆ ಮನೆ ಬಾಗಿಲಿಗೆ ಹೋಗಿ ಮಾರಾಟ ಮಾಡುವ ಸ್ಥಿತಿ ಇಂದಿಗೂ ಬದಲಾಗಿಲ್ಲ. ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ವ್ಯವಸ್ಥೆ ಇಲ್ಲ. ಪೌಷ್ಟಿಕ ಆಹಾರ ಕೊರತೆಯಿಂದ ಬಳಲುವ ಮಕ್ಕಳು ಕಾಲನಿಯ ಲ್ಲಿದ್ದಾರೆ. ಸ್ವಂತ ಉದ್ಯೋಗ ಮಾಡುವವರಿಗೆ ದಾಖಲೆ ಇಲ್ಲದೆ 25 ಸಾವಿರ ರೂ.ಸಾಲ ಸೌಲಭ್ಯ, ಕುರಿ, ಆಡು, ಹೈನುಗಾರಿಕೆಗೆ ಆರ್ಥಿಕ ಸಹಕಾರ ಮುಂತಾದ ಭರವಸೆಯೂ ಈಡೇರಿಲ್ಲ. ಸ್ವಉದ್ಯೋಗಕ್ಕೆ ಪ್ರತಿ ಕುಟುಂಬದ ಮಹಿಳೆಗೆ 25 ಸಾವಿರ ರೂ. ನೀಡುವ ಭರವಸೆ ಈಡೇರಿಲ್ಲ. ಹಾಡಿ ವ್ಯಾಸ್ತವ್ಯದ ಆರು ತಿಂಗಳ ನಂತರ ಮುರೂರು ಅಭಿವೃದ್ಧಿ ವೀಕ್ಷಣೆಗೆ ಸಚಿವರು ಬರುತ್ತೇನೆ ಎಂದ ಆಂಜನೇಯ ಮತ್ತೆ ಬಂದಿಲ್ಲ. ರಸ್ತೆ, ಸಭಾಭವನ ಅಭಿವೃದ್ಧಿಗೆ ಪೂರಕ ಹೌದಾದರೂ, ಅವಷ್ಟೇ ಅಭಿವೃದ್ಧಿಯಲ್ಲ. ಕಾಲನಿ ವಾಸಿಗಳು ಆರ್ಥಿಕ ಸ್ವಾಲಂಬಿಯಾಗುವ ಮೂಲಕ ಜೀವನ ಭದ್ರತೆ ಸಿಗುವಂತಾಗಬೇಕು ಎಂಬುದು ಸ್ಥಳೀಯರ ಅಭಿಪ್ರಾಯ. ಕಾಲನಿಯಲ್ಲಿ ಬುಟ್ಟಿ ನೇಯುವ ಮಹಿಳೆಯರು, ಹೋಟೆಲ್ ಕೆಲಸಕ್ಕೆ ತೆರಳಿದ ಯುವಕರ ಚಿತ್ರಣ ಬದಲಾಗಿಲ್ಲ.

ಕೃತಕ ಕಾಲಿಗಾಗಿ ಕಾಯುತ್ತಿರುವ ಕರಿಯ: ಮೂರೂರು ಹಟ್ಟಿ ನಿವಾಸಿ ಕರಿಯ(66) ಅವರ ಕಾಲನ್ನು ಗ್ಯಾಂಗ್ರೀನ್ ಹಿನ್ನೆಲೆಯಲ್ಲಿ ಕತ್ತರಿಸಿ ತೆಗೆಯಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೃತಕ ಕಾಲು ಜೋಡಣೆ ನಿಮಿತ್ತ ಮಂಗಳೂರು ಕರೆದೊಯ್ದಿದ್ದರು. ವೆನ್‌ಲಾಕ್ ಆಸ್ಪತ್ರೆಯಲ್ಲಿ ಕಾಲಿನ ಅಳತೆ ತೆಗೆಸಿದ್ದು ಬಿಟ್ಟರೆ 3 ವರ್ಷಗಳಿಂದ ಕರಿಯ ಕೃತಕ ಕಾಲಿಗಾಗಿ ಕಾಯುತ್ತಿದ್ದಾರೆ. ಸಚಿವ ಆಂಜನೇಯ ವಾಸ್ತವ್ಯ ಸಂದರ್ಭ ಕೃತಕ ಕಾಲು ದೊರಕಿಸಿ ಕೊಡುವ ಭರವಸೆ ನೀಡಿದ್ದರು.

ಆಂಜನೇಯ ಅವರು ನಮ್ಮ ಮನೆಗೆ ವಿದ್ಯುತ್ ಸಂಪರ್ಕದ ಭರವಸೆ ನೀಡಿದ್ದರು. ನಾವು ಇತ್ತೀಚೆಗೆ ದೀನದಯಾಳ್ ಉಪಾಧ್ಯಾಯ ಯೋಜನೆಯಲ್ಲಿ ವಿದ್ಯುತ್ ಪಡೆದು, ಕೈಯಿಂದ ಹಣ ಹಾಕಿ ವಿಸ್ತರಿಸಿಕೊಂಡಿದ್ದೇವೆ. ವಿದ್ಯುತ್ ಸಂಪರ್ಕವನ್ನು ತ್ರೀ ಪೇಸ್‌ಗೆ ಪರಿವರ್ತಿಸುವ ಭರವಸೆ ಈಡೇರಿಲ್ಲ. ಕಾಲನಿಗೆ ಪೈಪ್‌ಲೈನ್ ಮೂಲಕ ಕುಡಿಯುವ ನೀರಿನ ಸಂಪರ್ಕ ಆಗಿಲ್ಲ.ಕುಡಿಯುವ ನೀರು ಸಮಸ್ಯೆಯಿಂದ ಕಾಲನಿ ಮುಕ್ತವಾಗಿಲ್ಲ.
– ಮರ್ಲಿ, ಆಂಜನೇಯ ವಾಸ್ತವ್ಯ ಹೂಡಿದ್ದ ಮನೆ ಸದಸ್ಯೆ

ಆಂಜನೇಯ ಅವರ ವಾಸ್ತವ್ಯದ ನಂತರ ರಸ್ತೆ ಸೇತುವೆ, ಸಮುದಾಯ ಭವನ, ಸೋಲಾರ್ ಲೈಟ್ ವ್ಯವಸ್ಥೆ ಆಗಿದೆ. ತೋಟದ ಬಳಿಯಿರುವ ತೆರೆದ ಬಾವಿ ಅಭಿವೃದ್ಧಿಪಡಿಸಿ ಕಾಲನಿಗೆ ಪೈಪ್‌ಲೈನ್ ಮೂಲಕ ಕುಡಿಯುವ ನೀರಿನ ಭರವಸೆ ಈಡೇರದೆ. ಕಾಲನಿ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ. ಅಂತ್ಯೋದಯ ಕಾರ್ಡ್ ಸಿಕ್ಕಿಲ್ಲ.
– ವೆಂಕಟೇಶ್ ಕೂಲಿ ಕಾರ್ಮಿಕ, ಮುರೂರು

ಸ್ವ ಉದ್ಯೋಗ ಮಾಡುವ ಮಹಿಳೆಯರಿಗೆ ಆರ್ಥಿಕ ಸಾಲ ಸೌಲಭ್ಯ, ಹೈನುಗಾರಿಕೆ, ಕುರಿ ಸಾಕಾಣಿಕೆಗೆ ಪ್ರೋತ್ಸಾಹ, ಮಾರುಕಟ್ಟೆ ವ್ಯವಸ್ಥೆ ಭರವಸೆ ಈಡೇರಿಲ್ಲ. ಸಭಾಭವನ, ಅರ್ಧಕ್ಕೆ ನಿಂತ ಮನೆಗಳ ಐಟಿಡಿಪಿ ಅಧಿಕಾರಿಗಳಿಂದ ನಿರ್ಮಾಣ ಕಾಲನಿ ಕಂಡ ಬದಲಾವಣೆ. ಸಚಿವರು ವಾಸ್ತವ್ಯ ಮಾಡದಿರುತ್ತಿದ್ದರೆ, ಇಷ್ಟಾದರೂ ಬದಲಾವಣೆ ಆಗುತ್ತಿರಲಿಲ್ಲ.
– ಗಿರಿಜಾ, ಬುಟ್ಟಿ ಸಿಬಿಲು ನೇಯುವ ಮುರೂರು ಕಾಲನಿ ನಿವಾಸಿ