ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ, ರಾಜಣ್ಣಗೆ ಹಣ ಸಂದಾಯ? ಡೀಲ್​ ಕುರಿತ ಆಡಿಯೋ ವೈರಲ್​

ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಂಸದ ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ಕೆ.ಎನ್​. ರಾಜಣ್ಣ ಅವರು ಮೈತ್ರಿ ಪಕ್ಷದ ಅಭ್ಯರ್ಥಿ ಎಚ್​.ಡಿ. ದೇವೇಗೌಡ ಅವರನ್ನು ಬೆಂಬಲಿಸಲು ಕೋಟಿ ಕೋಟಿ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿರುವ ಆಡಿಯೋ ವೈರಲ್​ ಆಗಿದೆ.

ಡಿಸಿಎಂ ಜಿ. ಪರಮೇಶ್ವರ್​ ಆಪ್ತ ತುಮಕೂರು ಕಾಂಗ್ರೆಸ್​ ಘಟಕದ ಸಾಮಾಜಿಕ ಜಾಲತಾಣದ ಸಂಚಾಲಕ ದರ್ಶನ್​ ಹಾಗೂ ಕಾಂಗ್ರೆಸ್​ ಕಾರ್ಯಕರ್ತನ ನಡುವೆ ಸಂಭಾಷಣೆ ನಡೆದಿದೆ ಎನ್ನಲಾಗಿದೆ. ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡರು ಮತ್ತು ಕೆ.ಎನ್​. ರಾಜಣ್ಣ ಅವರಿಗೆ ತಲಾ 3.5 ಕೋಟಿ ರೂ. ನೀಡಲಾಗಿದೆ. ಆದರೂ ಅವರು ಪ್ರಚಾರಕ್ಕೆ ಬರುತ್ತಿಲ್ಲ ಎಂದು ದರ್ಶನ್​ ಕಾಂಗ್ರೆಸ್​ ಕಾರ್ಯಕರ್ತನಿಗೆ ಹೇಳಿರುವ ಅಂಶ ಆಡಿಯೋದಲ್ಲಿ ದಾಖಲಾಗಿದೆ.

ಜೆಡಿಎಸ್​ ವರಿಷ್ಠ ಮತ್ತು ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ದೇವೇಗೌಡರು ಸ್ಪರ್ಧೆ ಮಾಡುವುದಾಗಿ ಘೋಷಿಸುತ್ತಿದ್ದಂತೆ ಮುದ್ದಹನುಮೇಗೌಡರು ತಮ್ಮ ಅಸಮಾಧಾನ ಹೊರಹಾಕಿದ್ದರು ಮತ್ತು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ರಾಜಣ್ಣ ಸಹ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆ ನಂತರ ಪಕ್ಷದ ವರಿಷ್ಠರ ಮನವೊಲಿಕೆಯ ನಂತರ ಇಬ್ಬರೂ ತಮ್ಮ ನಾಮಪತ್ರ ವಾಪಸ್​ ಪಡೆದಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *