More

    FACT CHECK: ವೈರಲ್​ ಆದ ಇಂದಿರಾಗಾಂಧಿ ಮತ್ತು ಸೀತಾರಾಮ್​ ಯೆಚೂರಿ ಅವರ ಈ ಪೋಟೋದ ಹಿಂದಿದೆ ಬೇರೆಯದೇ ಸತ್ಯ…

    ನವದೆಹಲಿ: 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ವಿರುದ್ಧ ಜೆಎನ್​ಯುದಲ್ಲಿ ಪ್ರತಿಭಟನೆಯಾಗಿತ್ತು. ಆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜೆಎನ್​ಯುದ ಅಂದಿನ ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥ ಸೀತಾರಾಮ್​ ಯೆಚೂರಿಗೆ ಇಂದಿರಾ ಗಾಂಧಿಯವರು ಯೂನಿವರ್ಸಿಟಿಗೆ ಆಗಮಿಸಿ ಹೊಡೆದಿದ್ದರು. ಅಲ್ಲದೆ ಸಾರ್ವಜನಿಕವಾಗಿ ಕ್ಷಮೆ ಕೇಳಿಸಿದ್ದರು ಎಂಬ ವಿಷಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಅದಕ್ಕೆ ಸಂಬಂಧಪಟ್ಟಂತೆ ಬ್ಲ್ಯಾಕ್​ ಆ್ಯಂಡ್​ ವೈಟ್​ ಫೋಟೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಇಂದಿರಾಗಾಂಧಿಯವರು ನೆರೆದಿರುವ ಹಲವು ಜನರ ಎದುರು ಕೈಕಟ್ಟಿಕೊಂಡು ನಿಂತಿದ್ದಾರೆ. ಅವರ ಪಕ್ಕದಲ್ಲಿ ಸೀತಾರಾಮ್​ ಯೆಚೂರಿ(ಸಿಪಿಐ(ಎಂ)ನ ಮುಖ್ಯಸ್ಥ)ಯವರು ನಿಂತು ಏನನ್ನೋ ಓದುತ್ತಿರುವುದನ್ನು ಫೋಟೋದಲ್ಲಿ ನೋಡಬಹುದು.

    ಇದೇ ಫೋಟೋವನ್ನು ದೇಶಭಕ್ತ್​, ದಿ ಪ್ಯಾಟ್ರಿಯಾಟ್​ ಎಂಬ ಫೇಸ್​ಬುಕ್​ ಪೇಜ್ ನಲ್ಲಿ​ ಪೋಸ್ಟ್ ಮಾಡಲಾಗಿತ್ತು. ಅಂದು ಇಂದಿರಾಗಾಂಧಿ ಸೀದಾ ಜೆಎನ್​ಯುಕ್ಕೆ ಬಂದು ಸೀತಾರಾಮ್​ ಯೆಚೂರಿ ಅವರಿಗೆ ಹೊಡೆದು, ರಾಜೀನಾಮೆ ನೀಡುವಂತೆ ಆದೇಶಿಸಿದ್ದರು. ಎಲ್ಲರ ಎದುರು ಕ್ಷಮಾಪಣಾ ಪತ್ರ ಓದಿಸಿದ್ದರು ಎಂದು ಬಿಂಬಿಸಲಾಗಿತ್ತು. ಅಷ್ಟೇ ಅಲ್ಲದೆ, ಇಂದಿರಾಗಾಂಧಿಯವರು ಕಮ್ಯೂನಿಸ್ಟರಿಗೆ ನೀಡುತ್ತಿದ್ದ ಶಿಕ್ಷೆ ಇಷ್ಟು ಕಠಿಣವಾಗಿತ್ತು. ಅವರೆದುರು ಅಮಿತ್​ ಷಾ ಏನೇನೂ ಅಲ್ಲ, ತೀರ ಸಾಧು ಎನ್ನಿಸುತ್ತಾರೆ ಎಂದು ಕ್ಯಾಪ್ಷನ್​ ಬರೆಯಲಾಗಿತ್ತು. ಹಲವರು ಶೇರ್​ ಮಾಡಿಕೊಂಡಿದ್ದರು.

    ಜೆಎನ್​ಯುದಲ್ಲಿ ಸಧ್ಯ ನಡೆಯುತ್ತಿರುವ ಹಿಂಸಾಚಾರ, ಪ್ರತಿಭಟನೆಯ ಬೆನ್ನಲ್ಲೇ ಇಂತಹ ಪೋಸ್ಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದವು.

    ಆದರೆ ಸತ್ಯ ಬೇರೆ ಇದೆ. ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಬಯಲಾದ ಸತ್ಯ ಬೇರೆಯೇ ಇದೆ. ಈ ಫೋಟೋ ಜೆಎನ್​ಯುಗೆ ಸಂಬಂಧಪಟ್ಟದ್ದು ಅಲ್ಲವೇ ಅಲ್ಲ ಎಂಬುದು ಸಾಬೀತಾಗಿದೆ.

    ಇದು 1975ರಲ್ಲಿ ತೆಗೆದ ಫೋಟೋ ಅಲ್ಲ, ಬದಲಿಗೆ ತುರ್ತು ಪರಿಸ್ಥಿತಿ ಕೊನೆಯಾದ ವರ್ಷ 1977ರಲ್ಲಿ ಸೆರೆಹಿಡಿದಿದ್ದು. ಇದು ಜೆಎನ್​ಯುದಲ್ಲಿ ನಡೆದದ್ದು ಅಲ್ಲ. ಇಂದಿರಾ ಗಾಂಧಿಯವರ ನಿವಾಸದ ಹೊರಗೆ ನಡೆದ ಪ್ರತಿಭಟನೆಯ ಫೋಟೋ. ಆಗ ಜೆಎನ್​ಯು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಇಂದಿರಾ ಗಾಂಧಿಯವರ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಅವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಆಗ ಇಂದಿರಾ ಗಾಂಧಿ ಅಲ್ಲಿಗೆ ಆಗಮಿಸಿದ್ದರು. 1977ರಲ್ಲಿ ಜೆಎನ್​ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸೀತಾರಾಮ ಯೆಚೂರಿ ಅವರು ವಿದ್ಯಾರ್ಥಿಗಳ ಬೇಡಿಕೆಯನ್ನು ಇಂದಿರಾ ಗಾಂಧಿಯವರ ಪಕ್ಕ ನಿಂತು ಓದುತ್ತಿರುವ ಫೋಟೋ ಇದು ಎಂಬುದು ಗೊತ್ತಾಗಿದೆ.

    ಇದೇ ಫೋಟೋವನ್ನು ರಿವರ್ಸ್​ ಸರ್ಚ್​ಗೆ ಹಾಕಿದಾಗ ಅಂದಿನ ಪ್ರತಿಭಟನೆಗೆ ಸಂಬಂಧಪಟ್ಟಂತೆ ಪ್ರಕಟವಾಗಿದ್ದ ಹಲವು ಆರ್ಟಿಕಲ್​​ಗಳು ಬೆಳಕಿಗೆ ಬಂದಿವೆ.

    ತುರ್ತುಪರಿಸ್ಥಿತಿ ಮುಗಿದ ಬಳಿಕ ಇಂದಿರಾ ಗಾಂಧಿಯವರು ಜೆಎನ್​ಯು ಚುನಾವಣೆಯಲ್ಲಿ ಸೋತಿದ್ದರು. ಆದರೂ ಕುಲಪತಿಯಾಗಿಯೇ ಮುಂದಿವರಿಯುತ್ತಿದ್ದರು. ಇದನ್ನು ವಿರೋಧಿಸಿದ ವಿದ್ಯಾರ್ಥಿಗಳು ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

    ಸೀತಾರಾಮ ಯೆಚೂರಿ ಅವರು 1975ರಲ್ಲಿ ಜೆಎನ್​ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿರಲಿಲ್ಲ. ಅವರು ಅದಾಗಲೇ ಸಿಪಿಐ(ಎಂ) ಸೇರಿದ್ದರು. ಹಾಗೇ ಎಮರ್ಜನ್ಸಿ ವೇಳೆ ಬಂಧನಕ್ಕೆ ಒಳಗಾಗಿದ್ದರು. 1977ರಲ್ಲಿ ಜೆಎನ್​ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಸಿಪಿಐ(ಎಂ)ನ ವೆಬ್​ಸೈಟ್​ನಲ್ಲಿರುವ ಅವರ ಪ್ರೊಫೈಲ್​ನಲ್ಲಿ ಕೂಡ ಹೇಳಲಾಗಿದೆ. (ಏಜೆನ್ಸೀಸ್​)

    FACT CHECK: ವೈರಲ್​ ಆದ ಇಂದಿರಾಗಾಂಧಿ ಮತ್ತು ಸೀತಾರಾಮ್​ ಯೆಚೂರಿ ಅವರ ಈ ಪೋಟೋದ ಹಿಂದಿದೆ ಬೇರೆಯದೇ ಸತ್ಯ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts