ಕರೊನಾ ವೈರಸ್ ಮೊದಲು ಹುಟ್ಟಿದ್ದು ಚೀನಾದಲ್ಲಿ. ಆ ಅದೀಗ ಇಡೀ ಜಗತ್ತಿಗೆ ಮಾರಕವಾಗಿ ಪರಿಣಮಿಸಿದೆ. ಅನೇಕ ದೇಶಗಳ ಆರ್ಥಿಕತೆ ಮಟ್ಟ ಸಂಪೂರ್ಣ ಕುಸಿದು ನಷ್ಟವುಂಟಾಗಿದೆ.
ಕರೊನಾ ಹುಟ್ಟಿಗೆ ಕಾರಣವಾದ ಚೀನಾವನ್ನು ಇತರೆ ಕೆಲ ದೇಶಗಳು ದೂಷಿಸುತ್ತಿದ್ದರೂ, ಬಹಿರಂಗವಾಗಿ ಯಾವುದೇ ಕ್ರಮಕ್ಕೂ ಮುಂದಾದ ಬಗ್ಗೆ ಮಾಹಿತಿಯಿಲ್ಲ.
ಆದರೆ ಈ ಮಧ್ಯೆ ಯುಕೆ ಮೂಲದ ಎಕ್ಸ್ಪ್ರೆಸ್ ಎಂಬ ಮಾಧ್ಯಮ ಪ್ರಕಟಿಸಿದೆ ಎನ್ನಲಾದ ಸುದ್ದಿಯ ಹೆಡ್ಲೈನ್ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು.
ಕರೊನಾ ವೈರಸ್ನಿಂದ ಆದ ನಷ್ಟದ ಲೆಕ್ಕವನ್ನು ತುಂಬಿಕೊಡಲು ಜರ್ಮನಿ, ಚೀನಾವನ್ನು ಕೇಳಿದೆ. 130 ಬಿಲಿಯನ್ ಯುಕೆ ಪೌಂಡ್ಸ್ ಬಿಲ್ ಕಳಿಸಿಕೊಟ್ಟಿದೆ ಎಂಬ ಅರ್ಥವನ್ನು ಕೊಡುವ ತಲೆಬರಹ ಇದಾಗಿತ್ತು. ಅದಕ್ಕೆ ಜರ್ಮನ್ ಚಾನ್ಸಲರ್ ಅಂಜೆಲಾ ಮಾರ್ಕೆಲ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಫೋಟೋವನ್ನು ಬಳಸಲಾಗಿತ್ತು.
ಭಾರತದಲ್ಲಿ ಈ ಲೇಖನ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ತಲೆಬರಹ ಮಾತ್ರ ಕಾಣುವಂತೆ ಫೇಸ್ಬುಕ್, ಟ್ವಿಟರ್ಗಳಲ್ಲಿ ಶೇರ್ ಮಾಡಿಕೊಂಡಿದ್ದ ನೆಟ್ಟಿಗರು, ಭಾರತವೂ ಇದೇ ಕ್ರಮ ಕೈಗೊಳ್ಳಬೇಕು. ಕರೊನಾ ನಷ್ಟ ಪರಿಹಾರವಾಗಿ 300 ಬಿಲಿಯನ್ ಪೌಂಡ್ಸ್ಗಳ ಬಿಲ್ನ್ನು ಚೀನಾಕ್ಕೆ ಕಳಿಸಬೇಕು ಎಂದು ಒತ್ತಾಯಿಸಿದ್ದರು.
ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬೇರೆಯದ್ದೇ ವಿಷಯ ಬಹಿರಂಗವಾಗಿದೆ.
ಜರ್ಮನ್ ಸರ್ಕಾರ ಅಂತಹ ಯಾವುದೇ ಬಿಲ್ನ್ನೂ ಚೀನಾಕ್ಕೆ ಕಳಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ಆಗಿದ್ದಿಷ್ಟೇ..ಜರ್ಮನಿಯ ಬಿಲ್ಡ್ ಎಂಬ ಟ್ಯಾಬ್ಲಾಯ್ಡ್ ಸುದ್ದಿಪತ್ರಿಕೆ ಹೀಗೊಂದು ವರದಿ ಮಾಡಿತ್ತು. ಜರ್ಮನಿಯಲ್ಲಿ ಕೊವಿಡ್ನಿಂದಾದ ನಷ್ಟವನ್ನು ಚೀನಾ ಭರಿಸಬೇಕು ಎಂದು ಹೇಳಿ, 130 ಬಿಲಿಯನ್ ಪೌಂಡ್ಸ್ಗಳ ಅಣುಕು ಬಿಲ್ ಒಂದನ್ನು ಪ್ರಕಟಿಸಿತ್ತು. ಆ ಸುದ್ದಿಯನ್ನು ಎಕ್ಸ್ಪ್ರೆಸ್ ವರದಿ ಮಾಡಿತ್ತು. ಆದರೆ ಎಕ್ಸ್ಪ್ರೆಸ್ ಸುದ್ದಿ ಮಾಧ್ಯಮ ಮಾಡಿದ್ದ ವರದಿಯ ತಲೆಬರಹ ತುಂಬ ತಪ್ಪು ಅರ್ಥವನ್ನು ಕೊಡುತ್ತಿತ್ತು. ಚೀನಾ ಸರ್ಕಾರವೇ ನೋಟಿಸ್ ನೀಡಿದೆ ಎಂದು ಅನ್ನಿಸುವಂತಿತ್ತು. ಅದನ್ನು ಓದುವಷ್ಟೂ ತಾಳ್ಮೆ ಇಲ್ಲದ ಅನೇಕರು ಸ್ಕ್ರೀನ್ಶಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಜರ್ಮನಿಯ ಕ್ರಮವನ್ನು ಹೊಗಳಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾದ ಅರ್ಥದೊಂದಿಗೆ ಸುದ್ದಿ ಶೇರ್ ಆಗುತ್ತಿದೆ ಎಂಬುದನ್ನು ಶೀಘ್ರವೇ ಪತ್ತೆಹಚ್ಚಿದ ಎಕ್ಸ್ಪ್ರೆಸ್ ಬಳಿಕ ಹೆಡ್ಲೈನ್ ಬದಲು ಮಾಡಿದೆ. ಅಲ್ಲದೆ, ಸ್ಪಷ್ಟನೆಯನ್ನೂ ಪ್ರಕಟಿಸಿದೆ. (ಏಜೆನ್ಸೀಸ್)