More

  ಡಯಾಲಿಸಿಸ್ ಸ್ತಬ್ಧ ಜನ ಹೈರಾಣ; ಆರೋಗ್ಯ ಸಚಿವರ ನಿರ್ಲಕ್ಷ್ಯ

  ಬೆಂಗಳೂರು: ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿಗೆ ಬಾಕಿ ವೇತನ ಪಾವತಿ ಹಾಗೂ ಸೇವಾ ಭದ್ರತೆ ಒದಗಿಸುವಲ್ಲಿ ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳು ತೋರಿದ ನಿರ್ಲಕ್ಷ್ಯ ಮತ್ತು ಅಸಹಕಾರದ ಪರಿಣಾಮವಾಗಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ರೋಗಿಗಳು ಪರದಾಡುವಂತಾಗಿದೆ.

  ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಗುರುವಾರದಿಂದ ಸೇವೆಯನ್ನು ಸ್ಥಗಿತಗೊಳಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದ ಕೆಲವು ಜಿಲ್ಲೆಗಳಲ್ಲಿ ಡಯಾಲಿಸಿಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಕಳೆದ ಬಾರಿ ಪ್ರತಿಭಟನೆ ನಡೆಸಿದ್ದ ಸಿಬ್ಬಂದಿಗೆ ಒಂದು ತಿಂಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದ ಸಚಿವರು, ನಾಲ್ಕು ತಿಂಗಳು ಕಳೆದರೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಎರಡು ತಿಂಗಳ ಬಾಕಿ ವೇತನ ನೀಡುವ ಬದಲು, ನಾಲ್ಕು ತಿಂಗಳ ವೇತನ ಉಳಿಸಿಕೊಂಡಿದೆ. ಈ ಕುರಿತು ಸಚಿವರು ಹಾಗೂ ಇಲಾಖೆ ಅಧಿಕಾರಿಗಳಲ್ಲಿ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೂ ಕಷ್ಟಪಡುತ್ತಿರುವ ಸಿಬ್ಬಂದಿ ಅನ್ಯಮಾರ್ಗವಿಲ್ಲದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಿಂದಾಗಿ ಬಳ್ಳಾರಿ, ಉತ್ತರ ಕನ್ನಡ, ಗದಗ, ಹಾವೇರಿ, ಹಾಸನ, ಕೊಪ್ಪಳ, ತುಮಕೂರು, ಚಾಮರಾಜನಗರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಡಯಾಲಿಸಿಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

  ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರಗಳಲ್ಲಿ ಸಿಬ್ಬಂದಿಗಳಿಲ್ಲದ ಕಾರಣ ಹಲವರು ಖಾಸಗಿ ಆಸ್ಪತ್ರೆ ಮೊರೆ ಹೋದರು. ಕೆಲವರು ಖಾಸಗಿಯಲ್ಲಿ ಹಣ ಖರ್ಚು ಮಾಡಲು ಸಾಧ್ಯವಿಲ್ಲದೆ ಆಸ್ಪತ್ರೆಯಲ್ಲಿ ಸೇವೆ ಪಡೆಯಲು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

  ಮುಂದುವರಿದ ಪ್ರತಿಭಟನೆ?: ಪ್ರತಿಭಟನೆ ನಡೆಸುತ್ತಿದ್ದ ಡಯಾಲಿಸಿಸ್ ಸಿಬ್ಬಂದಿಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನವೀನ್ ಭಟ್ ಭೇಟಿ ಮಾಡಿ ಮನವಿ ಪತ್ರ ಸ್ವೀಕರಿಸಿದರು. ಜಿಲ್ಲಾ ಆರೋಗ್ಯಾಧಿಕಾರಿಗಳ ಖಾತೆಗೆ ವೇತನ ಹಣ ವರ್ಗಾಯಿಸಲಾಗಿದ್ದು, ಪ್ರತಿಭಟನೆ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದರು. ಶುಕ್ರವಾರ ಆರೋಗ್ಯ ಸಚಿವರೊಂದಿಗೆ ಸಭೆ ಏರ್ಪಡಿಸುವ ಭರವಸೆ ನೀಡಿದರು. ಇದರಿಂದ ತೃಪ್ತರಾಗದ ಸಿಬ್ಬಂದಿ ಮುಷ್ಕರ ಮುಂದುವರಿಸಿದ್ದಾರೆ.

  ಬೇಡಿಕೆ ಈಡೇರಿಸಿದರಷ್ಟೇ ಪ್ರತಿಭಟನೆ ವಾಪಸ್: ಹೊಸ ಏಜೆನ್ಸಿಯು ಬಾಕಿ ಇರುವ ನಾಲ್ಕು ತಿಂಗಳ ವೇತನ, ಪಿಎಫ್, ಅರಿಯರ್ಸ್ ಸೇರಿ ಎಲ್ಲವನ್ನೂ ಪಾವತಿಸಬೇಕು. ಜತೆಗೆ ಹೊಸ ಸಂಸ್ಥೆ ನಿರ್ವಹಣೆ ಅಧಿಕಾರ ವಹಿಸುವ ಮುನ್ನ ನಮಗೆ ಸೇವಾ ಭದ್ರತೆ ಕಲ್ಪಿಸಬೇಕು. ಹೊಸ ಸಂಸ್ಥೆಗೆ ಇಎಸ್​ಐ, ಪಿಎಫ್ ಸೌಲಭ್ಯ ಒದಗಿಸುವ ಹಾಗೂ ಸಕಾಲದಲ್ಲಿ ವೇತನ ಪಾವತಿಸುವಂತೆ ಸೂಚಿಸಬೇಕು. ಸದ್ಯ ಇಲಾಖೆ ಅಧಿಕಾರಿಗಳು ಮನವಿ ಸ್ವೀಕರಿಸಿದ್ದಾರೆ. ಆರೋಗ್ಯ ಸಚಿವರೊಂದಿಗೆ ಸಭೆ ಕರೆಯುವ ಭರವಸೆ ನೀಡಿದ್ದಾರೆ. ಆದರೆ, ಪ್ರತಿಭಟನೆ ಮುಂದುವರಿಸಿದ್ದೇವೆ ಎಂದು ಎಂದು ಪ್ರತಿಭಟನಾನಿರತ ಸಿಬ್ಬಂದಿ ಮಧು ವಿವರ ನೀಡಿದ್ದಾರೆ.

  ಹೊಸ ಟೆಂಡರ್ ಪ್ರಕ್ರಿಯೆ: ಸರ್ಕಾರದ ಜತೆಗಿನ ಕಂಪನಿಯ ಒಪ್ಪಂದ ಮುಗಿದಿದ್ದು, ಎರಡು ತಿಂಗಳಿನಿಂದ ಆರೋಗ್ಯ ಇಲಾಖೆಯೇ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆ ವಹಿಸಿಕೊಂಡಿದೆ. ಹೊಸ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಹೊಸ ಕಂಪನಿಗೆ ನಿರ್ವಹಣೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  ಇಳಿಕೆಯಾದ ಸಂಬಳ: 2021ರಲ್ಲಿ ಜುಲೈವರೆಗೆ ಎಲ್ಲರೂ 25 ಸಾವಿರ ರೂ. ವೇತನ ಪಡೆಯುತ್ತಿದ್ದರು. ಬಳಿಕ ಆಗಸ್ಟ್​ನಿಂದ ತಂತ್ರಜ್ಞರು, ಶುಶ್ರೂಷಕರು, ಡಿ.ಗ್ರೂಪ್ ನೌಕರರಿಗೆ ಕ್ರಮವಾಗಿ -ಠಿ;16,100, -ಠಿ;14,000, -ಠಿ;10,500ಗೆ ಇಳಿಸಲಾಯಿತು. 2022ರ ಫೆಬ್ರವರಿಯಲ್ಲಿ ಗುತ್ತಿಗೆ ಪಡೆದ ಎಸ್ಕಾಗ್ ಸಂಜೀವಿನಿ -ಠಿ;13,800ಗೆ ಇಳಿಸಿತು. ಬಳಿಕ ಸರ್ಕಾರದ ನಿರ್ವಹಣೆಗೆ ಒಳಪಟ್ಟಾಗ -ಠಿ;15 ಸಾವಿರ ತಂತ್ರಜ್ಞರಿಗೆ, -ಠಿ;12 ಸಾವಿರ ಶುಶ್ರೂಷಕರಿಗೆ, -ಠಿ;9,200 ಡಿ. ಗ್ರೂಪ್ ನೌಕರರಿಗೆ ಎಂದು ಹೇಳಿತು. ಆದರೆ, 4 ತಿಂಗಳಿನಿಂದ ಅದನ್ನೂ ಪಾವತಿಸಿಲ್ಲ.

  ಪ್ರತಿಭಟನಾಕಾರರ ಬೇಡಿಕೆಗಳೇನು?

  ಬಿಆರ್​ಎಸ್ ಹೆಲ್ತ್ ಆಂಡ್ ರಿಸರ್ಚ್ ಇನ್​ಸ್ಟಿಟ್ಯೂಟ್​ನಿಂದ ಬಾಕಿ ಇರುವ 9 ತಿಂಗಳ ಇಎಸ್​ಐ ಮತ್ತು ಪಿಎಫ್, ನಂತರ ನಿರ್ವಹಣೆ ವಹಿಸಿಕೊಂಡ ಕೋಲ್ಕತ್ತದ ಎಸ್ಕಾಗ್ ಸಂಜೀವಿನಿ ಕಂಪನಿ ಉಳಿಸಿ ಕೊಂಡಿದ್ದ 2 ತಿಂಗಳ ವೇತನ, 20 ತಿಂಗಳ ಪಿಎಫ್, ಇಎಸ್​ಐ, ಜತೆಗೆ ತಿಂಗಳಿಗೆ 2 ಸಾವಿರ ರೂ. ನಂತೆ 20 ತಿಂಗಳ ಬಾಕಿ ಮೊತ್ತ ಕೊಡಬೇಕು.

  ಹೆರಿಗೆ ರಜೆಗೆ ತೆರಳಿದ್ದ 22 ಸಿಬ್ಬಂದಿಯ ಆರು ತಿಂಗಳ ಬಾಕಿ ವೇತನ ಪಾವತಿಸಬೇಕು. ಇಎಸ್​ಐ ಸೌಲಭ್ಯ ಒದಗಿಸದ ಸಂಜೀವಿನಿ ಸಂಸ್ಥೆಯಿಂದ ಮೃತ ಇಬ್ಬರ ಕುಟುಂಬಕ್ಕೆ ಪರಿಹಾರ ಹಾಗೂ ನಂತರ ನಿರ್ವಹಣೆ ಹೊಣೆ ವಹಿಸಿಕೊಂಡಿರುವ ಆರೋಗ್ಯ ಇಲಾಖೆ ಬಾಕಿ ಉಳಿಸಿಕೊಂಡಿರುವ ಎರಡು ತಿಂಗಳ ವೇತನ ಸೇರಿ ನಾಲ್ಕು ತಿಂಗಳ ವೇತನ ಸಂಪೂರ್ಣ ಪಾವತಿಸಬೇಕು.ಸೇವಾ ಭದ್ರತೆ ಒದಗಿಸುವುದು, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 108 ಸಿಬ್ಬಂದಿಗೆ ನೀಡುವಂತೆ ಹೆಚ್ಚುವರಿ ವೇತನಕ್ಕೆ ಒತ್ತಾಯಿಸಿದ್ದಾರೆ.

  ಪರ್ಯಾಯ ವ್ಯವಸ್ಥೆ: ರೋಗಿಗಳಿಗೆ ತೊಂದರೆ ಆಗದಂತೆ ಅಗತ್ಯ ಸೇವೆ ಒದಗಿಸಲು ಇಲಾಖೆ ವೈದ್ಯರು ಹಾಗೂ ಶುಶ್ರೂಷಕರನ್ನು ನಿಯೋಜಿಸಲಾಗಿದ್ದು, ಪ್ರತಿಭಟ ನಾನಿರತರ ಮನವೊಲಿಸುವ ಪ್ರಯುತ್ನವೂ ನಡೆದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts