ಮಧುಮೇಹ ಉಚಿತ ತಪಾಸಣಾ ಶಿಬಿರ

ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಕಮ್ಯುನಿಟಿ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಮಧುಮೇಹ ಮತ್ತು ರಕ್ತದೊತ್ತಡ ಉಚಿತ ತಪಾಸಣಾ ಶಿಬಿರದಲ್ಲಿ 75ಕ್ಕೂ ಹೆಚ್ಚು ಜನ ಪಾಲ್ಗೊಂಡು ತಪಾಸಣೆ ಪ್ರಯೋಜನ ಪಡೆದುಕೊಂಡರು.

ಸ್ಥಳೀಯ ಖಾಸಗಿ ಆಸ್ಪತ್ರೆ ಹಿರಿಯ ವೈದ್ಯ ಡಾ.ಪಿ.ಜಿ.ಶ್ರೀಧರ್ ಅವರು ಶಿಬಿರಕ್ಕೆ ಚಾಲನೆ ನೀಡಿ ತಪಾಸಣೆ ನಡೆಸಿದರು. ನಂತರ ಮಾತನಾಡಿ, ಮಧುಮೇಹ ಮತ್ತು ರಕ್ತದೊತ್ತಡ ಸಾಮಾನ್ಯ ಕಾಯಿಲೆಯಾಗಿದ್ದು, ಇದನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಸರಿಪಡಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಮಧುಮೇಹದ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ಮಧುಮೇಹ ಇರುವವರು ಆತಂಕ ಪಡುವ ಅಗತ್ಯವಿಲ್ಲ. ಉತ್ತಮ ಜೀವನ ಶೈಲಿ ಹಾಗೂ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದರೆ ನಿಯಂತ್ರಣದಲ್ಲಿ ಇಡಲು ಸಾಧ್ಯವಿದೆ. ಸ್ಥಳಿಯ ಲಯನ್ಸ್ ಕ್ಲಬ್ ಬಡ ರೋಗಿಗಳಿಗಾಗಿ ಉಚಿತ ಶಿಬಿರ ಆಯೋಜಿಸುತ್ತಾ ಬಂದಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಶಿಬಿರದಲ್ಲಿ ಮೈಸೂರಿನ ಪ್ರೇಮ್‌ಜಿ ಆಸ್ಪತ್ರೆ ವೈದ್ಯ ಡಾ.ಬಿ.ಎಲ್.ಕೃಷ್ಣಸ್ವಾಮಿ, ಲಯನ್ಸ್ ಅಧ್ಯಕ್ಷ ಸಿ.ಚೇತನ್, ಪದಾಧಿಕಾರಿಗಳಾದ ಎಸ್.ನಾಗರಾಜು, ಚೆನ್ನಮಾದೇಗೌಡ, ಜಿಎಸ್‌ಎಂ ಪ್ರಸಾದ್, ವೆಂಕಟೇಶ್, ಮಹೇಶ್, ವಿರೂಪಾಕ್ಷಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಶಿಬಿರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಡೆಯಿತು. ಪಟ್ಟಣ ಸೇರಿದಂತೆ ವಿವಿಧ ಗ್ರಾಮದಿಂದ 75ಕ್ಕೂ ಹೆಚ್ಚು ಜನರು ಆಗಮಿಸಿದ್ದರು.