ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಧ್ರುವ ಸರ್ಜಾ ನಾಯಕನಾಗಿರುವ, ಎ.ಪಿ. ಅರ್ಜುನ್ ಆ್ಯಕ್ಷನ್&ಕಟ್ ಹೇಳಿರುವ, ಉದಯ್ ಕೆ. ಮೆಹ್ತಾ ನಿರ್ಮಾಣದ “ಮಾರ್ಟಿನ್’ ಇಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಬೆಂಗಾಲಿ, ಮರಾಠಿ, ಮಲಯಾಳಂ ಭಾರತದ ಆರು ಭಾಷೆಗಳ ಜತೆಗೆ ಇಂಗ್ಲೀಷ್, ಜಪಾನೀಸ್, ಮಂಡಾರಿನ್ ಸೇರಿ 13 ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್, ಆಂಥಮ್ ಹಾಗೂ “ಜೀವ ನೀನೆ’ ಹಾಡು ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ. ಡಾ. ರವಿವರ್ಮ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿರುವ ಅದ್ಭುತ ಆ್ಯಕ್ಷನ್ ಸನ್ನಿವೇಶಗಳು ಚಿತ್ರದ ಹೈಲೈಟ್ ಎನ್ನಲಾಗಿದೆ.
ಚಿತ್ರದ ಬಗ್ಗೆ ನಿರ್ದೇಶಕ ಎ.ಪಿ. ಅರ್ಜುನ್, “”ಅದ್ದೂರಿ’ ರಿಲೀಸ್ ಆದ 12 ವರ್ಷಗಳ ಬಳಿಕ ನನ್ನ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರ. ಜತೆಗೆ ಕನ್ನಡದ ನೆಲದಿಂದ ಪ್ಯಾನ್ ಇಂಡಿಯಾ ಮೂಡಿಬಂದಿರುವ ಸಿನಿಮಾ. ಆ್ಯಕ್ಷನ್ ಪ್ಯಾಕ್ಡ್, ವಿಶುಯಲ್ ಟ್ರೀಟ್ ಅದ್ಭುತವಾಗಿದೆ, ಒಂದೊಳ್ಳೆ ಥಿಯೇಟರ್ ಅನುಭವ ನೀಡುವ ಚಿತ್ರ. ಮೇಕಿಂಗ್ ಮತ್ತು ಗುಣಮಟ್ಟದ ವಿಷಯದಲ್ಲಿ ಎಲ್ಲೂ ರಾಜಿಯಾಗದೇ ದೊಡ್ಡ ಮಟ್ಟದಲ್ಲಿ ಮಾಡಿರುವ ಸಿನಿಮಾ. ಈ ಐದು ಕಾರಣಗಳಿಗಾಗಿ ಪ್ರೇಕ್ಷಕರು ನಮ್ಮ “ಮಾರ್ಟಿನ್’ ನೋಡಬೇಕು. ಇವತ್ತು ನಮಗೆ ಲಿತಾಂಶದ ದಿನ. ಖುಷಿಯ ಜತೆಗೆ ಭಯವೂ ಇದೆ. ಆದರೆ, ಮೂರೂವರೆ ವರ್ಷಗಳ ಪ್ರಾಮಾಣಿಕ ಶ್ರಮಕ್ಕೆ ಒಳ್ಳೆ ರಿಸಲ್ಟ್ ಬರುವ ನಂಬಿಕೆಯಿದೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.
ಇಲ್ಲೇ ಹೀಗಾದರೆ, ಹೇಗೆ?
ಆನ್ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಯೊಂದರಲ್ಲಿ “ಮಾರ್ಟಿನ್’ಗೆ ಬೆಂಗಳೂರಿನಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ಮಲ್ಟಿಪ್ಲೆಕ್ಸ್ ಸೇರಿ 96 ಸ್ಕ್ರೀನ್ಗಳಲ್ಲಿ ಸುಮಾರು 700 ಶೋಗಳನ್ನು ನೀಡಲಾಗಿದೆ. ಆದರೆ, ನಿನ್ನೆ ಬಿಡುಗಡೆಯಾದ ತಮಿಳಿನ “ವೆಟ್ಟೈಯಾನ್’ ಚಿತ್ರಕ್ಕೂ ಬೆಂಗಳೂರಿನಲ್ಲಿ 93 ಸ್ಕ್ರೀನ್ಗಳಲ್ಲಿ 700 ಶೋಗಳನ್ನು ನೀಡಲಾಗಿದೆ. ಆದರೆ, ಮತ್ತೊಂದೆಡೆ ಚೆನ್ನೆ$ನಲ್ಲಿ ಇದೇ “ವೆಟ್ಟೈಯಾನ್’ಗೆ 58 ಸ್ಕ್ರೀನ್ಗಳಲ್ಲಿ 720 ಶೋಗಳನ್ನು ನೀಡಿದ್ದರೆ, “ಮಾರ್ಟಿನ್’ಗೆ ಕೇವಲ ಆರು ಶೋಗಳನ್ನು ನೀಡಲಾಗಿದೆ. ಈ ಬಗ್ಗೆ ಅರ್ಜುನ್, “ಚೆನ್ನೆ$ನಲ್ಲಿ ನಾವು ನಿರೀಸಿದಷ್ಟು ಶೋಗಳಯ ಸಿಕ್ಕಿಲ್ಲ. ಇದಕ್ಕೆ ಮಲ್ಟಿಪ್ಲೆಕ್ಸ್ನವರು ಪ್ರಮುಖ ಕಾರಣ. ಪರಭಾಷಾ ಚಿತ್ರಗಳಿಗೆ ನಮ್ಮ ಕರ್ನಾಟಕದಲ್ಲಿ ಎಷ್ಟು ಶೋಗಳನ್ನು ನೀಡುತ್ತಾರೋ, ಅಷ್ಟೇ ಶೋಗಳನ್ನು ಕನ್ನಡದ ಚಿತ್ರಗಳಿಗೆ ಬೇರೆ ರಾಜ್ಯಗಳಲ್ಲೂ ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಿರ್ಮಾಪಕ, ನಿರ್ದೇಶಕ, ನಟರೂ ಚರ್ಚಿಸಿ ಒಂದು ನಿರ್ಧಾರ ತೆಗೆದುಕೊಳ್ಳಬೇಕು’ ಎನ್ನುತ್ತಾರೆ.