ರಾಜ್ಕೋಟ್: ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧ ನೇಮ್ ಸಿಂಗ್ ಜುರೆಲ್ ಪುತ್ರನಾಗಿರುವ 23 ವರ್ಷದ ಧ್ರುವ ಜುರೆಲ್, ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ಆಗಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ರಾಜ್ಕೋಟ್ನಲ್ಲಿ ಟೆಸ್ಟ್ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಕೆಎಸ್ ಭರತ್ ಬ್ಯಾಟಿಂಗ್ನಲ್ಲಿ ನಿರಾಸೆ ಮೂಡಿಸಿರುವುದರಿಂದ ಉತ್ತರ ಪ್ರದೇಶದ ಧ್ರುವ ಜುರೆಲ್ಗೆ ಅದೃಷ್ಟ ಒಲಿಯುವ ಸಾಧ್ಯತೆಗಳಿವೆ. ಜುರೆಲ್ ಇದುವರೆಗೆ ಆಡಿರುವ 15 ಪ್ರಥಮ ದರ್ಜೆ ಪಂದ್ಯಗಳಲ್ಲಿ 1 ಶತಕ, 5 ಅರ್ಧಶತಕ ಸಹಿತ 790 ರನ್ ಗಳಿಸಿದ್ದಾರೆ.
500ರ ಸನಿಹ ಅಶ್ವಿನ್
ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಕಬಳಿಸಿದ ವಿಶ್ವದ 9ನೇ ಹಾಗೂ ಭಾರತದ 2ನೇ ಬೌಲರ್ ಎನಿಸಲು ಆರ್. ಅಶ್ವಿನ್ಗೆ ಕೇವಲ 1 ವಿಕೆಟ್ ಕೊರತೆ ಇದೆ. ರಾಜ್ಕೋಟ್ ಟೆಸ್ಟ್ ಪಂದ್ಯದ ಮೊದಲ ದಿನವೇ ಅವರು ಈ ಸಾಧನೆ ಮಾಡುವರೇ ಅಥವಾ 2ನೇ ದಿನದವರೆಗೆ ಕಾಯಬೇಕಾಗುವುದೇ ಎಂಬ ಕುತೂಹಲವಿದೆ. ವಿಶಾಖಪಟ್ಟಣದಲ್ಲಿ ನಡೆದ ಕಳೆದ ಟೆಸ್ಟ್ನಲ್ಲೇ ಅಶ್ವಿನ್ 500ನೇ ವಿಕೆಟ್ ಬಹುತೇಕ ಒಲಿಸಿಕೊಂಡಿದ್ದರೂ, ಡಿಆರ್ಎಸ್ನಲ್ಲಿ ವಿಕೆಟ್ ಕೈತಪ್ಪಿತ್ತು. “ಅಶ್ವಿನ್ ನನ್ನ ತವರಿನಲ್ಲೇ (ರಾಜ್ಕೋಟ್) 500ನೇ ವಿಕೆಟ್ ಪಡೆಯಬೇಕೆಂಬುದು ವಿಧಿಲಿಖಿತವಾಗಿದೆ’ ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ (619) ಭಾರತ ಪರ 500 ವಿಕೆಟ್ ಕಬಳಿಸಿರುವ ಮೊದಲ ಬೌಲರ್ ಆಗಿದ್ದಾರೆ. ಅಶ್ವಿನ್ಗೆ ಇದು 98ನೇ ಟೆಸ್ಟ್ ಆಗಿದ್ದು, ಸರಣಿಯ ಕೊನೇ ಪಂದ್ಯದಲ್ಲಿ 100ನೇ ಟೆಸ್ಟ್ ಆಡಿದ ಸಾಧನೆ ಮಾಡಲಿದ್ದಾರೆ.
ಸ್ಟೋಕ್ಸ್ಗೆ 100ನೇ ಟೆಸ್ಟ್
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಪಾಲಿಗೆ ಇದು 100ನೇ ಟೆಸ್ಟ್ ಪಂದ್ಯವಾಗಿರಲಿದೆ. ಅವರು ಈ ಸಾಧನೆ ಮಾಡಿದ 16ನೇ ಇಂಗ್ಲೆಂಡ್ ಆಟಗಾರ ಎನಿಸಲಿದ್ದಾರೆ. 2013ರಲ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಬ್ರೆಂಡನ್ ಮೆಕ್ಕಲಂ ಕೋಚ್ ಆದ ಬಳಿಕ ಇಂಗ್ಲೆಂಡ್ ತಂಡ ಬೆನ್ ಸ್ಟೋಕ್ಸ್ ಸಾರಥ್ಯದಲ್ಲಿ ಆಡಿದ 20 ಟೆಸ್ಟ್ಗಳಲ್ಲಿ 14ರಲ್ಲಿ ಜಯಿಸಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಕೇವಲ ಬ್ಯಾಟರ್ ಆಗಿ ಆಡಿದ್ದ ಸ್ಟೋಕ್ಸ್, ಮಂಗಳವಾರ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದ್ದು, ರಾಜ್ಕೋಟ್ ಟೆಸ್ಟ್ನಲ್ಲಿ ಆಲ್ರೌಂಡರ್ ಪಾತ್ರ ನಿಭಾಯಿಸುವರೇ ಎಂಬ ಕುತೂಹಲವಿದೆ.
700ರ ಸನಿಹದಲ್ಲಿ ಆಂಡರ್ಸನ್
ಜೇಮ್ಸ್ ಆಂಡರ್ಸನ್ ಇನ್ನು 5 ವಿಕೆಟ್ ಕಬಳಿಸಿದರೆ, ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಕಬಳಿಸಿದ 3ನೇ ಬೌಲರ್ ಮತ್ತು ಮೊದಲ ವೇಗಿ ಎನಿಸಲಿದ್ದಾರೆ. ಮುತ್ತಯ್ಯ ಮುರಳೀಧರನ್ (800) ಮತ್ತು ಶೇನ್ ವಾರ್ನ್ (708) ಮೊದಲಿಬ್ಬರು.