ಏಕದಿನಕ್ಕೆ ಧೋನಿ ವಿದಾಯ?

ಲಂಡನ್: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸೀಮಿತ ಓವರ್ ಕ್ರಿಕೆಟ್​ನಿಂದ ನಿವೃತ್ತಿಯಾಗುತ್ತಾರೆಂಬ ಊಹಾಪೋಹ ಹೊಸದಲ್ಲ. ಕಳೆದ ವರ್ಷ ಇಂಥ ಸುದ್ದಿ ಹರಡಿದಾಗ ಧೋನಿ ಬ್ಯಾಟ್ ಮೂಲಕವೇ ಉತ್ತರ ನೀಡಿ 2019ರ ವಿಶ್ವಕಪ್​ವರೆಗೆ ಆಡುವ ಸಂದೇಶ ರವಾನಿಸಿದ್ದರು. ಈ ಬಾರಿ ಇಂಗ್ಲೆಂಡ್ ಪ್ರವಾಸದ ಏಕದಿನ ಸರಣಿಯಲ್ಲಿ ಧೋನಿ ರನ್ ಗಳಿಸಲು ಪರದಾಡಿದಾಗ ಮತ್ತೆ ಟೀಕೆಗೆ ಗುರಿಯಾದರು. ಪ್ರೇಕ್ಷಕರಿಂದಲೂ ಗೇಲಿ ಎದುರಿಸಿದರು. ಇದರಿಂದಾಗಿ ಧೋನಿ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳುವ ಚಿಂತನೆಯಲ್ಲಿದ್ದಾರೆ ಎಂದು ವರದಿಯಾಗಿದೆ.

ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ ಸೋಲು ಕಂಡು 1-2ರಿಂದ ಸರಣಿ ಸೋತ ಬಳಿಕ ಮೈದಾನದಿಂದ ನಿರ್ಗಮಿಸುವ ವೇಳೆ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಧೋನಿ ಅಂಪೈರ್​ರಿಂದ ಪಂದ್ಯದಲ್ಲಿ ಆಡಿದ ಚೆಂಡನ್ನು ಪಡೆದುಕೊಂಡಿದ್ದರು. ಇದರಿಂದ, 37 ವರ್ಷದ ಧೋನಿ ನಿವೃತ್ತಿ ಚಿಂತನೆಯಲ್ಲಿದ್ದಾರೆ ಎಂಬ ಸುದ್ದಿ ಹರಡಿದೆ. ಯಾಕೆಂದರೆ ಧೋನಿಯ ಈ ನಡೆ ವಿಚಿತ್ರವೆನಿಸಿದೆ. ಸಾಮಾನ್ಯವಾಗಿ ಅವರು ಭಾರತ ಪಂದ್ಯ ಗೆದ್ದ ಬಳಿಕ ಸ್ಟಂಪ್ಸ್ ಸಂಗ್ರಹಿಸುತ್ತಾರೆ. ಆದರೆ ಪಂದ್ಯ ಸೋತ ಬಳಿಕವೂ ಚೆಂಡು ಪಡೆದುಕೊಂಡಿರುವುದರಿಂದ ಇದು ಅವರ ಕೊನೇ ಏಕದಿನ ಪಂದ್ಯವಾಗಬಹುದೇ ಅಥವಾ ಇಂಗ್ಲೆಂಡ್​ನಲ್ಲಿ ಕೊನೇ ಪಂದ್ಯವೆನಿಸಬಹುದೇ ಎಂಬ ಪ್ರಶ್ನೆ ಎದ್ದಿದೆ. ಆದರೆ ಟೀಮ್ ಮ್ಯಾನೇಜ್​ವೆುಂಟ್, ‘ಇದೊಂದು ವದಂತಿ ಮಾತ್ರ’ ಎಂದು ತಳ್ಳಿಹಾಕಿದೆ. ಭಾರತ ತಂಡ ತನ್ನ ಮುಂದಿನ ಏಕದಿನ ಸರಣಿಯನ್ನು ಅಕ್ಟೋಬರ್-ನವೆಂಬರ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಆಡಲಿದೆ. ಬಳಿಕ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲೂ ಏಕದಿನ ಸರಣಿ ಆಡಲಿದೆ.

2014ರ ಅಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಡುವೆಯೇ ಧೋನಿ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರು. ಆದರೆ ಸೀಮಿತ ಓವರ್ ಕ್ರಿಕೆಟ್​ನಲ್ಲಿ ಮುಂದುವರಿದಿದ್ದಾರೆ. ಕನಿಷ್ಠ 2019ರಲ್ಲಿ ಇಂಗ್ಲೆಂಡ್​ನಲ್ಲಿಯೇ ನಡೆಯಲಿರುವ ಏಕದಿನ ವಿಶ್ವಕಪ್​ವರೆಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡುವ ನಿರೀಕ್ಷೆ ಇದೆ. ಇದುವರೆಗೆ 321 ಏಕದಿನ ಪಂದ್ಯ ಆಡಿರುವ ಧೋನಿ 51.25ರ ಸರಾಸರಿಯಲ್ಲಿ 10,046 ರನ್ ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೇ ಅವರು ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 12ನೇ ಮತ್ತು ಭಾರತದ 4ನೇ ಬ್ಯಾಟ್ಸ್​ಮನ್ ಎನಿಸಿದ್ದರು. ಹಾಲಿ ಕ್ರಿಕೆಟಿಗರಲ್ಲಿ ಅವರು ಅತ್ಯಧಿಕ ಏಕದಿನ ರನ್ ಬಾರಿಸಿರುವ ಬ್ಯಾಟ್ಸ್​ಮನ್ ಆಗಿದ್ದಾರೆ. -ಪಿಟಿಐ