ಹೆಬ್ಬೆರಳಿಗೆ ಗಾಯ, ವಿಶ್ವಕಪ್​ಗೆ ಧವನ್ ಅನುಮಾನ

ನಾಟಿಂಗ್​ಹ್ಯಾಂ: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿದ್ದ ಅನುಭವಿ ಆರಂಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್​ಗೆ ವೈದ್ಯರು ಮೂರು ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ನಡುವೆ ಮೆಡಿಕಲ್ ಟೀಮ್ ಮೇಲ್ವಿಚಾರಣೆಯಲ್ಲಿ ಧವನ್ ಇರಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದ್ದು, ತಂಡದೊಂದಿಗೆ ಅವರು ಮುಂದುವರಿಯಲಿದ್ದಾರೆ ಎಂದು ತಿಳಿಸಿದೆ.

ಮೂರು ವಾರಗಳ ವಿಶ್ರಾಂತಿ ಎಂದಲ್ಲಿ, ಜೂನ್ ಅಂತ್ಯದವರೆಗೂ ಧವನ್​ರ ಸೇವೆ ತಂಡಕ್ಕೆ ಲಭ್ಯವಿಲ್ಲ. ಆದರೆ, ಜುಲೈ 14ರವರೆಗೆ ವಿಶ್ವಕಪ್ ಟೂರ್ನಿ ನಡೆಯಲಿರುವ ಕಾರಣ ಕೊನೇ ಹಂತದ ಪ್ರಮುಖ ಪಂದ್ಯಗಳಿಗೆ ಅವರು ಫಿಟ್ ಆಗುವ ನಿರೀಕ್ಷೆ ಇದೆ. ಈ ಕಾರಣಕ್ಕಾಗಿ ಬದಲಿ ಆಟಗಾರರನ್ನು ಆಯ್ಕೆ ಮಾಡಬೇಕೋ ಅಥವಾ ಧವನ್​ರನ್ನೇ ತಂಡದಲ್ಲಿ ಉಳಿಸಿಕೊಳ್ಳಬೇಕೋ ಎನ್ನುವ ಗೊಂದಲದಲ್ಲಿ ಟೀಮ್ ಮ್ಯಾನೇಜ್​ವೆುಂಟ್ ಇದೆ. ಐಸಿಸಿಯ ನಿಯಮದ ಪ್ರಕಾರ, ಬದಲಿ ಆಟಗಾರರನ್ನು ಆಯ್ಕೆ ಮಾಡಿದಲ್ಲಿ, ಗಾಯಗೊಂಡ ಆಟಗಾರ ವಿಶ್ವಕಪ್​ನಿಂದ ಹೊರಬೀಳುತ್ತಾನೆ. ಮೂಲಗಳ ಪ್ರಕಾರ, ಸಿಟಿ ಸ್ಕಾ್ಯನ್​ನಲ್ಲಿ ಮೂಳೆ ಮುರಿತವಾಗಿದ್ದು ಕಾಣಿಸಿದ್ದರೆ, ಎಕ್ಸ್-ರೇಯಲ್ಲಿ ಮೂಳೆ ಮುರಿತವಾಗಿರುವ ಯಾವುದೇ ಲಕ್ಷಣಗಳಿಲ್ಲ. ಬಹುಶಃ ಹೇರ್​ಲೈನ್ ಫ್ರ್ಯಾಕ್ಚರ್ ಆಗಿರಬಹುದು ಎಂದು ಟೀಮ್ ಮ್ಯಾನೇಜ್​ವೆುಂಟ್ ಅಂದಾಜಿಸಿದ್ದು, ಹೆಚ್ಚಿನ ಸಲಹೆ ಪಡೆಯುವ ಸಲುವಾಗಿ ಧವನ್​ರನ್ನು ಲೀಡ್ಸ್​ಗೆ ಕಳುಹಿಸಿದೆ. -ಏಜೆನ್ಸೀಸ್

ರಿಷಭ್​ಗೆ ವಿಶ್ವಕಪ್ ಆಡುವ ಚಾನ್ಸ್?

ರಾಷ್ಟ್ರೀಯ ಆಯ್ಕೆ ಸಮಿತಿ, ಅಂಬಟಿ ರಾಯುಡು, ರಿಷಭ್ ಪಂತ್, ನವದೀಪ್ ಸೈನಿ, ಇಶಾಂತ್ ಶರ್ಮ ಹಾಗೂ ಅಕ್ಷರ್ ಪಟೇಲ್​ರನ್ನು ಮೀಸಲು ಆಟಗಾರರನ್ನಾಗಿ ಪ್ರಕಟಿಸಿತ್ತು. ಇದರ ಹೊರತಾಗಿ ಬೇರೆ ಆಟಗಾರರನ್ನೂ ಆಯ್ಕೆ ಮಾಡುವ ಅವಕಾಶ ಆಯ್ಕೆ ಸಮಿತಿಗೆ ಇದೆ. ಆದರೆ, ರಿಷಭ್ ಪಂತ್ ಬದಲಿ ಆಟಗಾರನಾಗುವ ಸಾಧ್ಯತೆ ಹೆಚ್ಚಿದ್ದು, ಕೆಎಲ್ ರಾಹುಲ್ ಆರಂಭಿಕನಾಗಿ ರೋಹಿತ್ ಶರ್ಮ ಜತೆ ಆಡಲಿದ್ದಾರೆ.

ತಂಡದ ಜತೆ ಇರಲಿರುವ ಧವನ್

ಗಾಯದ ನಡುವೆಯೂ ಆಡಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ್ದ ಧವನ್, ಐಸಿಸಿ ಟೂರ್ನಿಗಳಲ್ಲಿ ತಮ್ಮ ನಿರ್ವಹಣೆಯ ಹಿಂದೆ ಹಲವು ಬಾರಿ ತಂಡಕ್ಕೆ ಆಸರೆಯಾಗಿದ್ದಾರೆ. ಸಾಕಷ್ಟು ಅನುಭವಿಯಾಗಿರುವ ಧವನ್​ರನ್ನು ಕಳೆದುಕೊಳ್ಳುವ ಇಚ್ಛೆಯಲ್ಲಿ ತಂಡವಿಲ್ಲ. ಹಾಗೇನಾದರೂ ಮೂರು ವಾರಗಳಲ್ಲಿ ಅವರು ಚೇತರಿಕೆ ಕಾಣಲಿದ್ದಾರೆ ಎಂದು ವರದಿ ಬಂದಲ್ಲಿ ಬದಲಿ ಆಟಗಾರರನ್ನು ಆಯ್ಕೆ ಮಾಡದೇ, ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್​ರನ್ನು ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ‘ಧವನ್ ತಂಡದ ಜತೆ ಮುಂದುವರಿಯಲಿದ್ದಾರೆ. ಮೆಡಿಕಲ್ ಟೀಮ್ ಕಾಲ ಕಾಲಕ್ಕೆ ಅವರ ಗಾಯದ ಬಗ್ಗೆ ಮೇಲ್ವಿಚಾರಣೆ ಮಾಡಲಿದೆ’ ಎಂದು ಹೇಳುವ ಮೂಲಕ ಸದ್ಯಕ್ಕೆ ಬದಲಿ ಆಟಗಾರನ ಆಯ್ಕೆಯನ್ನು ಬಿಸಿಸಿಐ ಸದ್ಯದ ಮಟ್ಟಿಗೆ ತಳ್ಳಿ ಹಾಕಿದೆ.

Leave a Reply

Your email address will not be published. Required fields are marked *