ಅಧಿಕಾರಿಗಳ‌ ಎಡವಟ್ಟಿನಿಂದ ವಿಳಂಬ ಆಗಲಿದೆ ಧಾರವಾಡ ಕ್ಷೇತ್ರದ ಫಲಿತಾಂಶ ಘೋಷಣೆ

ಧಾರವಾಡ: ಎಲ್ಲರೂ ಲೋಕಸಭಾ ಕ್ಷೇತ್ರದ ಫಲಿತಾಂಶ ಮೇಲೆ ಕಣ್ಣಿಟ್ಟಿದ್ದಾರೆ. ಮೇ 23ರಂದು ಎಷ್ಟು ಹೊತ್ತಿನ ವೇಳೆಗೆ ಫಲಿತಾಂಶ ಬರುತ್ತದೋ ಎಂದು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಧಾರವಾಡ ಕ್ಷೇತ್ರದ ಲೋಕಸಭಾ ಚುನಾವಣೆಯ ಮತಗಟ್ಟೆಯಲ್ಲಿ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ಮತ ಎಣಿಕೆ ಕಾರ್ಯ ಮತ್ತು ಫಲಿತಾಂಶ ಘೋಷಣೆ ತಡವಾಗಲಿದೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 198 ಮತ್ತು 249ರ ಮತಗಟ್ಟೆ ಸಿಬ್ಬಂದಿ ಈ ಅವಾಂತರ ಮಾಡಿದ್ದು, ಮತ ಎಣಿಕೆಗೆ ಗೊಂದಲ ಸೃಷ್ಟಿ ಮಾಡಿದ್ದಾರೆ ಎನ್ನಲಾಗಿದೆ. ಆಗಿರುವುದೇನೆಂದರೆ ಅಣಕು ಮತದಾನ ಆದ ಬಳಿಕ ಮತಯಂತ್ರದಲ್ಲಿರುವ ಅಣಕು ಮತಗಳನ್ನು ತೆರವುಗೊಳಿಸಿ ಮತದಾನಕ್ಕೆ ಯಂತ್ರವನ್ನು ಅಣಿ ಮಾಡಬೇಕು. ಆದರೆ ಸಿಬ್ಬಂದಿ ಅಣಕು ಮತಗಳನ್ನು ಹಾಗೇ ಬಿಟ್ಟು ಮತದಾನಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಇದರಿಂದ ಮತ ಎಣಿಕೆ ವೇಳೆ ಗೊಂದಲ ಆಗಲಿದ್ದು ಮತ ಎಣಿಕೆ ಕಾರ್ಯ ತಡವಾಗುವ ಸಾಧ್ಯತೆ ಇದೆ.

ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್‌ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಚುನಾವಣಾ ಆಯೋಗವು ಎರಡೂ ಮತಗಟ್ಟೆಗಳ ಮತಯಂತ್ರಗಳನ್ನು ಕೊನೆಯಲ್ಲಿ ಸರಿಯಾಗಿ ಎಣಿಕೆ ಮಾಡಿ ಫಲಿತಾಂಶ ಘೋಷಿಸುವಂತೆ ಸೂಚನೆ ನೀಡಿದೆ.

ಆಯೋಗದ ಸೂಚನೆ ಮೇರೆಗೆ ಚುನಾವಣಾಧಿಕಾರಿ ಅಭ್ಯರ್ಥಿಗಳಿಗೆ ಪತ್ರ ಬರೆದಿದ್ದು, ಎರಡು ಮತಗಟ್ಟೆಯ ಮತಯಂತ್ರ ಮತ್ತು ಪ್ರಿಂಟಿಂಗ್​ ಸ್ಲಿಪ್ ಎಣಿಕೆ ಮಾಡಿ ಬಳಿಕ ಫಲಿತಾಂಶ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *