More

    ಬಾಲಕಿ ಅತ್ಯಾಚಾರ ಸಿಡಿದೆದ್ದ ಧಾರವಾಡ

    ಹುಬ್ಬಳ್ಳಿ: ವಾರದ ಹಿಂದೆ ನಡೆದ 14 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಬಳಿಕ ಆಕೆಯ ಆತ್ಮಹತ್ಯೆಗೆ ಸಾಕ್ಷಿಯಾದ ಧಾರವಾಡ ತಾಲೂಕಿನ ಬೋಗೂರ ಗ್ರಾಮದಲ್ಲಿ ಇನ್ನೂ ಸ್ಮಶಾನಮೌನ ಆವರಿಸಿದೆ. ಪೊಲೀಸರಿಗೆ ಸಿಕ್ಕಿಬಿದ್ದಿರುವ ಅತ್ಯಾಚಾರಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನದ ಸ್ವರೂಪ ಪಡೆದುಕೊಂಡಿದೆ.

    ಕಳೆದ ಗುರುವಾರ ಬೋಗೂರ ಗ್ರಾಮದ ಬಾಲಕಿ ಮೇಲೆ ಪಕ್ಕದ ಸಿಂಗನಹಳ್ಳಿ ಗ್ರಾಮದ ಬಷೀರ ಬಾಬುಸಾಬ ಗಡಾದವರ (24) ಎಂಬ ಯುವಕ ಅತ್ಯಾಚಾರ ಎಸಗಿದ್ದ. ಇದರಿಂದ ತೀವ್ರ ಘಾಸಿಗೊಂಡ ಬಾಲಕಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೋಕ್ಸೋ ಕಾಯ್ದೆಯಡಿ ಬಷೀರನನ್ನು ಬಂಧಿಸಿರುವ ಪೊಲೀಸರು ಬೋಗೂರ ಹಾಗೂ ಸಿಂಗನಹಳ್ಳಿಯಲ್ಲಿ ಬೀಡುಬಿಟ್ಟಿದ್ದಾರೆ. ಒಂದು ಗ್ರಾಮದ ಜನರು ಮತ್ತೊಂದು ಗ್ರಾಮಕ್ಕೆ ಕಾಲಿಡದಂತೆ ಎಚ್ಚರಿಕೆ ನೀಡಿದ್ದಾರೆ.

    ಗ್ರಾಮದಲ್ಲೇ 8ನೇ ತರಗತಿವರೆಗೆ ಓದಿರುವ ಬಾಲಕಿ, 9ನೇ ತರಗತಿಗಾಗಿ ಪಕ್ಕದ ಮಾದನಬಾವಿ ಗ್ರಾಮದ ಪ್ರೌಢಶಾಲೆಗೆ ತೆರಳುವವಳಿದ್ದಳು. ಉಜ್ವಲ ಭವಿಷ್ಯ ಕಾಣಬೇಕಿದ್ದ ಬಾಲಕಿ, ಕಾಮುಕನ ಹೇಯಕೃತ್ಯದಿಂದ ಅವಮಾನಿತಳಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ದುರದೃಷ್ಟ. ಕೋವಿಡ್-19ರಿಂದಾಗಿ ಶಾಲೆಗಳು ರಜೆ ಇರದಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲವೇನೋ?

    ಹೇಗಾಯ್ತು ಘಟನೆ?: ತನ್ನ ತಾಯಿಯ ಆರೋಗ್ಯ ಸರಿ ಇಲ್ಲವೆಂದು ಜು. 30ರಂದು ಮಧ್ಯಾಹ್ನ ಸುಮಾರು 2.30ಕ್ಕೆ ಮಗಳು ಹೊಲದ ಮನೆಯಿಂದ 100 ಮೀ. ದೂರದಲ್ಲಿರುವ ಪತ್ರೆಪ್ಪಜ್ಜನ ದೇವಸ್ಥಾನಕ್ಕೆ ದೀಪ ಹಚ್ಚಿ, ಪ್ರಾರ್ಥಿಸಲು ಹೋಗಿದ್ದಳು. ಈ ಸಂದರ್ಭದಲ್ಲಿ ಆಕೆಯನ್ನು ಹಿಂಬಾಲಿಸಿದ್ದ ಬಷೀರ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿರುವಾಗ ಹಿಂದಿನಿಂದ ಬಾಯಿಮುಚ್ಚಿ ಪಕ್ಕದ ಕಬ್ಬಿನ ತೋಟಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ ಪರಾರಿಯಾಗಿದ್ದ.

    ನಂತರ ಮನೆಗೆ ಮರಳಿದ ಆಕೆಯ ಬಟ್ಟೆ ಕೆಸರಾಗಿದ್ದನ್ನು ಕಂಡ ತಂದೆ-ತಾಯಿ ಪ್ರಶ್ನಿಸಿದ್ದಾರೆ. ಭಯದಲ್ಲಿದ್ದ ಆಕೆ ದೇವಸ್ಥಾನದ ಬಳಿ ಜಾರಿ ಬಿದ್ದಿದ್ದಾಗಿ ಹೇಳಿದ್ದಾಳೆ. ಮಾರನೇ ದಿನ ಬೆಳಗ್ಗೆ ಪಾಲಕರಿಗೆ ನಿಜ ಹೇಳಿದ್ದಾಳೆ. ಇದರಿಂದ ಸ್ತಂಭೀಭೂತರಾದ ಪಾಲಕರು, ‘ಮೊದಲು ಆಸ್ಪತ್ರೆಗೆ ಹೋಗೋಣ. ಬಷೀರನಿಗೆ ತಕ್ಕ ಪಾಠ ಕಲಿಸೋಣ. ಹೆದರಬೇಡ’ ಎಂದು ಧೈರ್ಯ ಹೇಳಿದ್ದಾರೆ. ಆಸ್ಪತ್ರೆಗೆ ಹೋಗಲು ಪಾಲಕರು ಸಿದ್ಧತೆ ನಡೆಸುತ್ತಿದ್ದಾಗ ಸ್ನಾನಗೃಹಕ್ಕೆ ತೆರಳಿದ ಆಕೆ, ಕಳೆನಾಶಕ ದ್ರಾವಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ತಕ್ಷಣ ಆಕೆಯನ್ನು ಸಮೀಪದ ಕಿತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೇ ತೀವ್ರ ಅಸ್ವಸ್ಥಳಾಗಿದ್ದ ಬಾಲಕಿಯನ್ನು ನಂತರ ಹೆಚ್ಚಿನ ಉಪಚಾರಕ್ಕಾಗಿ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಆ. 2ರಂದು ಸಾವಿಗೀಡಾಗಿದ್ದಾಳೆ. ಘಟನೆ ಸಂಬಂಧ ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪರಿಚಿತನಿಂದಲೇ ಕೃತ್ಯ: ಅತ್ಯಾಚಾರವೆಸಗಿದ ಬಷೀರ ಮೃತ ಬಾಲಕಿಯ ಪಾಲಕರಿಗೆ ಪರಿಚಿತನೇ. ಪಕ್ಕದ ಹೊಲ ಉಳುಮೆ ಮಾಡುತ್ತಿದ್ದ ಆತ ಆಗಾಗ್ಗೆ ಇವರ ಮನೆಗೆ ಬಂದು ಹೋಗುತ್ತಿದ್ದ. ಇವರ ಹೊಲದಲ್ಲಿಯೂ ಉಳುಮೆಗೆ ಸಹಾಯ ಮಾಡುತ್ತಿದ್ದ.

    ಈ ಮೊದಲು ಬೋಗೂರ ಗ್ರಾಮದ ಕೇರಿಯಲ್ಲಿಯೇ ಬಾಲಕಿ ಮನೆ ಇತ್ತು. ಕೃಷಿ ಕಾರ್ಯದ ಅನುಕೂಲಕ್ಕಾಗಿ ಕಳೆದ ವರ್ಷ ಹೊಲದಲ್ಲಿ ಮನೆ ಮಾಡಿದ್ದರು. ಬಷೀರನ ಪಾಲಕರು ಸಿಂಗನಹಳ್ಳಿ ಗ್ರಾಮದ ಹೊರವಲಯದ ಹೊಲದಲ್ಲಿ ಮನೆ ಮಾಡಿಕೊಂಡಿದ್ದಾರೆ. ಈ ಘಟನೆಯ ನಂತರ ಬಷೀರನ ನಾಲ್ವರೂ ಅಣ್ಣಂದಿರು ವಿಚಾರಣೆಗೆ ಸಿಗುತ್ತಿಲ್ಲ. ನಾಲ್ವರ ಮೊಬೈಲ್ ಫೋನ್ ಸಹ ಸ್ವಿಚ್ಡ್ ಆಫ್ ಇದೆಯೆಂದು ಗರಗ ಠಾಣೆಯ ಪೊಲೀಸರು ‘ವಿಜಯವಾಣಿ’ ಗೆ ತಿಳಿಸಿದ್ದಾರೆ. ಆರೋಪಿ ಬಷೀರನ ಅತ್ತಿಗೆ, ‘ಬೆಳಗ್ಗೆಯಿಂದ ಸಂಜೆಯವರೆಗೆ ಹೊಲದಲ್ಲಿ ಕೆಲಸ ಮಾಡಿ ಜೀವನ ಸಾಗಿಸುವ ಕುಟುಂಬ ನಮ್ಮದು. ಬಷೀರ ಹೀಗೆ ಮಾಡುತ್ತಾನೆಂದು ಕನಸಲ್ಲೂ ಯೋಚಿಸಿರಲಿಲ್ಲ’ ಎಂದು ದುಃಖದಿಂದ ಹೇಳಿದರು.

    ಭುಗಿಲೆದ್ದ ಆಕ್ರೋಶ: ಬಾಲಕಿಯ ಅತ್ಯಾಚಾರ ಘಟನೆ ವಿರುದ್ಧ ಧಾರವಾಡ ಜಿಲ್ಲೆಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಬಾಲಕಿಗೆ ನ್ಯಾಯ ಕೊಡಿಸಬೇಕೆಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭಗೊಂಡಿದೆ. ಅತ್ಯಾಚಾರಿಗೆ ಶಿಕ್ಷೆಯಾಗುವವರೆಗೂ ಹೋರಾಟ ನಡೆಸಲಾಗುವುದು. ಇಂತಹ ಘಟನೆ ಮರುಕಳಿಸಬಾರದು. ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಅಭಿಯಾನ ಚುರುಕುಗೊಂಡಿದೆ.

    ಓದು ಹಾಗೂ ಆಟದಲ್ಲಿ ಚುರುಕಾ ಗಿದ್ದಳು. ಆಕೆಯ ಕಂಠ ಸುಮ ಧರವಾಗಿತ್ತು. ಹೀಗಾಗಿ ಶಾಲೆಯಲ್ಲಿ ಯಾವುದೇ ಕಾರ್ಯ ಕ್ರಮ ಇದ್ದರೂ ಆಕೆಯಿಂದಲೇ ಪ್ರಾರ್ಥನಾ ಗೀತೆ ಹೇಳಿಸುತ್ತಿದ್ದೆವು. ಆಕೆಯ ದುರಂತ ನಮಗೆಲ್ಲ ಆಘಾತ ತಂದಿದೆ.

    | ಬಿ.ಎಸ್. ಪಾಟೀಲ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೋಗೂರ

    ಹೆತ್ತ ಕರುಳಿನ ಸಂಕಟ

    ‘ಹೊತ್ತು ಹೆತ್ತು ಸಾಕಿದ ಮಗಳು ಕಾಮುಕನಿಗೆ ಬಲಿಯಾದಳ್ರಿ… ಗಿಳಿ ಹಂಗೆ ಇದ್ದ ಮಗಳು ಹದ್ದಿನ ಅಟ್ಟಹಾಸಕ್ಕೆ ಸಿಕ್ಕು ಬಾರದ ಲೋಕಕ್ಕೆ ಹೋಗಿಬಿಟ್ಟಳು….’- ಬಾಲಕಿಯ ಪಾಲಕರ ರೋದನ ಇದು. ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಹಿರಿಯ ಮಗನಿಗೆ 19 ವಯಸ್ಸು, 16 ವಯಸ್ಸಿನ 2ನೇ ಮಗಳು 10ನೇ ತರಗತಿಯಲ್ಲಿದ್ದಾಳೆ. 3ನೇ ಮಗಳಾದ ಇವಳು ಮುದ್ದಿನ ಹುಡುಗಿ, ಸುಂದರವಾಗಿದ್ದಳು. ಆಟ, ಪಾಠದಲ್ಲಿಯೂ ಮುಂದಿದ್ದಳು. ತಾಯಿ ಆರೋಗ್ಯ ಸುಧಾರಿಸುವಂತೆ ದೇವರಲ್ಲಿ ಪ್ರಾರ್ಥಿಸಲು ಹೋಗಿದ್ದ ನಮ್ಮ ಮಗಳನ್ನು ರಾಕ್ಷಸ ಕೊಂದುಬಿಟ್ಟ’ ಎಂದು ಕಣ್ಣೀರು ಸುರಿಸಿದರು. ‘ಮಗಳನ್ನು ನಮ್ಮಿಂದ ದೂರ ಮಾಡಿದವನಿಗೆ ಗಲ್ಲು ಶಿಕ್ಷೆ ಆಗಲೇಬೇಕು. ಆಕೆ ಅದೆಷ್ಟು ನರಳಾಡಿದಳೋ, ನೋವು ಅನುಭವಿಸಿದಳೋ ಅದೆಲ್ಲವನ್ನೂ ಆ ಅತ್ಯಾಚಾರಿಯೂ ಅನುಭವಿಸಬೇಕು’ ಎಂದರು.

    ಬಷೀರನನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ. ದೋಷಾರೋಪ ಪಟ್ಟಿಯನ್ನು ಸಕಾಲದಲ್ಲಿ ಸಲ್ಲಿಸಲಾಗುತ್ತದೆ. ಮುಂದಿನ ಕ್ರಮವನ್ನು ನ್ಯಾಯಾಲಯ ತೆಗೆದುಕೊಳ್ಳಲಿದೆ.

    | ವರ್ತಿಕಾ ಕಟಿಯಾರ್ ಧಾರವಾಡ ಎಸ್​ಪಿ

    ಬಾಲಕಿ ಪಾಲಕರೊಂದಿಗೆ ಸಂಪರ್ಕದಲ್ಲಿದ್ದೇವೆ. ಅತ್ಯಾಚಾರಿಯನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಆರೋಪಿಗೆ ಶಿಕ್ಷೆಯಾಗುವವರೆಗೂ ಬಾಲಕಿ ಕುಟುಂಬದೊಂದಿಗೆ ಇರುತ್ತೇವೆ.
    | ವಿಜಯಲಕ್ಷ್ಮೀ ಧಾರವಾಡಕರ ಭ್ರಷ್ಟಾಚಾರ ನಿಮೂಲನೆ ಮತ್ತು ಮಾನವ ಹಕ್ಕುಗಳ ಫೋರಂ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ

    ಬಾಲಕಿ ನಿವಾಸಕ್ಕೆ ಶಾಸಕರ ಭೇಟಿ

    ಧಾರವಾಡ: ಬೋಗೂರ ಗ್ರಾಮದ ಬಾಲಕಿ ನಿವಾಸಕ್ಕೆ ಶಾಸಕ ಅಮೃತ ದೇಸಾಯಿ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಾಲಕಿಯ ತಂದೆ-ತಾಯಿ ಕಣ್ಣೀರಿಡುತ್ತ ಸಂಕಷ್ಟ ತೋಡಿಕೊಂಡರು. ‘ಪ್ರಕರಣದ ಕೂಲಂಕಷ ತನಿಖೆಯಾಗುತ್ತಿದೆ. ಅತ್ಯಾಚಾರಿಗೆ ತಕ್ಕ ಶಿಕ್ಷೆಯಾಗುವರೆಗೂ ನಾನು ಮತ್ತು ಅಧಿಕಾರಿಗಳು ನಿಮ್ಮ ಕುಟುಂಬದ ಬೆಂಗಾವಲಾಗಿರುತ್ತೇವೆ’ ಎಂದು ಶಾಸಕರು ಭರವಸೆ ನೀಡಿದರು.

    1 ಲಕ್ಷ ರೂ. ಪರಿಹಾರ

    ಮೃತ ಬಾಲಕಿ ಕುಟುಂಬಕ್ಕೆ ಶಾಸಕ ಅಮೃತ ದೇಸಾಯಿ ಜತೆ ಸೇರಿ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶನಿವಾರ ತಿಳಿಸಿದ್ದಾರೆ.

    ಜನಪ್ರತಿನಿಧಿಗಳು ಮಾತಾಡಲಿ…

    ನಿರ್ಭಯಾ, ದಿಶಾ, ಆಶಾ ಅತ್ಯಾಚಾರ ಪ್ರಕರಣಗಳು ದೇಶದಾದ್ಯಂತ ನ್ಯಾಯಕ್ಕಾಗಿ ಕೂಗು ಎಬ್ಬಿಸಿದ್ದವು. ಈ ಪ್ರಕರಣ ನಡೆದು ವಾರವಾದರೂ ಜಿಲ್ಲೆಯ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಅತ್ಯಾಚಾರಕ್ಕೀಡಾದ ಬಾಲಕಿಯ ಪಾಲಕರಿಗೆ ಸಾಂತ್ವನ ಹೇಳಿ ಅವರ ಬೆನ್ನಿಗೆ ನಿಲ್ಲಬೇಕಿದ್ದ ಜನಪ್ರತಿನಿಧಿಗಳಲ್ಲಿ ಬೆರಳೆಣಿಕೆಯವರು ಬಿಟ್ಟರೆ ಉಳಿದವರು ಗ್ರಾಮಕ್ಕೆ ಕಾಲಿಟ್ಟಿಲ್ಲ. ಪ್ರಕರಣದ ಬಗ್ಗೆ ಧ್ವನಿ ಎತ್ತಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಮಾತನಾಡಬೇಕಿದೆ. ಅತ್ಯಾಚಾರಿಗೆ ಕಠಿಣ ಶಿಕ್ಷೆಯಾಗುವಂತೆ ಪ್ರಯತ್ನಿಸಬೇಕಿದೆ.

    ಬೋಗೂರ ಗ್ರಾಮದ ಬಾಲಕಿ ಅತ್ಯಾಚಾರ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಆತ ಎಷ್ಟೇ ಪ್ರಭಾವಿಯಾಗಿದ್ದರೂ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
    | ಬಸವರಾಜ ಬೊಮ್ಮಾಯಿ ಗೃಹ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts