ಧಾರವಾಡ ಕಟ್ಟಡ ಕುಸಿತ: ಪ್ರಾಣದ ಹಂಗು ತೊರೆದು 17 ಜನರ ಜೀವ ರಕ್ಷಿಸಿದ ಸಾಹಸಿ

ಧಾರವಾಡ: ಕಳೆದ ಮಂಗಳವಾರ ಧಾರವಾಡದಲ್ಲಿ ನಿರ್ಮಾಣ ಹಂತದ ನಾಲ್ಕಂತಸ್ತಿನ ಕಟ್ಟಡ ಕುಸಿದ ತಕ್ಷಣ ಹಲವರು ತಮ್ಮ ಪ್ರಾಣದ ಹಂಗು ತೊರೆದು ಕಟ್ಟಡದ ಅವಶೇಷಗಳ ಅಡಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬರು ರಕ್ಷಣಾ ಸಿಬ್ಬಂದಿ ಆಗಮಿಸುವ ಮೊದಲೇ 17 ಜನರನ್ನು ಅವಶೇಷಗಳ ಅಡಿಯಿಂದ ರಕ್ಷಿಸಿ ಸಾಹಸ ಮೆರೆದಿದ್ದಾರೆ.

ಕಟ್ಟಡ ಕುಸಿದ ಸುದ್ದಿ ತಿಳಿದ ತಕ್ಷಣ ಅಗ್ನಿ ಶಾಮಕ ದಳದ ಸಿಬ್ಬಂದಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ನಂತರ ಎಸ್​ಡಿಆರ್​ಎಫ್​ ಮತ್ತು ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದರು. ರಕ್ಷಣಾ ಸಿಬ್ಬಂದಿಯೊಂದಿಗೆ ಬಸವರಾಜ ಜಾಧವ ಎಂಬುವವರು ಕಟ್ಟಡದ ಅವಶೇಷಗಳ ಅಡಿ ನುಗ್ಗಿ ಅಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇವರ ಸಾಹಸ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಯು.ಟಿ. ಖಾದರ್​ ಭೇಟಿ

ಕಟ್ಟಡ ಕುಸಿದ ಸ್ಥಳಕ್ಕೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್​ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಖಾದರ್​ ಇದೊಂದು ದುರದೃಷ್ಟಕರ ಘಟನೆ. ಘಟನೆಗೆ ಸಂಬಂಧಿಸಿದಂತೆ ಏಳು ಜನ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಖಡಕ್​ ಎಚ್ಚರಿಕೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ತಮ್ಮವರಿಗಾಗಿ ಸ್ಥಳದಲ್ಲೇ ಕಾದು ಕುಳಿತ ಸಂಬಂಧಿಕರು

ಕಳೆದ ಐದು ದಿನಗಳಿಂದ ಕಟ್ಟಡದ ಅವಶೇಷಗಳ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅವಶೇಷಗಳ ಅಡಿ ಸಿಲುಕಿರುವ ವಾಘೂ, ನವಲು ಮತ್ತು ಸಹದೇವ ಎಂಬುವವರ ಕುಟುಂಬಸ್ಥರು ಮತ್ತು ಸಂಬಂಧಿಕರು ಘಟನಾ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ತಮ್ಮವರಿಗಾಗಿ ಕಾಯುತ್ತಿದ್ದಾರೆ.