ಧಾರವಾಡ ಸಾಹಿತ್ಯ ಸಂಭ್ರಮ 18ರಿಂದ

ಧಾರವಾಡ: ಖ್ಯಾತ ವಿಮರ್ಶಕ, ಹಿರಿಯ ಸಾಹಿತಿ ದಿ. ಡಾ. ಗಿರಡ್ಡಿ ಸಮರ್ಪಿತ ‘ಧಾರವಾಡ ಸಾಹಿತ್ಯ ಸಂಭ್ರಮ’ದ 7ನೇ ಆವೃತ್ತಿಯನ್ನು ಜ. 18ರಿಂದ 20ರವರೆಗೆ ನಗರದ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಡಾ. ರಾಘವೇಂದ್ರ ಪಾಟೀಲ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18ರಂದು ಬೆಳಗ್ಗೆ 9.30ಕ್ಕೆ ಸರೋಜಾ ಗಿರಡ್ಡಿ ಪುಸ್ತಕ ಮಳಿಗೆ ಉದ್ಘಾಟಿಸುವರು. ಗಿರಡ್ಡಿ ಅವರ ವಿವಿಧ ಭಾವಚಿತ್ರಗಳನ್ನು ಕ್ರೋಡೀಕರಿಸಿ ‘ಗಿರಡ್ಡಿ ಭಾವಸಂಚಯ’ ಪ್ರದರ್ಶನಕ್ಕಿರಲಿದ್ದು, ಅದನ್ನು ಉಮಾದೇವಿ ಕಲಬುರ್ಗಿ ಉದ್ಘಾಟಿಸುವರು. ಬೆಳಗ್ಗೆ 10 ಗಂಟೆಗೆ ಹಿರಿಯ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸಂಭ್ರಮ ಉದ್ಘಾಟಿಸುವರು. ಪ್ರೊ. ಪ್ರಮೋದ ಗಾಯಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ನಾಡೋಜ ಚೆನ್ನವೀರ ಕಣವಿ ಸಮೀಕ್ಷೆ ಬಿಡುಗಡೆ ಮಾಡುವರು ಎಂದರು.

ಸಂಭ್ರಮದ 3 ದಿನಗಳಲ್ಲಿ 17 ಗೋಷ್ಠಿಗಳು ಇರಲಿದ್ದು, ಸಮಯಾವಕಾಶ ನೀಡುವ ಉದ್ದೇಶದಿಂದ ಬೆಳಗ್ಗೆ 9.30ಕ್ಕೆ ಮೊದಲ ಗೋಷ್ಠಿ ‘ದಲಿತ ಸಂಕಥನ’ ವಿಶೇಷ ಉಪನ್ಯಾಸ ನಡೆಯಲಿದೆ. 2ನೇ ಗೋಷ್ಠಿ ‘ಡಾ. ಗಿರಡ್ಡಿ ಗೋವಿಂದರಾಜ: ಒಂದು ಸಾಂಸ್ಕೃತಿಕ ನೆನಪು’ ಇರಲಿದ್ದು, ಅವರ ವ್ಯಕ್ತಿತ್ವದ ಸಾಂಸ್ಕೃತಿಕ ಮಹತ್ವವನ್ನು ನಿರೂಪಿಸಲಿದೆ. ಗಾಂಧೀಜಿಯವರ 150ನೇ ಜನ್ಮ ಜಯಂತಿ ಅಂಗವಾಗಿ ‘ಮಹಾತ್ಮಾ ಗಾಂಧಿ- 150 ‘ಹಿಂದ್ ಸ್ವರಾಜ್’ದ ಆಯ್ದ ಭಾಗಗಳ ನಿವೇದನೆ, ಹಿಂದ್ ಸ್ವರಾಜ್: ಗಾಂಧಿಯವರ ದರ್ಶನ’ ಗೋಷ್ಠಿ ಇರಲಿದೆ. ತತ್ವಪದ, ಲೇಖಕರೊಂದಿಗೆ ಸಂವಾದ, ಪು.ತಿ.ನ, ಆನಂದಕಂದ, ಕೆ.ಎಸ್.ನ ಅವರ ಭಾವಗೀತೆಗಳ ಸುಗಮ ಸಂಗೀತ ಗೋಷ್ಠಿಗಳು ನಡೆಯಲಿವೆ.

19ರಂದು ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು ವಿಶೇಷ ಉಪನ್ಯಾಸ, ನವೋದಯ ಕವಿಗಳ ಕವಿತೆ ವಾಚನ, ಜಾನಪದ ಕಲೆ ಪ್ರಾತ್ಯಕ್ಷಿಕೆ, ಕೊಡಗು- ಕೇರಳಗಳ ಜಲಪ್ರಳಯಗಳ ಹಿಂದಿನ ನೆಲದ ಸತ್ಯಗಳು’ ಕುರಿತು ಗೋಷ್ಠಿ ಇರಲಿದೆ ಎಂದರು.

ಜ. 20ರಂದು ಸಾಹಿತ್ಯ ಕೃತಿಗಳ ಮರುಓದು, ಪ್ರಸಂಗಗಳು, ‘ರಾಜಕಾರಣದಲ್ಲಿ ಗಾಂಧೀಜಿಯವರ ತಾತ್ವಿಕತೆಯನ್ನು ಜೀವಂತಗೊಳಿಸಿಕೊಳ್ಳಲು ಸಾಧ್ಯವೇ?’, ಜನ್ನನ ಯಶೋದರ ಚರಿತೆ: ಗಮಕ ಮತ್ತು ವ್ಯಾಖ್ಯಾನ ಗೋಷ್ಠಿಗಳು ಜರುಗಲಿವೆ. ಸಂಜೆ 6ಕ್ಕೆ ಸಮಾರೋಪ- ಕೃಷ್ಣಮೂರ್ತಿ ಹನೂರು ಅವರಿಂದ ಸಮೀಕ್ಷೆ, ನಂತರ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾಸಂಗಮ ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಪಾಟೀಲ ತಿಳಿಸಿದರು.

ಪ್ರತಿವರ್ಷದಂತೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ ತೆರೆಯಲಾಗುವುದು. ಸಂಭ್ರಮಕ್ಕೆ 30 ಲಕ್ಷ ರೂ. ಬಜೆಟ್ ನಿಗದಿಪಡಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ 400 ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ. ಕೆಲ ಗೋಷ್ಠಿಗಳಿಗೆ ಪ್ರಾಯೋಜಕತ್ವ ಸಿಕ್ಕಿದೆ ಎಂದು ಡಾ. ರಾಘವೇಂದ್ರ ಪಾಟೀಲ ಪ್ರತಿಕ್ರಿಯಿಸಿದರು.

ಸಾಹಿತ್ಯ ಸಂಭ್ರಮ ಟ್ರಸ್ಟ್​ನ ಪದಾಧಿಕಾರಿಗಳಾದ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ರಮಾಕಾಂತ ಜೋಶಿ, ಡಾ. ಲೋಹಿತ್ ನಾಯ್ಕರ್, ಡಾ. ಬಾಳಣ್ಣ ಶೀಗಿಹಳ್ಳಿ, ಹ.ವೆಂ. ಕಾಖಂಡಕಿ, ಸಮೀರ ಜೋಶಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.