ಸಿರಿಧಾನ್ಯಗಳ ವಿಸ್ತಾರಕ್ಕೆ ಹೊಸ ನೀತಿ-ಯೋಜನೆ

ಧಾರವಾಡ: ರೈತರಿಗೆ ಆತ್ಮಹತ್ಯೆ ವಿಚಾರ ಬರುತ್ತಿರುವುದುದು ನಿಜಕ್ಕೂ ಗಂಭೀರ ವಿಚಾರ. ರೈತರ ಸಂಕಷ್ಟ ನಿವಾರಣೆಗೆ ಸಮ್ಮಿಶ್ರ ಸರ್ಕಾರ ಸಾಲ ಮನ್ನಾ ಮಾಡಿದೆ. ರೈತರ ಖಾಸಗಿ ಸಾಲ ಮನ್ನಾ ಮಾಡಿರುವುದು ದೇಶದಲ್ಲೇ ಮೊದಲು. ಜಗತ್ತಿಗೆ ಅನ್ನ ನೀಡುವ ರೈತರು ಹತಾಶರಾಗಬಾರದು ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ 4 ದಿನಗಳ ಕೃಷಿ ಮೇಳಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.ಕೃಷಿಯಲ್ಲಿ ಖರ್ಚು ಹೆಚ್ಚಿಗೆ ಆಗುತ್ತಿದ್ದು, ಆದಾಯ ಕುಸಿತವಾಗುತ್ತಿದೆ. ಶೂನ್ಯ ಬಂಡವಾಳ ಕೃಷಿ ಪದ್ಧತಿ ಬೆಳವಣಿಗೆ, ಸಾವಯವ ಕೃಷಿಗೆ ಪ್ರೋತ್ಸಾಹ, ಸಿರಿಧಾನ್ಯಗಳ ವಿಸ್ತಾರಕ್ಕೆ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ. ಸಿರಿಧಾನ್ಯಗಳ ಸಂಸ್ಕರಣೆ ಸವಾಲಿನ ಕೆಲಸ. ಆದಾಗ್ಯೂ ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಹೊಸ ಯೋಜನೆ-ನೀತಿ ನಿರೂಪಿಸುತ್ತಿದೆ ಎಂದರು. ಇಸ್ರೇಲ್ ಮಾದರಿ ಕೃಷಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಅಲ್ಲಿನ ಪದ್ಧತಿಯನ್ನು ರಾಜ್ಯದಲ್ಲಿ ಹೇಗೆ ಅಳವಡಿಸಬೇಕು ಎಂಬುದರ ಬಗ್ಗೆ ಚಿಂತನೆ ನಡೆದಿದೆ. ಅಲ್ಲಿ ಸಾಮೂಹಿಕ ಕೃಷಿ, ಸಹಕಾರಿ ತತ್ವದಡಿ ಕೃಷಿ ಇದೆ. ನಮ್ಮಲ್ಲಿ ಸಣ್ಣ ಹಿಡುವಳಿ ಇರುವುದು ಸಮಸ್ಯೆಯಾಗಿದೆ. ಸಹಕಾರಿ ಕೃಷಿಗೆ ನಮ್ಮ ರೈತರನ್ನು ಮನವೊಲಿಸಬೇಕಿದೆ ಎಂದರು.  ಸಚಿವರು ಕೃಷಿ ವಿವಿ ಪ್ರಕಟಿಸಿದ ಪ್ರಕಟಣೆಗಳು ಹಾಗೂ ರೈತಸ್ನೇಹಿ ಆಪ್ ಬಿಡುಗಡೆಗೊಳಿಸಿದರು. ಅಧ್ಯಕ್ಷತೆ ವಹಿಸಿದ್ದ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಮಾತನಾಡಿ, ಇಂದು ರೈತರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಫ್ಯಾಕ್ಟರಿಗಳಲ್ಲಿ ಕನಿಷ್ಠ ವೇತನದ ನೌಕರಿ ಸಿಕ್ಕರೆ ಸಾಕು ಎನ್ನುವ ಮನೋಭಾವ ಹೊಂದಿದ್ದಾರೆ. ಕೃಷಿ ಲಾಭದಾಯಕ ಎಂಬುದನ್ನು ಸಾಬೀತುಪಡಿಸಲು ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಸಂಶೋಧನಾ ಕೇಂದ್ರಗಳು ಮಾರ್ಗದರ್ಶನ ನೀಡಬೇಕು ಎಂದರು.

ಕೃಷಿ ವಿವಿ ಕುಲಪತಿ ಡಾ. ಎಂ.ಬಿ. ಚೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ, ಮಾಜಿ ಸಂಸದ ಪೊ›. ಐ.ಜಿ. ಸನದಿ, ಕುಲಸಚಿವ ಎಚ್. ಬಸವರಾಜ, ವಿಸ್ತರಣಾ ನಿರ್ದೇಶಕ ಡಾ. ಆರ್.ಆರ್. ಪಾಟೀಲ, ವಿವಿ ಆಡಳಿತ ಮಂಡಳಿ ಸದಸ್ಯರು, ಕೆಎಂಎಫ್ ನಿರ್ದೇಶಕ ಶಂಕರ ಮುಗದ, ಇತರರಿದ್ದರು.

ಕೃಷಿ ಮೇಳಕ್ಕೆ ಹರಿದುಬಂದ ಜನಸ್ತೋಮ

ಕೃಷಿ ಮೇಳದಲ್ಲಿ ಭಾನುವಾರ ಭಾರಿ ಜನಸ್ತೋಮ ಕಂಡುಬಂತು. 4 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ವಿಶ್ವವಿದ್ಯಾಲಯದ ಬೀಜ ಘಟಕದಿಂದ 2ನೇ ದಿನ 183.8 ಕ್ವಿಂಟಲ್ ಹಿಂಗಾರು ಬೆಳೆಗಳ ಬೀಜ (7.75 ಲಕ್ಷ ರೂ. ಮೌಲ್ಯ) ಮಾರಾಟವಾದವು. ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ 537 ರೈತರು ಭೇಟಿ ನೀಡಿ ವಿಜ್ಞಾನಿಗಳ ಜೊತೆ ರ್ಚಚಿಸಿ ಸಲಹೆ ಪಡೆದರು. ಮುಖ್ಯ ವೇದಿಕೆಯಲ್ಲಿ ಮಧ್ಯಾಹ್ನ ನಡೆದ ‘ರೈತರಿಂದ ರೈತರಿಗಾಗಿ’ ಸಂವಾದ ಕಾರ್ಯಕ್ರಮದಲ್ಲಿ ಹೈನುಗಾರಿಕೆ, ಕರಕುಶಲತೆ, ಸೌರಬೆಳಕಿನ ಕೀಟನಾಶಕ ಯಂತ್ರ, ಸಾವಯವ ಕೃಷಿ ವೆಬ್​ಸೈಟ್ ವಿಷಯಗಳ ಬಗ್ಗೆ ಪ್ರಗತಿಪರ ರೈತರಾದ ಬಸವನಬಾಗೇವಾಡಿಯ ನರೇಂದ್ರ ಪಾಟೀಲ, ಶಿರಸಿಯ ಕುಸುಮಾ ಹೆಗಡೆ, ಮಲೆಬೆನ್ನೂರಿನ ಕರಿಬಸಯ್ಯ ಎಂ.ಈ., ಗೋಕಾಕ್​ನ ಗೋಪಾಲ ಯಾದವಾಡ, ತಮ್ಮ ಕೃಷಿಯಲ್ಲಿನ ಸಾಧನೆಗಳನ್ನು ಹಂಚಿಕೊಂಡರು. ಇದೇವೇಳೆ ಗುಲಾಬಿ ಕಾಯಿಕೊರಕ ನಿರ್ವಹಣೆ ಹಾಗೂ ಮೆಕ್ಕೆಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಕುರಿತು ವಿಚಾರಗೋಷ್ಠಿ ಜರುಗಿತು.

ರೆಸಾರ್ಟ್ ರಾಜಕಾರಣ ಇಲ್ಲ

ಯಾವ ರೆಸಾರ್ಟ್ ರಾಜಕಾರಣವೂ ನಡೆಯುತ್ತಿಲ್ಲ. ಎಲ್ಲವೂ ಮಾಧ್ಯಮಗಳ ಸೃಷ್ಟಿ ಅಷ್ಟೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಡುವು ಇಲ್ಲದ ಕಾರ್ಯಕ್ರಮ ಗಳಿಂದಾಗಿ ಕೃಷಿ ಮೇಳಕ್ಕೆ ಬಂದಿಲ್ಲ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿದರು. ಭಾನುವಾರ ಕೃಷಿ ಮೇಳ ಉದ್ಘಾಟನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಬೇರೆ ಕಾರ್ಯಕ್ರಮಗಳಿಗೆ ತೆರಳಿದ್ದರಿಂದ ಇಲ್ಲಿಗೆ ಬಂದಿಲ್ಲ. ಹಾಗಂತ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯಲ್ಲ. ನಮ್ಮದು ಸಮಗ್ರ ಕರ್ನಾಟಕ ಧೋರಣೆ ಎಂದರು.

ಕೇಂದ್ರಕ್ಕೆ ಪ್ರಸ್ತಾವನೆ

ರಾಜ್ಯದಲ್ಲಿ ಬೆಂಬಲ ಬೆಲೆಯಡಿ ಹೆಸರು ಖರೀದಿ ಕೇಂದ್ರಗಳನ್ನು ತೆರೆದು ನೋಂದಣಿ ಮಾಡಿಸಲಾಗಿದೆ. ಕೇಂದ್ರ ಸರ್ಕಾರ ಹೆಸರು ಕಾಳು ಖರೀದಿಗೆ ಮಿತಿ ಹೆರಿದೆ. ಆದರೆ ರೈತರು ಹೆಸರು ಬೆಳೆಯನ್ನು ಹೆಚ್ಚಿಗೆ ಬೆಳೆದಿದ್ದು, ಕೇಂದ್ರ ಸರ್ಕಾರ ನಿಯಮಗಳನ್ನು ಸಡಿಲಗೊಳಿಸಬೇಕು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು.

ಮೇಳಕ್ಕೆ ಮೆರಗು ನೀಡಿದ ಶ್ವಾನ ಪ್ರದರ್ಶನ

ಕೃಷಿ ಮೇಳದಲ್ಲಿ ಶ್ವಾನ ಮೇಳ ಪ್ರದರ್ಶನ ಹಮ್ಮಿಕೊಂಡಿದ್ದು ಕೃಷಿ ಮೇಳಕ್ಕೆ ಸಾಕಷ್ಟು ಮೆರಗು ನೀಡಿದೆ. ಒಂದಕ್ಕಿಂತ ಒಂದು ಶ್ವಾನಗಳು ನೋಡುಗರನ್ನು ಆಕರ್ಷಿಸುತ್ತಿವೆ. ಪ್ರದರ್ಶನಕ್ಕೆ ಆಗಮಿಸಿದ್ದ ದೇಶ, ವಿದೇಶದ ತಳಿಗಳನ್ನು ಜನರು ವೀಕ್ಷಿಸಿ ಮೊಬೈಲ್​ನಲ್ಲಿ ಶ್ವಾನಗಳ ಚಿತ್ರ ಸರೆ ಹಿಡಿಯುತ್ತಿದ್ದರೆ, ನಿತ್ಯವೂ ಮನೆ ಆವರಣದಲ್ಲಿ ವಾಸವಾಗಿದ್ದ ಶ್ವಾನಗಳು ಭಾರಿ ಪ್ರಮಾಣದ ಜನರನ್ನು ನೋಡಿ ಬೆಚ್ಚಿಬಿದ್ದು ಬೊಗಳುತ್ತಿದ್ದವು. ಹೀಗಾಗಿ ತಮ್ಮ ಪ್ರೀತಿಯ ಶ್ವಾನಗಳನ್ನು ಸಮಾಧಾನ ಪಡಿಸುವುದೇ ಮಾಲೀಕರಿಗೆ ದೊಡ್ಡ ತಲೆ ನೋವಾಗಿತ್ತು.

ಬೆಳಗ್ಗೆಯಿಂದ ಅತ್ಯಂತ ಹುರುಪಿನಿಂದ ಪಾಲ್ಗೊಂಡಿದ್ದ ಶ್ವಾನಗಳನ್ನು ಯುವಕರು ಕಾಡಿಸಿ ಕಾಡಿಸಿ ಮಜಾ ಪಡೆಯಿತ್ತಿದ್ದರೆ, ಕೆಲವರು ಭಯಂಕರ ರೂಪದ ಶ್ವಾನಗಳನ್ನು ನೋಡಿ ಗಾಬರಿಯಿಂದ ಹಿಂದೆ ಸರಿಯುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು. ಜರ್ಮನ್ ಶಫರ್ಡ್, ರಾಟ್​ವಿಲ್ಲರ್, ಆಫ್ರಿನ್ ಹೌಂಡ್, ಪಗ್, ಬುಲ್​ಡಾಗ್, ಚೌಚೌ, ಲ್ಯಾಬ್ರಡರ್, ಪೆಕಿನ್ಸ್, ಫಾಕ್ಸ್ ಟೆರಿಯರ್ ಸೇರಿದಂತೆ 16 ತಳಿಯ 42 ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಬಾಗಲಕೋಟೆ ಮುಧೋಳ ತಾಲೂಕಿನ ತಿಮ್ಮಾಪುರ ಶ್ವಾನ ಸಂಶೋಧನ ಹಾಗೂ ಮಾಹಿತಿ ಕೇಂದ್ರದಿಂದ ತರಲಾಗಿದ್ದ ಮುಧೋಳ ಜಾತಿಯ ಶ್ವಾನಗಳು ಜಾನುವಾರು ಪ್ರದರ್ಶನದ ಕೇಂದ್ರ ಬಿಂದುವಾಗಿದ್ದವು. ಮುಧೋಳ ತಳಿಯ ಹೆಣ್ಣು ಮರಿಗೆ 9500 ಹಾಗೂ ಗಂಡು ಮರಿಗೆ 10 ಸಾವಿರ ರೂ. ನಿಗದಿ ಮಾಡಿದ್ದು, ಅನೇಕ ರೈತರು ಖರೀದಿಗೆ ಮುಂದಾಗಿದ್ದರು.

ಹೊಸ ಬಗೆಯ ಶ್ವಾನ

ಆಫ್ರಿಕನ್ ಬೋಯರ್ ಬೋಯಲ್ ಹಾಗೂ ಅಮೆರಿಕನ್ ಬುಲ್ ತಳಿಯ ಮೂರು ಶ್ವಾನಗಳು ಈ ಬಾರಿಯ ಮೇಳದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಹುಬ್ಬಳ್ಳಿ ನವನಗರದ ಜೇಸನ್ ಅವರ ಆಫ್ರಿಕನ್ ಬೋಯರ್ ಬೋಯಲ್, ವಿನಾಯಕ ಹೆಗಡೆ ಅವರ ಬಳಿ ಅಮೆರಿಕ ಬುಲ್ ತಳಿಯ ಶ್ವಾನ ಹಾಗೂ ಮುಂಡಗೋಡ ಟಿಬೆಟಿಯನ್ ಕ್ಯಾಂಪ್​ನ ಇದೇ ತಳಿಯ ಎರಡು ಶ್ವಾನಗಳು ಮೇಳದಲ್ಲಿ ಗಮನ ಸೆಳೆದವು. ಮಾಜಿ ಸಚಿವ ವಿನಯ ಕುಲಕರ್ಣಿ ಮಾಲೀಕತ್ವದ ವಿನಯ ಡೇರಿಯ ನಾನಾ ತಳಿಯ ಕುದುರೆ, ಆಕಳು, ಹೋರಿ, ಎತ್ತುಗಳು ಜಾನುವಾರು ಪ್ರದರ್ಶನದಲ್ಲಿ ಗಮನ ಸೆಳೆದವು. ಹುಬ್ಬಳ್ಳಿ ನೇಕಾರನಗರದ ಎಂ.ಬಿ. ಪಾಟೀಲ ಮಾಲೀಕತ್ವದ ಕಾಟೇವಾಡಿ ತಳಿಯ ಎರಡು ಬಿಳಿ ಕುದುರೆಗಳು ಸಹ ಇದ್ದವು. ಕಳೆದ ಬಾರಿ ಜಾನುವಾರುಗಳ ಕೊರತೆ ಅನುಭವಿಸಿದ್ದ ಪ್ರದರ್ಶನಕ್ಕೆ ಈ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.