ಭಾಷೆಗಳಿಗೆ ಚೌಕಟ್ಟು ನಿರ್ಮಿಸಲು ಭಾಷಾ ನೀತಿ ಜಾರಿ ಅವಶ್ಯ: ಚಂದ್ರಶೇಖರ ಕಂಬಾರ

ಇಂದು ನನಗೆ ಕೊಟ್ಟ ಸ್ವಾಗತ ನೋಡಿ ಮಾತೇ ಬರುತ್ತಿಲ್ಲ ; ಧಾರವಾಡದಲ್ಲಿ ಮಾತನಾಡುವುದು 10 ಜನ್ಮದ ಪುಣ್ಯದ ಫಲ

ಧಾರವಾಡ: ಸಾಹಿತ್ಯ ಸಮ್ಮೇಳನವೂ ಒಂದು ಕನ್ನಡದ ಹಬ್ಬವಾಗಿದೆ. ನನಗೆ ಇಂದು ಕೊಟ್ಟ ಸ್ವಾಗತ ನೋಡಿ ಮಾತೇ ಬರುತ್ತಿಲ್ಲ ಎಂದು 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ‌ಚಂದ್ರಶೇಖರ ಕಂಬಾರ ಅವರು ಸಂತಸ ವ್ಯಕ್ತಪಡಿಸಿದರು.

ಶುಕ್ರವಾರದಿಂದ ಆರಂಭವಾಗುವ ಮೂರು ದಿವಸದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾರಥ್ಯವಹಿಸಲು ಇಂದು ಧಾರವಾಡಕ್ಕೆ ಆಗಮಿಸಿದ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಈ ವೇಳೆ ಕಸಾಪ ‌ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಭಾಷಾ ನೀತಿಯನ್ನು ‌ಜಾರಿಗೆ ತರಬೇಕಿದೆ
ಸರ್ಕಾರ ಇಂಗ್ಲಿಷ್ ಮಾಧ್ಯಮ ಮಾಡಲು ಹಠ ಹಿಡಿದಿದೆ. ನಾವೆಲ್ಲ‌ರೂ ಕನ್ನಡ ಅಂತಿದ್ದೀವೆ. ಕೇಂದ್ರ ಸರ್ಕಾರದಲ್ಲೂ ತುಂಬಾ ಸಮಸ್ಯೆಗಳಿವೆ. ಅವರು ಒಂದು ಭಾಷಾ ನೀತಿಯನ್ನು ‌ಜಾರಿಗೆ ತರಬೇಕಿದೆ. ಭಾಷೆಗಳಿಗೆ ಸರಿಯಾದ ಚೌಕಟ್ಟು ನಿರ್ಮಾಣ ಮಾಡಬೇಕಿದ್ದು, ಈ‌ ಬಗ್ಗೆ ನಾವು ನಾಳಿನ ಸಮ್ಮೇಳನದಲ್ಲಿ ಚರ್ಚೆ ಮಾಡೋಣ ಎಂದು ಹೇಳಿದರು.

ಎಲ್ಲಿಯೂ ಸಮ್ಮೇಳನ ನಡೆಯುವುದಿಲ್ಲ
ಸಮ್ಮೇಳನ ಒಂದು ಕನ್ನಡದ ಹಬ್ಬವಾಗಿದೆ. ಒಂದು ಕರುಳ ಬಳ್ಳಿಯ ಮಿಳಿತ ಈ ಸಮ್ಮೇಳನದಲ್ಲಿ ಕಂಡುಬಂದಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಇಂತಹ ಸಾಹಿತ್ಯ ಸಮ್ಮೇಳನ ಆಗುತ್ತದೆ. ಇಲ್ಲಿ ಬಿಟ್ಟು, ಜಗತ್ತಿನ ಯಾವ ಭಾಷೆಯಲ್ಲಿಯೂ ಇಂತಹ ಸಮ್ಮೇಳನ ನಡೆಯುವುದಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಸನ್ಮಾನ ಮಾತ್ರ ಸ್ವೀಕರಿಸಿಲ್ಲ
ಕೇರಳ, ಮಧ್ಯಪ್ರದೇಶ, ತಮಿಳನಾಡು ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಿಂದ ನನಗೆ ಪ್ರಶಸ್ತಿ ಹಾಗೂ ಸನ್ಮಾನ ದೊರೆತಿದೆ. ಆದರೆ, ಮಹಾರಾಷ್ಟ್ರದ ಸನ್ಮಾನ ಮಾತ್ರ ಸ್ವೀಕರಿಸಿಲ್ಲ. ನನಗೆ ಇಂದು ತವರು ಮನೆಯಲ್ಲಿ ಸಿಕ್ಕ ಸ್ವಾಗತದ ಸನ್ಮಾನ ತುಂಬಾ ಖುಷಿ ಕೊಟ್ಟಿದೆ ಎಂದರು.

ಸರ್ವಾಧ್ಯಕ್ಷ ಸ್ಥಾನ ಸಿಕ್ಕಿರುವುದು ನನ್ನ ಪುಣ್ಯ
ನಾನು, ಡಾ. ಎಂ.ಎಂ.ಕಲಬುರ್ಗಿ, ಚಂಪಾ, ಗಿರಡ್ಡಿ ಗೋವಿಂದರಾಜ್ ಹಾಗೂ ಸಿದ್ದಲಿಂಗ ಪಟ್ಟಣಶೆಟ್ಟಿ ಪಂಚ ಪಾಂಡವರಾಗಿದ್ವಿ. ಇಂತಹ ಊರಿನ ಸಮ್ಮೇಳನದಲ್ಲಿ ನನಗೆ ಸರ್ವಾಧ್ಯಕ್ಷ ಸ್ಥಾನ ಸಿಕ್ಕಿರುವುದು ನನ್ನ ಪುಣ್ಯ. ಧಾರವಾಡ ಒಂದು ತಪೋಭೂಮಿ ಹಾಗೂ ಕರ್ಮಭೂಮಿ ಆಗಿದೆ. ಇದೊಂದು ದೊಡ್ಡ ಜಾಗೃತ ಸ್ಥಳ. ಇಂತಹ ಸ್ಥಳದಲ್ಲಿ ನಿಂತು ಭಾಷಣ ಮಾಡುವ ಅವಕಾಶ ಲಭಿಸಿರುವುದು ನನ್ನ 10 ಜನ್ಮದ ಪುಣ್ಯದ ಫಲ ಎಂದು ಹೇಳಿದರು.