ಧಾರವಾಡ ಸಂಗೀತ, ಸಾಹಿತ್ಯ ಹೋರಾಟದ ತವರೂರು

ಧಾರವಾಡ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಕೃಷಿ ವಿವಿಯ ಪ್ರೇಕ್ಷಾಗೃಹದಲ್ಲಿ ಶನಿವಾರ ‘ಧಾರವಾಡ ಜಿಲ್ಲಾ ದರ್ಶನ’ ಗೋಷ್ಠಿ ನಡೆಯಿತು.

ಸಂಗೀತ ಕ್ಷೇತ್ರಕ್ಕೆ ಕೊಡುಗೆ ವಿಷಯ ಮಂಡಿಸಿದ ಡಾ. ಶಾಂತರಾಮ ಹೆಗಡೆ, ಧಾರವಾಡ ಸಂಗೀತಕ್ಕೆ 120 ವರ್ಷಗಳ ಇತಿಹಾಸವಿದೆ. ರಾಷ್ಟ್ರಕ್ಕೆ ಪ್ರಸಿದ್ಧ ಗಾಯಕರನ್ನು ನೀಡಿದೆ. ಹಿಂದೂಸ್ತಾನಿ ಸಂಗೀತದ ಜೈಪುರ ಘರಾಣೆ, ಗ್ವಾಲಿಯರ್ ಘರಾಣೆ, ಆಗ್ರಾ ಘರಾಣೆ ರಾಗಗಳನ್ನ ಪ್ರಸ್ತುತಪಡಿಸವರು ಇಲ್ಲಿನ ಕಲಾವಿದರು. ಹಿಂದೂಸ್ತಾನಿ ಸಂಗೀತದ ಹೆಬ್ಬಾಗಿಲು ಧಾರವಾಡ. ಉತ್ತರ ಭಾರತದ ಅನೇಕ ಕಲಾವಿದರು ಧಾರವಾಡದಲ್ಲಿ ನೆಲೆ ನಿಂತು ಸಂಗೀತ ಬೆಳೆಸಿದರು. ಕುಂದಗೋಳ ವಾಡೆ ಅಪಾರವಾದ ಸಂಗೀತ ಕಲಾವಿದರನ್ನು ಬೆಳೆಸಿದೆ. ಅಲ್ಲಿ ಹಾಡಿದವರು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪಂ. ಮಲ್ಲಿಕಾರ್ಜುನ ಮನ್ಸೂರ, ಪಂ. ಗಂಗೂಬಾಯಿ ಹಾನಗಲ್ಲ, ಪಂ. ರಾಜಗುರು, ಇತರರು ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಹೋರಾಟ ಪರಂಪರೆ ಕುರಿತು ವಿಷಯ ಮಂಡನೆ ಮಾಡಿದ ಡಾ. ಡಿ.ಎಂ. ಹಿರೇಮಠ, ಧಾರವಾಡ ಹೋರಾಟದ ತವರು. ಇಲ್ಲಿ 18 ಹೋರಾಟಗಳು ನಿರಂತರವಾಗಿ ನಡೆದಿವೆ. ಕರ್ನಾಟಕ ಏಕೀಕರಣ, ಗಡಿ ಹೋರಾಟ, ಗೋಕಾಕ್ ಚಳವಳಿ, ಮಹಿಷಿ ಹೋರಾಟ, ನೈರುತ್ಯ ರೈಲ್ವೆ, ಹೈಕೋರ್ಟ್, ಹೀಗೆ 18 ರೀತಿಯ ಹೋರಾಟಗಳು ನಡೆದಿವೆ. ಕರ್ನಾಟಕ ಏಕೀಕರಣಕ್ಕೆ 1953ರಲ್ಲಿ ಹುಬ್ಬಳ್ಳಿಯ ಶಂಕರಗೌಡ ಪಾಟೀಲ ಮಾಡಿದ ಉಪವಾಸ ಸ್ಮರಣೀಯ. 1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಗೊಂಡಿತು. ಧಾರವಾಡದ ಕಡಪಾ ಮೈದಾನ ಹೋರಾಟಗಳ ವೇದಿಕೆಯಾಗಿತ್ತು. ಬೇಂದ್ರೆ ಬರೆದ ನರಬಲಿ ಎಂಬ ಪದ್ಯ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿತ್ತು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗಳು ವಿಷಯ ಮಂಡಿಸಿದ ಡಾ. ಬಾಳಣ್ಣ ಶೀಗಿಹಳ್ಳಿ, 1856ರಲ್ಲಿ ಡೆಪ್ಯೂಟಿ ಚೆನ್ನಬಸಪ್ಪನವರು ಶಿಕ್ಷಕರ ತರಬೇತಿ ಸಂಸ್ಥೆ ಸ್ಥಾಪಿಸಿದರು. ಅದನ್ನು ಮಾದರಿ ಸಂಸ್ಥೆಯಾಗಿ ಮಾಡಿದರು. ಕೆಲ ಬ್ರಿಟಿಷ್ ಅಧಿಕಾರಿಗಳು ಧಾರವಾಡದಲ್ಲಿ ಕನ್ನಡ ಶಾಲೆ ಆರಂಭಿಸಲು ಪೋ›ತ್ಸಾಹ ನೀಡಿದ್ದರು. ಕರ್ನಾಟಕ ಕಾಲೇಜ್, ಬಾಸೆಲ್ ಮಿಶನ್ ಸಂಸ್ಥೆಗಳ ಸ್ಥಾಪನೆ ಮತ್ತು ಕೊಡುಗೆ ಸ್ಮರಣೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ. ಗುರುಲಿಂಗ ಕಾಪಸೆ ಮಾತನಾಡಿ, ಸಂಗೀತ, ಶಿಕ್ಷಣ ಕ್ಷೇತ್ರದಲ್ಲಿ ಧಾರವಾಡ ಅಪಾರವಾದ ಸಾಧನೆ ಮಾಡಿದೆ. ಅಖಂಡ ಕರ್ನಾಟಕ ಎಂದರೆ ಗೋದಾವರಿಯಿಂದ ಕಾವೇರಿವರಿಗೆ. ಆದರೆ, ಕಾವೇರಿಯಿಂದ ಭೀಮಾನದಿಗೆ ಬಂದು ನಿಂತಿದ್ದೆವೆ. ಬೇಂದ್ರೆ ದೇಶದಲ್ಲಿಯೇ ಶ್ರೇಷ್ಠ ಸಾಹಿತಿ. ನಾನು ಎಲ್ಲ ಭಾಷೆಯಲ್ಲಿ ಸಾಹಿತ್ಯ ಅಧ್ಯಯನ ಮಾಡಿದ್ದೇನೆ. ಆದರೆ, ಬೇಂದ್ರೆ ಅವರಂತ ಸಾಹಿತ್ಯ ಸಿಕ್ಕಿಲ್ಲ. ಧಾರವಾಡದ ನೆಲದ ಸಾಹಿತ್ಯಕ್ಕೆ ನಾಲ್ಕು ಜ್ಞಾನಪೀಠ ಪ್ರಶಸ್ತಿ ಸಿಕ್ಕಿವೆ. ಆದ್ದರಿಂದ ಧಾರವಾಡ ಸಾಹಿತ್ಯದ ಇತಿಹಾಸದ ಕುರಿತು ಗೋಷ್ಠಿಯಲ್ಲಿ ಇಡಬೇಕಾಗಿತ್ತು. ಮಕ್ಕಳಿಗೆ ಪ್ರಾರಂಭದಲ್ಲಿ ಮಾತೃಭಾಷೆ ಕಲಿಸಬೇಕು. ನಂತರ ಪರ ಭಾಷೆಗಳನ್ನು ಕಲಿಸಬೇಕು. ಪೂರ್ಣಚಂದ್ರ ತೇಜಸ್ವಿ, ಕಂಬಾರರ ಸಾಕಷ್ಟು ಕೃತಿಗಳು ಆಧುನಿಕ ಸಾಹಿತ್ಯಕ್ಕೆ ಮಾದರಿಯಾಗಿವೆ. ಧಾರವಾಡದಲ್ಲಿ ಕಲಬುರ್ಗಿ, ಗಿರಡ್ಡಿ ಗೋವಿಂದರಾಜ ಅವರಂತ ಶ್ರೇಷ್ಠ ವಿಮರ್ಶಕರಿದ್ದರು. ಆದ್ದರಿಂದ ಧಾರವಾಡ ಸಾಹಿತ್ಯ ಕೃಷಿಗೆ ಅಪಾರ ಕೊಡುಗೆ ನೀಡಿದೆ ಎಂದರು.