ದಶಕದ ನಂತರ ಧಾರವಾಡ ಹೈಕೋರ್ಟ್‌ನಲ್ಲಿ ರಜಾಕಾಲದ ನ್ಯಾಯಪೀಠದ ವಿಚಾರಣೆ

ಧಾರವಾಡ : ದಶಕದ ನಂತರ ಮೊದಲ ಬಾರಿಗೆ ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠದಲ್ಲಿ ರಜಾ ಕಾಲದ ನ್ಯಾಯಪೀಠ ಗುರುವಾರ ಕಲಾಪ ಆರಂಭಿಸಿತು.

ನ್ಯಾ. ಕೆ.ಎಸ್. ಮುದಗಲ್ ಮತ್ತು ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ಪೀಠ, 2 ಮೇಲ್ಮನವಿ ಪ್ರಕರಣಗಳನ್ನು ವಿಚಾರಣೆ ಮಾಡಿತು. ನಂತರ ಏಕಸದಸ್ಯ ಪೀಠವಾಗಿ ಬೇರ್ಪಟ್ಟು ತಲಾ 25 ಪ್ರಕರಣಗಳನ್ನು ವಿಚಾರಣೆ ನಡೆಸಿದರು.

ಧಾರವಾಡದಲ್ಲಿ 2008ರಲ್ಲಿ ಉಚ್ಚ ನ್ಯಾಯಾಲಯ ಸಂಚಾರಿ ಪೀಠ ಸ್ಥಾಪನೆಯಾಗಿತ್ತು. ರಜಾಕಾಲದ ನ್ಯಾಯಪೀಠ ಆರಂಭಿಸುವಂತೆ ವಕೀಲರ ಸಂಘದಿಂದ ಮುಖ್ಯನ್ಯಾಯಮೂರ್ತಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು.

ಬೇಸಿಗೆ ರಜೆ, ಚಳಿಗಾಲದ ರಜಾ ಕಾಲದಲ್ಲಿ ಕೋರ್ಟ್​ಗೆ ದೀರ್ಘಕಾಲ ರಜೆ ಇರುತ್ತದೆ. ಈ ವೇಳೆ ತುರ್ತು ಪ್ರಕರಣಗಳನ್ನು ವಿಚಾರಣೆ ಮಾಡಲು ರಜಾಕಾಲದ ನ್ಯಾಯಪೀಠ ಅಗತ್ಯವಿದೆ. ಈ ಮೊದಲು ಬೆಂಗಳೂರು ಹೈಕೋರ್ಟ್‌ನಲ್ಲಿ ಮಾತ್ರ ರಜಾಕಾಲದ ನ್ಯಾಯಪೀಠ ಇತ್ತು.