More

    77 ಅಭ್ಯರ್ಥಿಗಳ ಠೇವಣಿ ಠುಸ್

    ಧಾರವಾಡ: ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಲ್ಲಿ 92 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ರಾಜಕೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಹಾಗೂ ಪಕ್ಷೇತರ ಸೇರಿ 77 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಶೋಕಿಗಾಗಿ ಸ್ಪರ್ಧಿಸಿದ್ದವರ ಠೇವಣಿ ಜಪ್ತಿಯಾಗುವಂತೆ ಮತದಾರರು ಪಾಠ ಕಲಿಸಿದ್ದಾರೆ.
    ನವಲಗುಂದ ಕ್ಷೇತ್ರದಲ್ಲಿ ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ಹೊರತುಪಡಿಸಿ 11 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಕುಂದಗೋಳದಲ್ಲಿ ಸ್ಪರ್ಧಿಸಿದ್ದ 14 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಹಾಗೂ ಪಕ್ಷೇತರ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಹೊರತುಪಡಿಸಿ 11 ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳುವಲ್ಲಿ ವಿಲರಾಗಿದ್ದಾರೆ. ಇನ್ನು ಧಾರವಾಡ 71 ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 11ರಲ್ಲಿ 9 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಹು-ಧಾ ಪೂರ್ವದಲ್ಲಿ ಬಿಜೆಪಿಯ ಡಾ. ಕ್ರಾಂತಿಕಿರಣ ಹೊರತುಪಡಿಸಿ 9 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
    ಹು- ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಗದೀಶ ಶೆಟ್ಟರ್ ಬಿಟ್ಟು 9 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದೀಪಕ ಚಿಂಚೋರೆ ಹೊರತುಪಡಿಸಿ, 13 ಜನ ಮತ್ತು ಕಲಘಟಗಿ ಕ್ಷೇತ್ರದಲ್ಲಿ ನಾಗರಾಜ ಛಬ್ಬಿ ಬಿಟ್ಟರೆ 10 ಸ್ಪರ್ಧಿಗಳ ಠೇವಣಿ ಜಪ್ತಿಯಾಗಿದೆ.
    ಚುನಾವಣಾ ಆಯೋಗದ ನಿರ್ದೇಶನದಂತೆ ಸಾಮಾನ್ಯ ಅಭ್ಯರ್ಥಿಗೆ 10,000 ರೂ. ಹಾಗೂ ಎಸ್‌ಸಿ- ಎಸ್‌ಟಿ ಅಭ್ಯರ್ಥಿಗೆ 5,000 ರೂ. ಠೇವಣಿ ಮೊತ್ತ ನಿಗದಿಯಾಗಿತ್ತು. ನಾಮಪತ್ರ ಸಲ್ಲಿಸುವ ವೇಳೆ ಆಯಾ ಕ್ಷೇತ್ರದ ಚುನಾವಣಾಧಿಕಾರಿ ಠೇವಣಿ ಭರಿಸಿಕೊಂಡಿದ್ದರು. ಚಲಾವಣೆಯಾದ ಒಟ್ಟು ಮತಗಳಲ್ಲಿ ನೋಟಾ ತೆಗೆದು ಉಳಿಯುವ ಮತಗಳ 6ನೇ ಭಾಗದಷ್ಟು ಮತ ಪಡೆದವರ ಠೇವಣಿ ಉಳಿಯುತ್ತದೆ. ಠೇವಣಿ ಕಳೆದುಕೊಂಡವರ ಮೊತ್ತವನ್ನು ಆಯೋಗದ ಪ್ರತ್ಯೇಕ ಲೆಕ್ಕಶೀರ್ಷಿಕೆಯ (ಹೆಡ್) ಖಾತೆಗೆ ಜಮೆ ಮಾಡಲಾಗುತ್ತದೆ.

    8,736 ನೋಟಾ ಮತ

    ಜಿಲ್ಲೆಯ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 92 ಅಭ್ಯರ್ಥಿಗಳಲ್ಲಿ ಯಾರೂ ಬೇಡ ಎಂದು ನಿರ್ಧರಿಸಿ, 8,736 ನೋಟಾ ಮತಗಳು ಚಲಾವಣೆಯಾಗಿವೆ. ಪ್ರತಿ ಕ್ಷೇತ್ರದ ವಿದ್ಯುನ್ಮಾನ ಮತಯಂತ್ರದ ಪಟ್ಟಿಯಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ನಂತರ ನೋಟಾ (ಮೇಲಿನ ಯಾರೂ ಅಲ್ಲ) ಎಂದು ಮತ ಚಲಾಯಿಸಲು ಅವಕಾಶವಿದ್ದು, 8,736 ನೋಟಾ ಮತ ಚಲಾಯಿಸಿದ್ದಾರೆ.

    1,851 ಮತ ತಿರಸ್ಕಾರ

    80ಕ್ಕೂ ಹೆಚ್ಚು ವಯಸಿನವರು, ಅಂಗವಿಕಲರ ಅನುಕೂಲಕ್ಕಾಗಿ ಈ ಬಾರಿ ಮನೆಯಿಂದಲೇ ಮತದಾನದ ಅವಕಾಶ ಕಲ್ಪಿಸಲಾಗಿತ್ತು. ಚುನಾವಣಾ ಸಿಬ್ಬಂದಿಯು ಮನೆಗೆ ಹೋಗಿ ಬ್ಯಾಲೆಟ್ ಪತ್ರ ನೀಡಿ ಮತ ಚಲಾವಣೆಗೆ ಅವಕಾಶ ನೀಡಿದ್ದರು. ಅದೇ ರೀತಿ ವಿವಿಧ ಸೇವಾ ಮತದಾರರಿಗೆ ಅಂಚೆ ಮತದಾನಕ್ಕೆ ಅವಕಾಶವಿತ್ತು. ಅವರಲ್ಲಿ 1,851 ಮತದಾರರು ಸರಿಯಾಗಿ ಮತ ಚಲಾಯಿಸದಿರುವುದರಿಂದ ತಿರಸ್ಕೃತಗೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts