ವಿಧಾನ ಪರಿಷತ್ ಉಪಸಭಾಪತಿಯಾಗಿ ಧರ್ಮೇಗೌಡ ಅವಿರೋಧ ಆಯ್ಕೆ

ಬೆಳಗಾವಿ: ವಿಧಾನ ಪರಿಷತ್ ಉಪಸಭಾಪತಿಯಾಗಿ ಜೆಡಿಎಸ್‌ನ ಎಸ್.ಎಲ್.ಧರ್ಮೇಗೌಡ ಅವಿರೋಧ ಆಯ್ಕೆಯಾದರು.

ಜೆಡಿಎಸ್‌ನ ಆರ್.ಚೌಡರೆಡ್ಡಿ ತೂಪಲ್ಲಿ, ಬಸವರಾಜ ಹೊರಟ್ಟಿ ಉಪಸಭಾಪತಿ ಸ್ಥಾನಕ್ಕೆ ಧರ್ಮೇಗೌಡರ ಹೆಸರನ್ನು ಸೂಚಿಸಿದರು. ಕೆ.ಟಿ.ಶ್ರೀಕಂಠೇಗೌಡ ಹಾಗೂ ಎನ್.ಅಪ್ಪಾಜಿ ಅವರು ಅನುಮೋದಿಸಿದರು.
ಬಳಿಕ ಸದಸ್ಯರೆಲ್ಲರೂ ಪಕ್ಷಭೇದ ಮರೆತು ಹಸ್ತಲಾಘವ ನೀಡಿ ಧರ್ಮೇಗೌಡರನ್ನು ಉಪಸಭಾಪತಿ ಪೀಠಕ್ಕೆ ಕರೆ ತಂದರು.

ನೂತನ ಉಪ ಸಭಾಪತಿಯವರನ್ನು ಅಭಿನಂದಿಸಿ ಮಾತನಾಡಿದ ಸಭಾನಾಯಕಿ ಜಯಮಾಲಾ, ಎಸ್.ಎಲ್.ಧರ್ಮೇಗೌಡರು ಧರ್ಮರಾಯನಿದ್ದಂತೆ. ಅವರ ಸಹೋದರ ಭೋಜೇಗೌಡರು ಅರ್ಜುನನಿದ್ದಂತೆ. ಧರ್ಮೇಗೌಡರು ಧರ್ಮರಾಯರಾಗಿ ಸದನದ ಧರ್ಮಪಾಲನೆ ಎತ್ತಿಹಿಡಿಯಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬಸವರಾಜ ಹೊರಟ್ಟಿ, ಧರ್ಮೇಗೌಡರು ಮೊದಲು ಭೋಜೇಗೌಡರನ್ನು ಕಟ್ಟಿಹಾಕಬೇಕು ಎಂದಾಗ ಜಯಮಾಲಾ, ಧರ್ಮರಾಯರು ಅರ್ಜುನನಂತಿರುವ ಭೋಜೇಗೌಡರನ್ನು ಕಂಟ್ರೋಲ್ ಮಾಡುತ್ತಾರೆ ಎಂದರು.

ಆಗ ಹಾಸ್ಯ ಚಟಾಕಿ ಹಾರಿಸಿದ ಲೆಹರ್ ಸಿಂಗ್, ಧರ್ಮರಾಯರ ಮಾತನ್ನು ಅರ್ಜುನ ಕೇಳುವುದಾದರೆ ಧರ್ಮರಾಯರ ಮಾತನ್ನು ಕೇಳದ ದುರ್ಯೋಧನರು ಇಲ್ಲಿ ಯಾರು ಎಂದು ಗೊತ್ತಾಗಬೇಕು ಎಂದರು.

ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಧರ್ಮೇಗೌಡರು ಅವಿರೋಧ ಆಯ್ಕೆಯಾದದ್ದು ಖುಷಿ ತಂದಿದೆ. ಚಿಂತಕರ ಚಾವಡಿಯಲ್ಲಿ ಧರ್ಮೇಗೌಡರು ಉತ್ತಮವಾಗಿ ಕೆಲಸ ಮಾಡುತ್ತಾರೆ. ಶಾಸಕಾಂಗದ ಮೇಲೆ ಸದನ ನಡೆಯುತ್ತದೆಯೇ ಹೊರತು ವ್ಯಕ್ತಿಗಳಿಂದಲ್ಲ. ಆಡಳಿತ ಚಕ್ರ ಸರಿಯಾಗಿ ನಡೆಯಲು ಪ್ರತಿಪಕ್ಷ ಬಹು ಮುಖ್ಯ. ಹಾಗಾಗಿ ಪ್ರತಿಪಕ್ಷ ಸದಸ್ಯರಿಗೆ ಹೆಚ್ಚು ಆದ್ಯತೆ ನೀಡಬೇಕು. ಧರ್ಮೇಗೌಡರು ರಾಜಧರ್ಮ ಪಾಲಿಸಬೇಕು ಎಂದು ಮನವಿ ಮಾಡಿದರು.

ಬಸವರಾಜ ಹೊರಟ್ಟಿ ಮಾತನಾಡಿ, ನನಗೆ ಯಾವಾಗಲೂ ಭೋಜೇಗೌಡರಿಗಿಂತ ಧರ್ಮೇಗೌಡ ಮೇಲೆ ಪ್ರೀತಿ ಜಾಸ್ತಿ. ಈ ಹಿಂದೆ ಸದನದಲ್ಲಿ ಈಶ್ವರಪ್ಪ ಮತ್ತು ಉಗ್ರಪ್ಪ ಇದ್ದರು. ಈಗ ಈಶ್ವರಪ್ಪ ಸ್ಥಾನವನ್ನು ವಿಪಕ್ಷ ಉಪನಾಯಕ ವೈ.ಎ. ನಾರಾಯಣಸ್ವಾಮಿ ತುಂಬಿದರೆ, ಉಗ್ರಪ್ಪ ಸ್ಥಾನವನ್ನು ಭೋಜೇಗೌಡ ತುಂಬಿದ್ದಾರೆ. ಉಗ್ರಪ್ಪ ಯಾವಾಗಲೂ ಕಾನೂನು ಪುಸ್ತಕ ಕೈಯಲ್ಲೇ ಇಟ್ಟುಕೊಂಡಿರುತ್ತಿದ್ದರೆ, ಭೋಜೇಗೌಡ ಕಿಸೆಯಲ್ಲೇ ಇಟ್ಟುಕೊಂಡಿರುತ್ತಾರೆ.

ನಾನು ಸಭಾಪತಿ ಸ್ಥಾನದಿಂದ ಬೇಗ ಕೆಳಗೆ ಇಳಿದಿದ್ದು ಒಳ್ಳೆಯದಾಯ್ತು, ಭೋಜೇಗೌಡ ನನ್ನ ಮೇಲೆ ಗುರಿ ಇಟ್ಟಿದ್ದ. ಭೋಜೇಗೌಡರನ್ನು ಧರ್ಮೇಗೌಡರು ಸ್ವಲ್ಪ ಕಂಟ್ರೋಲ್ ಮಾಡಲಿ ಎಂದು ಸಭೆಯಲ್ಲಿ ನಗೆ ಉಕ್ಕುವಂತೆ ಮಾಡಿದರು.

ಸಚಿವ ಕೆ.ಜೆ.ಜಾರ್ಜ್, ಚಿಕ್ಕಮಗಳೂರಿಗೆ ಸಚಿವ ಸ್ಥಾನ ನೀಡಿಲ್ಲ. ಈಗ ಧರ್ಮೇಗೌಡರು ಉಪಸಭಾಪತಿಗಳಾಗಿದ್ದು, ಜಿಲ್ಲೆಗೆ ಸಂತಸ ಉಂಟು ಮಾಡಿದೆ. ಧರ್ಮೇಗೌಡರು ಸೌಮ್ಯ ಸ್ವಭಾವದವರಾದರೆ, ಭೋಜೇಗೌಡ ದೊಡ್ಡ ಮಾತುಗಾರರು. ಇಬ್ಬರೂ ರಾಜಕಾರಣದಲ್ಲಿರಬೇಕು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಉಪ ಸಭಾಪತಿ ಧರ್ಮೇಗೌಡ, ನಿಮ್ಮೆಲ್ಲರ ಹಾರೈಕೆಯಿಂದ ಹೃದಯ ತುಂಬಿ ಬಂದಿದೆ. ಈ ಸ್ಥಾನವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ತಂದೆ-ತಾಯಿ ಆಶೀರ್ವಾದದಿಂದ ನನಗೆ ಈ ಸ್ಥಾನ ಲಭಿಸಿದೆ ಎಂದು ಹೇಳಿದರು.

ಬಿಜೆಪಿ ಉಪ ನಾಯಕ ವೈ.ಎ.ನಾರಾಯಣಸ್ವಾಮಿ, ಸಿ.ಎಂ.ಇಬ್ರಾಹಿಂ, ಆಯನೂರು ಮಂಜುನಾಥ್, ತೇಜಸ್ವಿನಿಗೌಡ, ಎಂ.ಕೆ.ಪ್ರಾಣೇಶ್, ಐವಾನ್ ಡಿಸೋಜ, ರಮೇಶ್‌ಗೌಡ, ಶರವಣ ಅಭಿನಂದನಾ ಮಾತುಗಳನ್ನಾಡಿದರು.