2999 ಗ್ರಾಮಗಳಿಗೆ ಟ್ಯಾಂಕರ್ ನೀರು: ರಾಜ್ಯದ ಇತಿಹಾಸದಲ್ಲೇ ದಾಖಲೆ, ನೆರವಿಗಾಗಿ ಕೇಂದ್ರಕ್ಕೆ ಕೋರಿಕೆ

ಬೆಳಗಾವಿ: ಬರಗಾಲ ತೀವ್ರರೂಪ ಪಡೆದಿರುವುದರಿಂದ ರಾಜ್ಯದಲ್ಲಿ 1632 ಗ್ರಾಮಗಳಿಗೆ ಟ್ಯಾಂಕರ್ ನೀರು, 1367 ಗ್ರಾಮಗಳಿಗೆ ಬೋರವೆಲ್ ನೀರು ಸೇರಿ 2999 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದು ರಾಜ್ಯದ ಇತಿಹಾಸದಲ್ಲೇ ದಾಖಲೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅತಿ ಹೆಚ್ಚು ಬರಗಾಲ ಎದುರಿಸಿರುವ ಕರ್ನಾಟಕದಲ್ಲಿ ಕುಡಿಯುವ ನೀರು ಸೇರಿ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಅಗತ್ಯ. ಇದಕ್ಕೆ ಕೇಂದ್ರ ಸರ್ಕಾರದ ನೇರವು ಕೇಳಲಾಗಿದೆ ಎಂದರು.

ಕುಡಿವ ನೀರಿನ ಪರ್ಯಾಯ ಯೋಜನೆ ಸಮರ್ಪಕವಾಗಿ ಅನುಷ್ಠಾನ ಗೊಂಡಿರುವ ರಾಮನಗರ, ಚಾಮರಾಜನಗರ, ಕೊಡಗು, ಧಾರವಾಡ, ಗದಗ ಜಿಲ್ಲೆಯಲ್ಲಿ ಟ್ಯಾಂಕರ್ ನೀರು ಕೊಡುತ್ತಿಲ್ಲ. ರಾಜ್ಯದಲ್ಲಿ ಹೈ ಈಲ್ಡಿಂಗ್ 216 ಬೋರ್​ವೆಲ್ ಗುರುತಿಸಲಾಗಿದೆ. ಹೈ ಈಲ್ಡಿಂಗ್ ಬೋರ್​ವೆಲ್ ನೀರಿಗೆ ತಿಂಗಳಿಗೊಮ್ಮೆ, ಗ್ರಾಮಗಳಿಗೆ ಟ್ಯಾಂಕರ್ ನೀರು ಕೊಡುವವರಿಗೆ 15 ದಿನದ ಒಳಗೆ ಹಣ ಪಾವತಿಸಬೇಕು. ಹಳ್ಳಿಗಳಿಗೆ ತೆರಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಖಾತೆಯಲ್ಲಿ ಹಣ: ಲೋಕಸಭೆ ಚುನಾವಣಾ ನೀತಿ ಸಂಹಿತೆ ಬರುತ್ತದೆ ಎಂದು ಮೊದಲೇ ಎಚ್ಚರ ವಹಿಸಿ ಬರ ನಿರ್ವಹಣೆಗಾಗಿ ಎಲ್ಲ ಜಿಲ್ಲಾಧಿಕಾರಿಗಳ ಖಾತೆಗಳಿಗೆ ಒಟ್ಟು 700 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. ಬರ ನಿರ್ವಹಣೆಗಾಗಿ ತಹಸೀಲ್ದಾರರ ಖಾತೆಯಲ್ಲಿ ತಲಾ 10 ರಿಂದ 15 ಲಕ್ಷ ರೂ. ವರೆಗೆ ಹಣ ಇದೆ ಎಂದು ಸಚಿವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಜಿಲ್ಲಾಧಿಕಾರಿ ಡಾ.ಆರ್.ವಿಶಾಲ, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಮತ್ತಿತರರು ಇದ್ದರು.

ಮಹಾರಾಷ್ಟ್ರದ ಒಡಂಬಡಿಕೆ ಒಪ್ಪಿಗೆ

ಕೃಷ್ಣಾ ನದಿ ದಂಡೆಯ 129 ಗ್ರಾಮಗಳಲ್ಲಿನ ಜನರಿಗೆ ಕುಡಿಯಲು ನೀರಿಲ್ಲದ ಕುರಿತು ಮಹಾರಾಷ್ಟ್ರ ಸರ್ಕಾರಕ್ಕೆ ಮನವರಿಕೆ ಮಾಡಿದ ಬಳಿಕ ನೀರು ಬಿಡುವುದಾಗಿ ಒಪ್ಪಿದೆ. ಈಗಾಗಲೇ ಮಹಾರಾಷ್ಟ್ರ 4 ಟಿಎಂಸಿ ಕೊಡುವುದಾಗಿ ಹೇಳಿದ್ದರಿಂದ ಒಡಂಬಡಿಕೆ ಪ್ರಕಾರ ಪತ್ರ ಕಳುಹಿಸಿದ್ದೇವೆ. ನೀರು ಬಿಡಲು ಸಿಎಂ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ ಎಂದು ದೇಶಪಾಂಡೆ ಹೇಳಿದರು.

ದೇಶಪಾಂಡೆಗೆ ಮುಜುಗರ

ಬೆಳಗಾವಿಯ ಹೊನಗಾದಲ್ಲಿ ಶನಿವಾರ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಸಚಿವ ದೇಶಪಾಂಡೆ ಮುಜುಗುರ ಎದುರಿಸಬೇಕಾಯಿತು. ಸರ್ಕಾರ ಬಡವರಿಗೆ ಉದ್ಯೋಗ ನೀಡಲು ಕ್ರಮ ಕೈಗೊಂಡಿದೆ. ಬಡ ಜನತೆ ಉಪವಾಸ ಇರಬಾರದು ಎಂದು ಅನ್ನಭಾಗ್ಯ ಯೋಜನೆ ತಂದಿದೆ. ಅನ್ನಭಾಗ್ಯ ಯೋಜನೆ ಜನತೆಗೆ ನೀಡಿದ ಮುಖ್ಯಮಂತ್ರಿ ಯಾರು ಗೊತ್ತಾ ಎಂದು ಪ್ರಶ್ನಿಸಿದರು. ಅಧಿಕಾರಿಗಳಿಗೆ ಸುಮ್ಮನಿರಲು ಸೂಚಿಸಿ ಮತ್ತೊಮ್ಮೆ ಅನ್ನಭಾಗ್ಯ ನೀಡಿದ ಸಿಎಂ ಯಾರು ಗೊತ್ತಾ? ಹೇಳಿ ನೋಡೋಣ ಎಂದರು. ಆಗ ಮಹಿಳೆಯೊಬ್ಬರು ಮೋದಿ ಎಂದಾಗ ಸುತ್ತಲಿದ್ದವರು ನಕ್ಕರು. ಇದರಿಂದ ಸಚಿವರು ಪೇಚಿಗೆ ಸಿಲುಕುವಂತಾಯಿತು.

ಧರ್ಮಸ್ಥಳ ಭೇಟಿ 15 ದಿನ ಮುಂದೂಡಿ

ಬೆಳ್ತಂಗಡಿ: ಮುಂದಿನ ಹದಿನೈದು ದಿನಗಳ ಮಟ್ಟಿಗೆ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳದ ಭೇಟಿ ಮುಂದೂಡಿದರೆ ಒಳ್ಳೆಯದು ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಹಿಂದೆಯೂ ನೀರು ಕಡಿಮೆಯಾಗಿ ಪಾಚಿ ಬಂದಿತ್ತು. ಆದರೆ ಈ ಬಾರಿಯಷ್ಟು ತೀವ್ರತೆ ಇರಲಿಲ್ಲ. ನೇತ್ರಾವತಿ ನದಿಗೆ ಸರ್ಕಾರ ಅಣೆಕಟ್ಟು ನಿರ್ವಿುಸಿರುವಲ್ಲಿ ಇರುವ ತೀರ್ಥಗುಂಡಿಯಲ್ಲಿ ಈ ಬಾರಿ ನೀರು 4 ಅಡಿ ಕಡಿಮೆ ಆಗಿದ್ದು ದೇವರ ಅಭಿಷೇಕಕ್ಕೆ, ಸದ್ಯ ತೊಂದರೆ ಇಲ್ಲ ಎಂದರು. ಮುಂದಿನ 15 ದಿನಗಳವರೆಗೆ ಮಳೆ ಬಾರದಿದ್ದರೆ ಸಮಸ್ಯೆ ಬರಬಹುದು. ನಾವು ಸಾಧ್ಯವಾದಷ್ಟು ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ಆದರೆ ಭಕ್ತರಿಗೆ ತೊಂದರೆಯಾಗಬಾರದು, ಸೇವೆಯಲ್ಲಿ ವ್ಯತ್ಯಾಸವಾಗಬಾರದು ಎಂಬುದೇ ನಮ್ಮ ಉದ್ದೇಶ. ಪ್ರಕೃತಿಯನ್ನು ಮೀರಿ ನಿಲ್ಲಲು ಮನುಷ್ಯರಿಂದ ಸಾಧ್ಯವಿಲ್ಲ, ಭಗವಂತನಿಗೂ ಬಿಸಿ ತಟ್ಟಬಹುದು ಎಂದರು.

ನೀರಿಲ್ಲದ ಊರಿಗೆ ಮಗಳ ಕೊಡಲಾರೆ!

ನೀರಿಲ್ಲದ ಊರಿಗೆ ಮಗಳನ್ನು ಕೊಡಲಾರೆ ಎಂದು ಯುವತಿಯ ತಂದೆಯೊಬ್ಬರು ಸಂಬಂಧವೇ ಬೇಡವೆಂದು ನಿರಾಕರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕಸನಾಳದ ವರನೊಬ್ಬ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗ್ರಾಮವೊಂದಕ್ಕೆ ವಧು ನೋಡಲು ಹೋಗಿ ಮೆಚ್ಚಿ ಬಂದಿದ್ದ. ಶನಿವಾರ ವಧು ಕಡೆಯವರು ವರನ ಮನೆ ನೋಡಲು ಕಸನಾಳಕ್ಕೆ ಆಗಮಿಸಿದ್ದರು. ವರನ ಮನೆ ಸದಸ್ಯರೆಲ್ಲರೂ ನೀರು ಸಂಗ್ರಹಿಸುವ, ನೀರು ತರಲು ಪರದಾಡುತ್ತಿರುವುದನ್ನು ಕಂಡ ಅವರು ಈ ಸಂಬಂಧ ಬೇಡ ಎಂದು ವಾಪಸ್ ಹೋಗಿದ್ದಾರೆ.

ನೀರು ತರಲು ಹೋದ ವಧು ಸಾವು

ಔರಾದ್ ಗ್ರಾಮೀಣ: ಐದೇ ದಿನದಲ್ಲಿ ಮದುವೆ ಆಗಬೇಕಿದ್ದ ರಾಯಪಳ್ಳಿಯ ಸುಜಾತಾ ಮಲಗೊಂಡ (24) ಎಂಬಾಕೆ ಶನಿವಾರ ನೀರು ತರಲು ಬಾವಿಗೆ ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟರು. ಹೊಲದಲ್ಲಿದ್ದ ತಂದೆಗೆ ನೀರು ತರುತ್ತೇನೆ ಎಂದು ಹೋಗಿದ್ದ ಈಕೆ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಮಹಾರಾಷ್ಟ್ರದ ಕಾವಳಗುಡ್ಡಾದ ದೇವದಾಸ್ ಜತೆ ಮೇ 23ಕ್ಕೆ ಮದುವೆ ನಡೆಯುವುದಿತ್ತು.

ರಾಯರ ಭಕ್ತರಿಗಿಲ್ಲ ಪುಣ್ಯಸ್ನಾನ

| ಶಿವಮೂರ್ತಿ ಹಿರೇಮಠ ರಾಯಚೂರು

ರಾಜ್ಯದ ಪ್ರಮುಖ ಪುಣ್ಯಕ್ಷೇತ್ರವಾದ ಮಂತ್ರಾಲಯದಲ್ಲೂ ಅಲ್ಪಮಟ್ಟಿಗೆ ನೀರಿನ ಸಮಸ್ಯೆ ಎದುರಾಗಿದ್ದು, ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡುವ ಭಾಗ್ಯ ಇಲ್ಲವಾಗಿದೆ.

ಶ್ರೀರಾಘವೇಂದ್ರಸ್ವಾಮಿ ಮಠದ ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿ ಬತ್ತಿ ಹೋಗಿದ್ದು, ಶ್ರೀಮಠದ ಆಡಳಿತ ಮಂಡಳಿ ಹೆಚ್ಚುವರಿ ಕೊಳವೆಬಾವಿಗಳನ್ನು ಕೊರೆಸಿ ಭಕ್ತರಿಗೆ ನೀರಿನ ಸಮಸ್ಯೆ ಎದುರಾಗದಂತೆ ಕ್ರಮಕೈಗೊಂಡಿದೆ. ಆದರೆ, ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ರಾಯರ ದರ್ಶನ ಪಡೆಯಬೇಕೆಂಬ ಅಭಿಲಾಷೆ ಈಡೇರದಂತಾಗಿದೆ. ಸಾವಿರಾರು ಭಕ್ತರಿಗೆ ಸಮರ್ಪಕ ನೀರಿನ ಸೌಲಭ್ಯ ಕಲ್ಪಿಸುವುದೂ ಆಡಳಿತ ಮಂಡಳಿಗೆ ಸಮಸ್ಯೆಯಾಗಿದೆ.

ಕೆಲವು ದಿನಗಳ ಹಿಂದೆ ಶ್ರೀಮಠ ಹೊಸದಾಗಿ 5 ಕೊಳವೆಬಾವಿಗಳನ್ನು ಕೊರೆಸಿದ್ದು, ಅದರಲ್ಲಿ ಮೂರರಲ್ಲಿ ನೀರಿನ ಸೆಲೆ ದೊರೆತಿದೆ. ತುಂಗಭದ್ರಾ ತಟದಲ್ಲಿ 100 ಜನರು ಏಕಕಾಲಕ್ಕೆ ಸ್ನಾನ ಮಾಡುವಂಥ ಶವರ್ ವ್ಯವಸ್ಥೆಯನ್ನು ಆಡಳಿತ ಮಂಡಳಿ ಮಾಡಿದೆ. ರಜಾ ದಿನಗಳಿರುವುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದು, ಎಲ್ಲರಿಗೂ ಸಮರ್ಪಕ ನೀರಿನ ಸೌಲಭ್ಯ ಕಲ್ಪಿಸುವುದು ಆಡಳಿತ ಮಂಡಳಿಗೆ ಸವಾಲಾಗಿದ್ದರೂ, ಸಮಸ್ಯೆ ಆಗಬಾರದು ಎಂದು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಠದ ಸಹಾಯಕ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್ ತಿಳಿಸಿದ್ದಾರೆ.

ಬ್ಯಾರೇಜ್ ನಿರ್ವಣ: ಮಂತ್ರಾಲಯದಲ್ಲಿ ನೀರಿನ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ ತುಂಗಭದ್ರಾ ನದಿಗೆ ರಾಯಚೂರಿನ ಚಿಕ್ಕಮಂಚಾಲಿ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ವಣಕ್ಕೆ ಒಪ್ಪಿಗೆ ಸೂಚಿಸಿದೆ. ಇದಕ್ಕೆ ಆಂಧ್ರಪ್ರದೇಶ-ತೆಲಂಗಾಣ ರಾಜ್ಯಗಳ ಅನುಮತಿ ಅಗತ್ಯ. ಬ್ಯಾರೇಜ್ ನಿರ್ವಣವಾದಲ್ಲಿ ಮಂತ್ರಾಲಯದ ನೀರಿನ ಸಮಸ್ಯೆ ನಿವಾರಣೆ ಆಗಲಿದ್ದು, ಸುತ್ತಲಿನ ಗ್ರಾಮಗಳ ಕುಡಿವ ನೀರಿನ ಸಮಸ್ಯೆಯೂ ಇತ್ಯರ್ಥವಾಗಲಿದೆ.

ಜಲಾಮೃತದ ಮೂಲಕ ಜಲಜಾಗೃತಿ

ಬೆಂಗಳೂರು: ಕಳೆದ 19 ವರ್ಷಗಳಲ್ಲಿ ರಾಜ್ಯದಲ್ಲಿ 15 ವರ್ಷ ಬರಗಾಲ ಉಂಟಾಗಿರುವ ಸಮಸ್ಯೆ ಪರಿಹರಿಸಲು ಶಾಶ್ವತ ಕ್ರಮಕ್ಕೆ ಸರ್ಕಾರ ಮುಂದಾಗಿದ್ದು, ಜಲಾಮೃತ ಯೋಜನೆ ಮೂಲಕ ಪರಿಸರ ಸಮತೋಲನಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ಬದಲಾವಣೆ ಜಾಗತಿಕ ವಾಸ್ತವ. ಇದರ ಪರಿಣಾಮ ಅನೇಕ ಪ್ರದೇಶಗಳು ಪದೇಪದೆ ಬರಗಾಲಕ್ಕೆ ತುತ್ತಾಗುತ್ತಿವೆ. ಹೀಗಾಗಿ ದೀರ್ಘಕಾಲಕ್ಕೆ ಬೇಕಾದ ಮಾಗೋಪಾಯ ಕಂಡುಕೊಳ್ಳಲು ಜಲಾಮೃತ ಎಂಬ ಯೋಜನೆ ರೂಪಿಸಲಾಗಿದೆ. ನಾಲ್ಕು ಹಂತದ ಯೋಜನೆ ಆರಂಭವಾಗುವ ಜೂ.11ಕ್ಕೆ ರಾಜ್ಯಾದ್ಯಂತ ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ 500ರಂತೆ ರಾಜ್ಯದಲ್ಲಿ 30 ಲಕ್ಷ ಸಸಿ ನೆಡಲಾಗುತ್ತದೆ ಎಂದರು.

ನೀರಿನ ಮಹತ್ವ ಮತ್ತು ನೀರಿನ ಕೊರತೆಯನ್ನು ಜನ ಅರ್ಥ ಮಾಡಿಕೊಂಡರೆ ಮನೆ-ಮನೆಯಲ್ಲೂ ಮಳೆ ನೀರನ್ನು ಸಂಗ್ರಹಿಸುವ ಹಾಗೂ ಪ್ರಜ್ಞಾಪೂರ್ವಕವಾಗಿ ಬಳಸುವ ಜವಾಬ್ದಾರಿಯುತ ನಾಗರಿಕರು ರೂಪುಗೊಳ್ಳುತ್ತಾರೆ. ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳ ಜತೆ ವಿಡಿಯೋ ಸಂವಾದ ನಡೆಸಲಾಗಿದೆ. ಸಾರ್ವಜನಿಕರು, ಸ್ವ-ಸಹಾಯ ಗುಂಪುಗಳು, ಶಾಲಾ ಮಕ್ಕಳು, ಯುವಕ ಸಂಘಗಳು, ಪಂಚಾಯತಿ ಸದಸ್ಯರು ಸೇರಿ ಕನಿಷ್ಠ 30 ಲಕ್ಷ ಸಸಿಗಳನ್ನು ನೆಡಲಿದ್ದಾರೆ ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.

2019 ಅನ್ನು ಕರ್ನಾಟಕ ಜಲವರ್ಷ ಎಂದು ಘೊಷಿಸಲಾಗಿದೆ. ಆಂದೋಲನದಲ್ಲಿ ಭಾಗವಹಿಸಲು ಇಚ್ಛಿಸುವ ನಾಗರಿಕರು, ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಘ-ಸಂಸ್ಥೆಗಳು, ಸ್ಥಳೀಯ ಮತ್ತು ಸಹಕಾರಿ ಸಂಘ-ಸಂಸ್ಥೆಗಳು ಜಿಲ್ಲಾ ಪಂಚಾಯತಿ ಸಿಇಒಗಳನ್ನು ಸಂರ್ಪಸಬಹುದು.

| ಕೃಷ್ಣ ಭೈರೇಗೌಡ ಸಚಿವ

ಯೋಜನೆಯ ಪ್ರಮುಖ ಕಾರ್ಯ

  • ಜಿ.ಪಂ. ವ್ಯಾಪ್ತಿಯ ಕಚೇರಿಗಳಲ್ಲಿ ಸಸಿ ನೆಡುವುದು
  • 1000 ಗ್ರಾಮ ಪಂಚಾಯಿತಿಗಳಲ್ಲಿ ಸುಸ್ಥಿರ ಘನತ್ಯಾಜ್ಯ ನಿರ್ವಹಣೆ
  • ಶಾಲಾ-ಕಾಲೇಜು, ಗ್ರಾಮ ಪಂಚಾಯಿತಿ ಜಲ ಸಾಕ್ಷರತೆ ಸಂವಾದ
  • 20 ಸಾವಿರ ಚೆಕ್​ಡ್ಯಾಂ ನಿರ್ಮಾಣ
  • 14 ಸಾವಿರ ಸಣ್ಣಪುಟ್ಟ ಜಲತಾಣಗಳ ಪುನರುಜ್ಜೀವನ
  • 500 ಕೋಟಿ ರೂ. ಬಂಡವಾಳದೊಂದಿಗೆ ಸಾರ್ವಜನಿಕ ಆಸ್ತಿ ಸೃಜನೆ
  • ಗ್ರಾಮ ಪಂ.ಗಳ ಮೂಲಕ 2 ಕೋಟಿ ಸಸಿ ವಿತರಣೆ
  • ಗ್ರಾಮೀಣ ಪ್ರದೇಶದ ಪ್ರತಿ ವಾಣಿಜ್ಯ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಣಾ ವ್ಯವಸ್ಥೆ

Leave a Reply

Your email address will not be published. Required fields are marked *