ಶ್ರೀ ಮಂಜುನಾಥನ ಭಕ್ತರಿಗೆ ಬಣಕಲ್ ಗ್ರಾಮಸ್ಥರ ಸೇವೆ

ಬಣಕಲ್: ಮಹಾಶಿವರಾತ್ರಿ ಪ್ರಯುಕ್ತ ರಾಜ್ಯದ ವಿವಿಧೆಡೆಯಿಂದ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಕೊಟ್ಟಿಗೆಹಾರದ ಮೂಲಕ ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನಕ್ಕೆ ಹೊರಟಿದ್ದಾರೆ. ಪಾದಯಾತ್ರಿಗಳಿಗೆ ಸ್ಥಳೀಯರು ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸಿ ಭಕ್ತರ ಸೇವೆ ಮಾಡುತ್ತಿದ್ದಾರೆ.

ಮಂಡ್ಯ, ಕೋಲಾರ, ತುಮಕೂರು, ಹಾಸನ, ಬೆಂಗಳೂರು, ಬೇಲೂರು, ಚನ್ನರಾಯಪಟ್ಟಣ, ನೆಲಮಂಗಲ ಮುಂತಾದ ಕಡೆಗಳಿಂದ ಪಾದಯಾತ್ರಿಗಳು ಧರ್ಮಸ್ಥಳಕ್ಕೆ ಹೊರಟಿದ್ದಾರೆ. ಮೂಡಿಗೆರೆ ಹ್ಯಾಂಡ್​ಪೋಸ್ಟ್, ಬಣಕಲ್, ಕೊಟ್ಟಿಗೆಹಾರ, ಚಾರ್ವಡಿ ಘಾಟ್ ಉದ್ದಕ್ಕೂ ಕೇಸರಿ ವಸ್ತ್ರ ಧರಿಸಿದ ಪಾದಯಾತ್ರಿಗಳು ಸಾಗುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಬೆಂಗಳೂರು, ಹಾಸನ ಸೇರಿ ವಿವಿಧೆಡೆ ಪಾದಯಾತ್ರಾ ಸೇವಾ ಸಮಿತಿಗಳು ಯಾತ್ರಿಗಳಿಗೆ ಊಟ, ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿವೆ. ಹಲವು ವರ್ಷಗಳಿಂದ ಪಾದಯಾತ್ರೆ ಮಾಡಿಕೊಂಡು ಬರುತ್ತಿರುವ ಬಹುತೇಕ ಯಾತ್ರಿಗಳು ಸೇವಾ ಸಮಿತಿಯಲ್ಲಿ ಹೆಸರು ನೋಂದಾಯಿಸಿ ಪಾದಯಾತ್ರೆ ಕೈಗೊಳ್ಳುತ್ತಾರೆ.

ಈ ಮಾರ್ಗದಲ್ಲಿ ಪಾದಯಾತ್ರೆ ಮೂಲಕ ಆಗಮಿಸುವ ಒಂದು ವಾರ ಮೊದಲೇ ಪಾದಯಾತ್ರೆ ತಂಡದ ಒಂದಿಬ್ಬರು ಇಲ್ಲಿಗೆ ಬರುತ್ತಾರೆ. ಸ್ಥಳ ಪರಿಶೀಲನೆ ನಡೆಸಿ, ಸ್ಥಳೀಯರ ಸಹಕಾರದೊಂದಿಗೆ ತಂಡದ ಸದಸ್ಯರಿಗೆ ತಂಗಲು ವ್ಯವಸ್ಥೆ, ಊಟ ಉಪಚಾರ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ. ಇದರ ಜತೆಗೆ ಹೆದ್ದಾರಿಗಳಲ್ಲಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಪಾದಯಾತ್ರಿಗಳು ನಡೆಯಬೇಕು. ವಾಹನ ಸವಾರರು ಜಾಗರೂಕರಾಗಿ ವಾಹನ ಚಲಾಯಿಸಬೇಕು ಎಂಬ ಫಲಕವನ್ನು ಸಮಿತಿಯವರು ಹಾಕುತ್ತಾರೆ.

ಆಹಾರ, ವಸತಿ ಸೇವೆ: ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಪಾದಯಾತ್ರಿಗಳಿಗೆ ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತ ಸ್ಥಳೀಯರು ತಂಪುಪಾನೀಯ, ಮಜ್ಜಿಗೆ, ಪಾನಕ, ಲಘು ಉಪಾಹಾರ ನೀಡುತ್ತಿದ್ದಾರೆ. ಬಣಕಲ್​ನ ಮುಸ್ಲಿಂ ಯುವಕರ ತಂಡ ಪ್ರತಿವರ್ಷ ಪಾದಯಾತ್ರಿಗಳಿಗೆ ಮಜ್ಜಿಗೆ ವಿತರಿಸುವ ಮೂಲಕ ಗಮನ ಸೆಳೆಯುತ್ತಿದೆ. ಬಣಕಲ್​ನ ಖಾಸಗಿ ಆಂಬುಲೆನ್ಸ್ ಚಾಲಕ ಆರೀಫ್ ಪಾದಯಾತ್ರೆಗಳಿಗೆ ತುರ್ತು ಸಂದರ್ಭದಲ್ಲಿ ಉಚಿತ ಆಂಬುಲೆನ್ಸ್ ಸೇವೆ ನೀಡುತ್ತಿದ್ದಾರೆ. ಶುಕ್ರವಾರ ಕಾಲುನೋವಿನಿಂದ ಬಳಲುತ್ತಿದ್ದ ಮೂವರು ಪಾದಯಾತ್ರಿಗಳನ್ನು ಮೂಡಿಗೆರೆ ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ದಿದ್ದಾರೆ. ಹ್ಯಾಂಡ್​ಪೋಸ್ಟ್​ನಲ್ಲಿ ಕಳೆದ ಮೂರು ದಿನಗಳಿಂದ ಮುಸ್ಲಿಂ ಯುವಕರ ತಂಡ ಪಾದಯಾತ್ರಿಗಳಿಗೆ ಮಜ್ಜಿಗೆ ವಿತರಣೆ ಮಾಡುತ್ತಿದೆ.

ಕೊಟ್ಟಿಗೆಹಾರದಲ್ಲಿ ರಾಜೇಶ್ ಎಂಬುವರು ವಯೋವೃದ್ಧ ಯಾತ್ರಿಕರ ಅನುಕೂಲಕ್ಕಾಗಿ ನೂರಾರು ಊರುಗೋಲುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಹೆದ್ದಾರಿ ಬದಿಯಲ್ಲಿ ಮನೆ ಇರುವ ಸ್ಥಳೀಯರು ತಮ್ಮ ಮನೆಗಳ ಮುಂದೆ ಪಾದಯಾತ್ರಿಗಳು ವಿಶ್ರಾಂತಿ ಪಡೆಯಲು ಶಾಮಿಯಾನಗಳನ್ನು ಹಾಕಿಸಿದ್ದಾರೆ. ಕೆಲವರು ಮನೆಗಳ ಮುಂದೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.

ಬೆಂಗಳೂರಿನ ಬಸವೇಶ್ವರ ನಗರದ ರೇವಣ್ಣ ಅವರು 9 ವರ್ಷದಿಂದ ಪಾದಯಾತ್ರಿಗಳಿಗೆ ಊಟ, ಉಪಾಹಾರ ವ್ಯವಸ್ಥೆ ಕಲ್ಪಿಸುತ್ತ ಬರುತ್ತಿದ್ದಾರೆ. ಸಾವಿರಾರು ಕಲ್ಲಂಗಡಿ ಹಣ್ಣುಗಳನ್ನು ಉಚಿತವಾಗಿ ಪಾದಯಾತ್ರಿಗಳಿಗೆ ವಿತರಿಸಿದ್ದಾರೆ.

ದೇವಸ್ಥಾನ, ಮಸೀದಿ ಆವರಣದಲ್ಲಿ ವಾಸ್ತವ್ಯ: ಹಗಲಿನಲ್ಲಿ ಪಾದಯಾತ್ರಿಗರು ನಡೆದು ರಾತ್ರಿ ಸಮಯದಲ್ಲಿ ಉಳಿದುಕೊಳ್ಳುವುದರಿಂದ ಬಣಕಲ್​ನ ಚಾಮುಂಡೇಶ್ವರಿ ದೇವಸ್ಥಾನ, ಕೊಟ್ಟಿಗೆಹಾರದ ಶ್ರೀರಾಮ ಮಂದಿರ, ಅಯ್ಯಪ್ಪಸ್ವಾಮಿ ದೇವಸ್ಥಾನ ಹಾಗೂ ಕೊಟ್ಟಿಗೆಹಾರದ ಮಸೀದಿ ಆವರಣದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನೂರಾರು ಕಿಮೀ ನಡೆದು ದಣಿದು ಬಂದ ಪಾದಯಾತ್ರಿಗರಿಗೆ ವಾಸ್ತವ್ಯಕ್ಕೆ ಸ್ಥಳೀಯರು ಸ್ವಯಂ ಪ್ರೇರಿತರಾಗಿ ವ್ಯವಸ್ಥೆ ಕಲ್ಪಿಸಿದ್ದಾರೆ.

ಬೆಂಗಳೂರಿನಿಂದ ಪಾದಯಾತ್ರಿಗರ ಜತೆ ಬಂದ ನಾಯಿ: ಹದಿನೈದು ದಿನಗಳ ಹಿಂದೆ ಪಾದಯಾತ್ರೆ ಆರಂಭಿಸಿದ ಬೆಂಗಳೂರಿನ ತಂಡವೊಂದರ ಜತೆಗೆ ನಾಯಿಯೊಂದು ಬಂದಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ನಾಗರಾಜ್ ಅವರ ತಂಡ ಬೆಂಗಳೂರಿನಿಂದ ಪಾದಯಾತ್ರೆ ಹೊರಟಿದ್ದು ಇವರನ್ನು ನಾಯಿಯೂ ಹಿಂಬಾಲಿಸಿಕೊಂಡು ಬಂದಿದ್ದು ಶುಕ್ರವಾರ ಕೊಟ್ಟಿಗೆಹಾರ ತಲುಪಿದೆ. ಸುಮಾರು 291 ಕಿಮೀನಿಂದ ನಾಯಿ ಇವರ ಜತೆ ಆಗಮಿಸಿದೆ. ನಾವು ಎಲ್ಲಿ ತಂಗಿದರೂ ನಮ್ಮನ್ನು ಬಿಟ್ಟು ಕದಲುವುದಿಲ್ಲ. ನಾವು ಹೊರಟರೆ ಅದೂ ಹೊರಡುತ್ತದೆ. ಹಾಗಾಗಿ ಧರ್ಮಸ್ಥಳಕ್ಕೆ ಕರೆದುಕೊಂಡು ಹೊರಟಿದ್ದೇವೆ ಎಂದು ಪಾದಯಾತ್ರಿ ನಾಗರಾಜ್ ಪತ್ರಿಕೆಗೆ ತಿಳಿಸಿದ್ದಾರೆ.</