ಇಂದು ಮಹಾಮಸ್ತಕಾಭಿಷೇಕ ಆರಂಭ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಫೆ.9ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಜನಕಲ್ಯಾಣ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿವೆ.

ಪೇಜಾವರ ಶ್ರೀವಿಶ್ವೇಶತೀರ್ಥರು ಆಶೀರ್ವಚನ ನೀಡಲಿದ್ದು, ಎಚ್.ಡಿ. ಕುಮಾರಸ್ವಾಮಿ ಚತುಷ್ಪಥ ರಸ್ತೆಯ ಪ್ರಥಮ ಹಂತ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಸಚಿವ ಎಚ್.ಡಿ. ರೇವಣ್ಣ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಕೆರೆ ಸಂಜೀವಿನಿ ಕಾರ್ಯಕ್ರಮ ಒಡಂಬಡಿಕೆ (ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕರ್ನಾಟಕ ಸರ್ಕಾರದೊಂದಿಗೆ) ಮಾಡಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ವಸ್ತುಪ್ರದರ್ಶನ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸದ ನಳಿನ್​ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ಎಂಎಲ್​ಸಿಗಳಾದ ಹರೀಶ್ ಕುಮಾರ್, ಭೋಜೆಗೌಡ ಭಾಗವಹಿಸುವರು.

ಇಂದು ಧರ್ಮಸ್ಥಳಕ್ಕೆ ಎಚ್​ಡಿಕೆ

ಸಿಎಂ ಕುಮಾರಸ್ವಾಮಿ ಶುಕ್ರವಾರ ಸಂಜೆ ಶೃಂಗೇರಿಗೆ ತೆರಳಿ ವಾಸ್ತವ್ಯ ಮಾಡಬೇಕಿತ್ತಾದರೂ, ಬಜೆಟ್ ಮಂಡನೆ ವಿಳಂಬವಾದ್ದರಿಂದ ಪ್ರವಾಸ ರದ್ದುಪಡಿಸಿದ್ದಾರೆ. ಫೆ.9ರ ಬೆಳಗ್ಗೆ 11 ಗಂಟೆಗೆ ಶೃಂಗೇರಿಯಿಂದ ಧರ್ಮಸ್ಥಳಕ್ಕೆ ತೆರಳಿ, ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಶುಕ್ರವಾರದ ಶೃಂಗೇರಿ ಪ್ರವಾಸ ರದ್ದು ಗೊಳಿಸಿ, ಶನಿವಾರ ಬೆಳಗ್ಗೆ ನೇರವಾಗಿ ಧರ್ಮಸ್ಥಳಕ್ಕೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ರೆಂಜಾಳ ಪ್ರತಿನಿಧಿಗಳಿಗೆ ಗೌರವ

ಸಂಜೆ 7ರಿಂದ ರತ್ನಗಿರಿಯಲ್ಲಿ ಲೇಸರ್ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಿ ಬಾಹುಬಲಿ ಮೂರ್ತಿ ಕೆತ್ತಿದ ರೆಂಜಾಳ ಶ್ರೀ ಗೋಪಾಲಕೃಷ್ಣ ಶೆಣೈ ಅವರ ಪ್ರಸಕ್ತ ತಲೆಮಾರಿನ ಪ್ರತಿನಿಧಿಗಳನ್ನು ಸನ್ಮಾನಿಸಲಿದ್ದಾರೆ. ಸಚಿವೆ ಜಯಮಾಲಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರೆಂಜಾಳ ಗೋಪಾಲಕೃಷ್ಣ ಶೆಣೈ ಅವರ ಮೂರ್ತಿಯನ್ನು ಉಜಿರೆ ಎಸ್​ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಎಸ್. ಪ್ರಭಾಕರ್ ಅನಾವರಣ ಮಾಡಲಿದ್ದಾರೆ. ಚಿತ್ರನಟ ರಮೇಶ್ ಅರವಿಂದ್ ‘ಲೇಸರ್ ಶೋ’ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಸಾ.ರಾ.ಮಹೇಶ್, ಶಾಸಕ ಹರೀಶ್ ಪೂಂಜ, ಮೂಡುಬಿದಿರೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮೊದಲಾದವರು ಭಾಗವಹಿಸಲಿದ್ದಾರೆ. ರಾತ್ರಿ 8ರಿಂದ ಆಳ್ವಾಸ್​ಸಾಂಸ್ಕೃತಿಕ ವೈಭವ ಇರಲಿದೆ.