ಭಗವಾನ್​ ಬಾಹುಬಲಿ ಮಹಾಮಸ್ತಕಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತ್ಯಾಗಮೂರ್ತಿ ಬಾಹುಬಲಿ ಸ್ವಾಮಿಗೆ ಚತುರ್ಥ ಮಹಾಮಸ್ತಕಾಭಿಷೇಕ ಧಾರ್ಮಿಕ ಪ್ರಕ್ರಿಯೆಗೆ ಶನಿವಾರ ವಿಧ್ಯುಕ್ತ ಚಾಲನೆ ಸಿಕ್ಕಿದೆ.

ಸ್ವಸ್ತಿ ಶ್ರೀ ಮಹಾವೀರ ಶಕ ವರ್ಷ 2585 ನೇ ಶ್ರೀ ವಿಳಂಬಿ ನಮ ಸಂವತ್ಸರದ ಮಾಘ ಶುದ್ಧ ಚೌತಿ ದಿನವಾದ ಶನಿವಾರ ಪ್ರಾತಃಕಾಲ 6 ಗಂಟೆಗೆ ಭಗವಾನ್ ಶ್ರೀ ತೀರ್ಥಂಕರರಿಗೆ ಪಂಚಾಮೃತಾಭಿಷೇಕ, ಮಹಾಪೂಜೆ ನಡೆದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಚಂದ್ರನಾಥ ಸ್ವಾಮಿ ಬಸದಿಯಿಂದ ಬಾಹುಬಲಿ ನೆಲೆ ನಿಂತಿರುವ ರತ್ನಗಿರಿ ಬೆಟ್ಟಕ್ಕೆ ಅಗ್ರೋದಕ ಮೆರವಣಿಗೆ ನಡೆಯಿತು. ಬಾಹುಬಲಿ ಬೆಟ್ಟದಲ್ಲಿ ಇಂದ್ರ ಪ್ರತಿಷ್ಠೆ ನಡೆಯಿತು. ಬೆಳಗ್ಗೆ 8.45ರ ಕುಂಭ ಲಗ್ನದಲ್ಲಿ ತೋರಣ ಮುಹೂರ್ತ ನಡೆಯಿತು. ಬಳಿಕ ವಿಮಾನ ಶುದ್ಧಿ ಕೈಂಕರ್ಯ ನಡೆಯಿತು..

ಸಂಭ್ರಮದ ಮೆರವಣಿಗೆ

ಚಾರಿತ್ರ್ಯ ಚಕ್ರವರ್ತಿ ಶಾಂತಿ ಸಾಗರ ಮಹಾರಾಜ ಅಕ್ಷುಣ್ಣ  ಪರಂಪರೆಯ ಪೀಠಾಧೀಶ ಪರಮಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನ ಸಾಗರಜೀಮುನಿ ಮಹಾರಾಜರು, ಪರಮಪೂಜ್ಯ ಆಚಾರ್ಯ ಶ್ರೀ ವಾತ್ಸಲ್ಯ ವಾರಿಧಿ 108 ಪುಷ್ಪದಂಥ ಸಾಗರ ಮುನಿಮಹಾರಾಜರು, ಕಾರ್ಕಳ ದಾನ ಶಾಲೆಯ ಧ್ಯಾನ ಯೋಗಿ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಪ್ರಧಾನ ಸಂಚಾಲಕ ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್,  ದಿಗಂಬರ ಮುನಿಗಳು, ಮಾತಾಜಿಯವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪಲ್ಲಕ್ಕಿಯಲ್ಲಿ ಸಾಗಿ ಬಂದ ಶ್ರೀ ಚಂದ್ರನಾಥ ಸ್ವಾಮಿ, ಶ್ರೀ ಶಾಂತಿನಾಥ ಸ್ವಾಮಿ ಮೂರ್ತಿ ಮೆರವಣಿಗೆಗೆ ಮೆರಗು ನೀಡಿತು. ಉಳಿದಂತೆ ಕ್ಷೇತ್ರದ ಆನೆ ತಟ್ಟೀರಾಯ, ನಾಸಿಕ ಬ್ಯಾಂಡ್, ಕ್ಷೇತ್ರದ ಬ್ಯಾಂಡ್, ಓಲಗ, ಕೊಂಬು, ಭಜನಾ ಕುಣಿತ ತಂಡ, ಜೈನ ಮಹಿಳೆಯರು-ಪುರುಷರು, ಬಣ್ಣದ ಕೊಡೆಗಳು ರಾರಾಜಿಸಿದವು.