ವಿರಾಗಿಯ ಮಹಾಮಜ್ಜನಕ್ಕೆ ಧರ್ಮಸ್ಥಳ ಸಜ್ಜು

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಈ ಶತಮಾನದ ಎರಡನೇ ಮಹಾಮಜ್ಜನಕ್ಕೆ ಸಿದ್ಧವಾಗಿದ್ದು, ಶುಕ್ರವಾರದಿಂದ ಧಾರ್ವಿುಕ ಕಾರ್ಯಕ್ರಮಗಳು ಮೇಳೈಸಲಿವೆ.

ರತ್ನಗಿರಿ ಬೆಟ್ಟದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಸಕಲ ರೀತಿಯಲ್ಲೂ ಸಜ್ಜುಗೊಂಡಿರುವ ಕ್ಷೇತ್ರ ಅಲಂಕಾರಗೊಂಡು ಅಯೋಧ್ಯಾ ನಗರದ ರೂಪ ತಳೆದಿದೆ. ಲಕ್ಷಾಂತರ ಭಕ್ತರನ್ನು ಎದುರುಗೊಳ್ಳಲು ನಿರ್ವಿುಸಲಾಗಿರುವ ವಿಶೇಷ ದ್ವಾರಗಳು, ಬಂಟಿಂಗ್ಸ್, ಪತಾಕೆಗಳು ಮೆರುಗು ನೀಡುತ್ತಿವೆ. ಭಕ್ತರ ಊಟೋಪಚಾರಕ್ಕೆ ವ್ಯವಸ್ಥಿತ ವಿಶಾಲ ಭೋಜನ ಶಾಲೆ ಸಿದ್ಧವಾಗಿದೆ.

ಮುನಿಗಳ ಆಗಮನ: ವರ್ಧಮಾನ ಸಾಗರ ಮುನಿ ಮಹಾರಾಜರು, ಪುಷ್ಪದಂತ ಸಾಗರ ಮುನಿ ಮಹಾರಾಜರು, ಪುಣ್ಯಸಾಗರ ಮುನಿ ಮಹಾರಾಜರು, ಸಿದ್ಧಸೇನ ಮುನಿ ಮಹಾರಾಜರು, ಕುಮುದನಂದಿ ಮುನಿಮಹಾರಾಜರು ಹಾಗೂ ಮುನಿಸಂಘದವರು ಮತ್ತು ಮಾತಾಜಿಯವರು ಕ್ಷೇತ್ರಕ್ಕೆ ಆಗಮಿಸಿದ್ದು, ಇವರ ನೇತೃತ್ವದಲ್ಲಿ ಮಹಾಮಜ್ಜನದ ಸರ್ವ ಕಾರ್ಯಕ್ರಮಗಳೂ ನಡೆಯಲಿವೆ.

ಪಂಚಮಹಾವೈಭವ: ಬಾಹುಬಲಿ ಜೀವನ ದರ್ಶನ ಮಾಡಿಸುವ ಪಂಚಮಹಾವೈಭವ ಫೆ.11ರಿಂದ 15ರ ತನಕ ನಡೆಯಲಿದೆ. ಇದಕ್ಕಾಗಿ ಭರತನ ಅರಮನೆಯ ದರ್ಬಾರ್ ಹಾಲ್ ಸಜ್ಜಾಗಿದ್ದು, ತರಬೇತಿ ಪಡೆದ 300 ಕಲಾವಿದರು ಸಿದ್ಧರಾಗಿದ್ದಾರೆ.

ಸಂತ ಸಮ್ಮೇಳನಕ್ಕೆ ಎಚ್​ಡಿಡಿ ಚಾಲನೆ
ಫೆ.8ರ ಮಧ್ಯಾಹ್ನ 3ಕ್ಕೆ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಸಂತ ಸಮ್ಮೇಳನ ನಡೆಯಲಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಮ್ಮೇಳನ ಉದ್ಘಾಟಿಸಲಿದ್ದು, ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಆಶೀರ್ವಚನ ನೀಡುವರು. ಕಾರ್ಕಳ ದಾನಶಾಲೆಯ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ಇನ್ನೂ ಹಲವು ಸ್ವಾಮೀಜಿಗಳು ಉಪಸ್ಥಿತರಿರುವರು.

16ರಿಂದ 18 ಮಹಾಮಸ್ತಕಾಭಿಷೇಕ
ಮಹಾಮಸ್ತಕಾಭಿಷೇಕ ಪ್ರಯುಕ್ತ ಫೆ.8ರಿಂದ 15ರ ತನಕ ವಿವಿಧ ಧಾರ್ವಿುಕ ಕಾರ್ಯಕ್ರಮಗಳು, ಅನುಷ್ಠಾನಗಳು ನಡೆಯಲಿವೆ. ಫೆ.9ರಂದು ಬಾಹುಬಲಿಗೆ ಅಭಿಷೇಕಗಳು ಆರಂಭಗೊಳ್ಳಲಿವೆ. ಅಂದು 24 ಕಲಶಗಳಿಂದ ಬಾಹುಬಲಿ ಪಾದಾಭಿಷೇಕ ನಡೆಯಲಿದೆ. 10ರಂದು 54 ಕಲಶ, 11ರಂದು 108 ಕಲಶ, 12ರಿಂದ 15ರವರೆಗೆ 216 ಕಲಶಗಳಿಂದ ಬಾಹುಬಲಿ ಪಾದಾಭಿಷೇಕ ನೆರವೇರುತ್ತದೆ. ಫೆ.16, 17, 18ರಂದು ಮೂರು ದಿನ ಬಾಹುಬಲಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಈ ಅಪೂರ್ವ ಕ್ಷಣಗಳಿಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಇದೇ ಸಂದರ್ಭ ರಾಷ್ಟ್ರದ ಗಣ್ಯರ ಭೇಟಿಯೂ ನಡೆಯಲಿದೆ.