ಮಾತೃಶ್ರೀ ರತ್ನಮ್ಮನವರ ಆಕಾಂಕ್ಷೆಯೇ ರತ್ನಗಿರಿಯ ಮೂರ್ತಿ

ಶ್ರೀಕ್ಷೇತ್ರ ಧರ್ಮಸ್ಥಳದ ರತ್ನಗಿರಿಯ ಮುಕುಟದಲ್ಲಿ ತಲೆಯೆತ್ತಿ ನಿಂತಿರುವ ವೈರಾಗ್ಯ ಮೂರ್ತಿ ಭಗವಾನ್ ಶ್ರೀ ಬಾಹುಬಲಿಗೆ ಈಗ ನಾಲ್ಕನೇ ಮಹಾಮಸ್ತಕಾಭಿಷೇಕದ ಸಂಭ್ರಮ. ದೇಶ-ವಿದೇಶಗಳ ಭಕ್ತರು ಈ ವೈಭವದ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುವ, ಪುನೀತರಾಗುವ ಕ್ಷಣಗಳಿಗೆ ದಿನಗಣನೆ ಆರಂಭವಾಗಿದೆ. ಇಂಥ ಬಾಹುಬಲಿ ವಿಗ್ರಹ ಕೆತ್ತನೆ, ಸಾಗಾಟ, ಪ್ರತಿಷ್ಠಾಪನೆ ಹೇಗೆ ನಡೆಯಿತೆಂಬ ಕುತೂಹಲ, ಈ ಹಿಂದಿನ ಮಸ್ತಕಾಭಿಷೇಕಗಳ ನೆನಪುಗಳನ್ನು ಓದುಗರ ಮುಂದಿಡುವ ‘ವಿಜಯವಾಣಿ’ಯ ಕಿರುಪ್ರಯತ್ನ ಇಂದಿನಿಂದ..

ಬೆಳ್ತಂಗಡಿ: ಬಾಹುಬಲಿ ಸ್ವಾಮಿ ಜ್ಞಾನ ಪ್ರಾಪ್ತಿಗಾಗಿ ಮಾಡಿದ ಘೋರ ತಪಸ್ಸಿನ ಚಿತ್ರಣ ನೀಡುವುದೇ ಗೋಮಟೇಶ್ವರನ ವಿಗ್ರಹಗಳು. ವೀರ- ವೈರಾಗ್ಯಗಳ ಮೂರ್ತಿ ಬಾಹುಬಲಿಯ ಮೂರು ಶಿಲ್ಪಗಳು ಅವಿಭಜಿತ ದಕ್ಷಿಣ ಕನ್ನಡದಲ್ಲಿರುವುದು ವಿಶೇಷ. ಅದರಲ್ಲಿ ಕಾರ್ಕಳದ ಗೊಮ್ಮಟೇಶ್ವರ ಶಿಲ್ಪವನ್ನು ಪಾಂಡ್ಯರಾಯ (ಕ್ರಿ.ಶ.1431) ನಿರ್ಮಿಸಿದ್ದರೆ, ವೇಣೂರಿನಲ್ಲಿರುವ ಗೊಮ್ಮಟ ಶಿಲ್ಪವನ್ನು ತಿಮ್ಮಣ್ಣಾಜಿಲರು (ಕ್ರಿ.ಶ.1603) ನಿರ್ಮಿಸಿದರು.

ಧರ್ಮಸ್ಥಳದ ವಿಗ್ರಹವನ್ನು ದಿ.ರತ್ನವರ್ಮ ಹೆಗ್ಗೆಡೆ ಮತ್ತು ಮಾತೃಶ್ರೀ ರತ್ನಮ್ಮನವರ ಪ್ರೇರಣೆಯಂತೆ ಈಗಿನ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನಿರ್ಮಿಸಿದ್ದಾರೆ. ಪ್ರತಿಷ್ಠಾಪನಾ ಕಾರ್ಯ 1975ರಲ್ಲಿ ನಡೆದು 1982ರಲ್ಲಿ ಪ್ರಥಮ ಮಸ್ತಕಾಭಿಷೇಕ ನೆರವೇರಿತ್ತು. 1995ರಲ್ಲಿ ದ್ವಿತೀಯ, 2007ರಲ್ಲಿ ತೃತೀಯ ಮಸ್ತಕಾಭಿಷೇಕ ನಡೆದರೆ ಈ ಬಾರಿಯದ್ದು ಚತುರ್ಥ ಮಹಾಮಸ್ತಕಾಭಿಷೇಕ.

 ವಿಗ್ರಹ ಸಾಗಾಟದ ಸವಾಲು:  ಆಧುನಿಕ ಯುಗದಲ್ಲಿ ನಡೆದ 39 ಅಡಿಗಳ ಗೋಮಟೇಶ್ವರ ವಿಗ್ರಹದ ರಚನೆ, ಸಾಗಾಟ, ಪ್ರತಿಷ್ಠೆಯ ಕಥೆ ಬಹು ರೋಚಕ.
ಯುದ್ಧದಲ್ಲಿ ತನ್ನನ್ನು ಸೋಲಿಸಿದ್ದರೂ, ಸರ್ವವನ್ನೂ ತ್ಯಾಗ ಮಾಡಿ ತನಗೇ ಬಿಟ್ಟುಕೊಟ್ಟು ತಪಸ್ಸಿಗೆ ತೆರಳಿದ ಬಾಹುಬಲಿಯ 535 ಬಿಲ್ಲು ಪ್ರಮಾಣದ ಮಹಾಮೂರ್ತಿಯನ್ನು ಪೌದನಪುರದಲ್ಲಿ ಅಣ್ಣ ಭರತ ಚಕ್ರವರ್ತಿಯೇ ಸ್ಥಾಪಿಸಿದನೆಂದು ಚಾರಿತ್ರಿಕವಾಗಿ ಹೇಳಲಾಗಿದೆ. ಆದರೆ ಈ ಪೌದನಪುರದ ಮೂರ್ತಿ ಇಂದಿನವರ ಪಾಲಿಗೆ ಅಗೋಚರ. ಆದ್ದರಿಂದಲೇ ಅದನ್ನು ನೋಡಲೆಂದು ಹಂಬಲಿಸಿದ ಕಾಳಲದೇವಿಯ ಅಭೀಷ್ಟ ಪೂರ್ತಿಗಾಗಿ ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಆ ದಿವ್ಯಮೂರ್ತಿಯನ್ನು ಸಹಸ್ರ ವರ್ಷ ಹಿಂದೆ ಸ್ಥಾಪಿಸಿದ. ಅಂಥದೇ ದಿವ್ಯ ಆಕಾಂಕ್ಷೆಯೊಂದು ಮಾತೃಶ್ರೀ ರತ್ನಮ್ಮನವರ ಹೃದಯದಲ್ಲಿ ಅಂಕುರಿಸಿತು. ಅದರ ಫಲಶ್ರುತಿಯೇ ಧರ್ಮಸ್ಥಳದ ರತ್ನಗಿರಿಯಲ್ಲಿ ವಿರಾಜಮಾನವಾಗಿರುವ ಬಾಹುಬಲಿ ಮೂರ್ತಿ.

1967ನೇ ಅಕ್ಟೋಬರ್ 12ರ ಬೆಳಗ್ಗೆ 8.15ರಂದು (ವಿಜಯದಶಮಿ ದಿನ) 70ರ ಹರೆಯದ ಶಿಲ್ಪಿ ರೆಂಜಾಳ ಗೋಪಾಲ ಶೆಣೈ ಕಾರ್ಕಳ ತಾಲೂಕಿನ ರೆಂಜಾಳ ಸನಿಹದ ಮಂಗಲಪಾದೆಯಲ್ಲಿ ದೇವರಿಗೆ ತಲೆಬಾಗಿ, ಗುರುವಿಗೆ ನಮಿಸಿ, ಧರ್ಮದೇವತೆ, ಅದೃಶ್ಯ ಚೇತನಗಳನ್ನು ನೆನೆದು ಅಭಿನವ ಗೊಮ್ಮಟಕ್ಕೆ ಶ್ರೀಕಾರ ಬರೆದರು. ಇದಕ್ಕೂ ಮೊದಲು ರತ್ನವರ್ಮ ಹೆಗ್ಗಡೆಯವರ ಪ್ರತಿನಿಧಿ ವೀರೇಂದ್ರ ಹೆಗ್ಗಡೆಯವರು ಜಿನ ಮಂತ್ರಗಳ, ಮಂಗಲ ವಾದ್ಯಗಳ ನಿನಾದದ ನಡುವೆ ಶೆಣೈ ಅವರಿಗೆ ಪುಷ್ಪಾಹಾರ ತೊಡಿಸಿ ಶುಭ ಹಾರೈಸಿದ್ದರು.

ಮುಹೂರ್ತದ ದಿನ ರತ್ನವರ್ಮ ಹೆಗ್ಗಡೆಯವರು ಬಂದಿರಲಿಲ್ಲ. ನಂತರ ಬಂದ ಅವರು ಅಲ್ಲಿನ ಬೃಹತ್ ಕಲ್ಲನ್ನು ನೋಡಿ, ಎಷ್ಟು ಸಾಧ್ಯವೋ ಅಷ್ಟು ದೊಡ್ಡ ಮೂರ್ತಿ ಮಾಡಿ ಎಂದರು. ಶೆಣೈ ಅವರು ಸಾಗಾಟದ ಸಮಸ್ಯೆಯನ್ನಿಟ್ಟಾಗ, ಅದರ ಯೋಚನೆ ನಮಗೆ ಬಿಡಿ ಎಂದಷ್ಟೇ ಹೇಳಿ ತೆರಳಿದರು. ಮೊದಲು 18 ಅಡಿ ಮೂರ್ತಿ, ಪೀಠ ಸಹಿತ 24 ಅಡಿ ಎಂದು ನಿರ್ಧಾರವಾಗಿತ್ತು. ರತ್ನವರ್ಮ ಹೆಗ್ಗಡೆಯವರ ಆಶಯದಂತೆ ನಂತರ ಅದು 39 ಅಡಿ ವಿಗ್ರಹ, 13 ಅಡಿ ಪೀಠದೊಂದಿಗೆ 52 ಅಡಿಗಳಷ್ಟಾಯಿತು!

ದೊಡ್ಡದಾದ ಬಂಡೆಯನ್ನು ಕತ್ತರಿಸಿ, ಬಿಂಬಕ್ಕೆ ಬೇಕಾದಷ್ಟೇ ಭಾಗ ಉಳಿಸಿಕೊಂಡ ಮೇಲೆ ಶಿಲ್ಪಿ ಶೆಣೈಯವರೇ ಕುಳಿತು ಮೂರ್ತಿಯ ಪ್ರಮಾಣ, ಅಂಗಾಂಗಗಳ ವಿನ್ಯಾಸಗಳನ್ನು ಗೆರೆಯೆಳೆದು ಗುರುತಿಸಿದರು. ಅದಕ್ಕೆ ಬೇಕಾಗಿ ಮೊದಲೇ ಆವೆಮಣ್ಣು, ಕಾಗದದಲ್ಲಿ ಮಾದರಿ ರಚಿಸಿಕೊಂಡಿದ್ದರು. ಶೆಣೈಯವರ ಸೂಚನೆ ನಿರ್ದೇಶನಗಳನ್ನು ಅನುಸರಿಸಿ 50ಕ್ಕೂ ಹೆಚ್ಚು ನುರಿತ ಕೆಲಸಗಾರರು ಕಾರ್ಯಮಗ್ನರಾದರು. ಬರಿಯ ಗುಡ್ಡವಾಗಿದ್ದ ಮಂಗಲಪಾದೆಯಲ್ಲಿ ಹಗಲಿಡೀ ಉಳಿ, ಚೇಣ, ಕೊಡತಿಗಳ ಠಣ್ ಠಣ್ ಶಬ್ದ ಅನುರಣಿಸಿತು. ದಿನ ಹೋದಂತೆ ಇಲ್ಲಿನ ವಿಶೇಷ ಕಾರ್ಯ ಹೊರಗಿನ ಪ್ರಪಂಚದಲ್ಲಿ ಸಾಕಷ್ಟು ಪ್ರಚಾರ ಪಡೆಯಿತು. ದುರ್ಗಮ ಗುಡ್ಡದಲ್ಲಿ ಮಾರ್ಗ ನಿರ್ಮಾಣವಾಯಿತು. ಕುತೂಹಲದಿಂದ ಬರುವ ನಾಗರಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿತು. ನೋಡಿದವರು ಉಘೇ, ಭಲೇ, ಭೇಷ್ ಎಂದು ಶೆಣೈಯವರನ್ನು ಅಭಿನಂದಿಸಿಯೇ ತೆರಳುತ್ತಿದ್ದರು.
(ಮುಂದುವರಿಯುತ್ತದೆ)