ಧರ್ಮಸ್ಥಳ ಲಕ್ಷ ದೀಪೋತ್ಸವ ಸಮಾಪನ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಮಂಜುನಾಥ ಸ್ವಾಮಿಯ ಗೌರಿಮಾರುಕಟ್ಟೆ ಉತ್ಸವದೊಂದಿಗೆ ಐದು ದಿನಗಳ ವಿಜೃಂಭಣೆಯ ಧರ್ಮಸ್ಥಳ ಲಕ್ಷದೀಪೋತ್ಸವ ಶುಕ್ರವಾರ ಮುಂಜಾನೆ ಸಮಾಪನಗೊಂಡಿತು.

ಹೊಸಕಟ್ಟೆ, ಕೆರೆಕಟ್ಟೆ, ಲಲಿತೋದ್ಯಾನ, ಕಂಚಿಮಾರುಕಟ್ಟೆ ಬಳಿಕ ಕೊನೆಯ ದಿನ ಗೌರಿಮಾರುಕಟ್ಟೆ ಉತ್ಸವ ದಿನ ದೇವಸ್ಥಾನದ ಒಳಗಡೆ ದೇವರ ಮೂರ್ತಿಯನ್ನು ಹೊತ್ತು ಗರ್ಭಗುಡಿಗೆ ಎರಡು ಸುತ್ತು ಹಾಗೂ ಹೊರಗೆ ನಾಲ್ಕು ಸುತ್ತು ಪ್ರದಕ್ಷಿಣೆ ಬಳಿಕ ಕ್ಷೇತ್ರಪಾಲ ಪೂಜೆ ನಡೆಯಿತು. ಗರ್ಭಗುಡಿಯ ಒಳಗೆ ಒಂದು ಸುತ್ತು ಪ್ರದಕ್ಷಿಣೆ ಬಂದು ಹೊರಗಿನ ಪ್ರಾಂಗಣದಲ್ಲಿ ಶಂಖ, ಕೊಳಲು, ಚೆಂಡೆವಾದನ, ನಾಗಸ್ವರ ಇತ್ಯಾದಿ ಸಂಗೀತ ಸೇವೆಯೊದಿಗೆ ಒಂಭತ್ತು ಸುತ್ತು ಮೆರವಣಿಗೆ ನಡೆಯಿತು.

ಬಳಿಕ ಬೆಳ್ಳಿರಥದಲ್ಲಿ ಸ್ವಾಮಿಯ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಗೌರಿಮಾರುಕಟ್ಟೆಗೆ ಕೊಂಡೊಯ್ದು, ಅಲ್ಲಿ ಅಷ್ಟಾವಧಾನ ಪೂಜೆ ನಡೆಸಿ ಮೆರವಣಿಗೆ ದೇವಸ್ಥಾನಕ್ಕೆ ವಾಪಸ್ಸಾಯಿತು. ನಾಡಿನೆಲ್ಲೆಡೆಯಿಂದ ಆಗಮಿಸಿದ ಲಕ್ಷಾಂತರ ಭಕ್ತರು ಉತ್ಸವ ವೀಕ್ಷಿಸಿ ಪುನೀತರಾದರು.

ಸುಗಮ ಸಂಗೀತ: ಗುರುವಾರ ರಾತ್ರಿ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರಿಂದ ಧರ್ಮಸ್ಥಳದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಗಾಯಕಿ ಅನುರಾಧಾ ಭಟ್ ಗಣೇಶ ಸ್ತೋತ್ರ, ನೀಡು ಶಿವ.. ನೀಡದಿರು ಶಿವ, ನಂದ ನಂದ ಶ್ರೀಕೃಷ್ಣ ಪದ್ಯಗಳನ್ನು ಹಾಡಿ ರಂಜಿಸಿದರು. ಗೊಂಬೆ ಹೇಳುತೈತೆ, ಬೆಳಗೆದ್ದು ಯಾರ ಮುಖವ ನಾನು ನೋಡಿದೆ, ಬಾನಿಗೊಂದು ಎಲ್ಲೆ ಎಲ್ಲಿದೆ ಪದ್ಯಗಳನ್ನು ವಿಜಯಪ್ರಕಾಶ್ ಹಾಡಿದರು. ತೌಫೀಕ್ ಖುರೇಶ್, ತಾಳವಾದ್ಯ ಪ್ರವೀಣ ಮತ್ತು ತಂಡ ಹಿನ್ನೆಲೆಯಲ್ಲಿ ಸಹಕರಿಸಿದರು.

ಸಮವಸರಣ ಪೂಜೆ: ಶುಕ್ರವಾರ ಸಾಯಂಕಾಲ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಿತು. ಬೀಡಿನಿಂದ ಸಭಾಭವನಕ್ಕೆ ತೀರ್ಥಂಕರರ ಮೂರ್ತಿಯ ಭವ್ಯ ಮೆರವಣಿಗೆ ಬಳಿಕ ಪೂಜೆ ನಡೆಯಿತು. ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು. ಕಾರ್ಕಳದ ಶ್ರೀವೇಣಿ ಸುಬ್ರಹ್ಮಣ್ಯ ಭಟ್ ಬಳಗದಿಂದ ಯಕ್ಷ-ಜಿನ-ಗಾನ ವೈಭವ ಕಾರ್ಯಕ್ರಮ ನಡೆಯಿತು.