ಫಲಾಪೇಕ್ಷೆ ರಹಿತ ದಾನದಿಂದ ಮೋಕ್ಷ

«ಧರ್ಮಸ್ಥಳ ಸರ್ವಧರ್ಮ ಸಮ್ಮೇಳನದಲ್ಲಿ ಸೂರ‌್ಯಾಚಾರ್ಯ ಶ್ರೀ ಕೃಷ್ಣದೇವನಂದಗಿರಿ ಮಹಾರಾಜ್ ಹೇಳಿಕೆ»

– ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ದಾನ ಯಾವತ್ತೂ ಪರಿಶುದ್ಧ ಮನಸ್ಸಿನಿಂದ ಕೂಡಿರಬೇಕು. ದೇವರ ಅನುಗ್ರಹದಿಂದ ಸಂಪಾದಿಸಿದ ಸಂಪತ್ತನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಇತರರಿಗೆ ದಾನ ಮಾಡಿದಾಗ ಮೋಕ್ಷ ಪಡೆಯಲು ಸಾಧ್ಯ ಎಂದು ಗುಜರಾತ್‌ನ ದ್ವಾರಕ ಸೂರ‌್ಯಪೀಠ ಜಗದ್ಗುರು ಸೂರ್ರ‌್ಯಾಚಾರ್ಯ ಶ್ರೀ ಕೃಷ್ಣದೇವನಂದಗಿರಿ ಮಹಾರಾಜ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಅಂಗವಾಗಿ ಬುಧವಾರ ಸರ್ವಧರ್ಮ ಸಮ್ಮೇಳನದ 86ನೇ ಅಧಿವೇಶನ ಉದ್ಘಾಟಿಸಿದ ಅವರು, ಮನುಷ್ಯರಾಗಿ ನಾವು ಪ್ರೀತಿ ವಿಶ್ವಾಸದಿಂದ ಇತರರ ಸೇವೆ ಮಾಡಬೇಕು. ಮಾತಾಪಿತರನ್ನು ಗೌರವಿಸುವುದು, ಭೂಮಾತೆ, ಗೋಮಾತೆಯ ಸೇವೆ ನಿತ್ಯ ಬದುಕಾಗಬೇಕು. ಈ ರೀತಿಯ ಪಂಚತತ್ವಗಳನ್ನು ಪಾಲಿಸಿದಾಗ ಸ್ವರ್ಗಸುಖ ಅನುಭವಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ, ಸಮಾಜ ಸುಧಾರಕ, ಆಧ್ಯಾತ್ಮಿಕ ಮಾರ್ಗದರ್ಶಕರಾದ ಬೆಂಗಳೂರಿನ ಶ್ರೀ ಎಂ (ಮಮ್ತಾಜ್ ಅಲಿ), ನಾವು ಮನುಷ್ಯನಾಗಿ ಬದುಕನ್ನು ಮನುಷ್ಯತ್ವದಿಂದ ನೋಡಬೇಕು; ನಮ್ಮ ಹೃದಯವನ್ನು ದೇವರ ಗರ್ಭಗುಡಿ ಎಂದು ಭಾವಿಸಿ ಅಲ್ಲಿ ದೇವರಿದ್ದಾನೆ ಎಂಬ ಭಾವನೆ ಬಂದಾಗ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ನಾನು ಕಾಶ್ಮೀರಕ್ಕೆ ಹೋದಾಗ ನನಗೆ ಬಹಳ ಗೌರವ ಕೊಟ್ಟರು. ನಾನು ಬೇಡ ಎಂದರೂ ಭದ್ರತೆ ಕೊಟ್ಟರು. ಕಲ್ಲು ಬೀಳುವ ಬದಲು ಹೂಮಾಲೆ ಬಿತ್ತು. ಅದಕ್ಕಾಗಿ ನಾವು ಶಾಂತಿಯಿಂದ ಇದ್ದಷ್ಟು ಸಮಾಜ ಶಾಂತಿಯಿಂದಿರಲು ಸಾಧ್ಯ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಸುರೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಪ್ರಯುಕ್ತ ಹೊರತಂದ ಸಿಡಿಗಳನ್ನು ಬಿಡುಗಡೆಗೊಳಿಸಲಾಯಿತು.
ಮಾಜಿ ಶಾಸಕ ಜೆ.ಆರ್ ಲೋಬೊ, ಕನ್ನಡ ಕಬೀರ ಮಹಾಲಿಂಗಪುರದ ಇಬ್ರಾಹಿಂ ಸುತಾರ, ಉಪನ್ಯಾಸಕ ಸುನೀಲ್ ಪಂಡಿತ್ ಉಪನ್ಯಾಸ ನೀಡಿದರು. ಹೇಮಾವತಿ ವಿ. ಹೆಗ್ಗಡೆ, ಹರ್ಷೇಂದ್ರ ಕುಮಾರ್, ಡಿ.ರಾಜೇಂದ್ರ ಕುಮಾರ್, ಶ್ರದ್ಧಾ ಅಮಿತ್, ನೃತ್ಯಪಟು ಶ್ರೀಧರ್ ಉಪಸ್ಥಿತರಿದ್ದರು. ಡಾ.ಬಿ.ಯಶೋವರ್ಮ ಸನ್ಮಾನ ಪತ್ರ ವಾಚಿಸಿದರು. ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ವಂದಿಸಿದರು. ಉಪನ್ಯಾಸಕ ಡಾ.ಬಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮೊದಲು ಅತಿಥಿಗಳನ್ನು ಹೆಗ್ಗಡೆಯವರ ಬೀಡಿನಿಂದ ಅಮೃತವರ್ಷಿಣಿ ಸಭಾಭವನ ತನಕ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಧರ್ಮದ ಉದ್ದೇಶ ಸಮನ್ವಯ
ವಿಶ್ವದ ಎಲ್ಲ ಧರ್ಮಗಳು ಭಗವಂತನೆಂಬ ಒಂದೇ ತತ್ವದ ಪ್ರತಿಪಾದನೆ ಮಾಡುತ್ತವೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಯಾವುದೇ ಧರ್ಮದಲ್ಲಿ, ಯಾವುದೇ ಶಾಸ್ತ್ರದಲ್ಲಿ ಯಾರಿಗೂ ಮನ, ವಚನ, ಕರ್ಮದಿಂದ ಒಂದಿಷ್ಟು ಹಾನಿಯಾಗಲೆಂದು ಬರೆಯಲ್ಪಟ್ಟಿಲ್ಲ. ಅಂದರೆ ಧರ್ಮದ ಮೂಲ ಉದ್ದೇಶವೇ ಸಮನ್ವಯ. ಜಗತ್ತು ಧರ್ಮದ ಮೇಲೆ ನಿಂತಿದೆ. ಧರ್ಮಿಷ್ಠರನ್ನೇ ಜನರು ಗೌರವಿಸುತ್ತಾರೆ. ಧರ್ಮವು ಪಾಪಯುತ ಆಲೋಚನೆಗಳನ್ನು ನಾಶಪಡಿಸುತ್ತದೆ. ಈ ಪ್ರಪಂಚದಲ್ಲಿ ಸರ್ವವೂ ಧರ್ಮದ ಆಧಾರದ ಮೇಲೆ ನಿಂತಿದೆ. ಆದ್ದರಿಂದ ಧರ್ಮವನ್ನು ಅತಿಶ್ರೇಷ್ಠ ಎಂದು ಪರಿಗಣಿಸಲಾಗಿದೆ ಎಂದರು.

 

ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ 12 ತಿಂಗಳಲ್ಲಿ 1060 ದೇವಸ್ಥಾನಗಳಿಗೆ ಜೀರ್ಣೋದ್ದಾರ ಮತ್ತು ಧಾರ್ಮಿಕ ಕಾರ್ಯಗಳಿಗೆ 12 ಕೋಟಿ ರೂ. ವಿನಿಯೋಗಿಸಲಾಗಿದೆ. ಕ್ಷೇತ್ರದಿಂದ ಶೇ.40, ಸರ್ಕಾರದಿಂದ ಶೇ.40, ಗ್ರಾಮಸ್ಥರಿಂದ ಶೇ.20ರ ಸಹಯೋಗದಂತೆ 241ದೇವಸ್ಥಾನ ಜೀಣೋದ್ಧಾರಗೊಳಿಸಲಾಗಿದೆ. ಇತರ 12 ದೇವಸ್ಥಾನಗಳನ್ನು ಪ್ರತಿವರ್ಷ ಜೀಣೋದ್ಧಾರಗೊಳಿಸಲಾಗುತ್ತಿದೆ.
– ಡಾ.ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ

 

ನಾವು ಎಲ್ಲರೂ ಸರಿ ಸಮಾನರು, ಮಾನವರು ಹಾಗೂ ಕನ್ನಡಿಗರು. ಎಲ್ಲರಲ್ಲಿಯೂ ಭಾವೈಕ್ಯತೆ ಮತ್ತು ಸಾಮರಸ್ಯ ಮೂಡಿಸುವುದೇ ಸರ್ವಧರ್ಮ ಸಮ್ಮೇಳನ ಉದ್ದೇಶ. ಭಾವೈಕ್ಯತೆ ಅಂದರೆ, ನಾವು ನಂಬಿದ ಧರ್ಮ ಮತ್ತು ಸಿದ್ಧಾಂತವನ್ನು ಚೆನ್ನಾಗಿ ತಿಳಿದು ಅನುಷ್ಠಾನಗೊಳಿಸುವುದು. ಇತರರ ಧರ್ಮ ಮತ್ತು ಸಿದ್ಧಾಂತವನ್ನು ಪ್ರಾಮಾಣಿಕವಾಗಿ ಗೌರವಿಸುವುದು.
– ಇಬ್ರಾಹಿಂ ಸುತಾರ, ಕನ್ನಡ ಕಬೀರ, ಸೂಫಿ ಸಂತ

 

ಒಂದು ನೃತ್ಯ ಪ್ರದರ್ಶನದ ತಯಾರಿಗಾಗಿ ತಾನು ಜೈನ ಧರ್ಮ ಹಾಗೂ ಅದರ ಸಿದ್ಧಾಂತಗಳನ್ನು ಅಧ್ಯಯನ ಮಾಡಬೇಕಾಯಿತು. ಜೈನ ಧರ್ಮದ ಪ್ರಕಾರ ಆತ್ಮದ ಕರ್ಮದ ಕೊಳೆಯನ್ನು ಕಳೆದಾಗ, ರಾಗ-ದ್ವೇಷ ರಹಿತನಾದಾಗ ಆತ್ಮನೇ ಪರಮಾತ್ಮನಾಗಬಲ್ಲ. ಸ್ವಯಂ ಸಾಧನೆಯಿಂದ ಹಾಗೂ ಆಧ್ಯಾತ್ಮಿಕ ಉನ್ನತಿಯಿಂದ ಜೈನ ಧರ್ಮದ ಮೂಲಕ ಮಾತ್ರ ಮೋಕ್ಷ ಸಾಧನೆ ಸಾಧ್ಯ.
– ಶ್ರೀಧರ್, ನೃತ್ಯಪಟು, ನಟ

 

ಯಾವ ಧರ್ಮಗಳೂ ಪರಿಪೂರ್ಣವಲ್ಲ, ಪರಿಶುದ್ಧವೂ ಅಲ್ಲ. ಅಹಿಂಸೆಯೇ ಶ್ರೇಷ್ಠ ಧರ್ಮ. ನಮ್ಮ ಧರ್ಮಕ್ಕೆ ನೀಡುವ ಗೌರವ ಮತ್ತು ಪ್ರಾಮುಖ್ಯತೆಯನ್ನು ಇತರ ಧರ್ಮಗಳಿಗೂ ನೀಡಬೇಕು. ಧರ್ಮದಿಂದ ಮಾನವೀಯ ಸಂಬಂಧಗಳು ಬೆಳೆಯಬೇಕು. ಗಾಂಧೀಜಿಯ ಧಾರ್ಮಿಕ ಚಿಂತನೆಗಳು ಇಂದಿಗೂ ಪ್ರಸ್ತುತ ಹಾಗೂ ಸಾರ್ವಕಾಲಿಕ ಮೌಲ್ಯ ಹೊಂದಿವೆ.
– ಜೆ.ಆರ್.ಲೋಬೊ, ಮಾಜಿ ಶಾಸಕ

ಲಲಿತೋದ್ಯಾನದಲ್ಲಿ ದೀಪಗಳ ಉತ್ಸವ
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಮೂರನೇ ದಿನ ಮಂಗಳವಾರ ರಾತ್ರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಲಿತೋದ್ಯಾನ ಉತ್ಸವ ನಡೆಯಿತು.
ದೇವರಿಗೆ ಪೂಜೆ ನಡೆದು ವಿಶೇಷವಾಗಿ ಅಲಂಕರಿಸಿದ ಮೂರ್ತಿಯನ್ನು ದೇಗುಲದ ಒಳಗೆ 16 ಸುತ್ತು ಬಂದ ಬಳಿಕ, ದೇವಳದ ಮುಂಭಾಗ ತಂದು ಸ್ವರ್ಣ ಪಲ್ಲಕ್ಕಿಯಲ್ಲಿ ಕೂರಿಸಲಾಯಿತು. ಆನೆ ಚಾಮರ ಬೀಸಿದ ಬಳಿಕ ವಾಲಗ, ಕೊಳಲು, ಚೆಂಡೆ, ಶಂಖ ವಿವಿಧ ವಾದ್ಯಗಳ ಜತೆಗೆ ದೇವರನ್ನು ಪಲ್ಲಕ್ಕಿಯಲ್ಲಿ ಒಂದು ಸುತ್ತು ಪೇಟೆಯಲ್ಲಿ ಪ್ರದಕ್ಷಿಣೆ ಹಾಕಿಸಲಾಯಿತು.
ನಂತರ ಪಲ್ಲಕ್ಕಿಯನ್ನು ದೇವಸ್ಥಾನ ಮುಂಭಾಗ ದೀಪಗಳಿಂದ ಅಲಂಕೃತಗೊಂಡಿದ್ದ ಲಲಿತೋದ್ಯಾನಕ್ಕೆ ತಂದು ಸ್ವಾಮಿಗೆ ಅಷ್ಟಾವಧಾನ ಸೇವೆ, ನೈವೇದ್ಯ, ದೀಪಾಲಂಕಾರದ ನಂತರ ಮಹಾ ಮಂಗಳಾರತಿ ಪೂಜೆ ನೆರವೇರಿಸಿ ಉತ್ಸವ ಪೂರ್ಣಗೊಳಿಸಲಾಯಿತು.
ಲಲಿತೋದ್ಯಾನದಿಂದ ದೇವರ ಮೂರ್ತಿಯನ್ನು ದೇವಸ್ಥಾನದ ಬಳಿ ತಂದು ಬೆಳ್ಳಿರಥದಲ್ಲಿ ದೇವಸ್ಥಾನದ ಸುತ್ತಲೂ ಮೆರವಣಿಗೆ ನಡೆಯಿತು. ಭಕ್ತರು ಬೆಳ್ಳಿರಥ ಎಳೆದು ಸ್ವಾಮಿ ಕೃಪೆಗೆ ಪಾತ್ರರಾದರು. ಬಳಿಕ ದೇವರ ಮೂರ್ತಿಗೆ ಮಂಗಳಾರತಿ ಮಾಡಿ ಮೂರ್ತಿಯನ್ನು ದೇಗುಲದೊಳಗೆ ಕೊಂಡೊಯ್ಯಲಾಯಿತು.

ಇಂದು ದೀಪೋತ್ಸವಕ್ಕೆ ತೆರೆ
ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ, ಕೆರೆಕಟ್ಟೆ, ಲಲಿತೋದ್ಯಾನ, ಕಂಚಿಮಾರುಕಟ್ಟೆ ಉತ್ಸವಗಳು ನಡೆದಿದ್ದು, ಗುರುವಾರ ರಾತ್ರಿ ಗೌರಿಮಾರುಕಟ್ಟೆ ಉತ್ಸವದೊಂದಿಗೆ ಐದು ದಿನಗಳ ಧರ್ಮಸ್ಥಳ ಲಕ್ಷದೀಪೋತ್ಸವ ಸಂಪನ್ನಗೊಳ್ಳಲಿದೆ. ಈ ದಿನ ಲಕ್ಷಾಂತರ ಭಕ್ತರು ರಥೋತ್ಸವ ವೀಕ್ಷಿಸಲಿದ್ದಾರೆ. ಡಿ.7ರಂದು ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.

ಇಂದು ಸಾಹಿತ್ಯ ಸಮ್ಮೇಳನ
ಗುರುವಾರ ಸಾಯಂಕಾಲ 5ರಿಂದ ಸಾಹಿತ್ಯ ಸಮ್ಮೇಳನ ನಡೆಯಲಿದೆ. ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ವಿಜಯ ಸಂಕೇಶ್ವರ ಕಾರ್ಯಕ್ರಮ ಉದ್ಘಾಟಿಸಿ ‘ಸುವರ್ಣ ಪರಿಚಯ’ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿಮರ್ಶಕ ಪ್ರೊ.ಟಿ.ಪಿ. ಅಶೋಕ ಅಧ್ಯಕ್ಷತೆ ವಹಿಸುವರು. ದ.ಕ. ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್. ರವಿಕಾಂತೇಗೌಡ, ವಿಜ್ಞಾನ ಸಂವಹನಕಾರ- ಚಲನಚಿತ್ರ ನಿರ್ದೇಶಕ ಎಂ. ಅಬ್ದುಲ್ ರೆಹಮಾನ್ ಪಾಷ, ಅಂಕಣಕಾರ್ತಿ ಕವಿತಾ ಅಡೂರ್ ಉಪನ್ಯಾಸ ನೀಡಲಿದ್ದಾರೆ. ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಸ್ತಾಪಿಸಲಿದ್ದಾರೆ.