ಆಧ್ಯಾತ್ಮಿಕ ಪರಂಪರೆ ರಾಷ್ಟ್ರ

ಧರ್ಮಸ್ಥಳ: ಭಾರತ ಆಧ್ಯಾತ್ಮಿಕ ಪರಂಪರೆಯ ರಾಷ್ಟ್ರ. ಮುಕ್ತಿ ಮಾರ್ಗ ಎಲ್ಲ ಧರ್ಮಗಳ ಮೂಲಸಾರ. ಆದರೆ ಇದು ವೈಭೋಗದಿಂದ ಸಾಧ್ಯವಿಲ್ಲ. ತ್ಯಾಗ ಅಹಿಂಸೆಯಿಂದ ಮುಕ್ತಿಗೆ ದಾರಿ. ಬಾಹುಬಲಿಯ ಸಂದೇಶವೂ ಇದುವೇ ಆಗಿದೆ ಎಂದು ಚಾರಿತ್ರ್ಯ ಚಕ್ರವರ್ತಿ ಶಾಂತಿ ಸಾಗರ ಮಹಾರಾಜ ಅಕ್ಷುಣ್ಣ ಪರಂಪರೆಯ ವರ್ತಮಾನ ಪೀಠಾಧೀಶ ಆಚಾರ್ಯ ಶ್ರೀ 108 ವರ್ಧಮಾನ ಸಾಗರಜೀಮುನಿ ಮಹಾರಾಜ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಪ್ರಯುಕ್ತ ಶುಕ್ರವಾರ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಆಯೋಜಿಸಲಾದ ಸಂತ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದರು.

ಪರಮಪೂಜ್ಯ ಆಚಾರ್ಯ ಶ್ರೀವಾತ್ಸಲ್ಯ ವಾರಿಧಿ 108 ಪುಷ್ಪದಂಥ ಸಾಗರ ಮುನಿಮಹಾರಾಜ ಆಶೀರ್ವಚನ ನೀಡಿ, ಪ್ರಕೃತಿ ಪೂಜೆ ನಮ್ಮ ಸಂಸ್ಕೃತಿ. ನಮ್ಮ ದೇಹವೂ ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಬಾಹುಬಲಿಯ ನೋಡುವ ಪ್ರತಿಯೊಬ್ಬರು ನಮಗೂ ನಿಮ್ಮಂತೆ ಬದುಕುವ ಶಕ್ತಿಕೊಡು ಎಂದು ಕೇಳಬೇಕು ಎಂದು ಸೂಚಿಸಿದರು.

ಶ್ರೀಕ್ಷೇತ್ರ ಹೊಂಬುಜದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಮಾತನಾಡಿ, ದೇಶದಲ್ಲಿ ಹೆಚ್ಚು ಪ್ರಶಂಸೆಗೊಳಗಾದ ದೇವರು ಬಾಹುಬಲಿ. ಭರತ-ಬಾಹುಬಲಿಯ ಧರ್ಮ ಯುದ್ಧ ಇಂದಿಗೆ ಹೆಚ್ಚು ಮಹತ್ವ ಪೂರ್ಣವಾದುದು. ಬಾಹುಬಲಿಗಾದ ಜ್ಞಾನೋದಯ ಇಂದಿನ ಜನರಿಗಾದರೆ ರಾಜಕೀಯ ವ್ಯವಸ್ಥೆ ಶುದ್ಧವಾದೀತು ಎಂದರು.

ಕಾರ್ಕಳ ದಾನ ಶಾಲೆಯ ಧ್ಯಾನ ಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಂತರಾದ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ, ಬಾರಕೂರು ಸಂಸ್ಥಾನದ ಡಾ.ಸಂತೋಷ್ ಗುರೂಜಿ, ಕೊಡಗು ವಿರಾಜಪೇಟೆಯ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಕನ್ಯಾಡಿ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮಸ್ತಕಾಭಿಷೇಕ ಮಹೋತ್ಸವ ಸಮಿತಿ ಪ್ರಶಾಂತ್ ಸಂಚಾಲಕ ಡಿ.ಸುರೇಂದ್ರ ಕುಮಾರ್, ಸಂಚಾಲಕ ಡಿ.ಹರ್ಷೇಂದ್ರ ಕುಮಾರ್, ಹೇಮಾವತಿ ವಿ. ಹೆಗ್ಗಡೆ, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಉಪಸ್ಥಿತರಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ದಾಮೋದರ ಶರ್ಮ ಬಾರಕೂರು ಕಾರ್ಯ ಕ್ರಮ ಸಂಯೋಜಿಸಿದರು. ಕೃಷ್ಣರಾಜ ಹೆಗ್ಡೆ ಗಂಟಾಲಕಟ್ಟೆ ವಂದಿಸಿದರು.

ಧರ್ಮಸ್ಥಳ ಮಸ್ತಕಾಭಿಷೇಕ ಸಮಾಜಮುಖಿಯಾಗಿ ಗಮನ ಸೆಳೆಯುವ ಕಾರ್ಯಕ್ರಮ. ಜನರನ್ನು ಸಂಘಟನೆ ಮಾಡುವ ಶಕ್ತಿ ಧಾರ್ಮಿಕತೆಗೆ ಇದೆ. ಗಾಂಧೀಜಿಯವರು ಬ್ರಿಟಿಷರ ವಿರುದ್ಧದ ಹೋರಾಟಕ್ಕೂ ಧಾರ್ಮಿಕ ಸಂಘಟನೆಗೆ ಒತ್ತು ಕೊಟ್ಟಿದ್ದರು. ಭರತ ಬಾಹುಬಲಿಯ ಸಂದೇಶದಂತೆ ವಿಶ್ವದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ.
|ಡಾ.ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಧರ್ಮಾಧಿಕಾರಿ

ಸಂತ ಹಾಗೂ ಸಮಾಜಕ್ಕೆ ಬಂಧವಿದೆ. ಸಂತ ಸಮಾಜಕ್ಕೆ ಆಸ್ತಿಯಾಗಿರಬೇಕು. ಬಾಹುಬಲಿಯನ್ನು ನೋಡಿದಾಗ ಆತ್ಮವಿಶ್ವಾಸ ಬೆಳೆಯುತ್ತದೆ. ತ್ಯಾಗದ ಮೂರ್ತಿಯೇ ಬಾಹುಬಲಿ. ಶ್ವೇತಾಂಬರರು ಮತ್ತು ದಿಗಂಬರರು ಜೈನ ಧರ್ಮದ ಎರಡು ಕಣ್ಣುಗಳು ಇದ್ದಂತೆ. ಅಧ್ಯಾತ್ಮ ಮತ್ತು ವಿಜ್ಞಾನ ಧರ್ಮಸ್ಥಳದಲ್ಲಿ ಮೇಳೈಸಿದೆ.
|ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು

ಜಗತ್ತಿಗೆ ಶ್ರೇಷ್ಠ ಆದರ್ಶ ಮೂರ್ತಿ ಬಾಹುಬಲಿ. ಎಲ್ಲವನ್ನು ಮೀರಿನಿಂತ ಪರಂಪರೆ ಜೈನ ಧರ್ಮದ್ದು. ಭರತ-ಬಾಹುಬಲಿಯ ವಂಶ ಹೆಗ್ಗಡೆಯವರದ್ದು. ಆ ಮೂಲಕ ಧರ್ಮ ಸಾಮ್ರಾಜ್ಯವೇ ಇಲ್ಲಿ ನೆಲೆಸಿದೆ.
|ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕನ್ಯಾಡಿ

ಜೈನ ಧರ್ಮ ತ್ಯಾಗ ಸೇವೆ ಸಮರ್ಪಣಾ ಭಾವದೊಂದಿಗೆ ಯಾರಿಗೂ ಹಿಂಸೆಯಾಗದ ರೀತಿಯಲ್ಲಿ ಸಮಾಜದಲ್ಲಿ ಸದ್ಭಾವನೆ ಸಾರುತ್ತ ಬಂದಿದೆ.
|ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಣಿಲ