ಧರ್ಮಸ್ಥಳ ಕಾರ್ಯ ಶ್ಲಾಘ್ಯ: ಸಚಿವ ರೇವಣ್ಣ

ಧರ್ಮಸ್ಥಳ: ಕೆರೆಗಳ ಹೂಳೆತ್ತುವ, ದೇವಳಗಳನ್ನೂ ಜೀರ್ಣೋದ್ಧಾರಗೊಳಿಸುವ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯ ಶ್ಲಾಘನೀಯ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆಯಲಿರುವ ಕೆರೆ ಸಂಜೀವಿನಿ ಯೋಜನೆಗೆ ಶುಕ್ರವಾರ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಂತ ಸಮ್ಮೇಳನದ ವೇಳೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದೆ ಭರವಸೆ ನೀಡಿದಂತೆ ಮಸ್ತಕಾಭಿಷೇಕ ವೇಳೆಗೆ ದೇವಳ ಕ್ಕೆ 23 ಕೋಟಿ ರೂ.ಅನುದಾನದಲ್ಲಿ ರಸ್ತೆ ನಿರ್ಮಿಸಿಕೊಡಲಾಗಿದೆ. 2 ಕೋಟಿ ರೂ.ವೆಚ್ಚದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ ಪ್ರಗತಿಯಲ್ಲಿದೆ. 10 ಸಾವಿರ ಕೋಟಿ ರೂ. ವೆಚ್ಚದ ಶಿರಾಡಿ ಸುರಂಗ ಮಾರ್ಗಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಮಸ್ತಕಾಭಿಷೇಕ ಮುಗಿದ ಬಳಿಕ ಉಳಿದ ರಸ್ತೆಗಳ ಅಭಿವೃದ್ಧಿ ಎಂದರು.

ಲಕ್ಷದೀಪ ಸಮಯದಲ್ಲಿ ಕ್ಷೇತ್ರಕ್ಕೆ ಬಂದಿದ್ದ ರೇವಣ್ಣ ಅವರಲ್ಲಿ ರಸ್ತೆ ಅಭಿವೃದ್ಧಿ ಕುರಿತು ಪ್ರಸ್ತಾಪಿಸಲಾಗಿತ್ತು. ತಕ್ಷಣ ಕಾರ್ಯಪ್ರವೃತರಾದ ಅವರು, ನೇತ್ರಾವತಿ ಸೇತುವೆಯಿಂದ ಕ್ಷೇತ್ರಕ್ಕೆ ಚತುಷ್ಪಥ ರಸ್ತೆ ನಿರ್ಮಿಸಿ ಕೊಟ್ಟಿದ್ದಾರೆ. ಇದು ರೇವಣ್ಣ ಸ್ಟೈಲ್ ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಡುತ್ತಾರೆ. 28 ಕೋಟಿ ರೂ.ವೆಚ್ಚದಲ್ಲಿ ರಾಜ್ಯದಲ್ಲಿ 100 ಕೆರೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಕೆರೆ ಸಂಜೀವಿನಿ. ಇದರಲ್ಲಿ 16 ಕೋಟಿ ರೂ.ವನ್ನು ಕ್ಷೇತ್ರದಿಂದ ಭರಿಸಲಾಗುವುದು. ಉಳಿದ ಮೊತ್ತವನ್ನು ಸರ್ಕಾರ ಭರಿಸಲಿದೆ. 29 ಜಿಲ್ಲೆಗಳ 115 ತಾಲೂಕುಗಳ 148 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳೀದರು.

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಬೆಳ್ಳಿ ದೀಪ ಬೆಳಗಿಸಿದರು. ದೇವೇಗೌಡರ ಪುತ್ರಿ ಎಚ್.ಡಿ.ಶೈಲಜಾ ಮೊದಲಾದವರು ಉಪಸ್ಥಿತರಿದ್ದರು.

ಹಿಂದಿನ ಮಸ್ತಕಾಭಿಷೇಕ ವೇಳೆ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿದ್ದರು. ಈ ಬಾರಿಯೂ ಅವರೇ ಮುಖ್ಯಮಂತ್ರಿ. ಇದಕ್ಕೆ ಯೋಗ ಭಾಗ್ಯ, ಭಕ್ತಿ ಶ್ರದ್ಧೆ ಕಾರಣ. ಪ್ರಧಾನಿ ಪತ್ನಿ, ಸಿಎಂ ತಾಯಿ, ಸಚಿವರೊಬ್ಬರ ತಾಯಿ-ಇದು ಚೆನ್ನಮ್ಮನ ದೊಡ್ಡ ಭಾಗ್ಯ.
|ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ