ಅಲಂಕಾರಗಳಿಂದ ಕಂಗೊಳಿಸುತ್ತಿದೆ ಕ್ಷೇತ್ರ

ಬೆಳ್ತಂಗಡಿ: ಫೆ.9ರಿಂದ 18ರವರೆಗೆ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದ್ದು, ರತ್ನಗಿರಿಯಲ್ಲಿ ವಿರಾಜಮಾನನಾದ ತ್ಯಾಗಮೂರ್ತಿ ಭಗವಾನ್ ಬಾಹುಬಲಿ ಸ್ವಾಮಿಗೆ ನಾಲ್ಕನೇ ಮಹಾಮಜ್ಜನದ ಸಿದ್ಧತೆಗಳು ಭರದಿಂದ ಸಾಗಿವೆ. ಕ್ಷೇತ್ರ ಮತ್ತು ಸುತ್ತಲಿನ ಪ್ರದೇಶಗಳನ್ನು ಅಯೋಧ್ಯೆಯಂತೆ ಅಲಂಕಾರಗೊಳಿಸಲಾಗಿದೆ.
ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ ಮಾರ್ಗದರ್ಶನದಲ್ಲಿ, ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಸಲಹೆ-ಸೂಚನೆಯಂತೆ ಧರ್ಮಸ್ಥಳ ಸಂಪರ್ಕಿಸುವ ರಸ್ತೆಗಳಲ್ಲಿ ಪುರಾತನ ಹಾಗೂ ಸಾಂಪ್ರದಾಯಿಕ ವಿನ್ಯಾಸದ ಸುಮಾರು 16 ಸ್ವಾಗತ ಗೋಪುರಗಳನ್ನು ರಚಿಸಲಾಗಿದೆ.

ಮಹಾಮಸ್ತಕಾಭಿಷೇಕ ಅಲಂಕಾರ ಸಮಿತಿ ಸಂಯೋಜಕ ಬಾಲಕೃಷ್ಣ ಪೂಜಾರಿ ನೇತೃತ್ವದಲ್ಲಿ ಕಲಾಕಾರ ಗಣೇಶ್ ಕಾಮತ್, ಎಸ್.ಎನ್.ವಸಂತ, ಶಂಕರರಾಮ್ ಕಾರಂತ್ ಮೊದಲಾದವರು ಧರ್ಮಸ್ಥಳವನ್ನು ವಿಶೇಷವಾಗಿ, ಆಕರ್ಷಣೀಯವಾಗಿ ಸಿಂಗರಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಡಾ.ಬಿ.ಯಶೋವರ್ಮ ನೇತೃತ್ವದಲ್ಲಿ ನಾಗರಿಕರ ಸಹಕಾರದೊಂದಿಗೆ ಮೋಹನ್ ಕುಮಾರ್ ತಂಡ ಉಜಿರೆಯಲ್ಲಿ ಪೇಟೆಯಿಂದ ಸಿದ್ದವನದವರೆಗೆ ಸ್ವಾಗತ ಕಮಾನುಗಳಿಂದ ಅಲಂಕಾರಗೊಳಿಸಿದ್ದಾರೆ.

ಸ್ವಾಗತ ಕಮಾನುಗಳು: ಮಸ್ತಕಾಭಿಷೇಕಕ್ಕೆ ಬರುವ ಭಕ್ತರನ್ನು ಸ್ವಾಗತಿಸಲು ಪುರಾತನ ಶೈಲಿಯ ಹಾಗೂ ಆಕರ್ಷಕ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗುತ್ತಿದೆ. 9 ದೊಡ್ಡ ಹಾಗೂ 8 ಸಣ್ಣ ಕಮಾನುಗಳು ಜನರನ್ನು ಸ್ವಾಗತಿಸಲು ಸಜ್ಜಾಗಿವೆ. ಸ್ವಾಗತ ಕಮಾನುಗಳಿಗೆ ವಿವಿಧ ಹೆಸರನ್ನಿಡಲಾಗಿದ್ದು, ನೇತ್ರಾವತಿ ಸೇತುವೆ ಬಳಿಯ ತ್ರಿನೇತ್ರ ದ್ವಾರ, ಶಾಂತಿವನ ಬಳಿಯ ಬ್ರಾಹ್ಮಿ ದ್ವಾರ, ಕಲ್ಲೇರಿ ಬಳಿ ಯಕ್ಷದ್ವಾರ, ಪೆರಿಯಶಾಂತಿ ಬಳಿ ಅಮರಾವತಿ ದ್ವಾರ, ಬಾಹುಬಲಿ ಬೆಟ್ಟ ತಿರುವಿನಲ್ಲಿ ಸುಮೇದು ದ್ವಾರ, ಮಂಜುನಾಥ ಸ್ವಾಮಿ ದೇವಳ ಬಳಿ ನಂದೀಶ್ವರ ದ್ವಾರ, ಮಹೋತ್ಸವ ಬಳಿ ಬೋಧಿ ದ್ವಾರ, ಪಂಚಮಹಾವೈಭವ ಪೆಂಡಾಲ್ ಎದುರು ಅಧೀಶ್ವರ ದ್ವಾರ ಹಾಗೂ ಉಜಿರೆ ಬೆಳಾಲು ಕ್ರಾಸ್‌ನಲ್ಲಿ ಜನಾರ್ದನ ಸ್ವಾಮಿ ದ್ವಾರಗಳನ್ನು ರಚಿಸಲಾಗಿದೆ.

ಅಯೋಧ್ಯೆ ಪರಿಕಲ್ಪನೆ: ಕ್ಷೇತ್ರದ ರಥಬೀದಿ, ರಾಜಬೀದಿ ಸೇರಿದಂತೆ ನಗರವನ್ನು ವಿಶೇಷ ರೀತಿ ಅಲಂಕರಿಸಲಾಗಿದೆ. ಉಜಿರೆಯಿಂದ ನೇತ್ರಾವತಿ ಸ್ನಾನ ಘಟ್ಟದವರೆಗಿನ ಒಂಬತ್ತು ಕಿ.ಮೀ. ಉದ್ದದ ರಸ್ತೆಯ ಇಕ್ಕೆಲ ಬಾಹುಬಲಿಯ ಜೀವನ ಸಾರುವ ವಿವಿಧ ಭಾವಚಿತ್ರ, ಬ್ಯಾನರ್‌ಗಳನ್ನು ಅಲಂಕಾರಕ್ಕೆ ಬಳಸಲಾಗುತ್ತಿದೆ. ನೇತ್ರಾವತಿಯಿಂದ ಕ್ಷೇತ್ರದ ಮಹಾದ್ವಾರ ತನಕ ಸುಮಾರು 130 ವಿವಿಧ ಬಣ್ಣಗಳ ಆಕರ್ಷಕ ಕಲಾಕೃತಿಗಳಿಂದ ಅಲಂಕಾರ ಮಾಡಲಾಗುತ್ತಿದೆ. ಧರ್ಮಸ್ಥಳ ಕ್ಷೇತ್ರ ಅಯೋಧ್ಯೆಯ ಪರಿಕಲ್ಪನೆಯಲ್ಲಿ ಅಲಂಕಾರಗೊಳ್ಳುತ್ತಿದ್ದು, ಸುಮಾರು ಎರಡು ತಿಂಗಳಿಂದ ಪೂರ್ವತಯಾರಿ ನಡೆಸಲಾಗಿದೆ. ದಿನದಲ್ಲಿ 50ಕ್ಕೂ ಹೆಚ್ಚು ಸ್ವಯಂಸೇವಕರು ಹಾಗೂ ಕ್ಷೇತ್ರದ ಕೃಷಿ ವಿಭಾಗದ ಮೇಲ್ವಿಚಾರಕರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ.

ಬೀಡಿನಿಂದ ಅಲಂಕಾರ: ನೆಲ್ಯಾಡಿ ಬೀಡಿನಿಂದ ವೈಶಾಲಿ ತಿರುವು ತನಕ ಪತಾಕೆಗಳ-ನಿಶಾನೆಗಳ ಅಲಂಕಾರಗಳು, ಅಲ್ಲಿಂದ ದೇವಳ ಮುಂಭಾಗ ಗಡಿಯಾರ ಕಂಬದ ತನಕ ರಥದ ಗೊಂಡೆಗಳ ಅಲಂಕಾರ, ಅಲ್ಲಿಂದ ದೇವಸ್ಥಾನ ತನಕ ಕೇರಳದ ಕೊಡೆಗಳ ಅಲಂಕಾರ, ಸಣ್ಣ ಗೇಟಿನಿಂದ ಮಾಹಿತಿ ಕಚೇರಿ ತನಕ ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ಬಣ್ಣಬಣ್ಣದ ಚೆಂಡುಗಳ ಅಲಂಕಾರ, ಅಲ್ಲಿಂದ ಮಹಾದ್ವಾರದ ತನಕ ಸಣ್ಣ ಗೇಟಿನ ಮಾದರಿ ಅಲಂಕಾರ, ಬಾಹುಬಲಿ ಬೆಟ್ಟದ ದಾರಿಯಲ್ಲಿ ಮೂರು ಅಂತಸ್ತಿನ ಬಟ್ಟೆಯ ಡೂಮ್‌ಗಳ ಅಲಂಕಾರ, ಮಹಾದ್ವಾರದಿಂದ ಗಡಿಯಾರ ಕಂಬದವರೆಗೆ ಬಣ್ಣದ ಕೊಡೆಗಳು ಹಾಗೂ ಬಂಟಿಂಗ್ಸ್‌ಗಳಿಂದ ಅಲಂಕಾರ ಮಾಡಲಾಗಿದೆ. ಮುಖ್ಯರಸ್ತೆಯಲ್ಲಿ ಮಹಾದ್ವಾರದಿಂದ ಆಲ್ನಡ್ಕ ಬನದವರೆಗೆ ತಿರುಪತಿ ಮಾದರಿ ಕೊಡೆಗಳ ಅಲಂಕಾರ, ಅಲ್ಲಿಂದ ಪಂಚಮಹಾವೈಭವ ಪೆಂಡಾಲ್ ತನಕ ಮಾರ್ಗದ ಇಕ್ಕೆಲ ಫೈಬರ್‌ನಿಂದ ರಚಿತವಾದ ವಿವಿಧ ಕಲಾಕೃತಿಗಳಿಂದ ಶೃಂಗಾರಗೊಳಿಸಲಾಗುತ್ತಿದೆ.