ಸಂಸ್ಕಾರ ಜಾಗೃತಿಗೆ ನಿತ್ಯ ಭಜನೆ

ಬೆಳ್ತಂಗಡಿ: ಮನಸ್ಸಿಗೆ ಸಂಸ್ಕಾರ ಕೊಟ್ಟಾಗ ದೈವತ್ವವನ್ನು ಕಾಣಬಹುದು. ಪರಿಪೂರ್ಣ ಆನಂದ ಸಿಗಲು ಶುದ್ಧ ಅಂತರಾತ್ಮ ಪಡೆಯಬೇಕು. ಉತ್ತಮ ಸಂಸ್ಕಾರವು ಮನಸ್ಸಿನ ನಿಯಂತ್ರಣ ಮಾಡುತ್ತದೆ. ಅಂತಹ ಉತ್ತಮ ಸಂಸ್ಕಾರಕ್ಕೆ ನಿತ್ಯ ಭಜನೆ ಅಗತ್ಯ ಎಂದು ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾಲಕ್ಷ್ಮಿನೃಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಭಾನುವಾರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ 21ನೇ ವರ್ಷದ ಭಜನಾ ತರಬೇತಿ ಶಿಬಿರ ಮತ್ತು ಸಂಸ್ಕೃತಿ ಸಂವರ್ಧನಾ ಕಾರ್ಯಾಗಾರದಲ್ಲಿ ಆಶೀರ್ವಚನ ನೀಡಿದರು.

ಪಶುತ್ವ ಹೋಗಲಾಡಿಸಲು ಭಜನೆ ಮೂಲ. ತನ್ನಂತೆ ಪರರು ಎಂಬುವ ಚಿಂತೆ ಮಾನವ ತತ್ವ. ಉತ್ತಮ ಸಂಸ್ಕಾರ ಮನುಷ್ಯನಿಗೆ ತಪ್ಪನ್ನು ಮಾಡದಂತಹ ಯೋಚನೆ ನೀಡುತ್ತದೆ. ಮಾನವತತ್ವ ವಿಕಸನಗೊಳಿಸಲು ಭಜನೆಯೊಂದೇ ದಾರಿ ಎಂದರು.

ವಾಗ್ಮಿ, ಕನ್ನಡ ಪಂಡಿತ ಹಿರೇಮಗಳೂರು ಕಣ್ಣನ್ ಮಾತನಾಡಿ, ದೇಶಕ್ಕೆ ಸಂಸ್ಕಾರ ನೀಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಇಂದು ಭಜನೆಯ ಮೂಲಕ ಪ್ರತಿಯೊಬ್ಬರಲ್ಲಿಯೂ ಸಂಸ್ಕಾರ ಬೆಳೆಸುವಂತೆ ಮಾಡುತ್ತಿದೆ. ದುರ್ಬಲರನ್ನು ಸಬಲರನ್ನಾಗಿಸುವ ಶಕ್ತಿ ವೀರೇಂದ್ರ ಹೆಗ್ಗಡೆಯವರಿಗಿದೆ ಎಂದರು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ, ಭಜನಾ ಪರಿಷತ್ ಉಪಾಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪ್ರದೀಪ್ ಕುಮಾರ್ ಕಲ್ಕೂರ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ ಯಶೋವರ್ಮ, ಭಜನಾ ಪರಿಷತ್‌ನ ಅಧ್ಯಕ್ಷ ಬಾಲಕೃಷ್ಣ ಪಂಜ ಉಪಸ್ಥಿತರಿದ್ದರು.

ಕ್ಷೇತ್ರದ ವತಿಯಿಂದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿಯವರನ್ನು ಡಾ.ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿದರು. ಭಜನೆಗೆ ಸಹಕಾರ ನೀಡಿದ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿಯವರನ್ನು ಗೌರವಿಸಲಾಯಿತು.

ಭಜನಾ ಪರಿಷತ್ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ವರದಿ ವಾಚಿಸಿದರು. ಕಾರ್ಯದರ್ಶಿ ಬಿ.ಜಯರಾಮ ನೆಲ್ಲಿತ್ತಾಯ ವಂದಿಸಿದರು. ಮನೋರಮಾ ತೋಳ್ಪ್ಪಾಡಿತ್ತಾಯ ಮತ್ತು ಶಶಿಕಾಂತ್ ಜೈನ್ ಮಂಗಲಂ ಮತ್ತು ಸ್ವಸ್ತಿ ಮಂತ್ರ ವಾಚಿಸಿದರು. ಶ್ರೀನಿವಾಸ್ ರಾವ್, ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.

ಭಜನೆಯಿಂದ ಮಾನಸಿಕ ನೆಮ್ಮದಿ
ಭಗವಂತನ ಮೇಲೆ ನಂಬಿಕೆ, ಭಕ್ತಿ ಬೆಳೆಸಬೇಕು. ಹಂಚಿ ತಿನ್ನುವ ಶಕ್ತಿಯನ್ನು ಭಜನೆ ನೀಡುತ್ತದೆ. ಭಜನೆಯೆಂಬ ಜ್ಞಾನ ತುಂಬಿದಾಗ ಮನಸ್ಸಲ್ಲಿ ಶಾಂತಿ ನಡೆಸಲು ಸಾಧ್ಯ. ಇಂದು ಭಜನಾ ಶಿಬಿರಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಗ್ರಾಮಗಳಲ್ಲಿ ಸಂಸ್ಕೃತಿ ಸಂವರ್ಧನಾ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಭಗವಂತನ ಪ್ರತಿನಿಧಿಗಳಾಗಿ ಸೇವಾ ಮನೋಭಾವಕ್ಕೆ ಸಂಕೋಚಪಡಬೇಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಿವಿಮಾತು ಹೇಳಿದರು. ಭಜನೆ ಮೂಲಕ ಸಮಾಜದದಲ್ಲಿ ಭಕ್ತಿ, ಸಂಸ್ಕಾರವನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂದು ಭಜನಾ ಕಮ್ಮಟದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ತಮ್ಮ ಮನೆಗಳಲ್ಲಿ, ಗ್ರಾಮಗಳಲ್ಲಿ ಭಜನೆ ಬೆಳೆಸುವ ಕಾರ್ಯ ಮಾಡಬೇಕು ಎಂದರು.

ಭಜನೆಯೆಂಬ ಕಲ್ಪತರು ಬೀಜವನ್ನು ಧರ್ಮಸ್ಥಳದಲ್ಲಿ ಇಂದು ಡಾ.ಹೆಗ್ಗಡೆಯವರು ನೀಡಿದ್ದಾರೆ. ಇದನ್ನು ಮನೆ ಮನಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಬಿತ್ತಿ ಹೆಮ್ಮರವಾದ ಕಲ್ಪವೃಕ್ಷವನ್ನಾಗಿಸಿ.
– ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಶ್ರೀಗಳು
ಶ್ರೀ ಆದಿಶಂಕರಾಚಾರ್ಯ ಶಾರದಾಲಕ್ಷ್ಮಿನೃಸಿಂಹ ಪೀಠ, ಹರಿಹರಪುರ

Leave a Reply

Your email address will not be published. Required fields are marked *