ಬಾಹುಬಲಿ ಆದರ್ಶ ಬದುಕಿಗೆ ಪ್ರೇರಕ

<<ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಸಮಾಪನ ಸಂದರ್ಭ ಡಾ.ವೀರೇಂದ್ರ ಹೆಗ್ಗಡೆ ಅಭಿಮತ>>

– ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಭಗವಾನ್ ಬಾಹುಬಲಿ ಆದರ್ಶ- ತತ್ವಗಳಾದ ಅಹಿಂಸೆ, ತ್ಯಾಗ, ಸಂಯಮ, ತಾಳ್ಮೆ ನಮ್ಮ ಬದುಕಿಗೆ ಪ್ರೇರಕವಾಗಲಿ. ಎಲ್ಲೆಲ್ಲೂ ಶಾಂತಿ, ಸಾಮರಸ್ಯ, ಸೌಹಾರ್ದ ಮೂಡಿ ಬರಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಆಶಯ ವ್ಯಕ್ತಪಡಿಸಿದರು.
ಭಾನುವಾರ ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿಗೆ ಈ ಬಾರಿಯ ಕೊನೆಯ ಮಸ್ತಕಾಭಿಷೇಕ ಬಳಿಕ ಧಾರ್ಮಿಕ ಸಭೆಯಲ್ಲಿ ಮೂಡುಬಿದಿರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರನ್ನು ಗೌರವಿಸಿ ಮಾತನಾಡಿದರು.
ಬಾಹುಬಲಿ ಪಂಚಮಹಾವೈಭವ ಹಾಗೂ ಮಹಾಮಸ್ತಕಾಭಿಷೇಕವನ್ನು ನಾವೆಲ್ಲ ನೋಡಿ, ಕಣ್ತುಂಬಿಕೊಂಡು ಧನ್ಯತೆ ಪಡೆದಿದ್ದೇವೆ. ಧರ್ಮಸ್ಥಳ ಎಲ್ಲ ಭಕ್ತರು, ಊರಿನವರು, ಸಿಬ್ಬಂದಿ ಹಾಗೂ ವಿವಿಧ ಸಮಿತಿಯವರ ಶ್ರದ್ಧಾ-ಭಕ್ತಿಯ ಸಂಘಟಿತ ಪ್ರಯತ್ನದಿಂದ ಮಹಾಮಸ್ತಕಾಭಿಷೇಕ ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಸ್ತಕಾಭಿಷೇಕ ಯಶಸ್ಸಿಗೆ ವಿಶೇಷವಾಗಿ ಶ್ರಮಿಸಿದ ಹೇಮಾವತಿ ವಿ.ಹೆಗ್ಗಡೆ, ಪ್ರಧಾನ ಸಂಚಾಲಕ ಡಿ.ಸುರೇಂದ್ರ ಕುಮಾರ್, ಸಂಚಾಲಕ ಡಿ.ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಕಾರ್ಯದರ್ಶಿ ಕೆ.ಮಹಾವೀರ ಅಜ್ರಿ ಮತ್ತು ಎ.ವಿ.ಶೆಟ್ಟಿ ಅವರನ್ನೂ ಡಾ.ಹೆಗ್ಗಡೆ ಶ್ಲಾಘಿಸಿದರು.
ಹೆಗ್ಗಡೆಯವರ ಧರ್ಮಪ್ರಭಾವನಾ ಕಾರ್ಯ ಹಾಗೂ ಬಹುಮುಖಿ ಸಮಾಜ ಸೇವೆಯನ್ನು ರಾಜಸ್ಥಾನದ ತಿಜಾರ ಜೈನ ಮಠದ ಸೌರಭಸೇನ ಭಟ್ಟಾರಕ ಸ್ವಾಮೀಜಿ ಮತ್ತು ಲಕ್ಕವಳ್ಳಿ ಜೈನಮಠದ ವೃಷಭ ಸೇನ ಭಟ್ಟಾರಕ ಸ್ವಾಮೀಜಿ ಶ್ಲಾಘಿಸಿದರು.
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳದಲ್ಲಿ ನಡೆದ ನಾಲ್ಕು ಮಹಾಮಸ್ತಕಾಭಿಷೇಕಗಳಲ್ಲಿಯೂ ಪ್ರಥಮ ಕಲಶ ಪಡೆಯುವ ಸೌಭಾಗ್ಯ ಮೂಡುಬಿದಿರೆ ಜೈನಮಠಕ್ಕೆ ದೊರಕಿದೆ. ಧರ್ಮಸ್ಥಳಕ್ಕೂ ಮೂಡುಬಿದಿರೆಗೂ ಅವಿನಾಭಾವ ಸಂಬಂಧವಿದೆ. ಧರ್ಮಸ್ಥಳ ಭಕ್ತಿ ಮತ್ತು ಮುಕ್ತಿಯ ಕ್ಷೇತ್ರ. ಅರಮನೆ, ಗುರುಮನೆ ಮತ್ತು ನೆರೆಮನೆಯವರೆಲ್ಲ ಮಸ್ತಕಾಭಿಷೇಕದಲ್ಲಿ ಭಾಗವಹಿಸಿರುವುದೇ ಇದಕ್ಕೆ ಸಾಕ್ಷಿ ಎಂದರು.
ಮಸ್ತಕಾಭಿಷೇಕ ನೆರವೇರಿಸಲು ಅಟ್ಟಳಿಗೆ ರೂಪಿಸಿಕೊಟ್ಟ ಮಂಗಳೂರಿನ ಅನಿಲ್ ಹೆಗ್ಡೆ ಮತ್ತು ಸನತ್ ಕುಮಾರ್ ಹಾಗೂ ಅದನ್ನು ಕಾರ್ಯಗತಗೊಳಿಸಿದ ಬಂಟ್ವಾಳ ಮಾಣಿಯ ಪದ್ಮಪ್ರಸಾದ್ ಮತ್ತು ಮಹಾವೀರ ಪ್ರಸಾದ್‌ರನ್ನು ಹೆಗ್ಗಡೆಯವರು ಸನ್ಮಾನಿಸಿದರು.

ಮಸ್ತಕಾಭಿಷೇಕ: ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಭಾನುವಾರ ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು. ಬಳಿಕ ಮಹಾಮಂಗಳಾರತಿ, ಪುಷ್ಪವೃಷ್ಟಿ ಮತ್ತು ಶಾಂತಿ ಮಂತ್ರ ಪಠಣದೊಂದಿಗೆ ಮಸ್ತಕಾಭಿಷೇಕ ಸಮಾಪನಗೊಂಡಿತು. ಸಂಜೆ ನಾಲ್ಕು ಗಂಟೆಗೆ ಬಿಂಬ ಶುದ್ಧಿ ಮತ್ತು ಓಕುಳಿ ಕಾರ್ಯಕ್ರಮದೊಂದಿಗೆ ಈ ಬಾರಿಯ ಮಹಾಮಸ್ತಕಾಭಿಷೇಕ ಮುಕ್ತಾಯಗೊಂಡಿದೆ. ಸಂಪ್ರದಾಯದಂತೆ ಇನ್ನು 12 ವರ್ಷಗಳ ಬಳಿಕ ಮಹಾಮಸ್ತಕಾಭಿಷೇಕ ನಡೆಯಲಿದೆ. ಭಾನುವಾರದ ಕಾರ‌್ಯಕ್ರಮದಲ್ಲಿ ನವದೆಹಲಿ, ರಾಜಸ್ಥಾನ, ಬಿಹಾರ, ಕೇರಳ, ತಮಿಳುನಾಡು ರಾಜ್ಯಗಳ ಭಕ್ತರು ಭಾಗವಹಿಸಿದ್ದು ರಾಷ್ಟ್ರಮಟ್ಟದ ಸಮಾರಂಭವಾಗಿ ಮೂಡಿಬಂತು.

3ಡಿ ಪ್ರದರ್ಶನ:  ರತ್ನಗಿರಿಯಲ್ಲಿ ಭಾನುವಾರ ಸಾಯಂಕಾಲ 7ರಿಂದ ಬಾಹುಬಲಿ ಮೂರ್ತಿಯ 3ಡಿ ಪ್ರದರ್ಶನ ನಡೆಯಿತು. ಹೊರನಾಡು ಜಯಶ್ರೀ ಧರಣೇಂದ್ರ ಮತ್ತು ಬಳಗದಿಂದ ಭಕ್ತಿಗೀತೆಗಳ ಗಾಯನ ವಿಶೇಷ ಮೆರುಗು ನೀಡಿತು. ಶ್ರಾವಕ- ಶ್ರಾವಕಿಯರು ಸಂತೋಷ-ಸಂಭ್ರಮದಿಂದ ಬಾಹುಬಲಿ ಮೂರ್ತಿಯ ಪದತಲದಲ್ಲಿ ಆನಂದ ನರ್ತನ ಮಾಡಿದರು. ಭಾನುವಾರ ಧರ್ಮಸ್ಥಳದಲ್ಲಿ ವಿಶೇಷ ಜನ ಸಂದಣಿ ಇದ್ದು ಸರ್ವಧರ್ಮೀಯರೂ ಮಸ್ತಕಾಭಿಷೇಕ ವೀಕ್ಷಿಸಿದರು.