ತ್ಯಾಗದಿಂದಲೇ ಅಮೃತತ್ತ್ವ ಸಿದ್ಧಿ ಬಾಹುಬಲಿ ಸಂದೇಶ

ಧರ್ಮಸ್ಥಳದಲ್ಲಿ 1982ರಲ್ಲಿನ ಪ್ರತಿಷ್ಠಾ ಮಹೋತ್ಸವದ ಬಳಿಕ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಸುತ್ತ ಬಂದಿದ್ದೇವೆ. ಈಗ 2019ರ ಫೆಬ್ರವರಿ 16, 17, 18ರಂದು ಚತುರ್ಥಮಹಾಮಸ್ತಕಾಭಿಷೇಕ ನಡೆಯಲಿದೆ. ತದಂಗವಾಗಿ ಫೆ. 11ರಿಂದ 15ರವರೆಗೆ ಪಂಚಮಹಾವೈಭವ ರೂಪಕಗಳು ನಡೆಯಲಿವೆ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಂಭ್ರಮದಿಂದ ಬಾಹುಬಲಿಯ ಮಸ್ತಕಾಭಿಷೇಕ ಶುಭಾರಂಭವಾಗಿದೆ. ಹಿರಿಯ ಆಚಾರ್ಯರು, ಮುನಿಗಳು, ಭಟ್ಟಾರಕರುಗಳ ಮಾರ್ಗದರ್ಶನದಲ್ಲಿ ಧಾರ್ವಿುಕ ವಿಧಿವಿಧಾನಗಳು ನಡೆಯುತ್ತಿವೆ. ಭರತ-ಬಾಹುಬಲಿಯರ ಸಂಘರ್ಷ, ಬಾಹುಬಲಿಯ ತ್ಯಾಗ, ಮತ್ತು ಕೇವಲಿ ಪದವಿಯನ್ನು ಪಂಚಮಹಾವೈಭವವೆಂಬ ರೂಪಕದ ಮೂಲಕ ತೋರಿಸಲಾಗುತ್ತಿದೆ. ನಮ್ಮ ಜೀವನಕ್ಕೊಂದು ಅರ್ಥ ನೀಡಿದ ಬಾಹುಬಲಿ ಮತ್ತು ಮಸ್ತಕಾಭಿಷೇಕದ ಕುರಿತು ಕೆಲ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ.

12ನೆಯ ಶತಮಾನದ ಬೊಪ್ಪಣ ಪಂಡಿತನು ‘ಗೊಮ್ಮಟಜಿನೇಂದ್ರ ಗುಣಸ್ತವ’ದಲ್ಲಿ-

ಅತಿತುಂಗಾಕೃತಿಯಾದೊಡಾಗದು, ಅದರೊಳ್ ಸೌಂದರ್ಯಮನ್​ಔನ್ಯತ್ಯಮುಂ

ನುತಸೌಂದರ್ಯಮುಮಾಗೆ ಮತ್ತತಿಶಯಂತಾನಾಗದೌನ್ನತ್ಯಮುಂ

ನುತಸೌಂದರ್ಯಮುಂಊರ್ಜಿತಾತಿಶಯಮುಂತನ್ನಲ್ಲಿ ನಿಂದಿರ್ದುವೇಂ

ಕ್ಷಿತಿಸಂಪೂಜ್ಯಮೊಗೊಮ್ಮಟೇಶ್ವರ ಜಿನಶ್ರೀರೂಪಮ್ ಆತ್ಮೋಪಾಮಂ

ಎಂದು ಬಾಹುಬಲಿಯನ್ನು ಬಣ್ಣಿಸಿದ್ದಾನೆ. ರಾಷ್ಟ್ರಕವಿ ಗೋವಿಂದ ಪೈ ಅವರು ‘ಶ್ರೀ ಗೊಮ್ಮಟಜಿನಸ್ತುತಿ’ ಎಂಬ ಕವನದಲ್ಲಿ-

ಶ್ರೀಜಿನ ಗೊಮ್ಮಟಂ ಜಯಿಕೆ | ಗೊಮ್ಮಟನಂ ನುತಿಪೆಂ | ವಿರಕ್ತರಾರ್

ಗೊಮ್ಮಟನಿಂದೆ? ಗೊಮ್ಮಟನಿಗಾರೆಣೆ? ಗೊಮ್ಮಟನತ್ತಣಿಂದತಾ

ಗೊಮ್ಮಟಮಾಯ್ತೆ ಮುಕ್ತಿ! ಗಡಗೊಮ್ಮಟನೋಜೆಯೆ! ನಿಲ್ಗೆ ಮನ್ಮನಂ

ಗೊಮ್ಮಟನಲ್ಲಿ! ಕಾವುದಪರಾಂಬುಧಿ ಸಹ್ಯಗಿರೀಶ! ಗೊಮ್ಮಟಾ

ಎಂದು ಬಾಹುಬಲಿಯ ವರ್ಣನೆ ಮಾಡಿದ್ದಾರೆ.

ಧನಮಂ ಧಾನ್ಯಮಂ ಊಟಮಂ ವನಿತೆಯಂ ಬಂಗಾರಮಂ

ವಸ್ತ್ರ ವಾಹನ ರಾಜ್ಯಾದಿಗಳಂ ಸದಾ ಬಯಸುವ ಈ ಭ್ರಾಂತಾತ್ಮರು,

ಆ ಪಾಟಿಯೊಳ್ ಜಿನರಂ ಸಿದ್ಧರಂ ಆರ್ಯವರ್ಯರಂ ಉಪಾಧ್ಯಾಯರ್ಕಳಂ

ಸಾಧುಪಾವನರಂ ಚಿಂತಿಸಿ, ಮುಕ್ತಿಗೆ ಏಕೆ ಒದಗರೊ, ರತ್ನಾಕರಾಧೀಶ್ವರಾ!

ಅಂದರೆ, ‘ಭ್ರಾಂತಿಯ ಜನರಿಗೆ ಯಾವಾಗಲೂ ಧನ-ಧಾನ್ಯ ಸಂಗ್ರಹಣೆಯ ಚಿಂತೆ, ಊಟ ಮಾಡುವ ತವಕ, ಸ್ತ್ರೀಯನ್ನು ಹೊಂದುವ ಬಯಕೆ, ಚಿನ್ನ, ವಸ್ತ್ರ-ವಾಹನ-ರಾಜ್ಯಾದಿಗಳನ್ನು ಗಳಿಸಿ ಭೋಗಜೀವನ ನಡೆಸುವ ಪರದಾಟ. ಅಯ್ಯೋ, ಈ ಅವಿವೇಕಿಗಳು ಬಾಳನ್ನೆಲ್ಲ ಈ ಕ್ಷಣಿಕ ಸುಖಕ್ಕೋಸ್ಕರ ವ್ಯರ್ಥವಾಗಿ ಸವೆಸುತ್ತಿರುವರಲ್ಲಾ! ಇದರ ಬದಲು ಪಂಚ ಪರಮೇಷ್ಠಿ, ಭಗವತ್ ಚಿಂತನೆಗಳ ಮೂಲಕ ಆತ್ಮಕಲ್ಯಾಣ ಮಾಡಿಕೊಂಡು ಮುಕ್ತರಾಗಬಾರದೇ! ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ಮಹಾಕವಿ ‘ರತ್ನಾಕರವರ್ಣಿ’ ಸಂಸಾರದ ನಶ್ವರತೆಯ ಬಗ್ಗೆ ಸಂದೇಶ ನೀಡಿದ್ದಾನೆ. ‘ಭರತೇಶ ವೈಭವ’ವೆಂಬ ಮಹಾಗ್ರಂಥದಲ್ಲಿ ಭರತ-ಬಾಹುಬಲಿಯ ಬಗ್ಗೆ ಸಾರ್ವಕಾಲಿಕವಾಗಿ ಪರಿಚಯಿಸಿದ ಕೀರ್ತಿ ಆತನಿಗೆ ಸಲ್ಲುತ್ತದೆ.

ವೈರಾಗ್ಯದ ಪ್ರತಿಬಿಂಬವಾಗಿರುವ ಬಾಹುಬಲಿ, ತಂದೆಯಿಂದ ಬಳುವಳಿಯಾಗಿ ಬಂದಿದ್ದ ಪೌದನಾಪುರದಲ್ಲಿ ರಾಜ್ಯಭಾರ ಮಾಡುತ್ತಿರುವಾಗ, ಅವನಣ್ಣ ಭರತ ಚಕ್ರವರ್ತಿ ವಿಶ್ವವನ್ನೆಲ್ಲ ಗೆದ್ದು ನಗರಕ್ಕೆ ಹಿಂದಿರುಗುವಾಗ ನಡೆದ ಘಟನೆಯೊಂದು ಈ ಪರಿವರ್ತನೆಗೆ ಕಾರಣವಾಗುತ್ತದೆ. ವೃಷಭನಾಥ ತೀರ್ಥಂಕರರು 100 ಮಕ್ಕಳನ್ನು ಹೊಂದಿದ್ದರು. ಭರತ-ಬಾಹುಬಲಿ ಸೇರಿದಂತೆ ಎಲ್ಲ ಮಕ್ಕಳಿಗೂ ಆಸ್ತಿಯನ್ನು ಹಂಚಿ, ನೆಮ್ಮದಿಯ ಜೀವನಕ್ಕೆ ಅವಕಾಶ ಕಲ್ಪಿಸಿರುತ್ತಾರೆ. ಈ ಮಧ್ಯೆ ಭರತನ ಪುಣ್ಯೋದಯದಿಂದ ಆತನ ಆಯುಧಾಗಾರದಲ್ಲಿ ‘ಚಕ್ರರತ್ನ’ವೆಂಬ ಅಪರೂಪದ ಚಕ್ರ ಉದ್ಭವವಾಗುತ್ತದೆ. ಅವನು ಚಕ್ರವರ್ತಿಯಾಗಿ ವಿಶ್ವವನ್ನೇ ಜಯಿಸಬೇಕು ಎಂಬರ್ಥವನ್ನು ಅದು ಸೂಚಿಸುತ್ತದೆ. ಹೀಗಾಗಿ ಪದವಿ, ಯಥೇಚ್ಛ ಸಂಪತ್ತು ಇದ್ದ ಭರತನೂ ದಿಗ್ವಿಜಯವನ್ನು ಕೈಗೊಳ್ಳಲೇಬೇಕಾಗುತ್ತದೆ. ಅವನು ಸಹಜವಾಗಿ ಷಟ್ಖಂಡಗಳನ್ನು ಜಯಿಸಿ, ಚಕ್ರವರ್ತಿ ಎಂಬ ಸಂತೋಷ-ಹೆಮ್ಮೆಯಿಂದ ಬೀಗುತ್ತ ರಾಜಧಾನಿಗೆ ಬರುವಾಗ ಮಧ್ಯದಲ್ಲಿ ‘ವೃಷಭಾಚಲ’ ಎಂಬ ದೊಡ್ಡಬೆಟ್ಟ ಸಿಗುತ್ತದೆ. ಆಗ ತನ್ನ ಸೇನಾನಿಗಳನ್ನು ಕುರಿತು- ‘ನಾನು ಇಷ್ಟೆಲ್ಲ ರಾಜ್ಯ, ಸಂಪತ್ತು ಜಯಿಸಿದ್ದೇನೆ. ಈ ಸಾಧನೆಯನ್ನು ದಾಖಲು ಮಾಡದಿದ್ದರೆ ಅದು ಯಾರಿಗೂ ತಿಳಿಯದೇ ಹೋದೀತು’ ಎನ್ನುತ್ತ ತನ್ನ ಹೆಸರು-ಸಾಧನೆಯನ್ನು ‘ವೃಷಭಾಚಲ’ ಬೆಟ್ಟದಲ್ಲಿ ಕೆತ್ತಿಸಿ ದಾಖಲಿಸಬೇಕು ಎನ್ನುತ್ತಾನೆ. ಆದರೆ ಅಲ್ಲಿನ ಶಿಲೆಯಲ್ಲಿ ಹಿಂದೆ ಆಳಿಹೋದ ರಾಜರ ಸಾಧನೆ, ಪ್ರಶಂಸೆಗಳೆಲ್ಲ ಕೆತ್ತಲ್ಪಟ್ಟಿದ್ದರಿಂದ ಸ್ಥಳವೇ ಇರುವುದಿಲ್ಲ. ಆಗ, ತನಗಿಂತ ಮೊದಲು ಎಷ್ಟೊಂದು ಚಕ್ರವರ್ತಿಗಳು ಆಳಿಹೋಗಿರಬಹುದು ಎಂಬ ಭಾವನೆ ಭರತನಲ್ಲಿ ಉಂಟಾಗುತ್ತದೆ. ನಾವು ನಶ್ವರ; ಈ ಭೂಮಿ, ಅರಮನೆ, ಸಂಪತ್ತು ಇತ್ಯಾದಿಗಳೆಲ್ಲ ಅಶಾಶ್ವತ ಎಂಬ ಅರಿವು ಆತನಿಗಾಗುತ್ತದೆ. ಆದರೂ ಬೇರೆ ಚಕ್ರವರ್ತಿಗಳ ಹೆಸರನ್ನು ಅಳಿಸಿ ತನ್ನ ಹೆಸರನ್ನು ಬರೆಸುತ್ತಾನೆ ಎನ್ನುವುದು ಮನುಷ್ಯನ ಕೀರ್ತಿಕಾಮನೆಯ ಪ್ರತೀಕವಾಗಿ ಇಂದಿಗೂ ಪ್ರಸಕ್ತ.

ರಾಜ-ಮಹಾರಾಜರು ಈ ಭೂಮಿಯ ಮೇಲೆ ಸ್ಥಿರವಾಗಿ ನಿಲ್ಲುವರೇ? ಅತ್ಯಾಸೆಯಿಂದ ಧರ್ವಧರ್ಮದ ವಿಚಾರ ಮಾಡದೆ ಸಂಪಾದಿಸಿದ ರಾಜ್ಯಕೋಶಾದಿಗಳು ಅಂತ್ಯಕಾಲದಲ್ಲಿ ಅವನೊಡನೆ ಹೋಗುವುದೆೇ? ಇಹಲೋಕದ ಸುಖಸಂಪತ್ತುಗಳಿಗೆ ಮಾರುಹೋಗಿ ಪರಮಾರ್ಥ ಮರೆಯುವುದು ಮೂರ್ಖತನವಲ್ಲವೇ? ಪೂರ್ವಾರ್ಜಿತ ಪುಣ್ಯದಿಂದ ಬಂದ ಐಶ್ವರ್ಯವನ್ನು ಸದ್ವಿನಿಯೋಗ ಮಾಡಬೇಕು. ಗುರುಗಳ ಸೇವೆ, ದೇವರ ಪೂಜೆಯಲ್ಲಿ ಉಪಯೋಗಿಸಬೇಕು. ಧರ್ಮಕಾರ್ಯಕ್ಕೆ ಕೊಟ್ಟಷ್ಟು, ತಾನು ಅನುಭವಿಸಿದಷ್ಟು ಮಾತ್ರ ತನ್ನದು, ಲೋಭದಿಂದ ಕೂಡಿಟ್ಟಷ್ಟೂ ಅದು ವ್ಯರ್ಥವಲ್ಲವೇ? ಎಂದೆಲ್ಲ ಅಭಿಪ್ರಾಯಗಳು ಆತನ ಮನದಲ್ಲಿ ತಳೆಯುತ್ತವೆ.

ಬಳಿಕ ಆತ ತಾಯಿ ಯಶಸ್ವತಿಯನ್ನು ಕಾಣುವ ಬಯಕೆಯಿಂದ ಅಯೋಧ್ಯಾನಗರವನ್ನು ಪ್ರವೇಶಿಸಲು ಬರುತ್ತಿರುತ್ತಾನೆ. ಊರವರೆಲ್ಲ ಸ್ವಾಗತಕ್ಕೆ ಸಿದ್ಧತೆ ನಡೆಸಿರುತ್ತಾರೆ. ಆಗ ಆತನ ಚಕ್ರರತ್ನ ಮಹಾದ್ವಾರದ ಹೊರಗೆ ನಿಲ್ಲುತ್ತದೆ. ಕಾರಣವೇನು? ಎಂದು ಜ್ಞಾನಿಗಳ ಬಳಿ ವಿಮಶಿಸಿದಾಗ ‘ನೀನು ಹೊರಗಿನ ಶತ್ರುಗಳನ್ನು ಜಯಿಸಿದ್ದಿ; ಆದರೆ ನಿನ್ನ ರಾಜ್ಯದೊಳಗೇ ಇರುವ ಶತ್ರುಗಳನ್ನು ಗೆಲ್ಲಲಿಲ್ಲ. ಚಕ್ರವರ್ತಿ ಎನಿಸಿಕೊಳ್ಳಬೇಕಿದ್ದರೆ ನಿನ್ನ ತಮ್ಮಂದಿರು ಆಳುತ್ತಿರುವ ಭೂಮಿಗಳನ್ನೂ ಜಯಿಸಬೇಕು’ ಎನ್ನುತ್ತಾರೆ. ಭರತನಿಗೆ ಇಚ್ಛೆಯಿಲ್ಲದಿದ್ದರೂ ತಮ್ಮಂದಿರಿಗೆ ಚಕ್ರರತ್ನದ ಉದಯ ಹಾಗೂ ಷಟ್​ಖಂಡಗಳನ್ನು ಗೆದ್ದ ಬಗ್ಗೆ ವಿವರಿಸಿ ‘ನೀವೆಲ್ಲ ನನಗೆ ಶರಣಾಗಬೇಕು, ನನ್ನನ್ನು ಚಕ್ರವರ್ತಿ ಎಂದು ಒಪ್ಪಿಕೊಳ್ಳಬೇಕು’ ಎಂಬ ಸಂದೇಶ ಕಳಿಸುತ್ತಾನೆ. ಸಹೋದರರೆಲ್ಲರೂ ಇದಕ್ಕೊಪ್ಪದೆ, ಅಣ್ಣನಿಗೆ ಅಗೌರವವನ್ನೂ ತೋರಿಸಲಾಗದೆ, ಅವನನ್ನು ನಿರಾಶೆಪಡಿಸಲಾಗದೆ ರಾಜ್ಯ, ಪದವಿಗಳನ್ನು ತ್ಯಾಗಮಾಡಿ ತಂದೆ ಸ್ವೀಕರಿಸಿದ್ದ ಸನ್ಯಾಸ ಮಾರ್ಗವನ್ನೇ ಹಿಡಿಯುತ್ತಾರೆ.

ಎಲ್ಲರಿಗೂ ಕಳುಹಿಸಿದಂತೆ ಅಭಿಮಾನಧನನಾದ ಬಾಹುಬಲಿಗೂ ಓಲೆ ಕಳುಹಿಸಲಾಗುತ್ತದೆ. ಅದನ್ನೋದಿದ ಬಾಹುಬಲಿ ‘ಹಿರಿಯಣ್ಣನಿಗೆ ನಮಸ್ಕರಿಸಬೇಕೆಂಬುದೇನೋ ಸರಿ. ಆದರೆ ತಂದೆಯಿಂದ ದೊರೆತ ಭೂಮಿಯನ್ನು ಅಣ್ಣನ ಚಕ್ರವರ್ತಿ ಪಟ್ಟಕ್ಕಾಗಿ ನಾನೇಕೆ ತ್ಯಾಗಮಾಡಬೇಕು?’ ಎಂದು ಪ್ರತಿಭಟಿಸಿ ಯುದ್ಧಕ್ಕೆ ಸಿದ್ಧನಾಗುತ್ತಾನೆ. ಭರತ-ಬಾಹುಬಲಿ ಇವರಿಬ್ಬರ ಸೇನಾಪಡೆ ಅಗಾಧವಾಗಿತ್ತು. ಯುದ್ಧವೇನಾದರೂ ನಡೆದಿದ್ದರೆ ಲಕ್ಷಾಂತರ ಜನ ಮಾತ್ರವಲ್ಲದೆ ಕುದುರೆ, ಆನೆಗಳಂತಹ ಪ್ರಾಣಿಗಳೂ ಹತಗೊಂಡು ದೊಡ್ಡಮಟ್ಟದಲ್ಲಿ ಜೀವನಾಶವಾಗುತ್ತಿದ್ದುದನ್ನು ಮನಗಂಡ ಪ್ರಾಜ್ಞರು ‘ನೀವು ವಜ್ರದೇಹಿಗಳು. ನಿಮ್ಮ ಸೋಲು-ಗೆಲುವಿನ ಯುದ್ಧಕ್ಕಾಗಿ ಉಳಿದ ಜೀವಗಳ ಬಲಿ ತರವಲ್ಲ. ನಿಮ್ಮಿಬ್ಬರ ನಡುವೆಯಷ್ಟೇ ಯುದ್ಧವಾಗಲಿ. ಯಾರು ಗೆಲ್ಲುತ್ತಾರೋ ಅವರೇ ಚಕ್ರವರ್ತಿ’ ಎಂದು ಅವರಿಬ್ಬರನ್ನು ಅಹಿಂಸಾತ್ಮಕ ಯುದ್ಧಕ್ಕೆ ಒಪ್ಪಿಸಿದರು. ಚಕ್ರವರ್ತಿ ಪಟ್ಟಕ್ಕಾಗಿ ಅವರಿಬ್ಬರ ನಡುವೆ ಜಲಯುದ್ಧ, ದೃಷ್ಟಿಯುದ್ಧ ಹಾಗೂ ಮಲ್ಲಯುದ್ಧಗಳನ್ನು ನಡೆಸಲು ತೀರ್ವನಿಸಲಾಯಿತು. ಭರತನಿಗಿಂತ ದೃಢಕಾಯನಾದ್ದ ಬಾಹುಬಲಿ, ಜಲಯುದ್ಧ ಹಾಗೂ ಮಲ್ಲಯುದ್ಧಗಳಲ್ಲಿ ಅನಾಯಾಸವಾಗಿ ಗೆಲ್ಲುತ್ತಾನೆ. ಮಲ್ಲಯುದ್ಧದಲ್ಲಿ ಬಳಲಿದ ಭರತನನ್ನು ಎರಡೂ ಕೈಗಳಿಂದ ಆಕಾಶದತ್ತ ಮೇಲೆತ್ತಿ ಭೂಮಿಗೆ ಕೆಡವಲು ನಿಂತ ಬಾಹುಬಲಿ, ‘ಅಣ್ಣ ಕುಟುಂಬದಲ್ಲಿ ಹಿರಿಯನಾಗಿದ್ದು, ಘನವ್ಯಕ್ತಿತ್ವವುಳ್ಳವನು. ಚಕ್ರವರ್ತಿಯಾಗಿರುವ ಈತ ಅಪಾರ ತೇಜಸ್ಸು, ಕೀರ್ತಿ ಹೊಂದಿದಂಥವನು. ಇಂಥವನನ್ನು ಭೂಮಿಗೆ ಎತ್ತಿ ಒಗೆದರೆ ಪ್ರಜೆಗಳೆದುರು ಆತನಿಗೆ ಅಪಮಾನವಾಗುವುದು ಮಾತ್ರವಲ್ಲ ಆತನ ಸಾಧನೆ, ಶ್ರಮ, ಕೀರ್ತಿಗಳೆಲ್ಲ ಮಣ್ಣುಪಾಲಾಗುವುದು’ ಎಂದು ಆಲೋಚಿಸಿ ನಿಧಾನವಾಗಿ ಭರತನನ್ನು ಕೆಳಗಿಳಿಸುತ್ತಾನೆ. ಆದರೆ ಸೋಲಿನಿಂದ ರೋಷಗೊಂಡ ಭರತ ಬಾಹುಬಲಿಯನ್ನು ಕೊಲ್ಲಲು ಚಕ್ರರತ್ನವನ್ನು ಕಳುಹಿಸುತ್ತಾನೆ. ಈಗ ಬಾಹುಬಲಿ, ‘ಈ ರಾಜಪದವಿ ಅಪಾಯಕಾರಿ. ಅಧಿಕಾರಕ್ಕಾಗಿ ಮಕ್ಕಳೂ, ಸಹೋದರರೂ ಶತ್ರುಗಳಾಗಿಬಿಡುತ್ತಾರೆ. ಕೀರ್ತಿ, ಪದವಿ, ಸಂಪತ್ತುಗಳಿಗೆಲ್ಲ ಬಲಿಯಾದವರು ತಮ್ಮ ಕುಟುಂಬ, ಬಂಧು-ಬಳಗ, ವ್ಯಕ್ತಿತ್ವ ಎಲ್ಲವನ್ನು ಮರೆತುಬಿಡುತ್ತಾರೆ ಎಂಬುದಕ್ಕೆ ಈತನೇ ಸಾಕ್ಷಿ. ಇಂತಹ ನಶ್ವರ ಸಂಪತ್ತು, ಅಧಿಕಾರವನ್ನು ನಾನು ಪಡೆದರೂ ಅವು ನನ್ನನ್ನು ಭ್ರಷ್ಟಗೊಳಿಸುತ್ತವೆ. ನನ್ನ ಮನಸ್ಸು, ಬದುಕು ಕೂಡ ನಷ್ಟಗೊಳ್ಳುತ್ತವೆ’ ಎಂದೆಣಿಸಿ ಎಲ್ಲವನ್ನೂ ಭರತನಿಗೇ ಒಪ್ಪಿಸಿ ತಪಸ್ಸಿಗೆಂದು ಕಾಡಿಗೆ ಹೋಗುತ್ತಾನೆ.

ದಾರಿದ್ರ್ಯಂ ಕವಿದಂದು, ಪಾಯ್ದು ಪಗೆಗಳ್ ಮಾಸಂಕೆಗೊಂಡಂದು,

ದುರ್ವಾರ ವ್ಯಾಧಿಗಳ್ ಒತ್ತಿದಂದು, ಮನದೊಳ್ ನಿರ್ವೇಗಂ ಅಕ್ಕುಂ,

ಬಳಿಕ್ಕೆ ಆ ರೋಗಂ ಕಳೆದಂದು, ವೈರಿ ಲಯವಾದಂದು ಅರ್ಥವಾದಂದು,

ಇದೇ ವೈರಾಗ್ಯಂ ತಲೆದೋರದೆ ಅಂಡಿಸುವುದೋ! ರತ್ನಾಕರಾಧೀಶ್ವರಾ!

ಬಡತನದಿಂದ ಬೆಂದು ಬಳಲಿದಾಗ, ಶತ್ರುಗಳು ಮೇಲೆ ಬಿದ್ದು ಅಪಮಾನ ಮಾಡಿ ಹಿಂಸೆ ಕೊಟ್ಟಾಗಲೂ, ವಾಸಿಯಾಗದಂಥ ರೋಗ ಬಂದಾಗಲೂ, ಜಿಗುಪ್ಸೆಯಿಂದಲೂ, ಭಯದಿಂದಲೂ ಒಂದು ರೀತಿ ವೈರಾಗ್ಯ ತಲೆದೋರುತ್ತದೆ. ಆದರೆ ಈ ವೈರಾಗ್ಯ ಎಷ್ಟು ದಿನ ಉಳಿಯುತ್ತದೆ? ರೋಗ ವಾಸಿಯಾದ ಮೇಲೆ, ಬಡತನ ನೀಗಿದ ಮೇಲೆ, ಶತ್ರುವಿನ ಭಯ ನಿವಾರಣೆಯಾದ ಮೇಲೆ, ಆ ವೈರಾಗ್ಯ ಹೇಳದೆ ಕೇಳದೆ ಓಡಿ ಹೋಗುತ್ತದೆ. ಆದರೆ ಬಾಹುಬಲಿಯದ್ದು ಅಚಲ ವೈರಾಗ್ಯ.

ಅಧಿಕಾರ ತ್ಯಜಿಸಿ ದೀರ್ಘ ತಪಸ್ಸನ್ನು ಕೈಗೊಳ್ಳುವಾಗ ಬಾಹುಬಲಿಯ ಮೈಮೇಲೆ ಬಳ್ಳಿಗಳು ಬೆಳೆಯುತ್ತವೆ, ಹುತ್ತಗಳು ನಿರ್ವಣವಾಗುತ್ತವೆ. ಬಾಹುಬಲಿಮೂರ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾಲಬುಡದಲ್ಲಿ ಎರಡೂ ಬದಿಗಳಿಂದ ಹುತ್ತಗಳಿವೆ. ಮೈಮೇಲೆ ಬಳ್ಳಿಗಳಿವೆ. ಅಂದರೆ ಅಷ್ಟು ವರ್ಷ ತಪಸ್ಸು ಮಾಡಿದರೂ ಅವನಿಗೆ ಕೇವಲಜ್ಞಾನವಾಗುವುದಿಲ್ಲ, ಮೋಕ್ಷವಾಗುವುದಿಲ್ಲ. ಇದನ್ನೆಲ್ಲ ನೋಡಿ ಮೊದಲೇ ನೊಂದುಕೊಂಡಿದ್ದ ಭರತನಿಗೆ ಇನ್ನೂ ದೊಡ್ಡ ದುಃಖದ ಸಂದರ್ಭ. ಪಶ್ಚಾತ್ತಾಪ, ಸೋಲಿನಿಂದ ನಲುಗಿ ವಿರಕ್ತಿಯ ತುದಿಯಲ್ಲಿರುವಾಗ ಈ ಸಂದರ್ಭ ಬರುತ್ತದೆ. ಈ ಸಮಸ್ಯೆಗೆ, ಸಮವಸರಣಕ್ಕೆ ಕುಳಿತಿರುವ ತಂದೆ ವೃಷಭನಾಥರ ಬಳಿ ಪರಿಹಾರ ಸಿಗಬಹುದು ಎಂದು ಅವರಲ್ಲಿ ಹೋಗಿ- ‘ಸ್ವಾಮಿನ್, ನನ್ನ ಸೋದರನಿಗೆ ಮೋಕ್ಷ ದೊರಕಿಲ್ಲವೇಕೆ. ಅವನಿನ್ನು ತಪಸ್ಸಿನಿಂದ ಹಿಂದಿರುಗಿ ಬರಲಾರ. ಅವನಿಗೆ ಕೇವಲಜ್ಞಾನ ಆಗಬೇಕು’ ಎಂದು ಕೇಳಿದಾಗ ಅವರು ‘ಆತನಿಗೆ ಇನ್ನೂ ಮನಸ್ಸಿನಲ್ಲಿ ಸ್ವಾಭಿಮಾನ ಭಾವವಿದೆ. ಎಲ್ಲವೂ ನಶ್ವರ, ಎಲ್ಲವನ್ನೂ ತ್ಯಾಗ ಮಾಡಿದೆ. ಆದರೆ ನಾನು ತಪಸ್ಸಿಗೆ ನಿಂತಿರುವ ಸ್ಥಳ ಅಣ್ಣನದು. ತಪಸ್ಸಿಗೆ ನಿಲ್ಲಲೂ ನನ್ನದಾದ ಭೂಮಿಯಿಲ್ಲವಲ್ಲ ಎಂಬ ಕೊರಗಿದೆ’ ಎನ್ನುತ್ತಾರೆ. ಇದನ್ನು ತಿಳಿದ ಭರತ, ಬಾಹುಬಲಿಗೆ ಶರಣಾಗುತ್ತಾನೆ. ಈ ಭೂಮಿ ನನ್ನದೂ ಅಲ್ಲ ನಿನ್ನದೂ ಅಲ್ಲ. ಮಾನಕಷಾಯವನ್ನು ಬಿಡು. ಎಲ್ಲವೂ ಕ್ಷಣಿಕ ಎನ್ನುತ್ತಾನೆ. ಆ ಮಾತಿಗೆ ಬಾಹುಬಲಿಗೆ ಕೇವಲ ಜ್ಞಾನೋದಯವಾಗುತ್ತದೆ, ಮೋಕ್ಷಗಾಮಿಯಾಗುತ್ತಾನೆ. ತ್ಯಾಗದ ಮಹತ್ವ, ಅಣ್ಣನನ್ನು ಗೆದ್ದ ಬಾಹುಬಲಿಯ ಸಂದೇಶವೆನಿಸಿದೆ.

ಕ್ಷಮಾಗುಣ ಆತ್ಮಸಂತೋಷವನ್ನುಂಟುಮಾಡುವ ಹಾಗೆ, ಪ್ರತೀಕಾರಬುದ್ಧಿ ಸಂತೋಷ ಕೊಡುತ್ತದೆಯೇ? ಸದ್ಧರ್ಮ ಬೋಧಿಸುವ ತತ್ತ್ವಶಾಸ್ತ್ರಗಳು ಸುಜ್ಞಾನವನ್ನುಂಟುಮಾಡುವಂತೆ, ಮಿಥ್ಯಾಶಾಸ್ತ್ರಗಳು ಶ್ರೇಷ್ಠಜ್ಞಾನ ಕೊಡಲು ಸಾಧ್ಯವೇ! ಮೋಕ್ಷ ಸಾಮ್ರಾಜ್ಯದಲ್ಲಿ ಅನಂತ ಸುಖಸಿರಿಗಳಲ್ಲಿ ಓಲಾಡುವ ಹಾಗೆ ಚತುರ್ಗತಿಗಳಲ್ಲಿ ಭ್ರಮಣೆ ಮಾಡಿದರೆ ಆ ಶಾಶ್ವತ ಸುಖವನ್ನು ಅನುಭವಿಸಲು ಸಾಧ್ಯವೇ! ಎಂಬ ಭಾವನೆ ವ್ಯಕ್ತವಾಗುತ್ತದೆ.

ಇವತ್ತು ಸಂಸಾರದಲ್ಲಿ ದಾಯಾದಿಗಳ ಜಗಳ; ಆಸ್ತಿ-ಪಾಸ್ತಿಗೆ ಹೋರಾಟ, ಕೋರ್ಟು-ಕಚೇರಿ ವ್ಯವಹಾರ, ಹೊಡೆದಾಟ, ಬಡಿದಾಟ ಸಾವು-ನೋವನ್ನು ಕಾಣುತ್ತೇವೆ. ಇಂತಹ ಸಂದರ್ಭಗಳಲ್ಲಿ ಬಾಹುಬಲಿಯ ಸಂದೇಶ ಪ್ರಸ್ತುತವಾಗುತ್ತದೆ. ಎಲ್ಲರೂ ಈ ಸಂದೇಶವನ್ನು ಸ್ವೀಕರಿಸಿ ಅಂಥ ತ್ಯಾಗದಿಂದಾಗುವ ಆನಂದವನ್ನು ತಿಳಿದುಕೊಳ್ಳಬೇಕಾಗಿದೆ.

ಬಾಹುಬಲಿಯ ಮೂರ್ತಿಗಳು ಕರ್ನಾಟಕದಲ್ಲಿ ಸಾಕಷ್ಟಿವೆ. 981ನೇ ಇಸವಿಯಲ್ಲಿ ಶ್ರವಣಬೆಳಗೊಳದಲ್ಲಿ 57 ಅಡಿಯ ಶಿಲಾಮೂರ್ತಿ ನಿರ್ವಿುಸಲಾಗಿದೆ. ಕಾರ್ಕಳದಲ್ಲಿ 41 ಅಡಿ, ವೇಣೂರಿನಲ್ಲಿ 35 ಅಡಿ ಎತ್ತರದ ಮೂರ್ತಿಗಳಿವೆ. ದಿ| ರೆಂಜಾಳ ಗೋಪಾಲಕೃಷ್ಣ ಶೆಣೈಯವರು ಸುಂದರವಾಗಿ ನಿರ್ವಿುಸಿಕೊಟ್ಟ ಧರ್ಮಸ್ಥಳದಲ್ಲಿರುವ ಬಾಹುಬಲಿ ಮೂರ್ತಿ 39 ಅಡಿ ಎತ್ತರವಿದೆ.

ಲೋಕಕಲ್ಯಾಣಾರ್ಥ ನಡೆಸಲಾಗುವ ಈ ಮಹಾಮಸ್ತಕಾಭಿಷೇಕದ ಸಂದೇಶವನ್ನು ಓದುಗರೆಲ್ಲರೂ ಸ್ವೀಕರಿಸಬೇಕು. ಭೋಗಲೋಲುಪತೆಯು ಸಮಾಜದ ವಿಘಟನೆಗೆ ಕಾರಣವಾಗುತ್ತದೆ. ತ್ಯಾಗವು ಅಮೃತಸಮಾನ ಸುಖ-ಶಾಂತಿಯನ್ನು ನೀಡುತ್ತದೆ ಎಂಬುದನ್ನು ಮರೆಯದಿರೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)