Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ವೃತ್ತಿ ಪ್ರವೃತ್ತಿಯಾದಾಗ ಜೀವನದಲ್ಲಿ ಸಂತೃಪ್ತಿ

Sunday, 23.09.2018, 3:03 AM       No Comments

| ಡಾ. ಡಿ. ವೀರೇಂದ್ರ ಹೆಗ್ಗಡೆ

ಒಂದು ಕಾರ್ಯದಲ್ಲಿ ಉದ್ಯುಕ್ತರಾದ ಮೇಲೆ ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಳ್ಳುವ ಬದ್ಧತೆ ಬೆಳೆಸಿಕೊಳ್ಳಬೇಕು. ಅಂತಹ ಕಾರ್ಯದಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಎಲ್ಲಿ ವೃತ್ತಿ ಪ್ರವೃತ್ತಿಯಾಗುತ್ತದೋ ಅಲ್ಲಿ ಉತ್ಸಾಹ, ಇನ್ನಷ್ಟು ಸಾಧಿಸಬೇಕೆಂಬ ಹಂಬಲ ಇರುತ್ತದೆ.

ಜೀವನವೆಂಬ ರಥವನ್ನು ಮುನ್ನಡೆಸಲು ಪ್ರತಿಯೊಬ್ಬರೂ ಯಾವುದಾದರೊಂದು ವೃತ್ತಿಯನ್ನು ಮಾಡಲೇಬೇಕಾಗುತ್ತದೆ. ಮನುಷ್ಯ ಕೆಲಸ ಮಾಡದೇ ಸುಮ್ಮನೆ ಕ್ಷಣಮಾತ್ರವೂ ಇರಲಾರ. ‘ನ ಹಿ ಕಶ್ಚಿತ್ ಕ್ಷಣಮಪಿ ಜಾತುತಿಷ್ಠತ್ಯಕರ್ಮಕೃತ್’. ಈ ವೃತ್ತಿ ಎಂಬುದು ಜೀವನೋಪಾಯ ಅಥವಾ ನಮ್ಮ ವ್ಯವಹಾರ ಆಗಿರುತ್ತದೆ. ನಾವೂ ಬದುಕಿ ನಮ್ಮವರನ್ನೂ ಸಲಹುವ ಈ ವೃತ್ತಿಯಲ್ಲಿ ಕೆಲವು ಪಾರಂಪರಿಕವಾಗಿ ಬಂದದ್ದಿರಬಹುದು. ಉದಾಹರಣೆಗೆ, ಕೃಷಿ, ಹೈನುಗಾರಿಕೆ, ಗುಡಿಕೈಗಾರಿಕೆ, ಗ್ರಾಮೀಣ ಪ್ರದೇಶದಲ್ಲಿ ಕೌಟುಂಬಿಕ ನೆಲೆಯಲ್ಲಿ ನಡೆಸಿಕೊಂಡು ಬರುತ್ತಿರುವ ವ್ಯವಹಾರಗಳಾಗಬಹುದು ಇತ್ಯಾದಿ. ಇದರ ಜತೆಗೆ ಆಧುನಿಕಕಾಲದ ಬೇಡಿಕೆಗೆ ಅನುಗುಣವಾಗಿ ನಾವು ಹೊಸ ಹೊಸ ಉದ್ಯೋಗಗಳನ್ನು ನಿರ್ಮಾಣ ಮಾಡಿಕೊಳ್ಳಬಹುದು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು ವಿದ್ಯೆ ಇಲ್ಲದಿದ್ದರೂ ಶ್ರದ್ಧೆಯಿಂದ ಬದುಕನ್ನು ಕಟ್ಟುವ ಸುಂದರಕಲೆಯನ್ನು ತಿಳಿದಿರುತ್ತಾರೆ.

ಹಿಂದಿನ ಕಾಲದಲ್ಲಿ ಜಾತಿಆಧಾರಿತವಾದ ವೃತ್ತಿಗಳಿದ್ದವು. ಕಮ್ಮಾರ, ಬಡಗಿ, ಅಕ್ಕಸಾಲಿಗ, ರ್ದಜಿ ಮುಂತಾದ ಕೆಲಸಗಳನ್ನು ಮಾಡುವ ಪಾರಂಪರಿಕ ಕುಟುಂಬಗಳೇ ಇದ್ದವು. ಆಯಾ ಕುಟುಂಬದವರು ತಮ್ಮತಮ್ಮ ಕುಲಕಸುಬಿನ ವೃತ್ತಿಗಳಲ್ಲಿ ನಿಷ್ಣಾತರಾಗಿರುತ್ತಿದ್ದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ವ್ಯವಸ್ಥೆ ಬದಲಾಗಿ ಯಾರು ಯಾವ ವೃತ್ತಿಯನ್ನು ಬೇಕಾದರೂ ಮಾಡಬಹುದು ಎಂಬ ಸ್ವಾತಂತ್ರ್ಯ ಬಂತು. ಸಾಧನೆಯಿಂದ ಯಾರು ಬೇಕಾದರೂ ಯಾವುದೇ ಕ್ಷೇತ್ರದಲ್ಲೂ ಪರಿಣತಿ ಸಂಪಾದಿಸಬಹುದೆಂಬ ಪ್ರವೃತ್ತಿ ಜನರಲ್ಲಿ ಬಂತು. ಮೊದಲು ಜಾತಿ ಆಧಾರಿತವಾಗಿ ಇದ್ದ ವೃತ್ತಿ ಜಾತ್ಯತೀತವಾಗಿ ಬದಲಾಯಿತು.

‘ಬ್ರಾಹ್ಮಣೋಸ್ಯ ಮುಖಮಾಸೀತ್, ಬಾಹೂ ರಾಜನ್ಯಃ ಕೃತಃ ಊರೂತದಸ್ಯಯದ್ವೈಶ್ಯಃ ಪದ್ಭಾ್ಯಂ ಶೂದ್ರೋ ಅಜಾಯತ’ ಎಂಬಂತೆ ವರ್ಣವ್ಯವಸ್ಥೆಯಲ್ಲಿ ಇದ್ದ ಪಾರಂಪರಿಕ ಕುಲವೃತ್ತಿ ಹೋಗಿ ಸಾಮರ್ಥ್ಯದ, ಆಸಕ್ತಿಯ ಆಧಾರದ ಮೇಲೆ ಯಾವುದೇ ವೃತ್ತಿಯನ್ನು ಇಂದು ಆಯ್ಕೆ ಮಾಡಿಕೊಳ್ಳ ಬಹುದು. ರಕ್ತಗತವಾಗಿ ಬರುವಂತಹ ವಿದ್ಯೆ ಖಂಡಿತವಾಗಿಯೂ ಇದೆ. ಅಕ್ಕಸಾಲಿಗ, ಶಿಲ್ಪಿಯ ಪರಿಣತಿಯನ್ನು ನೋಡಿದಾಗ ಇವರಿಗೆ ಈ ಕಲೆ/ವೃತ್ತಿ ವಂಶಪಾರಂಪರ್ಯವಾಗಿ ಬಂದದ್ದೆಂಬುದು ತಿಳಿಯುತ್ತದೆ. ಬಡಗಿ ಅಥವಾ ಅಕ್ಕಸಾಲಿಗನ ಮಗ ಮುದ್ದಾಗಿ ಚಿತ್ರ ಬರೆಯುತ್ತಾನೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸುತ್ತೇವೆ. ಅದರಲ್ಲಿ ಪ್ರತಿ ವರ್ಷವೂ ಬಹುಮಾನ ಪಡೆಯುವವರು ಆ ಜಾತಿಯಿಂದ ಬಂದವರೇ ಆಗಿರುತ್ತಾರೆ. ಅದು ಅವರ ವಂಶವಾಹಿನಿಯಲ್ಲಿ ಸೇರಿಹೋಗಿದೆ. ಇಂತಹ ಮಕ್ಕಳು ಆಮೇಲೆ ಈ ಪಾರಂಪರಿಕ ವೃತ್ತಿಯನ್ನು ತೊರೆದು ಅಕೌಂಟೆಂಟ್ ಆಗಬಹುದು ಅಥವಾ ವ್ಯಾಪಾರಕ್ಕೆ ಹೋಗಬಹುದು ಅಥವಾ ಕಂಪ್ಯೂಟರ್ ಆಧಾರಿತ ವೃತ್ತಿಗೆ ಸೇರಬಹುದು. ಇಂತಹ ವೃತ್ತಿಗಾಗಿ ಊರು ದೇಶವನ್ನು ಬಿಟ್ಟು ವಿದೇಶಗಳಿಗೂ ಹೋಗಬಹುದು. ಯಾಕೆಂದರೆ ವೃತ್ತಿಯ ಆಯ್ಕೆಗೆ ಯಾವುದೇ ನಿಷೇಧವಿಲ್ಲ. ಅಥವಾ ಜೀವನೋಪಾಯಕ್ಕೆ ಇವು ಅಪ್ರಸ್ತುತವೂ ಅಲ್ಲ.

ಯಾರು ಯಾವ ವೃತ್ತಿ ಆಯ್ಕೆ ಮಾಡಿಕೊಂಡರೂ ಅದನ್ನು ಶ್ರದ್ಧೆ, ಪ್ರೀತಿಯಿಂದ ಮಾಡಬೇಕು. ಆಗಲೇ ಅದಕ್ಕೊಂದು ಪರಿಪೂರ್ಣತೆ ಬರುತ್ತದೆ. ಇಂದು ವೈದ್ಯರಾದವರ ಜಾತಿ ಕೇಳುವ ಹಾಗಿಲ್ಲ. ಆ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದವರಿದ್ದಾರೆ. ಅದ್ಭುತ ವಿನ್ಯಾಸವನ್ನು ರಚಿಸಿದ ಇಂಜಿನಿಯರುಗಳಿದ್ದಾರೆ. ಅತಿ ಸಾಮಾನ್ಯ ಕುಟುಂಬದಿಂದ ಬಂದವರಲ್ಲೂ ಅದ್ಭುತ ಪ್ರತಿಭೆಗಳು ಪ್ರಕಟವಾಗುತ್ತಿವೆ. ನಮ್ಮ ವೃತ್ತಿಯನ್ನು ಇಷ್ಟದಿಂದ ಮಾಡಿದರೆ ಅದೇ ಪ್ರವೃತ್ತಿಯಾಗುತ್ತದೆ. ಒಬ್ಬ ಅಧ್ಯಾಪಕ ತಾನು ಬೋಧಿಸುವ ವಿಷಯದಲ್ಲಿ ಪರಿಣತಿ ಪಡೆದು ಇಷ್ಟಪಟ್ಟು ವಿದ್ಯಾರ್ಥಿಗಳಿಗೆ ಬೋಧಿಸಿದರೆ, ಅಧ್ಯಾಪನ ಎಂಬುದು ಅವನ ಪ್ರವೃತ್ತಿಯೇ ಆಗುತ್ತದೆ. ಆಗ ಆ ಕ್ಷೇತ್ರದಲ್ಲಿ ಅವನು ಪ್ರಗತಿಯನ್ನು ಸಾಧಿಸುತ್ತಾನೆ ಮತ್ತು ಆ ಶಿಕ್ಷಕವೃತ್ತಿ ಅವನಿಗೆ ಸಂತೋಷವನ್ನು ನೀಡುತ್ತದೆ. ಆದ್ದರಿಂದ ಯಾರು ವೃತ್ತಿಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಳ್ಳುತ್ತಾರೋ ಅವರು ಅದ್ಭುತ ಪ್ರಗತಿಯನ್ನು ಸಾಧಿಸುತ್ತಾರೆ ಮತ್ತು ಮಾಡುವ ಉದ್ಯೋಗದಿಂದ ಸಂತೃಪ್ತಿಯನ್ನು ಪಡೆಯುತ್ತಾರೆ.

ಸಂತೃಪ್ತಿ ಮುಖ್ಯವಾಗಲಿ: ಎಲ್ಲರಿಗೂ ಬಯಸಿದ ಉದ್ಯೋಗವೇ ಸಿಗುತ್ತದೆಂಬ ಭರವಸೆ ಇಲ್ಲ. ಎಲ್ಲರಿಗೂ ತಾವು ಓದಿದ ವಿಷಯಕ್ಕೆ ಸಂಬಂಧಿಸಿದ ಕೆಲಸವೇ ದೊರಕುತ್ತದೆಂದಿಲ್ಲ. ಸಾಹಿತ್ಯ, ಸಂಗೀತದಲ್ಲಿ ಅಭಿರುಚಿ ಉಳ್ಳವನು ಸಂಪಾದನೆ ಮತ್ತು ಹೆತ್ತವರ ಆಶಯಕ್ಕೆ ಅನುಗುಣವಾಗಿ ಸಹಜ ಬಯಕೆಯನ್ನು ಬಿಟ್ಟು ಬೇರೊಂದು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆಗ ಬದುಕಿಗಾಗಿ ವೃತ್ತಿ ಇರುತ್ತದೆ. ಪ್ರವೃತ್ತಿ ಬೇರೆಯೇ ಆಗಿಬಿಡಬಹುದು. ಇನ್ನು ಎಷ್ಟೋ ಸಲ ನಮ್ಮ ನೈಜ ಸಾಮರ್ಥ್ಯಕ್ಕಿಂತ ಕೆಳಸ್ತರದ ಉದ್ಯೋಗ ಸಿಗಬಹುದು. ಸ್ನಾತಕೋತ್ತರ ಪದವೀಧರನಿಗೆ ಪಿಯುಸಿ ಪಾಸಾದವರು ಮಾಡುವ ಕೆಲಸ ಸಿಗಬಹುದು. ಹೀಗೆ ಜೀವನದಲ್ಲಿ ಇಷ್ಟಪಟ್ಟದ್ದು ದೊರಕದೇ ಹೋದಾಗ ಹತಾಶರಾಗದೆ, ಸಿಕ್ಕಿದ್ದನ್ನು ಇಷ್ಟಪಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಯಾಕೆಂದರೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವ ಮನುಷ್ಯರಲ್ಲಿರುತ್ತದೆ. ಆದ್ದರಿಂದ ಮಾಡುವ ವೃತ್ತಿಯನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿದರೆ ಆಗ ಆ ವೃತ್ತಿಯೇ ಅವನಿಗೆ ಪ್ರವೃತ್ತಿಯಾಗುತ್ತದೆ. ಹೀಗೆ ವೃತ್ತಿ ಪ್ರವೃತ್ತಿಯಾದಾಗ ಅದರಿಂದ ಸಂತೃಪ್ತಿ ದೊರಕಲು ಸಾಧ್ಯ.

ಅವಕಾಶಗಳು ದೊರಕಿದಂತೆ ವ್ಯಕ್ತಿಗಳು ಬದಲಾಗಬೇಕು. ಇಂತಹ ಸಾತ್ವಿಕ ಪರಿವರ್ತನೆ ಪ್ರವೃತ್ತಿಯಾಗಬೇಕು. ಯಾರೋ ಒಬ್ಬರು ಸ್ವಚ್ಛತೆಯ ಸಿಪಾಯಿ ಆಗಬಹುದು, ಅಧ್ಯಾಪಕರಾಗಬಹುದು, ಸೈನಿಕರಾಗಬಹುದು, ಹೀಗೆ ದೊರಕಿದ ವೃತ್ತಿಯಲ್ಲಿ ಶ್ರದ್ಧೆಯಿಂದ ತಜ್ಞನಾಗಬೇಕು. ಆಗ ಆಯಾಕ್ಷೇತ್ರದಲ್ಲಿ ಸಾಧನೆ ಮಾಡಿ ನೆಮ್ಮದಿ ಪಡೆಯಬಹುದು.

ಕಲಾಂ ಯಶಸ್ವಿಯಾದದ್ದು ಹೇಗೆ?: ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಶ್ರೇಷ್ಠ ವಿಜ್ಞಾನಿ. ಅವರು ಶಾಲೆಗೆ ಹೋಗುವಾಗ ‘ಪೈಲಟ್ ಆಗಬೇಕು’ ಎಂಬ ಆಸೆ ಹೊಂದಿದ್ದರು. ಒಮ್ಮೆ ಅವರು ಪೈಲಟ್ ಪರೀಕ್ಷೆಗೆ ಹಾಜರಾದರು. ಚೆನ್ನಾಗಿ ಓದಿ ಪರೀಕ್ಷೆಯೇನೋ ಬರೆದರು. ಇವರು ಹತ್ತರಲ್ಲಿ ಹನ್ನೊಂದನೆಯವರಾಗಿ ಪೈಲಟ್ ಆಗುವ ಅರ್ಹತೆಗೆ ಆಯ್ಕೆಯಾಗಲಿಲ್ಲ. ದುರದೃಷ್ಟವಶಾತ್ ಅವರಿಗೆ ಪೈಲಟ್ ವೃತ್ತಿ ಸಿಗಲಿಲ್ಲ. ತಾನು ಬಯಸಿದ ವೃತ್ತಿ ಸಿಗಲಿಲ್ಲವೆಂದು ಸ್ವಲ್ಪ ಕಾಲ ನಿರಾಶೆಯಾಯಿತು. ದುಃಖವೂ ಆಯಿತು. ಆದರೆ ನಂತರ ಅವರೊಬ್ಬ ವಿಜ್ಞಾನಿಯಾದರು. ಆ ವೃತ್ತಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡು ಸರ್ವಮಾನ್ಯ ವಿಜ್ಞಾನಿಯಾದರು. ಭಾರತದ ರಾಷ್ಟ್ರಪತಿಯಾದರು. ಶ್ರೇಷ್ಠ ಮಾನವತಾವಾದಿಯೂ ಆದರು. ಇಡೀ ವಿಶ್ವ ಅವರನ್ನು ಗುರುತಿಸಿ ಗೌರವಿಸಿತು. ಕಲಾಂರ ಈ ಎಲ್ಲ ಸಾಧನೆ ಸಾಧ್ಯವಾದದ್ದು ಅವರು ತಮಗೆ ದೊರಕಿದ ವೃತ್ತಿಯನ್ನು ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡಿದ್ದು. ಇದೊಂದು ತನ್ನ ಜೀವಿಕೆಯೆಂದು ಮಾತ್ರ ತಿಳಿಯದೆ, ಅದನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡರು.

ಅವಕಾಶ ಕೈಚೆಲ್ಲಬೇಡಿ: ಶ್ರೇಷ್ಠ ಸಾಧನೆಯನ್ನು ಮಾಡಿದ ಯಾರನ್ನೇ ನೋಡಿ. ಅವರೆಲ್ಲ ತಮ್ಮ ವೃತ್ತಿಯನ್ನು ಪ್ರೀತಿಸಿದವರು. ಬಯಸಿದ್ದು ಸಿಗದಿದ್ದಾಗ ಸಿಕ್ಕಿದ್ದನ್ನು ಬಯಸಿ ಶ್ರದ್ಧೆಯಿಂದ ಕಾಪಾಡಿ ಬೆಳೆಸಿದವರೇ ಆಗಿದ್ದಾರೆ. ಮಹಾಭಾರತದ ಧರ್ಮವ್ಯಾಧನ ವೃತ್ತಾಂತ ತುಂಬ ಪ್ರಸಿದ್ಧವಾದದ್ದು. ಆತ ಸಾಧುಸ್ವಭಾವದ ಧರ್ವಿುಷ್ಠ. ಮಾಂಸವ್ಯಾಪಾರ ಅವನ ವೃತ್ತಿ. ಆ ವೃತ್ತಿಯನ್ನು ಶ್ರದ್ಧೆಯಿಂದ ಮಾಡಿ ದೊಡ್ಡ ಧಮೋಪದೇಶಕನಾದ.

ಇಂದು ನಮ್ಮ ಭಾರತೀಯರು ವಿದೇಶಗಳಲ್ಲೂ ಉನ್ನತ ಹುದ್ದೆ ಅಲಂಕರಿಸುತ್ತಿದ್ದಾರೆ. ಗೂಗಲ್ ಕಂಪನಿಯ ಮುಖ್ಯಸ್ಥ ಆಗಿರಬಹುದು, ಕೋಕಾ ಕೋಲಾ ಕಂಪನಿಯ ಈ ಹಿಂದಿನ ಸಿ.ಇ.ಒ. ಇರಬಹುದು. ಇವರೆಲ್ಲ ವೃತ್ತಿಯನ್ನು ಪ್ರವೃತ್ತಿಯಾಗಿಸಿಕೊಂಡಿದ್ದರಿಂದಲೇ ಯಶಸ್ಸು ಗಳಿಸಿದವರು. ನಮ್ಮ ದೇಶದಲ್ಲೂ ಇನ್ಪೋಸಿಸ್​ನ ನಾರಾಯಣ ಮೂರ್ತಿ ಮುಂತಾದವರು ಇದೇ ಮಾರ್ಗದಲ್ಲಿಯೇ ದೊಡ್ಡ ಸಂಸ್ಥೆಯನ್ನು ಕಟ್ಟಿ, ಲಕ್ಷಾಂತರ ಜನರಿಗೆ ಉದ್ಯೋಗ, ಆಶ್ರಯ ನೀಡಿ ಲೋಕವಿಖ್ಯಾತರಾಗಿದ್ದಾರೆ. ಆದ್ದರಿಂದ ವೃತ್ತಿ ಯಾವುದು ಎನ್ನುವುದು ಅಷ್ಟು ಮುಖ್ಯವಲ್ಲ. ಆ ವೃತ್ತಿಯನ್ನು ಹೇಗೆ ಪ್ರವೃತ್ತಿಯಾಗಿಸಿಕೊಂಡಿದ್ದಾರೆ ಎಂಬುದು ಅತಿ ಮುಖ್ಯವಾಗುತ್ತದೆ. ನಮ್ಮ ಯುವಜನಾಂಗ ಈ ಆಂಶಗಳನ್ನು ಗಮನಿಸಬೇಕು. ಅವಕಾಶಗಳು ಬಂದಾಗ ಉತ್ಸಾಹದಿಂದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲಿಯೂ ಹತಾಶೆಯ ಭಾವನೆ ಬರಬಾರದು. ಒಂದು ಕಾರ್ಯದಲ್ಲಿ ಉದ್ಯುಕ್ತರಾದ ಮೇಲೆ ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಳ್ಳುವ ಬದ್ಧತೆ ಬೆಳೆಸಿಕೊಳ್ಳಬೇಕು. ಅಂತಹ ಕಾರ್ಯದಿಂದ ಮಾನಸಿಕ ನೆಮ್ಮದಿ ದೊರಕುತ್ತದೆ.

ನಾವು ರುಡ್​ಸೆಟ್​ನಲ್ಲಿ ಸ್ವಉದ್ಯೋಗ ತರಬೇತಿ ನೀಡುತ್ತೇವೆ. ಉದ್ಯೋಗ ಪ್ರಾರಂಭಿಸಲು ಬೇಕಾದ ಬಂಡವಾಳದ ವ್ಯವಸ್ಥೆಯನ್ನೂ ಮಾಡುತ್ತೇವೆ. ಎಲ್ಲರೂ ಮುಂದೆ ಯಶಸ್ವಿಯಾಗುತ್ತಾರೆಂದು ಹೇಳಲಾಗದು. ತರಬೇತಿ ಪಡೆದ ಕೆಲವರು ಮುಂದೆ ತೊಂದರೆ ಬಂದು ನಷ್ಟವಾಗಬಹುದೆಂದು ವ್ಯಾಪಾರವನ್ನೇ ಆರಂಭಿಸುವುದಿಲ್ಲ. ಇನ್ನು ಕೆಲವರು ಉದ್ಯೋಗ ಆರಂಭಿಸುತ್ತಾರೆ. ಮಧ್ಯೆ ಸಮಸ್ಯೆ ಬಂದು ಅರ್ಧದಲ್ಲೇ ಬಿಟ್ಟುಬಿಡುತ್ತಾರೆ. ಆದರೆ ಇನ್ನು ಕೆಲವರು ವೃತ್ತಿಯನ್ನು ಆರಂಭಿಸಿ, ವಿಘ್ನಗಳು ಬಂದರೂ ಅದನ್ನು ಮೆಟ್ಟಿ ನಿಂತು, ಆ ವ್ಯವಹಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗುತ್ತಾರೆ. ಯಾಕೆಂದರೆ ಇವರು ವೃತ್ತಿಯನ್ನೇ ಶ್ರದ್ಧೆಯಿಂದ ಪ್ರೀತಿಸುತ್ತಾರೆ. ಕಷ್ಟ-ನಷ್ಟಗಳಿಂದ ಪಾಠಕಲಿತು ಪ್ರಗತಿ ಸಾಧಿಸುತ್ತಾರೆ.

ಎಲ್ಲಿ ವೃತ್ತಿ ಪ್ರವೃತ್ತಿಯಾಗಿರುವುದಿಲ್ಲವೋ ಅಲ್ಲಿ ನೆಮ್ಮದಿ ಇರುವುದಿಲ್ಲ. ನಮ್ಮ ವೃತ್ತಿಯಲ್ಲಿ ಶ್ರದ್ಧೆ ಮತ್ತು ಗೌರವ ಇಲ್ಲದಿದ್ದರೆ ಆ ವೃತ್ತಿ ಆಯಾಸಪ್ರದವಾಗಿರುತ್ತದೆ. ಆಗ ಯಾಂತ್ರಿಕವಾಗಿ ಕೆಲಸ ನಡೆಯುತ್ತದೆ. ಯಾಂತ್ರಿಕವಾಗಿ ನಡೆಯುವ ಕೆಲಸದಲ್ಲಿ ದೇಹ ಮತ್ತು ಮನಸ್ಸಿಗೆ ಸಂಪರ್ಕವೇ ಇರುವುದಿಲ್ಲ. ಆಗ ಕೆಲಸ ದೈಹಿಕ ಶ್ರಮವಾಗುತ್ತದೆ. ಇದು ನೂರಾರು ಸಮಸ್ಯೆ, ರೋಗರುಜಿನಗಳಿಗೆ ಕಾರಣವಾಗುತ್ತದೆ. ಆದ್ದರಿಂದಲೇ ಮನಸ್ಸಿಟ್ಟು ಕೆಲಸ ಮಾಡಬೇಕೆಂದು ಹೇಳುತ್ತಾರೆ. ನಾನು ಕೆಲಸವನ್ನು ಒತ್ತಡದಿಂದ, ಅನಾಸಕ್ತಿಯಿಂದ ಮಾಡಿದರೆ ಆವತ್ತು ಆಯಾಸವಾಗುತ್ತದೆ. ಮನಸ್ಸಿಗೂ ನೆಮ್ಮದಿ ಇರುವುದಿಲ್ಲ. ಅದೇ ಕೆಲಸವನ್ನು ಸಂತೋಷದಿಂದ ಮಾಡಿದರೆ ಎಷ್ಟು ದುಡಿದರೂ ಆಯಾಸವೆನಿಸುವುದಿಲ್ಲ. ಮನಸ್ಸೂ ಉತ್ಸಾಹದಿಂದಿರುತ್ತದೆ. ಭಾನುವಾರ, ಸೋಮವಾರದ ದಿನ ನನ್ನ ಬೀಡಿನ ಛಾವಡಿಗೆ ಅನೇಕ ಭಕ್ತರು ಬರುತ್ತಾರೆ. ಬೆಳಗ್ಗಿನಿಂದ ರಾತ್ರಿಯವರೆಗೆ ಅವರಲ್ಲಿ ಮಾತನಾಡುತ್ತೇನೆ. ಅವರ ದೂರು-ದುಃಖವನ್ನು ಆಲಿಸುತ್ತೇನೆ. ನನ್ನ ವಿಚಾರಗಳನ್ನು ಅವರಲ್ಲಿ ಹಂಚಿಕೊಳ್ಳುತ್ತೇನೆ. ಆದರೆ ನನಗೆಂದೂ ಆಯಾಸವಾಗುವುದಿಲ್ಲ. ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ, ಪ್ರೀತಿಯಿಂದ ಮಾಡಿದರೆ ನಮ್ಮ ಉತ್ಸಾಹ ಇಮ್ಮಡಿಯಾಗುತ್ತದೆ.

ಆಯಾಸಪಡದೇ, ಒತ್ತಡವಿಲ್ಲದೇ, ಆರೋಗ್ಯಕ್ಕೆ ತೊಂದರೆ ಇಲ್ಲದಂತೆ ಬದುಕಬೇಕು ಎಂದರೆ ಎಲ್ಲರೂ ನಿಮ್ಮ ನಿಮ್ಮ ವೃತ್ತಿಯನ್ನು ಪ್ರೀತಿಸಿ. ವೃತ್ತಿಯನ್ನು ಪ್ರೀತಿಸುವುದೆಂದರೆ ಅದನ್ನು ನಮ್ಮ ಪ್ರವೃತ್ತಿಯನ್ನಾಗಿಸಿಕೊಳ್ಳುವುದು, ನಮ್ಮ ಸಹಜ ಸ್ವಭಾವವನ್ನಾಗಿ ಮಾಡಿಕೊಳ್ಳುವುದು ಎಂದರ್ಥ. ಇರುವ ವೃತ್ತಿಯ ನೆನೆದು ದೊರಕುದದರೆಡೆಗೆ ತುಡಿಯಬಾರದು. ಆಗಲೇ ವೃತ್ತಿಯು ಪ್ರವೃತ್ತಿಯಾಗಿ ಆನಂದ ನಮ್ಮಲ್ಲಿ ಮನೆ ಮಾಡುತ್ತದೆ. ಬಾಳು ಸಾರ್ಥಕವಾಗುತ್ತದೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

Leave a Reply

Your email address will not be published. Required fields are marked *

Back To Top