ನೆಮ್ಮದಿಗಾಗಿ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳೋಣ

| ಡಾ.ಡಿ.ವೀರೇಂದ್ರ ಹೆಗ್ಗಡೆ

ಸಂತೋಷವನ್ನು ದಕ್ಕಿಸಿಕೊಳ್ಳುವುದು ನಮ್ಮ ಗುರಿಯಾದ್ದರಿಂದ ಋಣಾತ್ಮಕವಾಗಿ ಮಾತನಾಡುವ ಸ್ವಭಾವವನ್ನು ಬದಲಾಯಿಸಿಕೊಳ್ಳಲೇಬೇಕು. ಜೀವನದ ಪ್ರತಿಯೊಂದು ಮಗ್ಗುಲಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇದ್ದದ್ದೇ; ಆದರೆ ನಕಾರಾತ್ಮಕ ಅಂಶಗಳನ್ನಷ್ಟೇ ಗುರುತಿಸಿ ಅದೇ ಛಾಯೆಯಲ್ಲಿ ಮಾತಾಡುವುದರಿಂದ ಸುಖಕ್ಕಿಂತ ದುಃಖದ ಕ್ಷಣಗಳೇ ವಿಜೃಂಭಿಸುತ್ತವೆ.

‘ಜೀವನದಲ್ಲಿ ಸುಖವಷ್ಟೇ ಬರಲಿ, ದುಃಖವಂತೂ ಬರುವುದೇ ಬೇಡ’ ಎಂದು ಮನುಷ್ಯ ನಿರಂತರವಾಗಿ ಕಾರ್ಯಪ್ರವೃತ್ತನಾಗುತ್ತಾನೆ. ಆದರೆ ಮನುಷ್ಯನ ಸಹಜ ಸ್ವಭಾವದಲ್ಲಿ ಸುಖಕ್ಕಿಂತ ಹೆಚ್ಚು ದುಃಖದ ಸ್ಮರಣೆಯಿರುತ್ತದೆ. ಜೀವನದಲ್ಲಿ ಬಂದ ಸುಖದ ಅನುಭವಕ್ಕಿಂತ ದುಃಖದ ಸನ್ನಿವೇಶಗಳನ್ನೇ ಮರೆಯದೆ ನೆನಪಿಟ್ಟುಕೊಳ್ಳುತ್ತಾನೆ. ಇದು ಪ್ರಾಯಶಃ ಅವನ ಜನ್ಮಜಾತ ಸ್ವಭಾವವೇ ಆಗಿಬಿಟ್ಟಿದೆ. ಜೀವನದ ಸಂತಸದ ಘಟನೆಗಳ ಮಧ್ಯೆ ಸುಳಿಯುವ ಅಹಿತಕರ ಘಟನೆಗಳು, ಸಂದರ್ಭಗಳು, ವಿಚಾರಗಳು ಉತ್ತಮವಾದ ವಿಚಾರಗಳನ್ನೇ ಓಡಿಸಿಬಿಡುತ್ತವೆ. ಅದೆಷ್ಟೋ ಸಲ ಮನೆಯಲ್ಲಿ ಮಾತನಾಡುವಾಗ, ಸ್ನೇಹಿತರೊಂದಿಗಿನ ಕುಶಲೋಪರಿ, ವಿಚಾರ ವಿನಿಮಯದ ಸಂದರ್ಭದಲ್ಲಿ, ಇನ್ನೊಬ್ಬರಲ್ಲಿರುವ ದೋಷವನ್ನೇ ಹೆಕ್ಕಿ, ತೆಗಳಿ ಸಂತೋಷಪಡುತ್ತೇವೆ. ಸುಂದರ ಶರೀರದಲ್ಲಿ ಒಂದು ಸಣ್ಣ ಗಾಯವಾದರೆ, ನೊಣಕ್ಕೆ ಆ ಗಾಯವೇ ಕಾಣುತ್ತದೆ. ಇನ್ನೊಬ್ಬರಲ್ಲಿ ಅನೇಕ ಉತ್ತಮ ಅಂಶಗಳಿದ್ದರೂ, ಅವುಗಳ ಬಗ್ಗೆ ಚಕಾರವೆತ್ತದೆ ಸಲುಗೆಯ, ಅಪಚಾರದ ಮಾತುಗಳನ್ನೇ ಆಡುತ್ತೇವೆ. ಒಂದು ವಿಧವಾದ ವಿಘ್ನಸಂತೋಷಿಗಳೇ ಆಗಿಬಿಡುತ್ತಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ, ಪ್ರತಿಯೊಂದು ಘಟನೆ, ಯೋಜನೆ, ಕಾರ್ಯದಲ್ಲೂ ಒಳಿತು-ಕೆಡುಕು ಎರಡೂ ಹಗಲು-ರಾತ್ರಿಯಂತೆ ಸೇರಿಕೊಂಡೇ ಇರುತ್ತವೆ ಎಂಬ ಅರಿವಿದ್ದರೂ, ನಕಾರಾತ್ಮಕ ಅಂಶಗಳನ್ನೇ ಗುರುತಿಸಿ ಆಡುವುದರಿಂದ ಸುಖಕ್ಕಿಂತ ದುಃಖದ ಕ್ಷಣಗಳೇ ವಿಜೃಂಭಿಸುತ್ತವೆ.

ನಕಾರಾತ್ಮಕ ಚಿಂತನೆ ಸಂತೋಷಕ್ಕೆ ಅಡ್ಡಿ: ಒಂದು ಕುಟುಂಬದವರು ಉತ್ತರಭಾರತದ ತೀರ್ಥಕ್ಷೇತ್ರಗಳ ಪ್ರವಾಸಕ್ಕೆ ಹೋಗಿಬಂದರು. ಯಾತ್ರೆ ಮುಗಿಸಿ ಬಂದಾಗ, ಎಲ್ಲರೂ ಕೇಳುವ ಹಾಗೆ ‘ಯಾತ್ರೆ ಹೇಗಾಯಿತು?’ ಎಂದು ಕೇಳಲಾಯಿತು. ಅಂದರೆ ಪ್ರವಾಸದ ಸಮಯದಲ್ಲಿ ನೋಡಿದ ಉತ್ತಮ ವಿಚಾರಗಳು, ದೇವರ ದರ್ಶನ, ಮನಸ್ಸಿಗೆ ಮುದಕೊಟ್ಟು, ಸಂತಸ ತಂದುಕೊಟ್ಟ ವಿಚಾರಗಳು, ಆಕರ್ಷಣೀಯ ಮತ್ತು ಕುತೂಹಲಕಾರಿ ದೃಶ್ಯಗಳು ಯಾವುವೆಂದು ತಿಳಿದುಕೊಳ್ಳುವ ಆಸಕ್ತಿಯಿಂದ ಈ ಪ್ರಶ್ನೆಯನ್ನು ಕೇಳಿರುತ್ತಾರೆ. ಆದರೆ ಪ್ರವಾಸ ಮುಗಿಸಿ ಬಂದವರು, ಅದರ ನಕಾರಾತ್ಮಕ ಅಂಶಗಳನ್ನೇ ಮೊದಲು ಹೇಳಲು ಪ್ರಾರಂಭಿಸಿದರು- ‘ಅಯ್ಯೋ! ಅದೇನು ಕೇಳುತ್ತೀರಿ! ಪ್ರವಾಸದ ಮಧ್ಯೆ ನಮ್ಮ ಕಾರು ಕೆಟ್ಟುಹೋಯಿತು. ಒಂದು ಕಡೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಇನ್ನೊಂದು ಕಡೆ ದೇವರ ದರ್ಶನ ಸರಿಯಾಗಿ ಆಗಲಿಲ್ಲ್ಲ- ಹೀಗೆ ಯಾತ್ರೆಯಲ್ಲಿ ಅನೇಕ ಉತ್ತಮ ಅನುಭವಗಳಿದ್ದರೂ, ಅದನ್ನು ಬಿಟ್ಟು ಅಲ್ಪಸ್ವಲ್ಪ ತೊಂದರೆ ಅನುಭವಿಸಿದ್ದನ್ನೇ ಮತ್ತೆಮತ್ತೆ ವಿಸ್ತಾರವಾಗಿ ಹೇಳಿದರು. ‘ಇದೆಲ್ಲ ಬಿಡಿ, ನೀವು ಪ್ರವಾಸ ಹೋದ ಸ್ಥಳ ಹೇಗಿತ್ತು?’ ಎಂದು ಪುನಃ ಕೇಳಿದಾಗ ‘ಅದೋ! ಪರವಾಗಿಲ್ಲ, ಚೆನ್ನಾಗಿಯೇ ಇತ್ತು’ ಎಂದಿಷ್ಟೇ ಹೇಳಿ ಮುಗಿಸಿಬಿಟ್ಟರು. 10-15 ದಿನದ ಪ್ರವಾಸದ ಸುಂದರ ದೃಶ್ಯಗಳನ್ನು ಒಂದೆರಡು ಕ್ಷಣದ ಅನನುಕೂಲವು ನುಂಗಿಬಿಟ್ಟಿತು.

ಈ ಘಟನೆಯನ್ನು ಅವಲೋಕಿಸಿದಾಗ, ಯಾತ್ರೆಗೆ ಹೋದವರಿಗೆ ಆದ ಸಣ್ಣಪುಟ್ಟ ಅನನುಕೂಲಗಳೇ ಇಡೀ ಯಾತ್ರೆಯ ಸಂತೋಷದ ಕ್ಷಣಗಳನ್ನು ಮರೆಸಿಬಿಟ್ಟಿತ್ತು, ಇದು ಮನುಷ್ಯನ ಸಹಜ ಸ್ವಭಾವವೇ ಆದರೂ, ಆ ರೀತಿಯ ಚಿಂತನೆಯನ್ನು ಬದಲಾಯಿಸಿಕೊಳ್ಳಲೇಬೇಕು. ಏಕೆಂದರೆ ‘ಸಂತೋಷ’ ನಮ್ಮ ಗುರಿಯಾದ್ದರಿಂದ, ಈ ರೀತಿಯ ಋಣಾತ್ಮಕ ಚಿಂತನೆ ನಮ್ಮ ಸಂತೋಷಕ್ಕೆ ಅಡ್ಡಿಯಾದುದರಿಂದ, ಋಣಾತ್ಮಕವಾಗಿ ಮಾತನಾಡುವ ಸ್ವಭಾವವನ್ನು ಬದಲಾಯಿಸಿಕೊಳ್ಳಲೇಬೇಕು.

ಒಂದು ಗ್ಲಾಸ್​ನಲ್ಲಿ ಅರ್ಧಭಾಗ ನೀರನ್ನು ತುಂಬಿಸಿ ಇಡಲಾಗಿತ್ತು. ಅದನ್ನು ನೋಡಿದ ಕೆಲವರು ‘ಅರ್ಧಗ್ಲಾಸ್ ಖಾಲಿಯಾಗಿದೆ’ ಎಂದರಂತೆ. ಇನ್ನು ಕೆಲವರು ‘ಅರ್ಧಗ್ಲಾಸ್​ನಷ್ಟು ನೀರು ತುಂಬಿಕೊಂಡಿದೆ’ ಎಂದು ಹೇಳಿದರು. ಇಲ್ಲಿ ಇಬ್ಬರ ಅಭಿಪ್ರಾಯವೂ ಸರಿ. ಆದರೆ ಒಬ್ಬರದು ಋಣಾತ್ಮಕ ಚಿಂತನೆ; ಏಕೆಂದರೆ ಅವರಿಗೆ ‘ಇಲ್ಲ’ವೆಂಬುದೇ ಎದ್ದು ತೋರುತ್ತದೆ. ಇನ್ನೊಬ್ಬರದು ಧನಾತ್ಮಕ ಚಿಂತನೆ; ಅವರಿಗೆ ‘ಇಲ್ಲ’ ಎನ್ನುವುದಕ್ಕಿಂತ ಇರುವ ಭಾಗ ಮುಖ್ಯ. ನಾವು ಸುತ್ತಮುತ್ತಲ ಸಮಾಜವನ್ನು ಗುರುತಿಸುವಾಗ ಮತ್ತು ನಮ್ಮ ಉದ್ಯೋಗದ ಸಂದರ್ಭಗಳಲ್ಲಿ ಈ ಧನಾತ್ಮಕ ಅಂಶ ಬಹಳ ಮುಖ್ಯವಾಗುತ್ತದೆ.

ಕೃಷಿಕರು ನನ್ನನ್ನು ಭೇಟಿಯಾಗಲು ಆಗಮಿಸುತ್ತಾರೆ. ಹಲವರು ತಾವು ಬೆಳೆದ ಮೊದಲ ಫಸಲನ್ನು ಶ್ರೀ ಸ್ವಾಮಿಗೆ ಅರ್ಪಿಸುತ್ತಾರೆ. ನಾನು ಸ್ವಾಭಾವಿಕವಾಗಿಯೇ ‘ಈ ವರ್ಷ ಬೆಳೆ ಹೇಗಿತ್ತು?’ ಎಂಬ ಪ್ರಶ್ನೆ ಕೇಳುತ್ತೇನೆ. ಆಗ ಕೆಲವರು ‘ಈ ವರ್ಷ ಮಳೆ ಉತ್ತಮವಾಗಿತ್ತು. ಎಲ್ಲೊ ಸ್ವಲ್ಪಭಾಗ ಅತಿವೃಷ್ಟಿಯಿಂದ ಹಾಳಾಗಿದೆ. ಅಕಾಲದಲ್ಲಿ ಅಧಿಕ ಮಳೆಯಾದ್ದರಿಂದ ಅಡಿಕೆಗೆ ರೋಗಬಂತು. ಆದರೂ ಕಳೆದ ವರ್ಷಗಳಿಗಿಂತ ಉತ್ತಮ ಫಸಲು ದೊರಕಿದೆ’ ಎಂದು ಧನಾತ್ಮಕ ಚಿಂತನೆಯನ್ನು ಮುಂದಿಡುತ್ತಾರೆ. ಇವರು ಕೃಷಿಯಲ್ಲಿರುವ ಲಾಭ-ನಷ್ಟಗಳನ್ನು ಸಮಚಿತ್ತದಿಂದ ಸ್ವೀಕರಿಸಿ, ನಷ್ಟಕ್ಕಿಂತ ಹೆಚ್ಚಿಗೆ ದೊರೆತ ಲಾಭದಿಂದ ಸಂತೋಷಗೊಂಡವರು. ನಮ್ಮನ್ನು ನಾವು ಅರಿಯೋಣ: ಒಂದು ಊರಿನಲ್ಲಿ ಒಬ್ಬ ಧನಿಕನಿದ್ದ. ವ್ಯಾಪಾರದಲ್ಲಿ ನಷ್ಟವುಂಟಾಗಿ ದರಿದ್ರನಾಗಿಬಿಟ್ಟ. ಜೀವನದಲ್ಲಿ ಜಿಗುಪ್ಸೆ ಬಂದು ಆತ್ಮಹತ್ಯೆಯೊಂದೇ ದಾರಿಯೆಂದು ಚಿಂತಿಸಿ ಅದಕ್ಕೆ ಉದ್ಯುಕ್ತನಾದ. ನದಿದಂಡೆಯ ಮೇಲೆ ನಿಂತು ನದಿಗೆ ಹಾರಬೇಕೆಂದೆಣಿಸಿದಾಗ ‘ಎಲೈ, ನಿನ್ನ ಎರಡೂ ಕಣ್ಣನ್ನು ನೀಡಿದರೆ 2 ಲಕ್ಷ ರೂಪಾಯಿಗಳನ್ನು ನೀಡುತ್ತೇನೆ’ ಎಂಬ ಅಶರೀರವಾಣಿಯೊಂದು ಅವನಿಗೆ ಕೇಳಿತು. ತನ್ನಲ್ಲಿ ಅಷ್ಟು ಬೆಲೆಬಾಳುವ ವಸ್ತುವಿದೆಯೆಂದು ಅವನಿಗೆ ಗೊತ್ತೇ ಇರಲಿಲ್ಲ. ಹೀಗೆಯೇ ಶರೀರದ ಒಂದೊಂದು ಅವಯವಕ್ಕೂ ಇರುವ ಬೆಲೆಯನ್ನೆಣಿಸಿದಾಗ ಅವನಿಗೇ ಆಶ್ಚರ್ಯವಾಯಿತು. ಇಂತಹ ಅಮೂಲ್ಯ ಶರೀರದಿಂದ ಎಷ್ಟು ಸಂಪತ್ತನ್ನು ಬೇಕಾದರೂ ಸಂಗ್ರಹಿಸಬಹುದೆಂಬ ಅರಿವು ಅವನಿಗೆ ಉಂಟಾಯಿತು. ಆತ್ಮಹತ್ಯೆಯ ಆಲೋಚನೆ ಬಿಟ್ಟು ಪುನಃ ದುಡಿದು ಶ್ರೀಮಂತನಾದ. ಇದು ಧನಾತ್ಮಕ ಚಿಂತನೆಯ ಫಲ.

ಹಲವರು ತಮ್ಮ ತಮ್ಮ ಉದ್ಯೋಗಕ್ಷೇತ್ರದಲ್ಲಿನ ಸಮಸ್ಯೆಗಳನ್ನೇ ಕಲ್ಪನೆ ಮಾಡಿಕೊಂಡು, ಸಮಸ್ಯೆಯಲ್ಲೇ ಮುಳುಗಿಕೊಂಡು ದುಡಿಯುತ್ತಾರೆ. ಅಂಥವರಿಗೆ ಅವರ ವೃತ್ತಿ ಸಂತೋಷವನ್ನು ನೀಡುವುದಿಲ್ಲ. ಆದರೆ ಇದರಲ್ಲೂ ಧನಾತ್ಮಕವಾಗಿ ಚಿಂತಿಸುವವರಿದ್ದಾರೆ. ‘ಸಮಸ್ಯೆಯೆಂಬುದು ಜೀವನದ ಭಾಗ; ಅದನ್ನು ಎದುರಿಸಿ, ಸಂತೋಷದಿಂದ ಬದುಕುತ್ತೇನೆ’ ಎಂಬ ಸಂಕಲ್ಪ ಹಲವರಲ್ಲಿದೆ. ಮಾನವ ಇತಿಹಾಸದ ಕಳೆದ 5000 ವರ್ಷಗಳನ್ನು ಅವಲೋಕಿಸಿದರೂ, ಯಾವತ್ತೂ ಕೃಷಿಯಲ್ಲಿ ನೂರಕ್ಕೆ ನೂರರಷ್ಟು ಫಸಲು ಕೈಗೆ ಸಿಗಲಿಲ್ಲ. ಶೇ. 20ರಷ್ಟು ಬೆಳೆ ಹವಾಮಾನದಿಂದ, ರೋಗದಿಂದ, ಬೀಜದ ಗುಣಮಟ್ಟದಿಂದ ಅಥವಾ ಕ್ರಿಮಿಕೀಟಗಳಿಂದ ನಷ್ಟವಾಗಬಹುದು. ಆದರೆ ಆ ಲಾಭ-ಹಾನಿಗಳನ್ನು ಸ್ವೀಕಾರಮಾಡುವ ಈ ದೃಷ್ಟಿಕೋನದ ಮೇಲೆ ಕೃಷಿಕನ ಸುಖ-ಸಂತೋಷ ಅವಲಂಬಿತವಾಗಿದೆ. ನಾವು ಬಯಸುವ ಸುಖ-ಶಾಂತಿಗಳು ಹೊರಗಿನ ವಸ್ತುಗಳಲ್ಲಿ ಇರುವುದಿಲ್ಲ. ಬದಲಾಗಿ ವೃತ್ತಿಯನ್ನು, ಘಟನೆಯನ್ನು ನಾವು ಹೇಗೆ ನೋಡುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.

ಗುಣಗಳನ್ನು ಗುರುತಿಸೋಣ: ನಮ್ಮ ಸಮಾಜದಲ್ಲಿ, ಇತರರಲ್ಲಿನ ದೋಷಗಳನ್ನು ಗಮನಿಸುವವರು ಸಾಕಷ್ಟಿದ್ದಾರೆ; ತೀಕ್ಷ್ಣವಾಗಿ ಟೀಕಿಸುವವರೂ ಇದ್ದಾರೆ. ಮನುಷ್ಯರಲ್ಲಿ ದೋಷಗಳೂ ಇರುತ್ತವೆ, ಗುಣಗಳೂ ಇರುತ್ತವೆ. ದೋಷಗಳನ್ನು ಮಾತ್ರ ಗ್ರಹಿಸಿ, ಗುಣಗಳನ್ನು ಗಮನಿಸದೇ ಇರುವುದು ಅಷ್ಟು ಸೂಕ್ತವಲ್ಲ. ನೊಣಗಳು ದುರ್ಗಂಧವನ್ನು ಮಾತ್ರ ಅರಸಿಕೊಂಡು ಹೋಗಿ, ಸುಗಂಧವನ್ನು ನಿರ್ಲಕ್ಷಿಸಿದಂತೆ ಮನುಷ್ಯನ ಸ್ವಭಾವ ಇರಬಾರದು. ಒಮ್ಮೆ ಗೌತಮ ಬುದ್ಧನ ಬಳಿ ಶಿಷ್ಯನೊಬ್ಬನು ಹೀಗೆಂದು ದೂರಿಕೊಂಡ- ‘ಸ್ವಾಮಿ, ಅಲ್ಲೊಬ್ಬ ದುಷ್ಟ ವ್ಯಕ್ತಿಯಿದ್ದಾನೆ. ಬರೇ ಕೆಟ್ಟ ಅಯೋಗ್ಯ ಮನುಷ್ಯ’ ಎಂದು ಸಿಟ್ಟಿನಿಂದ ಮಾತನಾಡುವಾಗ ಆ ಶಿಷ್ಯನ ಮುಖ ಕೆಂಪಾಗಿಬಿಟ್ಟಿತು. ಆಗ ಬುದ್ಧ ಮುಗುಳ್ನಗುತ್ತ ನುಡಿದ ‘ಯಾರಾದರೂ ಸಿಟ್ಟುಗೊಂಡಾಗ ನನಗೆ ನಗು ಬರುತ್ತದೆ’. ಶಿಷ್ಯ ‘ಅದೇಕೆ?’ ಎಂದು ಪ್ರಶ್ನಿಸಿದಾಗ ಬುದ್ಧ ನೀಡಿದ ಉತ್ತರ ಹೃದಯರ್ಸ³ಯಾಗಿತ್ತು- ‘ಎಲೈ ಶಿಷ್ಯನೇ, ಇನ್ನೊಬ್ಬನು ತಪ್ಪು ಮಾಡಿದಾಗ, ನೀನೇಕೆ ನಿನಗೇ ಶಿಕ್ಷೆ ನೀಡಿಕೊಳ್ಳುತ್ತಿದ್ದೀ? ನೋಡಯ್ಯಾ, ಆ ಮನುಷ್ಯ ತಪ್ಪುಗಾರ. ಆದರೆ ಅವನ ಬಗ್ಗೆ ಸಿಟ್ಟುಗೊಂಡ ನಿನ್ನ ಮುಖ ಸಿಟ್ಟಿನಿಂದ ಕೆಂಪಾಗಿದೆ. ಇದು ನೀನು ನಿನಗೇ ಕೊಡುವ ಶಿಕ್ಷೆ. ಇದನ್ನು ಕಂಡು ನನಗೆ ನಗೆಯುಕ್ಕಿ ಬರುತ್ತಿದೆ!’. ಈ ಮಾತು ಕೇಳಿದಾಗ ಶಿಷ್ಯ ನಾಚಿಕೊಂಡು ತಲೆ ತಗ್ಗಿಸಿದ.

ಇದು ಕೆಲವು ಜನರ ಸ್ವಭಾವ. ಬೇರೆಯವರ ತಪ್ಪುಗಳನ್ನು, ಕುಂದುಕೊರತೆಗಳನ್ನು ಕಂಡಾಗ ನಾವು ಅಸಮಾಧಾನ ವ್ಯಕ್ತಪಡಿಸುತ್ತೇವೆ. ಅಸಂತೋಷದಿಂದ ನಮ್ಮನ್ನು ಏಕೆ ಹೀಗೆ ದಂಡಿಸಿಕೊಳ್ಳಬೇಕು? ದೋಷಮಯ ಜಗತ್ತೆಲ್ಲವನ್ನೂ ತಿದ್ದಲು ನಮ್ಮ ಆಯುಷ್ಯವೇ ಸಾಕಾಗಲಾರದು. ಇತರರನ್ನು ತಿದ್ದುವ ಬದಲು, ನಮ್ಮ ದೋಷಗಳನ್ನು ನಾವೇ ಗುರುತಿಸಿ, ತಿದ್ದಿಕೊಳ್ಳಲು ಪ್ರಯತ್ನಿಸಬೇಕು.

ಕಷ್ಟ-ನಷ್ಟಗಳ ನಡುವೆಯೂ ಆನಂದವಿದೆ: ಪ್ರತಿಯೊಂದು ವಸ್ತುವಿನಲ್ಲೂ ಗುಣ-ದೋಷಗಳೆರಡೂ ಇರುತ್ತದೆ. ಲೋಕಕ್ಕೆ ತಂಪು ಬೆಳದಿಂಗಳು ನೀಡುವ ಚಂದ್ರನಲ್ಲೂ ಕಪ್ಪು ಕಲೆಯಿದೆ. ಜೀವರಾಶಿಗಳಿಗೆ ಚೈತನ್ಯ ನೀಡುವ ಸೂರ್ಯನಲ್ಲಿ ಪ್ರಖರತೆಯಿದೆ. ಸಾಕ್ಷಾತ್ ಶಿವನಲ್ಲೇ ಗಂಗೆಯೂ ಇದ್ದಾಳೆ, ಹಾಲಾಹಲವೂ ಇದೆ. ಹೀಗಿರುವಾಗ ನಮ್ಮಂಥ ಸಾಮಾನ್ಯ ಮಾನವರಲ್ಲಿ ಗುಣ-ಅವಗುಣ ಇರುವುದರಲ್ಲಿ ಅಚ್ಚರಿಯಿಲ್ಲ. ನಮ್ಮ ಕೆಲಸದಲ್ಲಿ ಲಾಭ-ನಷ್ಟ ಇದ್ದದ್ದೇ. ಇವೆಲ್ಲದರ ನಡುವೆಯೂ ನಾವು ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ಒಂದು ಸುಭಾಷಿತ ಹೀಗೆ ಹೇಳುತ್ತದೆ-

ಗುಣದೋಷೌ ಬುಧೋ ಗೃಹ್ಣನ್ ಇಂದುಕ್ಷೇಡಾವಿವೇಶ್ವರಃ |

ಶಿರಸಾ ಧಾರ್ಯತೇ ಪೂರ್ವಂ ಪರಂ ಕಂಠೇ ನಿಯಚ್ಛತಿ ||

ಶಿವನು ಚಂದ್ರನಕಲೆ ಮತ್ತು ವಿಷವನ್ನು (ಹಾಲಾಹಲ) ಸ್ವೀಕರಿಸಿದಂತೆ, ಬುದ್ಧಿವಂತನಾದವನು ವಸ್ತುವಿನಲ್ಲಿರುವ ಒಳಿತು (ಗುಣ) ಕೆಡುಕು (ದೋಷ) ಗಳೆರಡನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು. ಶಿವನು ಒಳಿತಿನ ಸಂಕೇತವಾದ ಚಂದ್ರಬಿಂಬವನ್ನು ತಲೆಯಲ್ಲಿ ಧರಿಸಿ ಲೋಕಕ್ಕೆ ತಂಪೆರೆಯುತ್ತಿದ್ದಾನೆ. ಹಾಗೆಯೇ ಕೆಡುಕಿನ ಸಂಕೇತವಾದ ಹಾಲಾಹಲವನ್ನು ಕಂಠದಲ್ಲೇ ಮುಚ್ಚಿಟ್ಟು ನೀಲಕಂಠನಾಗಿದ್ದಾನೆ. ಹಾಗೆಯೇ ನಾವೂ ಒಳಿತನ್ನು- ಧನಾತ್ಮಕ ಅಂಶವನ್ನು ಲೋಕಮುಖಕ್ಕೆ ತೋರಿಸಬೇಕು. ಕೆಡುಕನ್ನು- ಋಣಾತ್ಮಕ ಅಂಶವನ್ನು ಪ್ರಚುರಪಡಿಸಬಾರದು. ಅದನ್ನೇ ಎತ್ತಿ ಮಾತನಾಡಬಾರದು. ಆಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ.

ಸಮಸ್ಯೆಗಳನ್ನೇ ಅಥವಾ ಇನ್ನೊಬ್ಬರ ದೋಷವನ್ನೇ ಹೇಳುವ ಸ್ವಭಾವದವರು ಕ್ರಮೇಣ ಮನೋರೋಗಿಗಳಾಗುತ್ತಾರೆ. ತಮ್ಮ ವೃತ್ತಿಯಲ್ಲಿ ಮತ್ತು ವ್ಯವಹಾರಗಳಲ್ಲಿ ದುಃಖಿಗಳಾಗಿಯೇ ಇರುತ್ತಾರೆ. ಎಲ್ಲ ಕಾಯಿಲೆಗಳೂ ಆರಂಭವಾಗುವುದು ಮನಸ್ಸಿನಿಂದ. ಇದರಿಂದ ದೈಹಿಕ ಮತ್ತು ಮಾನಸಿಕ ಅಸಮತೋಲನ ಉಂಟಾಗುತ್ತದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದಾರಂಭಿಸಿ ಹೃದಯಾಘಾತದವರೆಗೆ ಎಲ್ಲ ರೀತಿಯ ಕಾಯಿಲೆಗಳೂ ಶರೀರಕ್ಕೆ ಅಂಟಿಕೊಳ್ಳುತ್ತವೆ. ಆದ್ದರಿಂದ ಪರರ ನಿಂದಿಸಬೇಡ, ಹುಸಿಯ ನುಡಿಯಲು ಬೇಡ. ಇರುವ ಭಾಗ್ಯವ ನೆನೆದು, ಬಾರೆನೆಂಬುದನು ಬಿಡು. ಆಗ ಸುಖ ಸಂತೋಷ ನಿನ್ನ ಅಧೀನದಲ್ಲಿರುತ್ತದೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)