ಭಕ್ತಿ ಮತ್ತು ಶಕ್ತಿಯ ಪ್ರತೀಕದ ದೇವಮಂದಿರಗಳು

ಇಂದು ಜನರಲ್ಲಿ ಧಾರ್ವಿುಕ ಜಾಗೃತಿಯ ಜತೆಜತೆಗೆ ಪರಿಸರ ಜಾಗೃತಿಯೂ ಉಂಟಾಗುತ್ತಿರುವುದು ಸಂತೋಷದ ವಿಷಯ. ದೇವಾಲಯ ಮತ್ತು ಅದರ ಪರಿಸರವನ್ನು ನಿರ್ಮಲವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ. ಈ ಜಾಗೃತಿ ಇನ್ನೂ ತೀವ್ರವಾಗಬೇಕಾಗಿದೆ. ಭಗವಂತನ ಆವಾಸಸ್ಥಾನವಾದ ದೇವಾಲಯಗಳನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ನಮ್ಮೊಳಗಿರುವ ಆತ್ಮತತ್ತ್ವ-ಭಗವತ್ತತ್ತ್ವ ಜಾಗೃತಗೊಳ್ಳುತ್ತವೆ.

ದೇಶದೆಲ್ಲೆಡೆಯ ಕ್ರೈಸ್ತ ಬಂಧುಗಳು ಕ್ರಿಸ್​ವುಸ್ ಹಬ್ಬವನ್ನು ಸಂಭ್ರಮದಿಂದಲೂ ವೈವಿಧ್ಯಮಯವಾಗಿಯೂ ಆಚರಿಸಿದ್ದಾರೆ. ಅವರೆಲ್ಲರಿಗೂ ಕ್ರಿಸ್​ವುಸ್ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆ. ಈ ಹಬ್ಬವು ಸುಖ-ಶಾಂತಿ-ನೆಮ್ಮದಿಯನ್ನು ತರಲೆಂದು ಪ್ರಾರ್ಥಿಸುತ್ತೇನೆ.

ನಾವು ನಮ್ಮ ಸಂತರು, ಮಹಾತ್ಮರು, ಆಚಾರ್ಯರುಗಳ ಜನ್ಮದಿನಗಳನ್ನು (ಜಯಂತಿಯನ್ನು) ಆಚರಿಸಿ ಅವರನ್ನು ಗೌರವಿಸುತ್ತೇವೆ. ಅವರು ಮಾಡಿದ ಮಹದುಪಕಾರವನ್ನು ನೆನಪಿಸಿಕೊಳ್ಳುತ್ತೇವೆ. ಕೃಷ್ಣ ಜನ್ಮಾಷ್ಟಮಿ, ರಾಮನವಮಿ, ಗೀತಾ ಜಯಂತಿ ಮೊದಲಾದ ಜಯಂತಿಗಳ ಆಚರಣೆಯ ಮೂಲಕ ಅವರ ಆಶೀರ್ವಾದಗಳನ್ನು ಪಡೆಯುತ್ತೇವೆ. ಅದೇ ರೀತಿ ದೀಪಾವಳಿ, ನವರಾತ್ರಿ ಮೊದಲಾದ ಹಬ್ಬಗಳ ಮೂಲಕ, ದುಷ್ಟಸಂಹಾರಕ್ಕಾಗಿ ಜನ್ಮತಳೆದ ವಿಭೂತಿ ಪುರುಷರ ಜಯಂತಿಗಳನ್ನು ಆಚರಿಸುತ್ತೇವೆ. ಆರಾಧನೆಗಳನ್ನು ಮಾಡುತ್ತೇವೆ. ಶ್ರದ್ಧಾಳುಗಳೆಲ್ಲ ಒಂದೆಡೆ ಸೇರಿ ಸಂತೋಷದ ಕ್ಷಣಗಳನ್ನು ಹೆಚ್ಚಿಸಿಕೊಂಡು ಹಂಚಿಕೊಳ್ಳುತ್ತೇವೆ. ನಮ್ಮ ಹಾಗೆ ಬೇರೆ ಬೇರೆ ಧರ್ಮದವರೂ ತಮ್ಮ ಧರ್ಮಸಂಸ್ಥಾಪಕರ ಮತ್ತು ಧರ್ಮಪ್ರಚಾರಕರ ಜನ್ಮದಿನಗಳನ್ನು ಆಚರಿಸುತ್ತಾರೆ. ಇಸ್ಲಾಂ ಧರ್ಮದವರು ಮಹಮ್ಮದ್ ಪೈಗಂಬರರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಪಾವಪುರಿಯಲ್ಲಿ ಮಹಾವೀರರು ಜನಿಸಿದ ದಿನವನ್ನು ಮಹಾವೀರ ತೀರ್ಥಂಕರರ ಜನ್ಮದಿನವನ್ನಾಗಿ ಜೈನರು ಆಚರಿಸುತ್ತಾರೆ. ಅದೇ ರೀತಿ, ಕ್ರಿಶ್ಚಿಯನ್ನರು ಯೇಸುಕ್ರಿಸ್ತನ ಜಯಂತಿಯಾದ ಕ್ರಿಸ್​ವುಸ್ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ.

ಬಂಧುತ್ವ ಬೆಸೆಯುವ ಹಬ್ಬ: ಯೇಸುಕ್ರಿಸ್ತನ ಜನನ, ಬೆಳವಣಿಗೆ, ಆತ ಧರ್ಮಚಿಂತಕನಾದದ್ದು, ಪ್ರವಾದಿಯಾಗಿ ಲೋಕಕ್ಕೆ ಧರ್ಮವನ್ನು ಬೋಧಿಸಿದ್ದು, ಲೋಕದ ದುಃಖಗಳನ್ನೆಲ್ಲ ತಾನೇ ಸ್ವೀಕರಿಸಿ, ಸುಖಗಳನ್ನು ಜನರಿಗೆ ಕೊಡುತ್ತೇನೆಂದು ಸಂದೇಶ ಕೊಟ್ಟಿದ್ದು ನಮಗೆ ನೆನಪಿದೆ. ಜಗತ್ತಿನಲ್ಲಿರುವ ಅಸತ್ಯವನ್ನು ನಾಶಮಾಡಿ ಸತ್ಯದೆಡೆಗೆ ನಮ್ಮನ್ನು ನಡೆಸುವ, ಮೃತ್ಯುವಿನಿಂದ ಅಮೃತತ್ವದೆಡೆಗೆ ದಾರಿತೋರುವ, ನಮ್ಮ ಬಾಳಿಗೊಂದು ಅರ್ಥ ಕಲ್ಪಿಸಿರುವ ಯೇಸು ಪ್ರಭುವಿನ ಜನ್ಮದಿನವೇ ಈ ಕ್ರಿಸ್​ವುಸ್. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು, ಶತ್ರುವನ್ನೂ ದ್ವೇಷಿಸಬಾರದೆಂಬ ಸರ್ವಸಮಾನತೆಯ ಸಂದೇಶಗಳನ್ನು ಯೇಸುಕ್ರಿಸ್ತ ನೀಡಿದ್ದು ಇಂದಿಗೂ ಅತ್ಯಂತ ಸಮಯೋಚಿತವಾಗಿದೆ. ಬಡವರು, ನಿರ್ಗತಿಕರಿಗೆ ದಾನ ನೀಡುವುದರ ಮೂಲಕ ಕ್ರೈಸ್ತರು ಈ ದಿನ ಸಂತೋಷವನ್ನು ಹಂಚಿಕೊಳ್ಳುತ್ತಾರೆ.

ಕೃಷ್ಣ, ರಾಮ ಮುಂತಾದ ಅವತಾರಪುರುಷರ ಜನ್ಮದಿನಗಳನ್ನು ನಾವು ಶ್ರದ್ಧಾಭಕ್ತಿಯಿಂದ ಆಚರಿಸುವಂತೆ ಕ್ರೈಸ್ತರು ಯೇಸುವಿನ ಜನ್ಮದ ಸಂಭ್ರಮವನ್ನು ಆಚರಿಸುತ್ತಾರೆ. ಮಧ್ಯರಾತ್ರಿಯಲ್ಲಿ ಯೇಸುವಿನ ಜನನವಾದುದರಿಂದ ಮಧ್ಯರಾತ್ರಿಯಲ್ಲೇ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಬಲಿಪೂಜೆ, ಕ್ರಿಸ್​ವುಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜಾಗರಣೆ ಮಾಡುತ್ತಾರೆ. ಸಿಂಗರಿಸಲ್ಪಟ್ಟ ಗೋದಲಿಯಲ್ಲಿ ಬಾಲಯೇಸುವಿನ ಮೂರ್ತಿಯನ್ನಿಟ್ಟು ಸ್ತುತಿ-ಜೋಗುಳದ ಮೂಲಕ ಆರಾಧಿಸುತ್ತಾರೆ. ನಮ್ಮ ಹಿಂದೂಹಬ್ಬಗಳ ಆಚರಣೆ ಕ್ರಮದಲ್ಲಿಯೂ ಇಂತಹದ್ದೇ ರೀತಿಯನ್ನು ಕಾಣುತ್ತೇವೆ.

ದೇಶಸುತ್ತಿದ ಅನುಭವ: ನಾನು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ದೇಶದಲ್ಲಿ ಅಥವಾ ವಿದೇಶದಲ್ಲಿ ಪ್ರವಾಸ ಮಾಡುತ್ತೇನೆ. ದೇಶಸುತ್ತುವಾಗಿನ ಕ್ಷಣಗಳು ಜೀವನಾನುಭವವನ್ನು ಮತ್ತು ಹೊಸ ಸ್ಪೂರ್ತಿಯನ್ನು ನೀಡುತ್ತವೆ. ವಿದೇಶಗಳಿಗೆ ಹೋದಾಗ ಅನೇಕ ಚರ್ಚುಗಳಿಗೆ ಭೇಟಿನೀಡಿದ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಯುರೋಪ್, ಜರ್ಮನಿ, ರಷ್ಯಾ ಮುಂತಾದ ದೇಶಗಳಿಗೆ ಹೋದಾಗ ಬೇರೆ ಬೇರೆ ಸ್ಥಳಗಳನ್ನು ಭೇಟಿಮಾಡುವಂತೆ ಅದ್ಭುತಗಾತ್ರದ ಚರ್ಚ್​ಗಳನ್ನು ಸಂದರ್ಶಿಸಿದ್ದೇನೆ. ವಿಶಿಷ್ಟ ಕೆತ್ತನೆಯ, ವಿನ್ಯಾಸದ, ಶಿಲ್ಪಕಲೆಯ ಮತ್ತು ಚಿನ್ನಲೇಪನದ ದೊಡ್ಡ ದೊಡ್ಡ ಚರ್ಚ್​ಗಳನ್ನು ಯುರೋಪ್​ನಲ್ಲಿ ಕಂಡಿದ್ದೇನೆ. ಎಷ್ಟೋ ಚರ್ಚ್​ಗಳಲ್ಲಿ ಚಿತ್ರಕಲೆಗೆ ಪ್ರಾಶಸ್ತ್ಯ ನೀಡಿದ್ದಾರೆ. ಯೇಸುಕ್ರಿಸ್ತನ ಜನನದಿಂದ ಅಂತ್ಯದವರೆಗಿನ ಮನಮೋಹಕ ಚಿತ್ರಗಳನ್ನು 30ರಿಂದ 40 ಅಡಿ ಎತ್ತರದ ಮೇಲ್ಛಾವಣಿಯ ಅಡಿಯಲ್ಲಿ ಚಿತ್ರಿಸಿದ್ದಾರೆ. ವಿಶ್ವವಿಖ್ಯಾತ ಚಿತ್ರಕಲೆಗಳೆಲ್ಲ ಅಲ್ಲಿ ಕಂಡುಬರುತ್ತವೆ. ಇಂತಹ ಕೆತ್ತನೆಗಳಿಂದಲೇ ಮೈಕಲ್ ಏಂಜೆಲೋ ಮೊದಲಾದವರು ವಿಶ್ವವಿಖ್ಯಾತರಾಗಿದ್ದಾರೆ. ಪ್ರಾರ್ಥನಾ ಮಂದಿರಗಳ ರಚನೆ ಮತ್ತು ವಿನ್ಯಾಸಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದು ಕಂಡುಬರುತ್ತದೆ. ಚರ್ಚುಗಳಿಗೆ ಹೋದರೆ ಕ್ರೈಸ್ತಧರ್ಮದ ಪ್ರಧಾನತತ್ತ್ವಗಳ ಪರಿಚಯವಾಗುತ್ತದೆ.

ರಷ್ಯಾಕ್ಕೆ ಹೋದಾಗ ನನಗೆ ಅದ್ಭುತ ಮತ್ತು ಆಕರ್ಷಣೀಯ ರ್ಚಚಿನ ಕಟ್ಟಡಗಳ ಅನುಭವವಾಯಿತು. ಅಲ್ಲಿ ಒಂದಕ್ಕಿಂತ ಒಂದು ದೊಡ್ಡಗಾತ್ರದ ಚರ್ಚುಗಳು ಇವೆ. ವಿಶಾಲವಾದ ಸ್ಥಳ, ಎತ್ತರದ ಶಿಖರಗಳು, ಪ್ರಶಾಂತ ವಾತಾವರಣ ಅಲ್ಲಿ ಕಾಣಿಸುತ್ತಿತ್ತು. ಒಳಗಡೆ ಕಂಬಗಳಿಗೆ ಬಳಸಿರುವ ಶಿಲೆಗಳು ಮನಮೋಹಕವಾಗಿವೆ. ನಾವು ಬೆರಳಿಗೆ ಹಾಕುವ ಉಂಗುರಗಳಲ್ಲಿ ಹರಳುಗಳನ್ನು ಹುದುಗಿಸುತ್ತೇವಲ್ಲ, ಅಂತಹ ಹರಳುಶಿಲೆಗಳಿಂದ ಸುಮಾರು 20 ಅಡಿ ಎತ್ತರ ಮತ್ತು 4 ಅಡಿ ಸುತ್ತಳತೆಯ ಕಂಬಗಳನ್ನು ಮಾಡಿದ್ದರು. ಬಹಳಷ್ಟು ಕಡೆ ಚಿನ್ನದ ಲೇಪನವೂ ಕಂಡುಬರುತ್ತದೆ. ವಿವಿಧ ವಿನ್ಯಾಸ ಮತ್ತು ಗಾತ್ರದ ಗಂಟೆಗಳು, ವೈವಿಧ್ಯಮಯವಾದ ಸಂಗೀತ ಸಾಧನಗಳಿವೆ. 10ಗಿ20 ಅಡಿಯಷ್ಟು ವಿಶಾಲವಾದ, ಪಿಯಾನೊ ತರಹ ನುಡಿಸಬಹುದಾದ ಹಾಗೂ ಪ್ರತಿಧ್ವನಿಯಿಲ್ಲದೇ ಸಂಗೀತವನ್ನು ಅಂದರೆ ಪ್ರಾರ್ಥನೆಯನ್ನು ಆನಂದಿಸುವ ವ್ಯವಸ್ಥೆಯಿದೆ. ಇಂಥ ಬೃಹತ್ ಭವನಗಳಲ್ಲಿ ಹೊಮ್ಮುವ ಸಂಗೀತದ ಕಂಪನಗಳು ಅದ್ಭುತ. ವಿಶಿಷ್ಟರೀತಿಯಲ್ಲಿ ನೂರಾರು ಮಂದಿ ಒಂದೇ ಧ್ವನಿಯಲ್ಲಿ ಜತೆಯಾಗಿ ಹಾಡುವ ಪರಂಪರೆ ಅವರ್ಣನೀಯ. ಚರ್ಚ್​ಗಳ ಹೊರಭಾಗ ಕೂಡ ಅಷ್ಟೇ ಆಕರ್ಷಣೀಯ. ಹೊರಭಾಗದ ಗೋಡೆಗಳ ಮೇಲೆ ವಿವಿಧ ರೀತಿಯ, ಗಾತ್ರದ ಆಕರ್ಷಕ ಪೇಂಟಿಂಗ್ಸ್ ಕಂಡುಬರುತ್ತವೆ. ಇವೆಲ್ಲ ಕ್ರೈಸ್ತಧರ್ಮದ ಘಟನಾವಳಿಗಳ ಮೂಲಕ ಧರ್ಮಸಂದೇಶವನ್ನು ಸಾರುತ್ತವೆ. ಇಂತಹ ಚರ್ಚುಗಳ ನಿರ್ವಣಕ್ಕೆ ಸಾಕಷ್ಟು ಹಣ, ಸಮಯ ಮತ್ತು ಶ್ರದ್ಧೆ ಬೇಕಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ವಿದೇಶದ ಕೆಲವು ಚರ್ಚುಗಳಲ್ಲಿ ಸುಂದರವಾದ ಮರದ ಕೆತ್ತನೆಗಳಿವೆ. ಚರ್ಚ್ ಪ್ರವೇಶಿಸುವಾಗ ನಮ್ಮನ್ನು ಆಕರ್ಷಿಸುವ ಎದುರಿನ ದ್ವಾರಗಳು, ಪ್ರಾರ್ಥನೆಗಾಗಿ ಬಂದವರು ಕುಳಿತುಕೊಳ್ಳಲು ಮಾಡಿದ ವಿಶಿಷ್ಟ ಬೆಂಚುಗಳು, ಕಿಟಕಿಗಳು ನನ್ನ ಗಮನವನ್ನು ಸೆಳೆದಿವೆ. ಅವುಗಳಲ್ಲಿ ಕೂಡ ಸಂದೇಶ ನೀಡುವ ಕ್ರಿಸ್ತನ ಮತ್ತು ಅವನ ಅನುಯಾಯಿಗಳ ಕೆತ್ತನೆಗಳಿವೆ.

ವಿಶಾಲ ಮಂದಿರಗಳು: ಇಂತಹ ಪ್ರಾರ್ಥನಾ ಮಂದಿರಗಳನ್ನು ನೋಡಿದಾಗ ಕ್ರೈಸ್ತ ಬಾಂಧವರಿಗೆ ತಮ್ಮ ಶ್ರದ್ಧಾಕೇಂದ್ರಗಳ ಮೇಲಿರುವ ಗೌರವ ಎದ್ದುಕಾಣುತ್ತದೆ. ಕ್ರೈಸ್ತರು ನಿಯತವಾಗಿ ಪ್ರಾರ್ಥನಾ ಮಂದಿರಗಳಿಗೆ ಹೋಗುತ್ತಾರೆ. ಆದ್ದರಿಂದ ಅವರು ತನು-ಮನ-ಧನಗಳನ್ನು ವ್ಯಯಿಸಿ ಇಂಥ ಅದ್ಭುತವಾದ ಚರ್ಚುಗಳನ್ನು ನಿರ್ವಿುಸಿದ್ದು ಗೊತ್ತಾಗುತ್ತದೆ. ಭಾರತದಲ್ಲಿ ಕೂಡ ಇದಕ್ಕೆ ಸರಿಸಾಟಿಯಾಗಬಲ್ಲ ಚರ್ಚುಗಳಿವೆ.

ಹಿಂದೂ ದೇವಮಂದಿರಗಳೂ ಇದಕ್ಕೆ ಹೊರತಾಗಿಲ್ಲ. ವಿಶೇಷವಾಗಿ ಪ್ರಾಚೀನ ಮಂದಿರಗಳು ವೈವಿಧ್ಯಮಯ ಶಿಲ್ಪಕಲೆಗೆ ಮಡಿಲಾಗಿರುವುದನ್ನು, ಬಹಳಷ್ಟು ಕಡೆ ಕಾಷ್ಠಶಿಲ್ಪಗಳ ಬಳಕೆಯಾಗಿರುವುದನ್ನು ಗಮನಿಸಬಹುದು. ಖಜುರಾಹೋ, ಹಂಪೆ, ಬೇಲೂರು, ಹಳೆಬೀಡು ಮುಂತಾದ ದೇವಾಲಯಗಳಲ್ಲಿ ಸಾವಿರಾರು ವರ್ಷಗಳ ಹಿಂದಿನ ಅದ್ಭುತ ಶಿಲ್ಪವೈಭವವನ್ನು ಕಾಣುತ್ತೇವೆ. ಆ ಕಾಲದ ಜನರ ಧಾರ್ವಿುಕ ನಂಬಿಕೆ, ಸಹನೆ, ಶ್ರದ್ಧೆ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿವೆ. ನಮ್ಮ ದೇಶದ ಕೆಲವು ಮಸೀದಿಗಳೂ ಅದ್ಭುತವಾಗಿವೆ. ವಿದೇಶದಲ್ಲಿ ಕೆಲವು ಮಸೀದಿಗಳಿಗೂ ಭೇಟಿನೀಡಿದ್ದೆ. ಈಜಿಪ್ಟ್ ಮೊದಲಾದೆಡೆ ವಿಶಾಲವಾದ ಮಸೀದಿಗಳಿವೆ. ಎಲ್ಲರೂ ಒಟ್ಟಿಗೆ ನಮಾಜು ಮಾಡುವ ದೊಡ್ಡ ದೊಡ್ಡ ಹಜಾರಗಳು ವಿಭಿನ್ನ ಶೈಲಿಗಳಲ್ಲಿ ಇವೆ. ಯುರೋಪ್ ದೇಶದ ಕೆಲವು ಚರ್ಚುಗಳಂತೂ ವ್ಯಾಟಿಕನ್ ಮೂಲದ ಚರ್ಚುಗಳಿಗಿಂತ ವಿಶಾಲವಾಗಿವೆೆ. ಕ್ರೈಸ್ತಧರ್ಮದ ಮುಖ್ಯಸ್ಥರಾದ ಪೋಪ್ ಇರುವ ರ್ಚಚಿಗಿಂತ ನಮ್ಮದು ದೊಡ್ಡದಾಗಿದೆ ಎಂದು ಹೆಮ್ಮೆಯಿಂದ ಕೆಲವೆಡೆ ಹೇಳಿಕೊಂಡಿದ್ದನ್ನು ಕೇಳಿದ್ದೇವೆ.

ಕಲೆ-ಸೌಂದರ್ಯಗಳ ಆಗರ: ಭಾರತದಲ್ಲಿ ದೇವಾಲಯಗಳನ್ನು ಅನಾದಿಕಾಲದಿಂದ ನಿರ್ವಿುಸಿಕೊಂಡು ಬಂದಿದ್ದಾರೆ. ಹಿಂದೂಗಳು ಶಕ್ತಿ-ಭಕ್ತಿಯನ್ನು ಸಮರ್ಪಿಸಿ, ಶಾಸ್ತ್ರೀಯವಾಗಿ ಇವುಗಳನ್ನು ನಿರ್ವಿುಸಿ ಕಾಪಾಡಿಕೊಂಡು ಬಂದಿದ್ದಾರೆ. ಅವುಗಳ ವಿನ್ಯಾಸ, ವಾಸ್ತು, ಗರ್ಭಗೃಹಗಳು ಮತ್ತು ಶಿಲ್ಪವೈಭವಗಳು ನಮ್ಮ ಇತಿಹಾಸವನ್ನು ಸಾರುತ್ತವೆ. ಇತ್ತೀಚೆಗೆ ದೇವಾಲಯಗಳ ನಿರ್ವಣದಲ್ಲಿ ಸರಳತೆಯನ್ನು ಅನುಸರಿಸುತ್ತಿದ್ದಾರೆ. ಕೆಲವೇ ದೇವಾಲಯಗಳನ್ನು ಕಲಾತ್ಮಕವಾಗಿ ಕಟ್ಟುತ್ತಿದ್ದಾರೆ.

ದೇವಾಲಯ ನಿರ್ವಣಕ್ಕೆ ಸಹಾಯ ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಲವರು ಬರುತ್ತಾರೆ. ಹಾಗೆ ಬಂದಾಗ ಅವರು ತಮ್ಮ ದೇವಾಲಯದ ಪ್ರಾಚೀನ ಇತಿಹಾಸವನ್ನು, ಜಾನಪದೀಯ ಘಟನೆಗಳನ್ನು ವಿವರಿಸುತ್ತ, ಹಳೆ ಕಟ್ಟಡದ ಭಾವಚಿತ್ರಗಳನ್ನು ತೋರಿಸುತ್ತಾರೆ. ಕಲ್ಲಿನಿಂದ ನಿರ್ವಿುಸಿದ ಮಂಟಪ, ಗರ್ಭಗೃಹಗಳು ಮತ್ತಿತರ ವೈವಿಧ್ಯಮಯ ಶಿಲ್ಪಕಲಾಕೃತಿಗಳು ಮಾತ್ರವಲ್ಲದೆ, ಪೌರಾಣಿಕ ಘಟನಾವಳಿಗಳನ್ನು ವಿವರಿಸುವ ಚಿತ್ರಗಳು ಅಲ್ಲಿ ಕಂಡುಬರುತ್ತವೆ. ಜನರ ದುಗುಡಗಳನ್ನು ದೂರಮಾಡುವ ಹಾಗೂ ಮನೋಚಿಕಿತ್ಸಕವಾಗಿರುವ ದೇವಾಲಯಗಳಲ್ಲಿ ಎಲ್ಲಬಗೆಯ ಕಲೆ-ಸೌಂದರ್ಯಗಳನ್ನು ಭಾರತೀಯರು ಹೀಗೆ ಅನಾವರಣಗೊಳಿಸಿರುವುದು ಹೆಮ್ಮೆಯ ಸಂಗತಿಯೇ ಸರಿ.

ಹೊಸ ಮನ್ವಂತರದ ಉಗಮ: ಕಳೆದ 20 ವರ್ಷಗಳಿಂದ ಹೊಸ ಮನ್ವಂತರ ಪ್ರಾರಂಭವಾಗಿದೆ. ನಮ್ಮ ದೇಶದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಸಣ್ಣಸಣ್ಣ ಊರುಗಳಲ್ಲಿ ಕೂಡ ಸಣ್ಣಪುಟ್ಟ ದೇವತೆಗಳಿಂದ ಆರಂಭಿಸಿ ಶಿವ, ವಿಷ್ಣು, ಗಣಪತಿ, ದುರ್ಗೆಯಂತಹ ದೈವಗಳ ಪಂಚಾಯತನ ಪದ್ಧತಿಯ ದೇವಾಲಯಗಳನ್ನು ಶಿಲಾಮಯವಾಗಿ, ವಿಶಾಲವಾಗಿ ನಿರ್ವಿುಸುತ್ತಿದ್ದಾರೆ. ದೈವೀಸಂಕಲ್ಪದಿಂದ ನಂಬಲಸಾಧ್ಯರೀತಿಯಲ್ಲಿ ಈ ಕಾರ್ಯ ಯಶಸ್ವಿಯಾಗುತ್ತಿದೆ.

ಇಂದು ಜನರಲ್ಲಿ ಧಾರ್ವಿುಕ ಜಾಗೃತಿಯ ಜತೆಜತೆಗೆ ಪರಿಸರ ಜಾಗೃತಿಯೂ ಉಂಟಾಗುತ್ತಿರುವುದು ಸಂತೋಷದ ವಿಷಯ. ದೇವಾಲಯ ಮತ್ತು ಅದರ ಪರಿಸರವನ್ನು ನಿರ್ಮಲವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ. ಈ ಜಾಗೃತಿ ಎಲ್ಲರಲ್ಲೂ ಇನ್ನೂ ಮೂಡಬೇಕಾಗಿದೆ. ದೇವಾಲಯಕ್ಕೆ ಬರುವ ಭಕ್ತರು ತ್ಯಾಜ್ಯಗಳನ್ನು ಕಂಡಕಂಡಲ್ಲಿ ಬಿಸಾಡಬಾರದು. ಮಂದಿರಗಳನ್ನು ಮತ್ತು ಅದರ ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳುವುದರ ಮಹತ್ವವನ್ನು ತಿಳಿಸುವುದಕ್ಕಾಗಿ ನಾವು ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಮೂಲಕ ಸ್ವಚ್ಛಮಂದಿರ-ಸ್ವಚ್ಛಭಾರತವೆಂಬ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ.

ದೆಹಲಿಯ ಸ್ವಾಮಿ ನಾರಾಯಣ ಮಂದಿರ ಸಮಕಾಲೀನ ಯುಗದಲ್ಲಿ ಅಪೂರ್ವವಾದ ಮಂದಿರ. ಇಂತಹ ಮಂದಿರಗಳನ್ನು ನಿರ್ಮಾಣ ಮಾಡುವುದು ಸಾಧ್ಯವೇ? ಇಂದಿನ ಕಾಲದಲ್ಲೂ ಅಂತಹ ವಿನ್ಯಾಸಕಾರರು, ಶಿಲ್ಪಿಗಳು ಸಿಕ್ಕುತ್ತಾರೆಯೇ? ಇಂಥದನ್ನು ನಿರ್ವಿುಸಲು ಸಹಾಯಮಾಡುವ ದಾನಿಗಳು ಇದ್ದಾರೆಯೇ? ಎಂದು ಆಶ್ಚರ್ಯವಾಗುತ್ತದೆ. ಪ್ರಾಚೀನ ಕಲಾವೈಭವಗಳೊಂದಿಗೆ ಆಧುನಿಕ ವ್ಯವಸ್ಥೆಯನ್ನೂ ಹೊಂದಿರುವ ಇಂತಹ ಮಂದಿರಗಳು ನಮ್ಮ ದೇಶದ ಹೆಮ್ಮೆ. ಸ್ವಾಮಿ ನಾರಾಯಣ ಪಂಥದವರು ವಿದೇಶಗಳಲ್ಲಿ ಕೂಡ ಭವ್ಯವಾದ ಶಿಲೆ ಮತ್ತು ಅಮೃತಶಿಲೆಯ ಮಂದಿರಗಳನ್ನು ನಿರ್ವಿುಸಿದ್ದಾರೆ. ಇತ್ತೀಚೆಗೆ ಅಬುಧಾಬಿಯಲ್ಲಿ ಕೂಡ ಸ್ವಾಮಿ ನಾರಾಯಣ ಮಂದಿರ ನಿರ್ವಣಕ್ಕಾಗಿ ಅಲ್ಲಿನ ರಾಜರು ಸುಮಾರು 20 ಎಕರೆಯಷ್ಟು ಜಾಗವನ್ನು ನೀಡಿದ್ದಾರೆಂದು ತಿಳಿಯಿತು.

ಚರ್ಚುಗಳ ನಿರ್ವಣಕ್ಕೆ ಕ್ರೈಸ್ತಬಂಧುಗಳು ತಮ್ಮನ್ನು ತೊಡಗಿಸಿಕೊಳ್ಳುವ ರೀತಿ, ಹಣ ಸಂಗ್ರಹಿಸುವ ರೀತಿ, ದಾನ ಮಾಡುವ ವಿಧಾನ ಮತ್ತು ಅದನ್ನು ಸ್ವಚ್ಛತೆಯಿಂದ ಕಾಯ್ದುಕೊಳ್ಳುವ ವಿಧಾನ ಅದ್ಭುತವಾದದ್ದು. ನಾವು ಕೂಡ ನಮ್ಮ ದೇವಾಲಯಗಳನ್ನು ಭಗವಂತನ ಸಾಕ್ಷಾತ್ಕಾರಕ್ಕಾಗಿ ಮತ್ತು ಭಗವಂತನ ಆವಾಸಸ್ಥಾನವೆಂದು ಅದನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳಬೇಕು. ಭಕ್ತಿಭಾವದಿಂದ ಕಾಣಬೇಕು. ಆಗ ಮಾತ್ರ ನಮ್ಮೊಳಗಿರುವ ಆತ್ಮತತ್ತ್ವ-ಭಗವತ್ತತ್ತ್ವ ಜಾಗೃತಗೊಳ್ಳಲು ಆರಂಭವಾಗುತ್ತದೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)